ಮಹಾರಾಷ್ಟ್ರ | ಬೀಡ್ನಲ್ಲಿ 843 ಮಹಿಳಾ ಕಾರ್ಮಿಕರ ಗರ್ಭಕೋಶವನ್ನು ಬಲವಂತವಾಗಿ ತೆಗೆಯಲಾಗಿದೆ: ವರದಿ

ಸಾಂದರ್ಭಿಕ ಚಿತ್ರ (PTI)
ಮುಂಬೈ : ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಕಬ್ಬು ಕಟಾವು ಕೆಲಸಕ್ಕೆ ಹೊರಡುವ ಮೊದಲು ನೂರಾರು ವಲಸೆ ಕಾರ್ಮಿಕರ ಗರ್ಭಕೋಶವನ್ನು ಬಲವಂತವಾಗಿ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ ಎಂದು news18.com ವರದಿ ಮಾಡಿದೆ.
ವಲಸೆ ಕಬ್ಬಿನ ಕಾರ್ಮಿಕರ ಆರೋಗ್ಯ ತಪಾಸಣೆಯ ಬಳಿಕ ಸಿದ್ಧಪಡಿಸಲಾದ ಆರೋಗ್ಯ ಇಲಾಖೆಯ ಅಧಿಕೃತ ವರದಿಯ ಪ್ರಕಾರ, 2024ರ ದೀಪಾವಳಿ ವಲಸೆಯ ಸಮಯದಲ್ಲಿ ಕಬ್ಬು ಕಟಾವು ಕೆಲಸಕ್ಕೆ ತೆರಳುವ ಮೊದಲು 843 ಮಹಿಳೆಯರ ಗರ್ಭಕೋಶಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಯಿತು. ಆತಂಕಕಾರಿಯಾಗಿ, ಈ ಮಹಿಳೆಯರಲ್ಲಿ 477 ಜನರು 30 ರಿಂದ 35 ವರ್ಷದೊಳಗಿನವರಾಗಿದ್ದರು ಎಂದು ತಿಳಿಸಿದೆ.
ಈ ಬೆಳವಣಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಶಸ್ತ್ರಚಿಕಿತ್ಸೆಗಳಿಗೆ ಅನುಮತಿ ಪಡೆಯುವ ಮತ್ತು ವೈದ್ಯಕೀಯ ನಿಯಮಾವಳಿಗಳನ್ನು ಪಾಲಿಸುವ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಟ್ಟು 279 ಶಸ್ತ್ರಚಿಕಿತ್ಸೆಯನ್ನು ಖಾಸಗಿಯಾಗಿ ನಡೆಸಲಾಗಿದೆ. ಅಗತ್ಯ ಅನುಮತಿ ಪಡೆದ ಬಳಿಕ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ.
ಬೀಡ್ನಿಂದ ಪ್ರತಿ ವರ್ಷ ಸಾವಿರಾರು ಮಹಿಳೆಯರು ಸೇರಿದಂತೆ ಸುಮಾರು 1.75 ಲಕ್ಷ ಕಾರ್ಮಿಕರು ಕಬ್ಬು ಕಟಾವು ಮಾಡಲು ಇತರ ರಾಜ್ಯಗಳಿಗೆ ತೆರಳುತ್ತಾರೆ. ಈ ಕೆಲಸವು ದೀರ್ಘ ಸಮಯ ಮತ್ತು ದೈಹಿಕ ಶ್ರಮದಿಂದ ಕೂಡಿದೆ.
3,415 ಮಹಿಳೆಯರು ಕಬ್ಬಿಣ, ಬಿ 12 ಮತ್ತು ಫೋಲಿಕ್ ಆಮ್ಲದ ಕೊರತೆಯಿಂದ ಉಂಟಾಗುವ ರಕ್ತಹೀನತೆಯಿಂದ ಮತ್ತು ಥಲಸ್ಸೆಮಿಯಾ ಮತ್ತು ಮುಟ್ಟಿನ ಅಥವಾ ಶಸ್ತ್ರಚಿಕಿತ್ಸೆಯಿಂದ ದೀರ್ಘಕಾಲದ ರಕ್ತದ ನಷ್ಟದಂತಹ ಪರಿಸ್ಥಿತಿಗಳಿಂದ ಬಳಲುತ್ತಿರುವುದು ಕಂಡು ಬಂದಿದೆ. ಈ ಪೈಕಿ 73 ಜನರಿಗೆ ತೀವ್ರ ರಕ್ತಹೀನತೆ ಇರುವುದು ಪತ್ತೆಯಾಗಿದೆ. ನಂತರ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.
1,523 ಮಹಿಳೆಯರು ಗರ್ಭಿಣಿಯಾಗಿದ್ದಾಗ ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಕೈಯಲ್ಲಿ ಕುಡುಗೋಲು, ಹೊಟ್ಟೆಯಲ್ಲಿ ಶಿಶುವಿನ ಭಾರವನ್ನು ಹೊತ್ತುಕೊಂಡು ಈ ಮಹಿಳೆಯರು ಯಾವುದೇ ವಿಶ್ರಾಂತಿ ಇಲ್ಲದೆ ಕಠಿಣ ಪರಿಸ್ಥಿತಿ ಸಹಿಸಿಕೊಂಡು ಕೆಲಸ ಮಾಡುತ್ತಾರೆ ಎಂದು ವರದಿಯಾಗಿದೆ.