CJI ಅವರನ್ನು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಕೈಬಿಟ್ಟಿದ್ದೇಕೆ?: ಸಂಸತ್ತಿನಲ್ಲಿ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ: ಚುನಾವಣಾ ಸುಧಾರಣೆಗಳ ಕುರಿತು ಲೋಕಸಭೆಯಲ್ಲಿ ಮಂಗಳವಾರ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ನಿರ್ಧಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಗಾಗಿ ರಚಿಸಲಾದ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಕೈಬಿಟ್ಟ ಕ್ರಮದ ಹಿಂದೆ ಇರುವ ಉದ್ದೇಶವೇನು ಎಂದು ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ನೇರವಾಗಿ ಪ್ರಶ್ನಿಸಿದರು.
“CJI ಅವರನ್ನು ಆಯ್ಕೆ ಸಮಿತಿಯಿಂದ ಏಕೆ ತೆಗೆದುಹಾಕಲಾಯಿತು? CJI ಅವರ ಮೇಲೆ ನಮಗೆ ನಂಬಿಕೆಯಿಲ್ಲವೇ?” ಎಂದು ರಾಹುಲ್ ಗಾಂಧಿ ತೀಕ್ಷ್ಣವಾಗಿ ಪ್ರಶ್ನಿಸಿದರು. ವಿರೋಧ ಪಕ್ಷದ ನಾಯಕರಾಗಿ ಸಮಿತಿಯಲ್ಲಿದ್ದರೂ, ಸರ್ಕಾರದ ಸಂಖ್ಯಾಬಲದ ನಡುವೆ ತಮ್ಮ ಧ್ವನಿ ನಿಶ್ಶಬ್ದವಾಗಿಬಿಟ್ಟಿದೆ ಎಂದು ಅವರು ಆಕ್ಷೇಪಿಸಿದರು. “ಒಂದು ಕಡೆ ಪ್ರಧಾನಿ, ಮತ್ತೊಂದು ಕಡೆ ಗೃಹ ಸಚಿವರು. ಆ ಸಭೆಯಲ್ಲಿ ನನ್ನ ಧ್ವನಿಗೆ ಅವಕಾಶವೇ ಇಲ್ಲ,” ಎಂದು ಅವರು ಹೇಳಿದರು.
2023ರಲ್ಲಿ ಅಂಗೀಕರಿಸಿದ ನೂತನ ಕಾನೂನನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಈ ಕಾನೂನು ಪ್ರಧಾನ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರ ಜೊತೆಗೆ ಮೂರನೇ ಸದಸ್ಯರಾಗಿ ಕೇಂದ್ರ ಸಚಿವರನ್ನು ಸೇರಿಸುವ ಮೂಲಕ ಆಯ್ಕೆ ಸಮಿತಿಯ ರಚನೆಯನ್ನು ಬದಲಿಸಿತ್ತು. ನ್ಯಾಯಾಂಗದ ಹಸ್ತಕ್ಷೇಪವನ್ನು ಸಮಿತಿಯಿಂದ ದೂರ ಮಾಡುವ ಈ ಕ್ರಮದ ಉದ್ದೇಶವೇನು? ಎಂದು ಗಾಂಧಿ ಗಂಭೀರವಾಗಿ ಪ್ರಶ್ನಿಸಿದರು.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆಯು ಆಯೋಗದ ಅಧಿಕಾರಿಗಳಿಗೆ ತಮ್ಮ ಹುದ್ದೆಯಲ್ಲಿ ಮಾಡಿದ ಕ್ರಮಗಳಿಗೆ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಅವಕಾಶ ನೀಡುವುದಿಲ್ಲ. ಈ ವಿಧಾನದ ಅಗತ್ಯವೇನು ಎಂದು ಬಹಿರಂಗಪಡಿಸಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ಚುನಾವಣಾ ಆಯೋಗವನ್ನು ನಿಯಂತ್ರಿಸುವ ಪ್ರಯತ್ನದ ಪರಿಣಾಮವೇನು? ಎಂಬ ಪ್ರಶ್ನೆಯನ್ನು ಎತ್ತಿದ ರಾಹುಲ್ ಗಾಂಧಿ, ಚುನಾವಣಾ ದಿನಾಂಕಗಳು ಪ್ರಧಾನ ಮಂತ್ರಿಯ ಪ್ರಚಾರ ವೇಳಾಪಟ್ಟಿಗೆ ಹೊಂದುವಂತೆ ಘೋಷಿಸಲಾಗುತ್ತಿವೆ ಎಂದು ಆರೋಪಿಸಿದರು. “ನನ್ನ ಯಾವುದೇ ಪ್ರಶ್ನೆಗಳಿಗೆ ಆಯೋಗ ಉತ್ತರಿಸಿಲ್ಲ,” ಎಂದು ರಾಹುಲ್ ಗಾಂಧಿ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳಲ್ಲಿನ ಗಂಭೀರ ವ್ಯತ್ಯಾಸಗಳ ಉದಾಹರಣೆಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, “ಬಿಹಾರದಲ್ಲಿ SIR ನಂತರ ಮತದಾರರ ಪಟ್ಟಿಯಲ್ಲಿ 1.2 ಲಕ್ಷ ನಕಲಿ ಫೋಟೋಗಳು ಪತ್ತೆಯಾಗಿವೆ. ಇದು ನೀವು ಚುನಾವಣೆಗಳನ್ನು ಗೆಲ್ಲುವ ರೀತಿ,” ಎಂದು ಗಾಂಧಿ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.
ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ರಾಹುಲ್ ಗಾಂಧಿ ಮೂರು ಸಲಹೆಗಳನ್ನು ನೀಡಿದರು. ಚುನಾವಣೆಗೆ ಒಂದು ತಿಂಗಳ ಮೊದಲು ಯಂತ್ರಗಳು ಓದಬಲ್ಲ ಮತದಾರರ ಪಟ್ಟಿಗಳನ್ನು ಎಲ್ಲ ಪಕ್ಷಗಳಿಗೆ ಒದಗಿಸಬೇಕು ಎಂದು ಅವರು ಮನವಿ ಮಾಡಿದರು. ಸಿಸಿಟಿವಿ ದೃಶ್ಯಾವಳಿ ನಾಶ ಮಾಡಲು ಅವಕಾಶ ನೀಡುವ ಕಾನೂನನ್ನು ಹಿಂಪಡೆಯಬೇಕೆಂದು ಅವರು ಆಗ್ರಹಿಸಿದರು. ಇವಿಎಂನ ವಿನ್ಯಾಸ ಹೇಗಿದೆ? ರಾಜಕೀಯ ಪಕ್ಷಗಳಿಗೆ ಅದನ್ನು ಲಭ್ಯವಾಗುವಂತೆ ಮಾಡಬೇಕೆಂದು ಅವರು ಆಗ್ರಹಿಸಿದರು.







