International Yoga Day| ಯೋಗವು ಇಡೀ ಜಗತ್ತನ್ನು ಒಟ್ಟುಗೂಡಿಸುವ ಶಕ್ತಿಯನ್ನು ಹೊಂದಿದೆ : ಪ್ರಧಾನಿ ಮೋದಿ

Photo | X
ಹೊಸದಿಲ್ಲಿ: ಇಂದು ಇಡೀ ದೇಶ, ಜಗತ್ತು ಒಂದಕ್ಕೊಂದು ಜೋಡಿಸಲ್ಪಟ್ಟಂತೆ ಕಾಣುತ್ತಿದೆ. ಇದು ಯೋಗದ ಶಕ್ತಿ. ಯೋಗವು ಎಲ್ಲರನ್ನೂ ಒಟ್ಟುಗೂಡಿಸುತ್ತದೆ. ಈ ಸಂದರ್ಭದಲ್ಲಿ ಇಡೀ ಜಗತ್ತಿಗೆ, ಇಡೀ ಮಾನವ ಕುಲಕ್ಕೆ ಅಂತಾರಾಷ್ಟ್ರೀಯ ಯೋಗ ದಿನದ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ ಎಂದು ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ದೇಶದ ಜನರಿಗೆ ಶುಭಾಶಯವನ್ನು ಕೋರಿದರು.
ಕೊಲ್ಕತ್ತಾದ ರೆಡ್ ರೋಡ್ನಲ್ಲಿ ಸಾವಿರಾರು ಜನರೊಂದಿಗೆ ಯೋಗ ದಿನವನ್ನು ಆಚರಿಸಿದ ಪ್ರಧಾನಿ ಮೋದಿ, 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ಘೋಷವಾಕ್ಯದಡಿಯಲ್ಲಿ ಈ ವರ್ಷದ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ಘೋಷವಾಕ್ಯ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ, ಭಾವನಾತ್ಮಕ ಸ್ಥಿತಿಸ್ಥಾಪನೆ ಮತ್ತು ಸಕ್ರಿಯ ವೃದ್ಧಾಪ್ಯವನ್ನು ಉತ್ತೇಜಿಸುವಲ್ಲಿ ಯೋಗದ ಪಾತ್ರವನ್ನು ಒತ್ತಿ ಹೇಳುತ್ತದೆ ಎಂದು ಹೇಳಿದರು.
40ನೇ ವಯಸ್ಸಿನಲ್ಲೂ ಹೆಚ್ಚು ಚುರುಕಾಗಿರುವುದು ನಮ್ಮ ಗುರಿಯಾಗಬೇಕು. ಇದಕ್ಕೆ ಯೋಗವು ನಮಗೆ ಸಹಾಯ ಮಾಡುತ್ತದೆ. ಇದು ನಮ್ಮ ದೇಹವನ್ನು ಚುರುಕಾಗಿಡಲು ಮತ್ತು ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು.
ಇದೇ ವೇಳೆ ರವೀಂದ್ರನಾಥ ಟ್ಯಾಗೋರ್ ಅವರ ಆದರ್ಶಗಳನ್ನು ಸ್ಮರಿಸಿದ ಪ್ರಧಾನಿ, “ಬಂಗಾಳದ ಮಣ್ಣಿನಲ್ಲಿ ಜನಿಸಿದ ರವೀಂದ್ರನಾಥ ಟ್ಯಾಗೋರ್ ಅವರು, ಮನುಷ್ಯನ ಗುರುತು ಪ್ರತ್ಯೇಕವಾಗಿ ಬದುಕುವುದರಲ್ಲಿ ಇಲ್ಲ, ಬದಲಿಗೆ ತಮ್ಮ ಸುತ್ತಲಿನ ಪ್ರಪಂಚದೊಂದಿಗೆ ಬೆರೆಯುವುದರಲ್ಲಿ ಅಡಗಿದೆ ಎಂದು ನಂಬಿದ್ದರು. ಈ ಬೆರೆಯುವುಕೆಯೇ ಯೋಗದ ಸಾರವಾಗಿದೆ" ಎಂದು ಹೇಳಿದರು.
ಇದೇ ವೇಳೆ, ಯೋಗ ದಿನದ ಕಾರ್ಯಕ್ರಮಕ್ಕಾಗಿ ಸ್ವಚ್ಛ ಮತ್ತು ಪೂರಕ ವಾತಾವರಣವನ್ನು ನಿರ್ಮಿಸಿದ ಕೋಲ್ಕತ್ತಾದ ಜನರನ್ನು ವಿಶೇಷವಾಗಿ ಅಭಿನಂದಿಸಿದರು.






