ಐಸಿಸ್ ನಂತಹ ಸಶಸ್ತ್ರ ಹಿಂದೂ ಗುಂಪು ರಚನೆಗೆ ಕರೆ: ವಿವಾದ ಸೃಷ್ಟಿಸಿದ ಯತಿ ನರಸಿಂಗಾನಂದ

Photo : PTI
ಹೊಸದಿಲ್ಲಿ: ಐಸಿಸ್ ನಂತಹ ಸಶಸ್ತ್ರ ಹಿಂದೂ ಗುಂಪು ರಚನೆಯಾಗಬೇಕು ಎಂದು ವಿವಾದಾತ್ಮಕ ಹಿಂದುತ್ವದ ನಾಯಕ ಯತಿ ನರಸಿಂಗಾನಂದ ಕರೆ ನೀಡಿದ್ದು, ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಪ್ರದೇಶದ ತಮ್ಮ ದಾಸ್ನಾ ದೇವಾಲಯದಲ್ಲಿ ಚಿತ್ರಣಗೊಂಡಿರುವ ದೃಶ್ಯಾವಳಿಯಲ್ಲಿ, ಮುಸ್ಲಿಮರ ಬೆದರಿಕೆಯನ್ನು ಎದುರಿಸಲು ಐಸಿಸ್ ನಂತಹ ಸಶಸ್ತ್ರ ಗುಂಪುಗಳನ್ನು ರಚಿಸಬೇಕು ಎಂದು ಹಿಂದೂಗಳಿಗೆ ಕರೆ ನೀಡಿದ್ದಾರೆ.
ತಮ್ಮ ದ್ವೇಷ ಭಾಷಣಗಳಿಗೆ ಕುಖ್ಯಾತರಾಗಿರುವ ಯತಿ ನರಸಿಂಗಾನಂದ, ಹಿಂದೂಗಳನ್ನು ಗುರಿಯಾಗಿಸಿಕೊಳ್ಳಲಾಗುತ್ತಿದ್ದು, ಹಿಂದೂಗಳು ತಮ್ಮ ಧರ್ಮ, ಕುಟುಂಬಗಳು ಹಾಗೂ ಅಸ್ತಿತ್ವವನ್ನು ರಕ್ಷಿಸಿಕೊಳ್ಳೂಲು ಆಯುಧಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಸಶಸ್ತ್ರ ಗುಂಪುಗಳ ರಚನೆಗೆ ಸ್ಪಷ್ಟವಾಗಿ ಕರೆ ನೀಡಿರುವ ಅವರು, ಅಗತ್ಯ ಬಿದ್ದರೆ, ಮುಸ್ಲಿಮರಂತೆ ನೀವೂ ಕೂಡಾ ಐಸಿಸ್ ನಂತಹ ನಿಮ್ಮದೇ ಸಂಘಟನೆಗಳನ್ನು ಸ್ಥಾಪಿಸಿಕೊಳ್ಳಿ ಎಂದೂ ಅವರು ಉತ್ತೇಜಿಸಿದ್ದಾರೆ.
ಮೊರಾದಾಬಾದ್ ನಲ್ಲಿ ಹಿಂದೂಗಳ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಸ್ವಯಂ ರಕ್ಷಣೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಹಿಂದೂಗಳಿಗೆ ಆಯುಧಗಳನ್ನು ಸರಬರಾಜು ಮಾಡಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದಲೂ ನೆರವು ಪಡೆಯುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಈ ವೀಡಿಯೊ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಯತಿ ನರಸಿಂಗಾನಂದ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ಕೇಳಿ ಬಂದಿವೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಕಳವಳ ವ್ಯಕ್ತಪಡಿಸಿರುವ ಹಿರಿಯ ಪತ್ರಕರ್ತ ಡಾ. ಮುಕೇಶ್ ಕುಮಾರ್, ಇಂತಹ ಪ್ರಚೋದನೆಯಿಂದ ನಾಗರಿಕ ಯುದ್ಧ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಯತಿ ನರಸಿಂಗಾನಂದರನ್ನು ಭಯೋತ್ಪಾದಕ ಎಂದು ಟೀಕಿಸಿರುವ ಮುಕೇಶ್ ಕುಮಾರ್, “ಈ ಮನುಷ್ಯ ಬಹಿರಂಗವಾಗಿಯೇ ಹಿಂಸಾಚಾರಕ್ಕೆ ಕರೆ ನೀಡುತ್ತಿದ್ದು, ದೇಶವನ್ನು ನಾಗರಿಕ ಯುದ್ಧದತ್ತ ದೂಡುತ್ತಿದ್ದಾರೆ. ಈತನ ವಿರುದ್ಧ ತಕ್ಷಣವೇ ದೇಶದ್ರೋಹದ ಪ್ರಕರಣ ದಾಖಲಿಸಿಕೊಂಡು, ಬಂಧಿಸಬೇಕು” ಎಂದು ಆಗ್ರಹಿಸಿದ್ದಾರೆ.
ನರಸಿಂಗಾನಂದರಂಥ ವ್ಯಕ್ತಿಗಳಿಗೆ ರಕ್ಷಣೆ ನೀಡಿ, ಅವರು ಪರಿಣಾಮಗಳ ವಿವೇಚನೆ ಇಲ್ಲದೆ ದ್ವೇಷ ಹರಡಲು ಅವಕಾಶ ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಅವರು ಕಿಡಿ ಕಾರಿದ್ದಾರೆ.
ಈ ಕುರಿತು ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಗೂ ರಾಜಕೀಯ ನಾಯಕರೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, “ಈ ಮನುಷ್ಯ ಪದೇ ಪದೇ ಹಿಂಸೆಯನ್ನು ಪ್ರಚೋದಿಸುತ್ತಿದ್ದು, ಐಸಿಸ್ ನಂತಹ ಭಯೋತ್ಪಾದಕ ಸಂಘಟನೆಯ ರಚನೆಗೆ ಕರೆ ನೀಡಿದ್ದಾನೆ. ಹೀಗಿದ್ದೂ, ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರೇನಾದರೂ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆಯೆ ಅಥವಾ ಆತ ಬಹುಸಂಖ್ಯಾತ ಸಮುದಾಯಕ್ಕೆ ಸೇರಿರುವುದರಿಂದ ಆತನಿಗೆ ಯಾವುದೇ ಭೀತಿಯಿಲ್ಲವೆ?” ಎಂದು ಎಐಎಂಐಎಂನ ರಾಜ್ಯಾಧ್ಯಕ್ಷ ಶೌಕತ್ ಅಲಿ ಪ್ರಶ್ನಿಸಿದ್ದಾರೆ.







