ಜಮ್ಮುವಿನ ದೇವಾಲಯದಲ್ಲಿ ಆರತಿ ನೆರವೇರಿಸಿದ ಮಹಿಳೆಯರು : ಶತಮಾನಗಳ ಹಳೆಯ ಸಂಪ್ರದಾಯಕ್ಕೆ ಕೊನೆ

Photo credit: ndtv
ಶ್ರೀನಗರ, ಜೂ. 4: ಜಮ್ಮುವಿನ ರಘುನಾಥ ದೇವಾಲಯದ ಗರ್ಭಗುಡಿಯಲ್ಲಿ ಮಹಿಳೆಯರು ಆರತಿ ನೆರವೇರಿಸುವ ಮೂಲಕ ಶತಮಾನಗಳ ಹಳೆಯ ಪುರುಷ ಪ್ರಧಾನ ಸಂಪ್ರದಾಯವನ್ನು ಮರಿದಿದ್ದಾರೆ.
ಇದೇ ಮೊದಲ ಬಾರಿಗೆ ಅರ್ಚಕ ವೃತ್ತಿ ತರಬೇತಿ ಪಡೆಯುತ್ತಿರುವ ಮಹಿಳೆಯರು ಇಲ್ಲಿ ಸಂಜೆಯ ಆರತಿ ನೆರವೇರಿಸುತ್ತಿದ್ದಾರೆ. ಈ ಮಹಿಳೆಯರು ಶತಮಾನಗಳ ಹಳೆಯ ಸಂಪ್ರದಾಯದ ತಡೆಗೋಡೆಯನ್ನು ಮುರಿದು ಮಂತ್ರಗಳನ್ನು ಪಠಿಸುತ್ತಿದ್ದಾರೆ.
ಈ ದೇವಾಲಯ 1835ರಲ್ಲಿ ನಿರ್ಮಾಣಗೊಂಡಿದೆ. ಈ ಹಾದಿ ಸುಲಭದ್ದಾಗಿರಲಿಲ್ಲ. ಹಲವು ಅಡೆ ತಡೆಗಳು ಎದುರಾದುವು. ಆದರೆ, ಮಹಾರಾಜ ಹರಿ ಸಿಂಗ್ ಅವರ ಮೊಮ್ಮಗನ ಪತ್ನಿ ಕುನ್ವಾರಾನಿ ರಿತು ಸಿಂಗ್ ಅವರು ಜನರ ಮನವೊಲಿಸಿದರು.
‘‘ಇದರ ಉದ್ದೇಶ ಪುರುಷರನ್ನು ನಿರ್ಲಕ್ಷಿಸುವುದಲ್ಲ. ಬದಲಿಗೆ ಪುರುಷ ಮತ್ತು ಮಹಿಳೆಯರು ಇಬ್ಬರೂ ಸಮಾನರು ಎಂಬ ಶಿವ ಮತ್ತು ಶಕ್ತಿಯ ಪರಿಕಲ್ಪನೆಯನ್ನು ಉತ್ತೇಜಿಸುವುದಾಗಿದೆ’’ ಎಂದು ರಿತು ಸಿಂಗ್ ಹೇಳಿದ್ದಾರೆ.
‘‘ನಾವು ಕಂಜಕ್ ಪೂಜೆ (ಕನ್ಯಾ ಪೂಜೆ) ಮತ್ತು ದೇವಿ ಪೂಜೆಯನ್ನು ಮಾಡುವುದಾದರೆ ಮಹಿಳೆಯರನ್ನು ಪೂಜೆ ಮಾಡುವುದರಿಂದ ದೂರ ಇರಿಸುವುದು ಹೇಗೆ ?’’ ಎಂದು ಅವರು ಪ್ರಶ್ನಿಸಿದ್ದಾರೆ.
ಕುನ್ವರಾನಿ ರಿತು ಸಿಂಗ್ ಅವರು ಒಂದು ವರ್ಷದ ಹಿಂದೆ ಈ ದಿಟ್ಟೆ ಹೆಜ್ಜೆ ಇರಿಸಿದ್ದರು. ಪುರುಷರು ಮಾತ್ರ ನಿರ್ವಹಿಸುತ್ತಿದ್ದ ಈ ಕೈಂಕರ್ಯದ ಕುರಿತು ಮಹಿಳೆಯರಿಗೆ ತರಬೇತಿ ನೀಡಲು ಆರಂಭಿಸಿದರು.
‘‘ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರಸ್ತುತ 150 ಯುವತಿಯರಿದ್ದಾರೆ. ಮುಂಬರುವ ದಿನಗಳ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ’’ ಎಂದು ಕುನ್ವರಾನಿ ರಿತು ಸಿಂಗ್ ಹೇಳಿದ್ದಾರೆ.
ತರಬೇತಿಯ ಮುಂದಿನ ಹಂತದಲ್ಲಿ ಅವರಿಗೆ ಹವನ ನಡೆಸುವುದು ಮತ್ತು ಮಂತ್ರಗಳನ್ನು ಪಠಿಸುವುದನ್ನು ಕಲಿಸಲಾಗುವುದು. ಇದರಿಂದ ಅವರು ವಿವಿಧ ದೇವಾಲಯಗಳಲ್ಲಿ ಪೂಜಾರಿಣಿಯಾಗಿ ಸೇವೆ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.
‘‘ಇದು ಮಹಿಳಾ ಸಬಲೀಕರಣದ ಕಡೆಗಿನ ದಿಟ್ಟ ಹೆಜ್ಜೆಯಾಗಿದೆ’’ ಎಂದು ರಿತು ಸಿಂಗ್ ಹೇಳಿದ್ದಾರೆ.
‘‘ನನಗೆ ಆಗುತ್ತಿರುವ ಸಂತೋಷವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ನನ್ನ ಜೀವಿತಾವಧಿಯಲ್ಲಿ ಮಹಿಳೆಯರು ಆರತಿ ನೆರವೇರಿಸುವುದನ್ನು ನೋಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ’’ ಎಂದು ಭಕ್ತೆ ಮಿನಿ ಬಗೋತ್ರಾ ಹೇಳಿದ್ದಾರೆ.






