ಮಹಾ ಕುಂಭಮೇಳ ಕಾಲ್ತುಳಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ: ಯತಿ ನರಸಿಂಹಾನಂದ
ಮುಖ್ಯಮಂತ್ರಿ ಆದಿತ್ಯನಾಥ್ ಗೆ ರಕ್ತದಿಂದ ಪತ್ರ

ಯತಿ ನರಸಿಂಹಾನಂದ ಸರಸ್ವತಿ | PC : PTI
ಪ್ರಯಾಗ್ ರಾಜ್: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮೌನಿ ಅಮವಾಸ್ಯೆಯಂದು ಸಂಭವಿಸಿದ್ದ ಕಾಲ್ತುಳಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿತ್ತು ಎಂದು ದಾಸ್ನಾದ ಶಿವಶಕ್ತಿ ಧಾಮದ ಪೀಠಾಧೀಶ್ವರ ಹಾಗೂ ಶ್ರೀ ಪಂಚದಶಾನಂ ಜುನಾ ಅಖಾಡಾದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಯತಿ ಆರೋಪಿಸಿದ್ದಾರೆ.
ತಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಶ್ರೀ ಪಂಚದಶಾನಂ ಜುನಾ ಅಖಾಡಾದ ಹೆಸರಿನಲ್ಲಿ ರಕ್ತದಲ್ಲಿ ಪತ್ರವೊಂದನ್ನು ಬರೆದಿರುವುದಾಗಿ ಅವರು ತಿಳಿಸಿದರು.
‘ಮೌನಿ ಅಮವಾಸ್ಯೆಯಂದು ಹಿಂದುಗಳ ಬಗ್ಗೆ ನಿಮ್ಮ ಲಜ್ಜೆಗೇಡಿ, ಭ್ರಷ್ಟ ಮತ್ತು ಸಂವೇದನಾರಹಿತ ಅಧಿಕಾರಿಗಳ ಅಮಾನವೀಯ ವರ್ತನೆಯು ನಾನು ಈ ಪತ್ರವನ್ನು ಬರೆಯುವುದನ್ನು ಅನಿವಾರ್ಯವಾಗಿಸಿದೆ. ಅಂದಿನ ಭೀಕರ ಕಾಲ್ತುಳಿತ ನನ್ನ ಪ್ರಾಥಮಿಕ ಕಳವಳವಲ್ಲಕ್ಷ ನನ್ನ ನಿಜವಾದ ಕಳವಳವು ಹಿಂದು ಸಮಾಜವನ್ನು ತ್ವರಿತವಾಗಿ ಅಪ್ಪಳಿಸಲಿರುವ ದೊಡ್ಡ ದುರಂತದ ಕುರಿತಾಗಿದೆ. ಈ ದುರಂತವನ್ನು ತಡೆಯಲು ಹಿಂದುಗಳು ನರೇಂದ್ರ ಮೋದಿಯವರನ್ನು ಭಾರತದ ಪ್ರಧಾನಿಯಾಗಿ ಮತ್ತು ನಿಮ್ಮನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಮಾಡಿದ್ದರು. ಇದೇ ಭಯದಿಂದಲೇ ಹೆಚ್ಚಿನ ಹಿಂದುಗಳು ಇಂದು ನಿಮ್ಮನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸಿದ್ದಾರೆ ’ಎಂದು ಪತ್ರದಲ್ಲಿ ಹೇಳಿರುವ ನರಸಿಂಹಾನಂದ,ಈ ದುರಂತವು ಹಿಂದು ಸಮಾಜಕ್ಕೆ ಗಂಭೀರ ಬೆದರಿಕೆಯನ್ನೊಡ್ಡಿದೆ. ನಿಮ್ಮನ್ನು ಸನಾತನ ಧರ್ಮದ ಪ್ರಜ್ವಲಿಸುವ ಸೂರ್ಯನಂತೆ ನೋಡಲಾಗುತ್ತಿದ್ದು,ಹೆಚ್ಚಿನ ಹಿಂದುಗಳ ಹೃದಯಗಳಲ್ಲಿ ಸ್ಥಾನ ಪಡೆದುಕೊಂಡಿದ್ದೀರಿ. ಬಹುಪಾಲು ಹಿಂದುಗಳು ನಿಮ್ಮನ್ನು ತಮ್ಮ ಏಕೈಕ ರಕ್ಷಕ ಎಂದು ಪರಿಗಣಿಸಿದ್ದಾರೆ ಎಂದಿದ್ದಾರೆ.
ರಾಜ್ಯ ಸರಕಾರದ ಬಂದೂಕು ಪರವಾನಿಗೆ ನೀತಿಯನ್ನೂ ಟೀಕಿಸಿರುವ ನರಸಿಂಹಾನಂದ,ನಿಮ್ಮ ಸರಕಾರದ ಈ ನೀತಿಯು ದುಷ್ಟಶಕ್ತಿಗಳಿಗೆ ತಮ್ಮ ಉದ್ದೇಶ ಸಾಧನೆಯಲ್ಲಿ ನೆರವಾಗುತ್ತಿದೆ. ಹಿಂದಿನ ಸರಕಾರಗಳು ತಮ್ಮ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಬಂದೂಕು ಪರವಾನಿಗೆಗಳನ್ನು ಮುಕ್ತವಾಗಿ ವಿತರಿಸಿದ್ದರೆ, ಕಳೆದ ಏಳು ವರ್ಷಗಳ ನಿಮ್ಮ ಅಧಿಕಾರಾವಧಿಯಲ್ಲಿ ನಿಮಗೆ ಬೃಹತ್ ಜನಾದೇಶವನ್ನು ನೀಡಿದ ಹಿಂದುಗಳಿಗೆ ಬಂದೂಕು ಪರವಾನಿಗೆಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ. ಬಂದೂಕು ಪರವಾನಿಗೆ ನೀತಿಯನ್ನು ಪರಿಷ್ಕರಿಸುವಂತೆ ಆಗ್ರಹಿಸಿರುವ ಅವರು, ತಮ್ಮ ಕುಟುಂಬದ ಮಹಿಳೆಯರು ಮತ್ತು ಸಂಪತ್ತಿನ ರಕ್ಷಣೆಗಾಗಿ ಹಿಂದುಗಳಿಗೆ ಈಗ ಬಂದೂಕು ಪರವಾನಿಗೆಗಳ ಅಗತ್ಯವಿದೆ ಎಂದಿದ್ದಾರೆ.