ದಿಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ರೋಗಿಯ ಸಂಬಂಧಿಕರಿಂದ ಹಲ್ಲೆ
ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಗೆ ವೈದ್ಯಕೀಯ ಸಂಘ ಕರೆ

ಸಾಂದರ್ಭಿಕ ಚಿತ್ರ | NDTV
ಹೊಸದಿಲ್ಲಿ : ದಿಲ್ಲಿಯ ರೋಹಿಣಿಯಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಮೃತಪಟ್ಟ ಬಳಿಕ ವೈದ್ಯೆಯ ಮೇಲೆ ರೋಗಿಯೋರ್ವರ ಜೊತೆಗಿದ್ದ ಐವರು ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಘಟನೆಯನ್ನು ದಿಲ್ಲಿ ವೈದ್ಯಕೀಯ ಸಂಘ ಖಂಡಿಸಿದೆ.
ʼಜೂನ್ 9 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯರು OPDಯಿಂದ ವಾರ್ಡ್ ಸಂಖ್ಯೆ 12ಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿದೆ. ವಾರ್ಡ್ ಸಂಖ್ಯೆ 11ರಲ್ಲಿ ದಾಖಲಾಗಿದ್ದ ಸೋನಿಯಾ ಎಂಬ ರೋಗಿಯ ಜೊತೆಗಿದ್ದವರು ವೈದ್ಯೆಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆʼ ಎಂದು ಪೊಲೀಸರು ತಿಳಿಸಿದ್ದಾರೆ.
ʼಒಂದು ವಾರದ ಹಿಂದೆ ಜನಿಸಿದ ಶಿಶುವಿನ ಸ್ಥಿತಿ ಗಂಭೀರವಾಗಿತ್ತು. ಆದ್ದರಿಂದ ಶಿಶುವನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಸಿಪಿಆರ್ ಚಿಕಿತ್ಸೆ ನೀಡಿದರೂ ನವಜಾತ ಶಿಶು ಸೋಮವಾರ ಬೆಳಿಗ್ಗೆ ಮೃತಪಟ್ಟಿದೆ. ಮಗುವಿನ ತಾಯಿ ಸೋನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಜೊತೆಗಿದ್ದ ಐವರು ಮಹಿಳೆಯರು ವೈದ್ಯೆಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆʼ ಎಂದು ಉಪ ಪೊಲೀಸ್ ಆಯುಕ್ತ ಅಮಿತ್ ಗೋಯಲ್ ತಿಳಿಸಿದ್ದಾರೆ.
ಆರೋಪಿ ಮಹಿಳೆಯರು ವೈದ್ಯೆಯ ಕೂದಲನ್ನು ಎಳೆದು, ಬಟ್ಟೆಗಳನ್ನು ಹರಿದು ಹಾಕಲು ಪ್ರಯತ್ನಿಸಿದರು. ಇದಲ್ಲದೆ ಸ್ಟೆತೊಸ್ಕೋಪ್ನಿಂದ ಕತ್ತು ಹಿಸುಕಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ. ವೈದ್ಯೆಗೆ ಘಟನೆಯಲ್ಲಿ ಗಾಯಗಳಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬೆನ್ನಲ್ಲೇ ಎಫ್ಐಆರ್ ದಾಖಲಿಸಿ ಐವರು ಆರೋಪಿ ಮಹಿಳೆಯರನ್ನು ಬಂಧಿಸಲಾಗಿದೆ. ಆ ಬಳಿಕ ಅವರು ಜಾಮೀನಿನ ಮೂಲಕ ಬಿಡುಗಡೆಗೊಂಡಿದ್ದಾರೆ.
ಘಟನೆಯನ್ನು ಖಂಡಿಸಿದ ದಿಲ್ಲಿ ವೈದ್ಯಕೀಯ ಸಂಘ ಜೂನ್ 11ರಂದು ಕರ್ತವ್ಯದಲ್ಲಿರುವ ವೈದ್ಯರು ʼಕಪ್ಪು ಪಟ್ಟಿʼಧರಿಸಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದೆ.