ವಿಶ್ವದ ಬೃಹತ್ ಸೂರತ್ ವಜ್ರ ವಿನಿಮಯ ಮಾರುಕಟ್ಟೆ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಸೂರತ್ ವಜ್ರ ವಿನಿಮಯ ಮಾರುಕಟ್ಟೆ (Photo: indiatimes.com)
ಹೊಸದಿಲ್ಲಿ: ಗುಜರಾತ್ ನ ಸೂರತ್ ನಲ್ಲಿ ಜಗತ್ತಿನ ಅತಿ ದೊಡ್ಡ ಕಚೇರಿ ಕಟ್ಟಡವಾದ ಸೂರತ್ ಡೈಮಂಡ್ ಬೊಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ ಉದ್ಘಾಟಿಸಿದರು.
ಅಂತರ್ ರಾಷ್ಟ್ರೀಯ ವಜ್ರ ಹಾಗೂ ಆಭರಣ ಉದ್ಯಮ ಕ್ಷೇತ್ರದಲ್ಲಿ ಸೂರತ್ ಡೈಮಂಡ್ ಬೊಸ್ ಜಗತ್ತಿನಲ್ಲೇ ಅತ್ಯಂತ ಬೃಹತ್ ಹಾಗೂ ಅತ್ಯಾಧುನಿಕ ಕೇಂದ್ರವಾಗಿದೆ ಎಂದು ಪ್ರಧಾನಿಯವರ ಕಾರ್ಯಾಲಯ(ಪಿಎಂಓ)ರವಿವಾರ ಪ್ರಕಟಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಒರಟು ಹಾಗೂ ಪಾಲಿಶ್ ಮಾಡಿದ ವಜ್ರಗಳ ವ್ಯಾಪಾರಕ್ಕೆ ಈ ಕಟ್ಟಡವು ಜಾಗತಿಕ ಕೇಂದ್ರ ವಾಗಲಿದೆಯೆಂದು ಅದು ಹೇಳಿದೆ.ಈ ಕಾರ್ಯಾಲಯವು ಆಮದು ಹಾಗೂ ರಫ್ತು ವಹಿವಾಟಿಗೆ ಅತ್ಯಾಧುನಿಕ ‘ಕಸ್ಟಮ್ಸ್ ಕ್ಲಿಯರೆನ್ಸ್’ಕೇಂದ್ರವನ್ನು ಕೂಡಾ ಹೊಂದಿದೆ. ಆಭರಣಗಳ ರಿಟೇಲ್ ವ್ಯವಹಾರಕ್ಕೆ ಜ್ಯುವೆಲ್ಲರಿ ಮಳಿಗೆಯೂ ಇದೆ. ಜೊತೆಗೆ ಅಂತರ್ ರಾಷ್ಟ್ರೀಯ ಬ್ಯಾಂಕಿಂಗ್ ಹಾಗೂ ಸೇಫ್ ವಾಲ್ಟ್ ಸೌಲಭ್ಯವನ್ನು ಕೂಡಾ ಒದಗಿಸಲಾಗಿದೆ.
ವಜ್ರ ಸಂಶೋಧನಾ ಹಾಗೂ ವ್ಯಾಪಾರ (ಡ್ರೀಮ್)ನಗರಿ ಯೋಜನೆಯ ಭಾಗವಾಗಿ ಸ್ಥಾಪಿಸಲಾಗಿರುವ ಈ ಕಟ್ಟಡವು ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದಲ್ಲಿ ಜಗತ್ತಿನ ಅತಿ ದೊಡ್ಡ ಕಚೇರಿ ಕಟ್ಟಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೂರತ್ ಡೈಮಂಡ್ ಬೊಸ್ ಕಟ್ಟಡದ ನಿರ್ಮಾಣವನ್ನು 2015ರ ಫೆಬ್ರವರಿಯಲ್ಲಿ ಆರಂಭಿಸಿದ್ದು, 2022ರಲ್ಲಿ ಅದು ಪೂರ್ಣಗೊಂಡಿತು. ಅಂದಾಜು 3500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡವು 67 ಲಕ್ಷ ಚದರ ಅಡಿ ವಿಸ್ತೀರ್ಣವಿದೆ ಹಾಗೂ ಸುಮಾರು 4500 ವಜ್ರ ವ್ಯಾಪಾರ ಕಾರ್ಯಾಲಯಗಳ ಸಾಮರ್ಥ್ಯವನ್ನು ಹೊಂದಿದೆ.
35.54 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಾಣವಾದ ಈ ಬೃಹತ್ ಕಟ್ಟಡವು 9 ನೆಲ ಗೋಪುರಗಳು ಹಾಗೂ 15 ಅಂತಸ್ತುಗಳನ್ನು ಹೊಂದಿದೆ. ಕಚೇರಿಗಳ ಜಾಗವು 1 ಲಕ್ಷ ಚದರಅಡಿಯಿಂದ 300 ಚದರ ಅಡಿವರೆಗಿನ ವಿಸ್ತೀರ್ಣಗಳನ್ನು ಹೊಂದಿವೆ. 9 ಅಷ್ಟಾಕಾರದ ಗೋಪುರಗಳಿದ್ದು, ಒಂದಕ್ಕೊಂದು ಸಂಪರ್ಕಿಸಲ್ಪಟ್ಟಿವೆ. ಭಾರತೀಯ ಹಸಿರು ಕಟ್ಟಡ ಮಂಡಳಿ (ಐಜಿಬಿಸಿ)ಯಿಂದ ಈ ಕಟ್ಟಡವು ಪ್ಲಾಟಿನಂ ರ್ಯಾಂಕಿಂಗ್ ಅನ್ನು ಹೊಂದಿವೆ.
ಗಮನಾರ್ಹವೆಂದರೆ ಬಿಲಿಯಾಧೀಶ ವಜ್ರೋದ್ಯಮಿ, ಕಿರಣ್ ಜೆಮ್ಸ್ನ ನಿರ್ದೇಶಕ ವಲ್ಲಭಬಾಯಿ ಲಖಾನಿ ಅವರು ತನ್ನ 17 ಸಾವಿರ ಕೋಟಿ ರೂ. ಮೊತ್ತ ಉದ್ಯಮವನ್ನು ಡೈಮಂಡ್ ಬೊಸ್ಗೆ ವರ್ಗಾಯಿಸಿದ್ದಾರೆ ಹಾಗೂ ತನ್ನ ಉದ್ಯೋಗಿಗಳಿಗಾಗಿ ಮಿನಿ ಟೌನ್ ಶಿಪ್ ಅನ್ನು ಕೂಡಾ ಅಭಿವೃದ್ಧಿಪಡಿಸುತ್ತಿದ್ದಾರೆ.







