ಸನಾತನ ಹಿಂದೂ ಧರ್ಮದ ನಾಲ್ವರು ಅತ್ಯುನ್ನತ ಗುರುಗಳು ಏಕೆ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ?
ಹಿಂದುತ್ವ ಪರ ಪೋರ್ಟಲ್ನ ವಿವರಣೆ ಇಲ್ಲಿದೆ...

Photo: PTI
ಹೊಸದಿಲ್ಲಿ: ಸನಾತನ ಹಿಂದೂ ಧರ್ಮದ ಅತ್ಯುನ್ನತ ಆಧ್ಯಾತ್ಮಿಕ ನಾಯಕರಾಗಿರುವ ನಾಲ್ವರು ಜಗದ್ಗುರು ಶಂಕರಾಚಾರ್ಯರು ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. ಇದಕ್ಕೆ ಹಿಂದುತ್ವ ಪರ ಪೋರ್ಟಲ್ ‘ದಿ ಸ್ಟ್ರಗಲ್ ಫಾರ್ ಹಿಂದೂ ಎಕ್ಜಿಸ್ಟನ್ಸ್ʼ ವಿವರಣೆಯನ್ನು ನೀಡಿದೆ. ಪೋರ್ಟಲ್ ಹೇಳಿಕೊಂಡಿರುವಂತೆ ಅದು ಜಾಗತಿಕವಾಗಿ ಹಿಂದೂಗಳ ರಕ್ಷಣೆ ಮತ್ತು ಹೋರಾಟಕ್ಕೆ ಅರ್ಪಿತವಾಗಿದೆ.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಮುಖ್ಯ ಆತಿಥೇಯ’ರಾಗಿ ಪಾಲ್ಗೊಳ್ಳುತ್ತಿರುವುದು ಪ್ರಾಣಪ್ರತಿಷ್ಠಾಪನೆ ಸಮಾರಂಭದ ಕುರಿತು ಹಿರಿಯ ಸಂತರಲ್ಲಿ ಕಳವಳಗಳನ್ನು ಹುಟ್ಟುಹಾಕಿದೆ.
ಇದು ಸನಾತನ ಶಾಸ್ತ್ರಗಳಲ್ಲಿ ಹೇಳಲಾಗಿರುವ ಸಾಂಪ್ರದಾಯಿಕ ವಿಧಿಗಳನ್ನು ದುರ್ಬಲಗೊಳಿಸುವ ಸಂಭವನೀಯತೆಯೊಂದಿಗೆ ಮೋದಿಯವರನ್ನು ಕಾರ್ಯಕ್ರಮದ ಮುಂಚೂಣಿಯಲ್ಲಿರಿಸುತ್ತದೆ ಎಂದು ಅವರು ಭಾವಿಸಿದ್ದಾರೆ. ರಾಮ ಮಂದಿರ ಪ್ರತಿಷ್ಠಾಪನೆಯ ಕುರಿತು ಸಾರ್ವತ್ರಿಕ ಉತ್ಸಾಹದ ಹೊರತಾಗಿಯೂ ಶಂಕರಾಚಾರ್ಯರ ಗೈರುಹಾಜರಿಯು ಆಸ್ತಿಕ ಭಕ್ತರಲ್ಲಿ ವಿವಾದದ ಅಂಶವಾಗಿದೆ ಎಂದು ಪೋರ್ಟಲ್ ವರದಿ ಮಾಡಿದೆ.
ಸಮಾಧಿ
ಪೂರ್ವಾಮ್ನಾಯ ಗೋವರ್ಧನ ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ಶ್ರೀನಿಶ್ಚಲಾನಂದ ಸರಸ್ವತಿಯವರು ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಅವರು ಹೇಳುವಂತೆ ಸರಕಾರದ ಪ್ರಯತ್ನ ಪವಿತ್ರಮಂದಿರ ನಿರ್ಮಾಣದ ಮೇಲೆ ಕೇಂದ್ರೀಕೃತವಾಗಿಲ್ಲ. ಅವರ ಮಾತಿನಲ್ಲಿ ಹೇಳುವುದಾದರೆ ಅದು ’ಸಮಾಧಿ’ಯಾಗಿದೆ. ಅವರ ಈ ಬಣ್ಣನೆಯು ಯೋಜನೆಯು ‘ಸಾಂಪ್ರದಾಯಿಕ ಮಂದಿರ ನಿರ್ಮಾಣ’ದಲ್ಲಿ ಅಡಕವಾಗಿರುವ ಪಾವಿತ್ರ್ಯ ಮತ್ತು ಗೌರವವನ್ನು ಹೊಂದಿಲ್ಲ ಎಂಬ ಗ್ರಹಿಕೆಯನ್ನು ಸೂಚಿಸುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ಅವರ ನಿರ್ಧಾರವು ಸೂಕ್ತ ಗೌರವದ ಕೊರತೆಯಿದೆ ಎಂದು ಭಾವಿಸಲಾಗಿರುವ ಸ್ಥಳದಲ್ಲಿ ಉಪಸ್ಥಿತರಿರಬಾರದು ಎಂಬ ತತ್ತ್ವವನ್ನು ಆಧರಿಸಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ನಿರ್ಧಾರವು ತಮ್ಮ ಸ್ಥಾನದೊಂದಿಗೆ ಗುರುತಿಸಿಕೊಂಡಿರುವ ಘನತೆ ಮತ್ತು ಹಿರಿಮೆಯನ್ನು ಕಾಯ್ದುಕೊಳ್ಳುವ ಬದ್ಧತೆಯಲ್ಲಿ ಬೇರೂರಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಷ್ಟವಿಲ್ಲದಿರುವುದು ಶ್ರೀರಾಮನ ಮೇಲಿನ ಭಕ್ತಿಯ ನಿರಾಕರಣೆಯಲ್ಲ,ಬದಲಿಗೆ ಕೆಲವು ನಾಯಕರ ಅವಕಾಶವಾದಿ ಮತ್ತು ಚಾಣಾಕ್ಷ ರಾಜಕೀಯದ ವಿರುದ್ಧ ತಾತ್ವಿಕ ನಿಲುವು ಆಗಿದೆ. ಈ ನಿಲುವು ‘ಕಪಟ’ ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ಮುಕ್ತವಾದ ಆಧ್ಯಾತ್ಮಿಕ ನಾಯಕತ್ವದ ಸ್ವಾತಂತ್ರ್ಯ ಮತ್ತು ನೈತಿಕ ಸಮಗ್ರತೆಯನ್ನು ಒತ್ತಿ ಹೇಳುತ್ತದೆ.
ಇನ್ನೂ ನಿರ್ಮಾಣ ಹಂತದಲ್ಲಿದೆ
ಶೃಂಗೇರಿ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಶ್ರೀಭಾರತಿ ತೀರ್ಥ ಅವರು ರಾಮ ಮಂದಿರ ನಿರ್ಮಾಣದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರಾದರೂ ಆಹ್ವಾನವನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಮಂದಿರವು ಇನ್ನೂ ನಿರ್ಮಾಣ ಹಂತದಲ್ಲಿದೆ ಎಂಬ ಅಂಶದಿಂದ ಅವರ ಆಕ್ಷೇಪಣೆಗಳು ಉದ್ಭವಿಸಿವೆ. ಇನ್ನೂ ಪೂರ್ಣಗೊಳ್ಳದ ಮಂದಿರದಲ್ಲಿ ದೈವೀ ಪ್ರಾಣಪ್ರತಿಷ್ಠೆಯು ಸೂಕ್ತವಲ್ಲ ಎಂದು ಪರಿಗಣಿಸಿರುವ ಅವರು, ಇಂತಹ ಕ್ರಮದ ಯುಕ್ತತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಅವರ ಹೇಳಿಕೆಯಂತೆ ಇತರ ಪೂಜನೀಯ ವ್ಯಕ್ತಿಗಳೊಂದಿಗೆ ತಾನೂ ನ್ಯಾಯಾಲಯದಲ್ಲಿ ರಾಮ ಮಂದಿರ ಕುರಿತು ಸಾಕ್ಷ್ಯಗಳನ್ನು ಮಂಡಿಸಿರುವುದರಿಂದ ನಿರ್ಲಕ್ಷ್ಯದ ಭಾವನೆಯು ಅವರ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿದೆ. ಆದಾಗ್ಯೂ ಅವರ ಹೇಳಿಕೆಯಂತೆ ರಾಮಮಂದಿರ ಟ್ರಸ್ಟ್ ಅವರಿಂದ ಅಥವಾ ಅವರ ಪ್ರತಿನಿಧಿಗಳಿಂದ ಸಲಹೆಗಳನ್ನು ಕೋರಿರಲಿಲ್ಲ. ಇದು ಪ್ರಮುಖ ಆಧ್ಯಾತ್ಮಿಕ ನಾಯಕರೊಂದಿಗೆ ಸಮಾಲೋಚನೆಯ ಕೊರತೆಯನ್ನು ಸೂಚಿಸುತ್ತಿದೆ.
ಪೋರ್ಟಲ್ ಪ್ರಕಾರ ಶಂಕರಾಚಾರ್ಯರು ಮೋದಿ ಸರಕಾರವು ದ್ವಂದ್ವ ಗುಣವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. ಸರಕಾರವು ರಾಮಮಂದಿರ ನಿರ್ಮಾಣವನ್ನು ಕಾರ್ಯಗತಗೊಳಿಸಿದ್ದರೂ ಅದು ರಾಜಕೀಯ ಲಾಭಗಳಿಗಾಗಿ ಹಿಂದೂಗಳ ಭಾವನೆಗಳನ್ನು ದುರುಪಯೋಗಿಸಿಕೊಳ್ಳುತ್ತಿದೆ ಎನ್ನುವುದು ಅವರ ವಾದವಾಗಿದೆ. ಈ ಪ್ರತಿಪಾದನೆಯು ಸರಕಾರದ ಉದ್ದೇಶಗಳು ಮತ್ತು ಧಾರ್ಮಿಕ ಸಮುದಾಯದ ಸಮಗ್ರ ಯೋಗಕ್ಷೇಮಕ್ಕೆ ಬದ್ಧತೆಯ ಕುರಿತು ವ್ಯಾಪಕ ಸಂದೇಹವನ್ನು ಪ್ರತಿಬಿಂಬಿಸುತ್ತಿದೆ.
ಸೂಕ್ತ ಸಮಯ
ಪಶ್ಚಿಮ್ನಾಯ ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಶ್ರೀ ಸ್ವಾಮಿ ಸದಾನಂದ ಸರಸ್ವತಿಯವರು ರಾಮಮಂದಿರ ಮಹೋತ್ಸವದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಪ್ರಾಣಪ್ರತಿಷ್ಠೆಯ ಸಮಯದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಅವರು, ಧರ್ಮಗ್ರಂಥಗಳ ಪ್ರಕಾರ ಅಶುಭವಾದ ಪೌಷ ಮಾಸದಲ್ಲಿ ಪ್ರಾಣಪ್ರತಿಷ್ಠೆಯು ಸೂಕ್ತವಲ್ಲವೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ. ರಾಮನ ಜನ್ಮದಿನವಾದ ರಾಮ ನವಮಿಯು ಪ್ರಾಣಪ್ರತಿಷ್ಠಾಪನೆಗೆ ಹೆಚ್ಚು ಸೂಕ್ತವಾದ ಸಮಯ ಎನ್ನುವುದು ಅವರ ಅಭಿಪ್ರಾಯವಾಗಿದೆ. ಅಶುಭ ಸಮಯದಲ್ಲಿ ನಡೆಯುತ್ತಿರುವ ಪ್ರಾಣಪ್ರತಿಷ್ಠೆಗೆ ರಾಜಕೀಯವು ಪ್ರಾಥಮಿಕ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ರಾಮ ನವಮಿಯ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ ಎಂದು ನಿರೀಕ್ಷಿಸಿರುವ ಸ್ವಾಮಿ ಸದಾನಂದ ಸರಸ್ವತಿ, ಇದರಿಂದಾಗಿ ಆ ಸಮಯದಲ್ಲಿ ಪ್ರಾಣಪ್ರತಿಷ್ಠೆಯನ್ನು ಹಮ್ಮಿಕೊಂಡಿದ್ದರೆ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ನಾಯಕರಿಗೆ ಹೆಚ್ಚಿನ ಅವಕಾಶ ಸಿಗುತ್ತಿರಲಿಲ್ಲ ಎಂದಿದ್ದಾರೆ. ಅವರ ಈ ದೃಷ್ಟಿಕೋನವು ಪ್ರಾಣಪ್ರತಿಷ್ಠೆ ನಿರ್ಧಾರ ಪ್ರಕ್ರಿಯೆಗೆ ರಾಜಕೀಯ ಆಯಾಮವನ್ನು ಸೂಚಿಸುತ್ತದೆ. ಜೊತೆಗೆ ಮಂದಿರ ನಿರ್ಮಾಣವನ್ನು ಪೂರ್ಣಗೊಳಿಸುವ ಮೊದಲೇ ಪ್ರಾಣಪ್ರತಿಷ್ಠೆಯ ಹಿಂದಿನ ತಾರ್ಕಿಕತೆಯನ್ನೂ ಅವರು ಪ್ರಶ್ನಿಸಿದ್ದಾರೆ. ಸಾಂಪ್ರದಾಯಿಕವಾಗಿ, ಮನೆಯೊಂದು ಪೂರ್ಣವಾಗಿ ನಿರ್ಮಾಣಗೊಳ್ಳುವವರೆಗೆ ಗೃಹಪ್ರವೇಶವನ್ನು ಮಾಡಲಾಗುವುದಿಲ್ಲ ಎನ್ನುವುದನ್ನು ಅವರು ಬೆಟ್ಟು ಮಾಡಿದ್ದಾರೆ.
ಧರ್ಮಶಾಸ್ತ್ರಕ್ಕೆ ವಿರುದ್ಧ
ಉತ್ತರಾಮ್ನಾಯ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಅವರೂ ನಿರ್ದಿಷ್ಟ ಕಳವಳಗಳನ್ನು ಉಲ್ಲೇಖಿಸಿ ಅಯೋಧ್ಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ‘ನಾವು ಮೋದಿ ವಿರೋಧಿಗಳಲ್ಲ, ಆದರೆ ನಾವು ಧರ್ಮಶಾಸ್ತ್ರ ವಿರೋಧಿಗಳಾಗಲೂ ಬಯಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ದೇವಾಲಯದ ಅರ್ಚಕರಾಗಿ ಶೂದ್ರ ವ್ಯಕ್ತಿಯ ನೇಮಕವನ್ನು ಟೀಕಿಸಿರುವ ಅವರು, ಹಿಂದು ಧರ್ಮದ ಮೂಲಗ್ರಂಥಗಳಾಗಿರುವ ವೇದಗಳು ಪುರೋಹಿತ ಸ್ಥಾನವನ್ನು ಬ್ರಾಹ್ಮಣರಿಗೆ ಮೀಸಲಾಗಿರಿಸಿವೆ. ಶೂದ್ರ ವ್ಯಕ್ತಿಯ ನೇಮಕವು ವೇದಗಳಲ್ಲಿ ಹೇಳಿರುವ ಧಾರ್ಮಿಕ ತತ್ತ್ವಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.
ತನ್ನ ರಾಜಕೀಯ ಏಳಿಗೆಗಾಗಿ ಶಂಕರಾಚಾರ್ಯರ ಪಾದಗಳಿಗೆ ಬಿದ್ದು ಆಶೀರ್ವಾದ ಕೋರಿದ್ದ ನರೇಂದ್ರ ಮೋದಿಯವರು ಸನಾತನ ಮೌಲ್ಯಗಳು ಮತ್ತು ಘನತೆಗಳನ್ನು ದುರ್ಬಲಗೊಳಿಸಲು ಅಧಾರ್ಮಿಕ ಪಾತ್ರವನ್ನು ವಹಿಸುತ್ತಿರುವುದು ದುರದೃಷ್ಟಕರ ಎಂದು ಬರೆದಿರುವ ಪೋರ್ಟಲ್, ಬಹು ನಿರೀಕ್ಷಿತ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಹಿಂದು ಧರ್ಮದ ಅತ್ಯುನ್ನತ ಧರ್ಮಗುರುಗಳು ಭಾಗವಹಿಸದಿರುವುದು ನಿಜಕ್ಕೂ ದುರದೃಷ್ಟಕರವಾಗಿದೆ, ಇದು ಧಾರ್ಮಿಕ ಹಿನ್ನಡೆ ಮಾತ್ರವಲ್ಲ, ವ್ಯಾಪಕ ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳನ್ನೂ ಬೀರುತ್ತದೆ ಎಂದು ಹೇಳಿದೆ.
ಶೃಂಗೇರಿ ಶಂಕರಾಚಾರ್ಯರು ಅತ್ಯಂತ ಪವಿತ್ರ ಮತ್ತು ಅಪರೂಪವಾದ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಂಡು ಶ್ರೀರಾಮನ ಕೃಪೆಗೆ ಪಾತ್ರರಾಗುವಂತೆ ಎಲ್ಲ ಆಸ್ತಿಕರಿಗೆ ಸಂದೇಶವನ್ನು ನೀಡಿದ್ದಾರೆ. ಆದರೆ ಅವರು ಸ್ವತಃ ಭಾಗಿಯಾಗುತ್ತಾರೆಯೇ ಎನ್ನುವುದು ಈ ಸಂದೇಶದಿಂದ ಈಗಲೂ ಸ್ಪಷ್ಟವಾಗಿಲ್ಲ ಎಂದು ಪೋರ್ಟಲ್ ಹೇಳಿದೆ.
ಕೃಪೆ: thewire.in







