ಮಹಿಳಾ ಮೀಸಲಾತಿ ವಿಧೇಯಕಕ್ಕೆ ಧನಕರ್ ಅಂಕಿತ

ಹೊಸದಿಲ್ಲಿ: ಮಹಿಳಾ ಮೀಸಲಾತಿ ವಿಧೇಯಕಕ್ಕೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಗುರುವಾರ ಸಹಿಹಾಕಿದ್ದಾರೆ. ಇನ್ನು ಈ ವಿಧೇಯಕವನ್ನು ಅಂಗೀಕಾರಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿಕೊಡಲಾಗುತ್ತದೆ.
ಸಂಸತ್ ನ ಉಭಯಸದನಗಳು ಅಂಗೀಕರಿಸಿರುವ ಸಂವಿಧಾನ ವಿಧೇಯಕ (128ನೇ ತಿದ್ದುಪಡಿ) 2023ಕ್ಕೆ ರಾಜ್ಯಸಭಾ ಅಧ್ಯಕ್ಷರು ಸಹಿಹಾಕಿದ್ದು, ಅದನ್ನು ಸಂವಿಧಾನದ 111ನೇ ವಿಧಿಯಡಿ ಅವಿರೋಧವಾಗಿ ರಾಷ್ಟ್ರಪತಿಯವರ ಒಪ್ಪಿಗೆಗಾಗಿ ಕಳುಹಿಸಿಕೊಡಲಾಗುವುದು ಎಂದು ಉಪರಾಷ್ಟ್ರಪತಿಯವರ ಕಾರ್ಯಾಲಯ ತಿಳಿಸಿದೆ.
ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸುವ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಈ ತಿಂಗಳಾರಂಭದಲ್ಲಿ ನಡೆದ ವಿಶೇಷ ಸಂಸತ್ ಅಧಿವೇಶನದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಬಹುಮಟ್ಟಿಗೆ ಅವಿರೋಧವಾಗಿ ಅಂಗೀಕರಿಸಲಾಗಿತ್ತು.
ಲೋಕಸಭೆ ಹಾಗೂ ರಾಜ್ಯ ವಿಧಾನಸಭಾ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ.22 ಮೀಸಲಾತಿಗೆ ಅವಕಾಶ ನೀಡುವ ಈ ವಿಧೇಯಕವು ಜಾರಿಗೆ ಬರಲು ಕೆಲವು ಸಮಯ ತಗಲುವ ಸಾಧ್ಯತೆಯಿದೆ. ಮುಂದಿನ ಜನಗಣತಿ ಹಾಗೂ ಆನಂತರದ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಮೂಲಕ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡುವ ಕ್ಷೇತ್ರಗಳನ್ನು ಗುರುತಿಸಲಾಗುವುಂದೆಂದು ವರದಿಗಳು ತಿಳಿಸಿವೆ.







