100 ದಶಲಕ್ಷ ಪೌಂಡ್ ಮೌಲ್ಯದ ಎಫ್-35 ಯುದ್ಧ ವಿಮಾನ ಕೇರಳದಲ್ಲೇ ಉಳಿದಿರುವುದೇಕೆ?
ತಾಂತ್ರಿಕ ಸಮಸ್ಯೆಯೊ ಅಥವಾ ಬೇರೆ ಕಾರಣವೊ?

PC : NDTV
ಹೊಸದಿಲ್ಲಿ: ನಾಲ್ಕು ದಿನಗಳ ಹಿಂದೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಬ್ರಿಟನ್ ರಾಯಲ್ ನೇವಿಯ ವಿಶ್ವದ ಅತ್ಯಂತ ದುಬಾರಿ ಹಾಗೂ ಸುಧಾರಿತ ಎಫ್-35 ಯುದ್ಧ ವಿಮಾನವೀಗಲೂ ಅಲ್ಲೇ ನಿಲುಗಡೆಯಾಗಿದೆ.
ದೈನಂದಿನ ಅಂತಾರಾಷ್ಟ್ರೀಯ ಜಲಮಾರ್ಗದ ಹಾರಾಟ ನಡೆಸುತ್ತಿದ್ದ ಸುಮಾರು 100 ದಶಲಕ್ಷ ಪೌಂಡ್ ಮೌಲ್ಯವನ್ನೂ ಮೀರಿದ ಈ ಅತ್ಯಾಧುನಿಕ ಯುದ್ಧ ವಿಮಾನವು ಹೈಡ್ರಾಲಿಕ್ ವ್ಯವಸ್ಥೆಯ ವೈಫಲ್ಯದಿಂದಾಗಿ ಶನಿವಾರ ರಾತ್ರಿ ಅನಿವಾರ್ಯವಾಗಿ ದಕ್ಷಿಣ ಭಾರತದ ನಗರವಾದ ತಿರುವನಂತಪುರಂಗೆ ಮಾರ್ಗ ಬದಲಿಸುವಂತಾಗಿತ್ತು ಎಂದು ಶಂಕಿಸಲಾಗಿದೆ.
ಎಚ್ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ ನಿಂದ ಹಾರಾಟ ಪ್ರಾರಂಭಿಸಿದ್ದ ಬ್ರಿಟನ್ ನ ಈ ಮಹತ್ವಾಕಾಂಕ್ಷಿ ಯುದ್ಧ ವಿಮಾನ ಸದ್ಯ ಕೇರಳ ಕರಾವಳಿಯಿಂದ ಅಂದಾಜು 100 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ನಿಂತಿದೆ.
ಮೂಲಗಳ ಪ್ರಕಾರ, ಅದೇ ರೀತಿ ಈ ವಿಮಾನದ ದುರಸ್ತಿ ಕಾರ್ಯ ಕೈಗೊಳ್ಳಲು ರಾಯಲ್ ನೇವಿ ಹೆಲಿಕಾಪ್ಟರ್ ಒಂದು ತಂತ್ರಜ್ಞರನ್ನು ಹೊತ್ತು ತಂದಿದ್ದರೂ, ನಿರಂತರ ತಾಂತ್ರಿಕ ತೊಂದರೆಯಿಂದಾಗಿ ಅದಿನ್ನೂ ಹಾರಾಟಕ್ಕೆ ಯೋಗ್ಯವಾಗಿಲ್ಲ ಎಂದು ತಿಳಿಸಿವೆ.
ಈ ಎಫ್-35 ಯುದ್ಧ ವಿಮಾನವು ಮಂಗಳವಾರದ ವೇಳೆಗೆ ನಿರ್ಗಮಿಸಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ, ಅದೀಗ ಮತ್ತಷ್ಟು ವಿಳಂಬವಾಗಿದೆ.







