"ಸಮಿತಿ ರಚನೆಯಾದಾಗ ನೀವೇಕೆ ಮಾತನಾಡಲಿಲ್ಲ" : ನ್ಯಾ. ಯಶವಂತ್ ವರ್ಮಾರನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್
ನ್ಯಾಯಮೂರ್ತಿ ಯಶವಂತ್ ವರ್ಮಾ ನಿವಾಸದಿಂದ ನಗದು ವಶಪಡಿಸಿಕೊಂಡ ಪ್ರಕರಣ

ನ್ಯಾಯಮೂರ್ತಿ ಯಶವಂತ್ ವರ್ಮಾ (Photo: NDTV)
ಹೊಸದಿಲ್ಲಿ: ತಮ್ಮ ನಿವಾಸದಿಂದ ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಮ್ಮ ವಿರುದ್ಧ ಸುಪ್ರೀಂ ಕೋರ್ಟ್ ತೆಗೆದುಕೊಂಡ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಈ ರೀತಿಯ ಅರ್ಜಿಯನ್ನು ಸಲ್ಲಿಸಬಾರದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ದಿಲ್ಲಿಯಲ್ಲಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ ನಿವಾಸದಿಂದ ಭಾರಿ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಈ ಅರ್ಜಿ, ನ್ಯಾಯಾಂಗ ಶಿಸ್ತಿಗೆ ಸಂಬಂಧಿಸಿದಂತೆ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ನ್ಯಾಯಮೂರ್ತಿ ವರ್ಮಾ ಅವರ ದಿಲ್ಲಿಯ ನಿವಾಸದಲ್ಲಿ ಸಂಭವಿಸಿದ ಬೆಂಕಿ ಅವಘಡದ ವೇಳೆ, ಭಾರಿ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ಘಟನೆ ನಂತರ, ಅವರನ್ನು ದಿಲ್ಲಿ ಹೈಕೋರ್ಟ್ ನಿಂದ ಅಲಹಾಬಾದ್ ಹೈಕೋರ್ಟ್ ಗೆ ವರ್ಗಾಯಿಸಲಾಯಿತು. ಭ್ರಷ್ಟಾಚಾರದ ಆರೋಪಗಳ ಹಿನ್ನಲೆಯಲ್ಲಿ, ಆಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ತ್ರಿಸದಸ್ಯ ಸಮಿತಿಯನ್ನು ರಚಿಸಿದರು. ಸಮಿತಿಯ ವರದಿಯ ಆಧಾರದ ಮೇಲೆ, ನ್ಯಾಯಮೂರ್ತಿ ವರ್ಮಾರನ್ನು ವಜಾ ಮಾಡಲು ಶಿಫಾರಸು ಮಾಡಲಾಯಿತು.
ಈ ಕ್ರಮವನ್ನು ಪ್ರಶ್ನಿಸಿರುವ ನ್ಯಾಯಮೂರ್ತಿ ವರ್ಮಾ, ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ಅರ್ಜಿಯ ಸ್ವರೂಪ ಹಾಗೂ ಪ್ರಕ್ರಿಯೆಯ ಮೇಲೆಯೇ ಗಂಭೀರ ಆಕ್ಷೇಪ ವ್ಯಕ್ತಪಡಿಸಿತು. "ಈ ರೀತಿ ಅರ್ಜಿ ಸಲ್ಲಿಸುವುದು ಸರಿಯಲ್ಲ. ಇಲ್ಲಿ ಪ್ರಮುಖ ಪ್ರತಿವಾದಿಯಾಗಿ ಸುಪ್ರೀಂ ಕೋರ್ಟ್ ಎಂದು ರಿಜಿಸ್ಟ್ರಾರ್ ಜನರಲ್ ಮೂಲಕ ಉಲ್ಲೇಖಿಸಲಾಗಿದೆ, ಇದು ಪ್ರಕ್ರಿಯಾತ್ಮಕ ದೋಷವಾಗಿದೆ" ಎಂದು ಪೀಠವು ಹೇಳಿತು.
ಅರ್ಜಿ 'XXX' ಎಂಬ ಹೆಸರಿನಲ್ಲಿ ಸಲ್ಲಿಸಲಾಗಿದ್ದು, ಮೂರು ಪ್ರತಿವಾದಿಗಳು ಎಂದು, ಭಾರತ ಸರ್ಕಾರವನ್ನು ಮೊದಲ ಪ್ರತಿವಾದಿಯಾಗಿ, ಹಾಗೂ ಸುಪ್ರೀಂ ಕೋರ್ಟ್ ಅನ್ನು ಎರಡು ಮತ್ತು ಮೂರನೆ ಪ್ರತಿವಾದಿಯಾಗಿ ಉಲ್ಲೇಖಿಸಲಾಗಿದೆ. ಆದರೆ ಈ ಅರ್ಜಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳಾದ ಸಮಿತಿಯ ವರದಿ ಲಗತ್ತಿಸಲಾಗಿಲ್ಲ ಎಂಬುದನ್ನು ನ್ಯಾಯಾಲಯವು ಗಂಭೀರವಾಗಿ ತೆಗೆದುಕೊಂಡಿತು.
"ತ್ರಿಸದಸ್ಯ ಸಮಿತಿಯ ವರದಿ ಎಲ್ಲಿದೆ?" ಎಂಬ ಪ್ರಶ್ನೆಯನ್ನು ನ್ಯಾಯಮೂರ್ತಿ ದತ್ತಾ ಎತ್ತಿದರು. ವರದಿ ಸಾರ್ವಜನಿಕವಾಗಿ ಲಭ್ಯವಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಸ್ಪಷ್ಟಪಡಿಸಿದಾಗ, "ಆದರೂ, ನೀವು ಅದನ್ನು ಅರ್ಜಿಗೆ ಲಗತ್ತಿಸಬೇಕಿತ್ತು" ಎಂದು ಪೀಠವು ಹೇಳಿತು.
ಕಪಿಲ್ ಸಿಬಲ್ ಅವರು, ನ್ಯಾಯಮೂರ್ತಿ ವರ್ಮಾ ವಿರುದ್ಧದ ಕ್ರಮವು ಸಂವಿಧಾನಬದ್ಧವಾಗಿ ನಿಗದಿಪಡಿಸಿದ ನ್ಯಾಯಾಧೀಶರ ವಜಾ ಪ್ರಕ್ರಿಯೆಗೆ ವಿರುದ್ಧವಾಗಿದೆ ಎಂಬ ವಾದವನ್ನು ಮುಂದಿಟ್ಟರು. ನ್ಯಾಯಮೂರ್ತಿಗಳ ವಿರುದ್ಧ ಆರೋಪಗಳು ಸಾಬೀತಾಗುವವರೆಗೆ ಸಂಸತ್ತಿನಲ್ಲಿಯೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಟೇಪ್ ಬಿಡುಗಡೆ, ವೆಬ್ಸೈಟ್ನಲ್ಲಿ ಮಾಹಿತಿಯ ಪ್ರಕಟಣೆ ಹಾಗೂ ಸಾರ್ವಜನಿಕ ಚರ್ಚೆಗಳ ಮೂಲಕ ನ್ಯಾಯಾಧೀಶರ ವಿರುದ್ಧ ಮಾಧ್ಯಮಗಳಲ್ಲಿ ಚರ್ಚೆ, ಎಲ್ಲವನ್ನೂ ನಿಷೇಧಿಸಲಾಗಿದೆ. ಒಂದು ವೇಳೆ ಅದಕ್ಕೆ ಅವಕಾಶ ನೀಡಿದರೆ ನ್ಯಾಯಾಂಗದ ಪ್ರಭುತ್ವಕ್ಕೆ ಹಾನಿಕಾರಕವೆಂದು ಅವರು ಅಭಿಪ್ರಾಯಪಟ್ಟರು.
"ದುಷ್ಕೃತ್ಯವು ಸಾಬೀತಾಗದೇ ಸಂಸತ್ತಿನಲ್ಲಿ ನ್ಯಾಯಾಧೀಶರ ಕುರಿತು ಚರ್ಚೆ ನಡೆಸಲು ಸಾಧ್ಯವಿಲ್ಲ ಎಂಬುದು ಸಂವಿಧಾನಾತ್ಮಕ ನಿಯಮವಾಗಿದೆ," ಎಂದು ಕಪಿಲ್ ಸಿಬಲ್ ಅವರು ಸ್ಪಷ್ಟಪಡಿಸಿದರು.
ನ್ಯಾಯಮೂರ್ತಿ ವರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಮುಖ್ಯ ನ್ಯಾಯಮೂರ್ತಿ ಖನ್ನಾ ಅವರು ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಬರೆದಿದ್ದ ಪತ್ರದ ಕುರಿತು, "ಈ ಪತ್ರ ನಿಮ್ಮ ಗಮನಕ್ಕೆ ಹೇಗೆ ಬಂತು? ಇದು ಸಾರ್ವಜನಿಕವಾಗಿ ಲಭ್ಯವಿಲ್ಲ," ಎಂದು ನ್ಯಾಯಾಲಯವು ಹೇಳಿತು.
ಔಟ್ಹೌಸ್ನಲ್ಲಿ ನಗದು ಪತ್ತೆಯಾಗಿದೆ, ಅದನ್ನು ನ್ಯಾಯಾಧೀಶರಿಗೆ ಸೇರಿದ್ದು ಎಂದು ನೀವು ಹೇಗೆ ತಳುಕು ಹಾಕುತ್ತೀರಿ ಎಂದು ಕಪಿಲ್ ಸಿಬಲ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದತ್ತಾ, "ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಎಲ್ಲರೂ ಅಲ್ಲಿದ್ದರು. ಆ ಸಂದರ್ಭದಲ್ಲಿ ನಗದು ಕಂಡುಬಂದಿದೆ" ಎಂದು ಪ್ರತಿಕ್ರಿಯಿಸಿದರು. ನ್ಯಾಯಾಧೀಶರ ಸಿಬ್ಬಂದಿ ಇರಲಿಲ್ಲ ಎಂದು ಹಿರಿಯ ವಕೀಲರು ಉತ್ತರಿಸಿದರು. ಹಾಗಾದರೆ ಸಮಿತಿಯ ವರದಿ ಯೋಗ್ಯವಾಗಿಲ್ಲ ಎಂದು ಸಿಬಲ್ ಹೇಳುತ್ತಿದ್ದಾರೆಯೇ ಎಂದು ನ್ಯಾಯಮೂರ್ತಿ ದತ್ತಾ ಪ್ರಶ್ನಿಸಿದಾಗ, "ಇಲ್ಲ, ಅದು ಯೋಗ್ಯವಾಗಿಲ್ಲ" ಎಂದು ಕಪಿಲ್ ಸಿಬಲ್ ಅವರು ಉತ್ತರಿಸಿದರು.
"ಸಮಿತಿ ನೇಮಕವಾದಾಗ ನೀವು ಏಕೆ ಅದನ್ನು ಪ್ರಶ್ನಿಸಲಿಲ್ಲ, ನೀವು ಏಕೆ ಕಾಯುತ್ತಿದ್ದೀರಿ? ನ್ಯಾಯಾಧೀಶರು ಹಿಂದೆ ಈ ವಿಚಾರಣೆಗಳಿಗೆ ಹಾಜರಾಗುವುದನ್ನು ತಪ್ಪಿಸಿದ್ದರು" ಎಂದು ನ್ಯಾಯಮೂರ್ತಿ ದತ್ತಾ ಕೇಳಿದರು. ನ್ಯಾಯಮೂರ್ತಿ ವರ್ಮಾ ಸಮಿತಿಯ ಮುಂದೆ ಹಾಜರಾಗಿದ್ದರಿಂದ, ಅವರು ಈ ನಗದು ಯಾರಿಗೆ ಸೇರಿದೆ ಎಂಬುದನ್ನು ಸಮಿತಿಯೇ ಪತ್ತೆಹಚ್ಚಲಿದೆ ಎಂದು ಭಾವಿಸಿದ್ದರು ಎಂದು ಕಪಿಲ್ ಸಿಬಲ್ ಉತ್ತರಿಸಿದರು.
ಪ್ರಕರಣದ ಮುಂದಿನ ವಿಚಾರಣೆ ಬುಧವಾರ ನಡೆಯಲಿದೆ.







