ಭಾರತೀಯ ಸೇನೆ ಕುರಿತ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆ
"ಸಂಸತ್ತಿನಲ್ಲಿ ಮಾತನಾಡುವ ಬದಲು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದೇಕೆ?" ರಾಹುಲ್ ಗಾಂಧಿಗೆ ಕೋರ್ಟ್ ಪ್ರಶ್ನೆ

ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: 2022ರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಲಕ್ನೋ ನ್ಯಾಯಾಲಯದಲ್ಲಿನ ಕ್ರಿಮಿನಲ್ ಮಾನನಷ್ಟ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಚೀನಾದ ಸೈನಿಕರು ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನಾ ಸಿಬ್ಬಂದಿಯನ್ನು ಥಳಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠ, ಇಂತಹ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವ ಬದಲು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂದು ರಾಹುಲ್ ಗಾಂಧಿಯವರಿಗೆ ಪ್ರಶ್ನಿಸಿತು. ಅವರ ಹೇಳಿಕೆಗಳು ಯಾವುದೇ ವಿಶ್ವಾಸಾರ್ಹ ವಿಷಯವನ್ನು ಆಧರಿಸಿವೆಯೇ? ನಿಜವಾದ ಭಾರತೀಯ ಅಂತಹ ಹೇಳಿಕೆ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ರಾಹುಲ್ ಗಾಂಧಿಯವರ ಹೇಳಿಕೆ ಬಗ್ಗೆ ಮೂರನೇ ವ್ಯಕ್ತಿ ಮಾನನಷ್ಟ ಮೊಕದ್ದಮೆ ಹೂಡುವುದು ಸಾಧ್ಯವಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
ʼನೀವು ಈ ರೀತಿ ಮಾನನಷ್ಟ ಆರೋಪ ಹೊರಿಸಿ ಕಿರುಕುಳ ನೀಡಲು ಸಾಧ್ಯವಿಲ್ಲ. ಅವರು(ದೂರುದಾರರು) ನೊಂದ ವ್ಯಕ್ತಿಯಲ್ಲ, ಆದರೆ ಮಾನಹಾನಿಗೊಳಗಾದ ವ್ಯಕ್ತಿ ಎಂದು ಹೈಕೋರ್ಟ್ ಹೇಳುತ್ತದೆ. ಹೈಕೋರ್ಟ್ನ ತರ್ಕವು ಹೊಸತನದಿಂದ ಕೂಡಿತ್ತು, ಅದು ಸರಿಯಲ್ಲʼ ಎಂದು ಸಿಂಘ್ವಿ ಹೇಳಿದರು.
'ನಿಜವಾದ ಭಾರತೀಯ ಅಂತಹ ಹೇಳಿಕೆ ನೀಡುವುದಿಲ್ಲ': ಭಾರತೀಯ ಸೇನೆ ಕುರಿತ ಹೇಳಿಕೆಗೆ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ತರಾಟೆ
ಈ ಬಗ್ಗೆ ನ್ಯಾಯಾಲಯ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ತಡೆ ನೀಡಿದೆ.
ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿ ಲಕ್ನೋ ನ್ಯಾಯಾಲಯ ರಾಹುಲ್ ಗಾಂಧಿಗೆ ಹೊರಡಿಸಿದ್ದ ಸಮನ್ಸ್ ಅನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.







