ʼಇಲ್ಲಿಗೆ ಕೊನೆಗೊಳಿಸಬೇಡಿʼ : ಆಪರೇಷನ್ ಸಿಂಧೂರ ಬಗ್ಗೆ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತ ಅಧಿಕಾರಿಯ ಪತ್ನಿ ಹೇಳಿಕೆ

Photo | NDTV
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರು ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಸ್ವಾಗತಿಸಿ ಕೇಂದ್ರ ಸರಕಾರಕ್ಕೆ ಧನ್ಯವಾದವನ್ನು ಹೇಳಿದರು. ಕಾರ್ಯಾಚರಣೆಯನ್ನು ಇಲ್ಲಿಗೆ ಕೊನೆಗೊಳಿಸಬೇಡಿ. ಇದು ʼಭಯೋತ್ಪಾದನೆಯ ಅಂತ್ಯದ ಆರಂಭʼ ಎಂದು ಖಚಿತಪಡಿಸಿಕೊಳ್ಳುವಂತೆ ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು.
ʼನನ್ನ ಪತಿ ರಕ್ಷಣಾ ಪಡೆಯಲ್ಲಿದ್ದರು. ಅವರು ಶಾಂತಿ ಮತ್ತು ಮುಗ್ಧ ಜೀವಗಳನ್ನು ರಕ್ಷಿಸಲು ಬಯಸಿದ್ದರು. ಈ ದೇಶದಲ್ಲಿ ಯಾವುದೇ ದ್ವೇಷ ಮತ್ತು ಭಯೋತ್ಪಾದನೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರು ಬಯಸಿದ್ದರು. ನಾನು ಸರಕಾರಕ್ಕೆ ಕೃತಜ್ಞನಾಗಿದ್ದೇನೆ, ಆದರೆ ಇದನ್ನು ಇಲ್ಲಿಗೆ ಕೊನೆಗೊಳಿಸಬೇಡಿ ಎಂದು ನಾನು ವಿನಂತಿಸುತ್ತೇನೆ. ಇದು ನಮ್ಮ ದೇಶದಲ್ಲಿ ಭಯೋತ್ಪಾದನೆಯ ಅಂತ್ಯದ ಆರಂಭ ಎಂದು ಖಚಿತಪಡಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆʼ ಎಂದು ಹೇಳಿದರು.
ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಹಿಮಾಂಶಿ ನರ್ವಾಲ್ ವಿವಾಹದ ಕೆಲವೇ ದಿನಗಳಲ್ಲಿ ಜಮ್ಮುಕಾಶ್ಮೀರಕ್ಕೆ ತೆರಳಿದ್ದರು. ಎಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ವಿನಯ್ ನರ್ವಾಲ್ ಮೃತಪಟ್ಟಿದ್ದರು. ಭಯೋತ್ಪಾದಕರ ದಾಳಿಯಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಹಿಮಾಂಶಿ ನರ್ವಾಲ್, ಇಡೀ ದೇಶವು ವಿನಯ್ಗಾಗಿ ಪ್ರಾರ್ಥಿಸಬೇಕೆಂದು ನಾನು ಬಯಸುತ್ತೇನೆ. ಮುಸ್ಲಿಮರು ಮತ್ತು ಕಾಶ್ಮೀರಿಗಳ ಮೇಲೆ ದ್ವೇಷ ಬೆಳೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಮಗೆ ಇದು ಬೇಡ. ನಾವು ಶಾಂತಿಯನ್ನು ಮಾತ್ರ ಬಯಸುತ್ತೇವೆ, ಬೇರೇನೂ ಅಲ್ಲ. ದಾಳಿಯ ಹಿಂದಿರುವವರನ್ನು ನ್ಯಾಯದ ಕಟಕಟೆಗೆ ತರಬೇಕೆಂದು ಹೇಳಿದ್ದರು.







