ಮಹಿಳಾ ಪೊಲೀಸ್ ಠಾಣೆಗಳು ರಾಜಿ ಮಾತುಕತೆಗಳ ಅಡ್ಡೆಗಳಾಗಿವೆ: ಮದ್ರಾಸ್ ಹೈಕೋರ್ಟ್

ಮದರಾಸು ಹೈಕೋರ್ಟ್ | Photo Credit ; PTI
ಹೊಸದಿಲ್ಲಿ,ಜು.10: ವರದಕ್ಷಿಣೆ ವಿವಾದದಲ್ಲಿ ಪ್ರಕರಣ ದಾಖಲಿಸುವ ಬದಲು, ಅದನ್ನು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ ಖಾಸಗಿಯಾಗಿ ಇತ್ಯರ್ಥ ಪಡಿಸುವಂತೆ ವಧುವಿನ ತಂದೆಗೆ ಸಲಹೆ ನೀಡಿರುವುದಕ್ಕಾಗಿ ‘ಸರ್ವ ಮಹಿಳಾ ಪೊಲೀಸ್ ಠಾಣೆ’ಯೊಂದನ್ನು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಒಂದು ಲಕ್ಷ ರೂಪಾಯಿಯನ್ನು ನ್ಯಾಯಾಲಯದಲ್ಲಿ ಠೇವಣಿಯಾಗಿ ಇಟ್ಟು, ಜುಲೈ 14ರಂದು ಇದಕ್ಕೆ ವಿವರಣೆ ನೀಡಲು ಹಾಜರಾಗುವಂತೆ ನ್ಯಾಯಾಲಯವು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಪೊಲೀಸರು ಅನೌಪಚಾರಿಕ ರಾಜಿ ಮಾತುಕತೆಗಳ ಮೂಲಕ ಕ್ರಿಮಿನಲ್ ಆರೋಪಗಳನ್ನು ದುರ್ಬಲಗೊಳಿಸುವಂತಿಲ್ಲ ಎಂದು ನ್ಯಾಯಮೂರ್ತಿ ಎಲ್. ವಿಕ್ಟೋರಿಯಾ ಗೌರಿ ಹೇಳಿದರು. ಮಹಿಳೆಯರ ರಕ್ಷಣೆಗಾಗಿ ಸ್ಥಾಪಿಸಲ್ಪಟ್ಟಿರುವ ಸಂಸ್ಥೆಗಳು ಅಗತ್ಯ ಪ್ರಮಾಣದ ಸೂಕ್ಷ್ಮತೆ ಮತ್ತು ಕಾನೂನಿನ ಮೂಲಕ ತಮ್ಮ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿಭಾಯಿಸಲು ವಿಫಲವಾಗುತ್ತಿವೆ ಎಂದು ನ್ಯಾಯಾಧೀಶರು ನುಡಿದರು.
‘‘ಕೆಲವು ಸರ್ವ ಮಹಿಳಾ ಪೊಲೀಸ್ ಠಾಣೆಗಳು ರಾಜಿ ಮಾತುಕತೆಗಳ ಅನೌಪಚಾರಿಕ ವೇದಿಕೆಗಳಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಅವುಗಳು ಕ್ರಿಮಿನಲ್ ಕಾನೂನಿನ ಪ್ರಕಾರ ಮಾಡಬೇಕಾಗಿರುವ ಕಡ್ಡಾಯ ಪ್ರಕ್ರಿಯೆಗಳನ್ನು ನಿರ್ಲಕ್ಷಿಸುತ್ತಿವೆ’’ ಎಂದು ಗುರುವಾರ ನೀಡಿದ ಆದೇಶದಲ್ಲಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.




