Reels ಮಾಡಲು ಹೋಗಿ ದುರಂತ ಅಂತ್ಯ | ರಿವರ್ಸ್ ತೆಗಿಯುವಾಗ ಜೋರಾಗಿ ಆಕ್ಸಿಲರೇಟರ್ ಒತ್ತಿದ ಯುವತಿ ; ಕಾರು ಕಣಿವೆಗೆ ಉರುಳಿ ಬಿದ್ದು, ಮೃತ್ಯು

Photo : x/@SmritiSharma_ videograb
ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ (ಔರಂಗಾಬಾದ್) ರೀಲ್ಸ್ ಮಾಡಲು, ಕಾರು ಚಲಾಯಿಸಲು ತಿಳಿಯದ 23 ವರ್ಷದ ಯುವತಿಯೊಬ್ಬರು ವಾಹನ ರಿವರ್ಸ್ ಗೇರ್ನಲ್ಲಿದ್ದಾಗ ಆಕ್ಸಿಲರೇಟರ್ ಒತ್ತಿದ ಪರಿಣಾಮ, ಕಾರು ಕಣಿವೆಗೆ ಉರುಳಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ದುರ್ಘಟನೆ ಸೋಮವಾರ ನಡೆದಿದೆ. ಯುವತಿ ಶ್ವೇತಾ ಸುರ್ವಾಸೆಯ ಗೆಳೆಯ ಶಿವರಾಜ್ ಮುಳೆ ಆಕೆ ಕಾರು ಚಲಾಯಿಸುವ ವೀಡಿಯೋ ರೀಲ್ಸ್ ತೆಗೆಯುತ್ತಿದ್ದ. ಈ ಘಟನೆಯ ವೀಡಿಯೋ ವೈರಲ್ ಆಗಿದೆ.
ಮೊದಲ ಬಾರಿ ಕಾರು ಚಲಾಯಿಸುತ್ತಿದ್ದ ಯುವತಿ ಬಿಳಿ ಸೆಡಾನ್ ಕಾರಿನ ಸ್ಟೀರಿಂಗ್ ವೀಲ್ ಹಿಡಿದುಕೊಂಡಿದ್ದರು. ಕಾರು ರಿವರ್ಸ್ ತೆಗೆಯುವಾಗ ಆಕೆ ಜೋರಾಗಿ ಆಕ್ಸಿಲರೇಟರ್ ಒತ್ತಿದ ಪರಿಣಾಮ ಕಾರು ವೇಗವಾಗಿ ಗುಡ್ಡದ ಅಂಚಿಗೆ ತಲುಪಿ ಅಲ್ಲಿದ್ದ ತಡೆಗೋಡೆ ದಾಟಿ ಕಾರು ಕಣಿವೆಗೆ ಉರುಳುವಾಗ ವೀಡಿಯೋ ತೆಗೆಯುತ್ತಿದ್ದ ಯುವಕ ಜೋರಾಗಿ ಕಿರುಚುತ್ತಿದ್ದ.
ಸುಮಾರು ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಕಾರು ಮತ್ತು ಯುವತಿಯನ್ನು ಮೇಲಕ್ಕೆತ್ತಲಾಯಿತು. ಯುವತಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.







