Parliament Special Session | ಕ್ಷೇತ್ರ ಪುನರ್ ವಿಂಗಡಣೆ ಉದ್ದೇಶದ ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲು

Photo: PTI
ಹೊಸದಿಲ್ಲಿ: ಲೋಕಸಭಾ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಿದ್ದ ಬಹುನಿರೀಕ್ಷಿತ ಕ್ಷೇತ್ರ ಪುನರ್ ವಿಂಗಡಣೆ ಉದ್ದೇಶದ ಸಂವಿಧಾನ ತಿದ್ದುಪಡಿ ಮಸೂದೆ(ಮಹಿಳಾ ಮೀಸಲಾತಿ ಮಸೂದೆ) ಮತ ವಿಭಜನೆಯಲ್ಲಿ 298-230 ಅಂತರದಲ್ಲಿ ಸೋಲನುಭವಿಸಿದೆ.
ಸಾಂವಿಧಾನಿಕ ತಿದ್ದುಪಡಿಯಾದ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಅರ್ಥಾತ್ 360 ಸದಸ್ಯರ ಬೆಂಬಲದ ಅಗತ್ಯವಿತ್ತು. ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಬಳಿ 298 ಸದಸ್ಯರ ಬಲವಿದ್ದರೆ, ವಿಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿಕೂಟದ ಬಳಿ 234 ಸದಸ್ಯರ ಬಲವಿತ್ತು. ಮತ ವಿಭಜನೆಯ ವೇಳೆ ಸದನದಲ್ಲಿ ಒಟ್ಟು 489 ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಮೀಸಲಾತಿ ಮಸೂದೆ ಕುರಿತು ನಡೆದ ಸುದೀರ್ಘ ಚರ್ಚೆಯ ಬಳಿಕ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತಗಳನ್ನು ಮತ ವಿಭಜನೆಗೆ ಹಾಕಿದರು. ಮತ ವಿಭಜನೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ 298-230 ಅಂತರದಲ್ಲಿ ಪರಾಭವಗೊಂಡಿತು.
ಇದಕ್ಕೂ ಮುನ್ನ, ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಸುದೀರ್ಘ ಉತ್ತರ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ವಿರೋಧ ಪಕ್ಷಗಳು ಮಹಿಳೆಯರ ವಿರೋಧಿಗಳು” ಎಂದು ಆರೋಪಿಸಿದರು. ಈ ಮಸೂದೆಯನ್ನು ಮೋದಿ ಸರಕಾರ ಮಂಡಿಸಿರುವುದರಿಂದಷ್ಟೇ ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದೂ ಅವರು ದೂರಿದರು.






