ಅಧ್ಯಾತ್ಮದ ಮರೆಯಲ್ಲಿ ಲೈಂಗಿಕ ದೌರ್ಜನ್ಯ? ಋಷಿಕೇಶದ ಪ್ರತಿಷ್ಠಿತ ಯೋಗ ಕೇಂದ್ರ ಸತ್ತ್ವ ಯೋಗ ಅಕಾಡೆಮಿಯ ಕರಾಳ ಮುಖ

Photo: Facebook \ theprint.in
ಜಾಗತಿಕ ಮಟ್ಟದಲ್ಲಿ ವರ್ಷಗಳಿಂದ ಋಷಿಕೇಶದ ಅತ್ಯಂತ ಪ್ರತಿಷ್ಠಿತ ಯೋಗ ತರಬೇತಿ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಸಂಸ್ಥೆ 'ಸತ್ತ್ವ ಯೋಗ ಅಕಾಡೆಮಿ'. ಇದರ ಸಂಸ್ಥಾಪಕ ಆನಂದ್ ಮೆಹ್ರೋತ್ರಾ ಅವರ ಮಾರ್ಗದರ್ಶನದಲ್ಲಿ ಹಿಮಾಲಯದ ಸಾಂಪ್ರದಾಯಿಕ ಯೋಗವನ್ನು ಕಲಿಯಲು ಪ್ರಪಂಚದಾದ್ಯಂತದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು. ಆದರೆ, ಇಂದು ಈ ಸಂಸ್ಥೆಯ ವರ್ಚಸ್ಸು ಹಿಂದೆಂದೂ ಕಾಣದ ರೀತಿಯಲ್ಲಿ ತೀವ್ರ ಆತಂಕಕ್ಕೆ ಈಡಾಗಿದೆ.
ಜೂನ್ 15 ರಂದು 'ಸೇಫ್ಹೌಸ್' (SafeHouse) ಎಂಬ ವೆಬ್ಸೈಟ್, ಸಂಸ್ಥೆಯಲ್ಲಿದ್ದ ಲೈಂಗಿಕ ದೌರ್ಜನ್ಯ ಮತ್ತು ಅಧಿಕಾರದ ದುರುಪಯೋಗದ ಬಗ್ಗೆ ಬೆಲ್ಜಿಯಂ, ನಾರ್ವೆ ಹಾಗೂ ಅಮೆರಿಕದಂತಹ ದೇಶಗಳ ನಾಲ್ವರು ಹಳೆಯ ವಿದ್ಯಾರ್ಥಿನಿಯರು ನೀಡಿದ ವಿವರವಾದ ಹೇಳಿಕೆಗಳನ್ನು ಪ್ರಕಟಿಸಿದೆ. ಸುಮಾರು ಒಂದು ದಶಕದ ಅವಧಿಯ ಈ ಘಟನೆಗಳಲ್ಲಿ, ಒಪ್ಪಿಗೆಯಿಲ್ಲದ ಲೈಂಗಿಕ ಸಂಪರ್ಕದಿಂದ ಹಿಡಿದು ಗುರು-ಶಿಷ್ಯರ ನಡುವಿನ ಅಸಮಾನ ಅಧಿಕಾರದ ದುರುಪಯೋಗದವರೆಗಿನ ಗಂಭೀರ ಆರೋಪಗಳಿವೆ. ವೆಬ್ಸೈಟ್ ಪ್ರಕಾರ, 2015 ರ ನಂತರ ಮೆಹ್ರೋತ್ರಾ ವಿರುದ್ಧ ಕೇಳಿಬರುತ್ತಿರುವ ಮೂರನೇ ಹಂತದ ಆರೋಪಗಳು ಇವಾಗಿವೆ.
ಸತ್ತ್ವ ಯೋಗ ಅಕಾಡೆಮಿಯು ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಹಲವು ಕಡೆಗಳಲ್ಲಿ ತನ್ನ ಶಾಖೆಗಳನ್ನು ಹೊಂದುವ ಮೂಲಕ ಜಾಗತಿಕವಾಗಿ ವಿಸ್ತರಿಸಿಕೊಂಡಿತ್ತು. 'ಸತ್ತ್ವ ಯೋಗ ಅಕಾಡೆಮಿ ಗ್ಲೋಬಲ್' ಅಡಿಯಲ್ಲಿ ಆಸ್ಟ್ರೇಲಿಯಾ, ಇಟಲಿ, ಕ್ಯಾಲಿಫೋರ್ನಿಯಾ, ಹವಾಯಿ ಮತ್ತು ಬಲ್ಗೇರಿಯಾಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳ ನಂತರ 'ಸತ್ತ್ವ ಟಸ್ಕನಿ', 'ಸತ್ತ್ವ ಯುಕೋ' (ಈಗ ಸಂಘ ಯುಕೆ ಎಂದು ಬದಲಾಗಿದೆ) ಮತ್ತು 'ಸತ್ತ್ವ ಕ್ಯಾಲಿಫೋರ್ನಿಯಾ' ಸೇರಿದಂತೆ ಹಲವು ಶಾಖೆಗಳು ಸತ್ತ್ವ ಯೋಗ ಅಕಾಡೆಮಿಯಿಂದ ದೂರ ಸರಿದಿವೆ.
ಈ ಹೇಳಿಕೆಗಳು ಪ್ರಕಟವಾಗುತ್ತಿದ್ದಂತೆ ಜಾಗತಿಕ ಯೋಗ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಸತ್ತ್ವ ಸಂಸ್ಥೆಯೊಂದಿಗೆ ಈ ಹಿಂದೆ ಕೆಲಸ ಮಾಡಿದ್ದ ಹಲವು ಸಂಸ್ಥೆಗಳು ಸತ್ತ್ವ ಅಕಾಡೆಮಿ ಮತ್ತು ಮೆಹ್ರೋತ್ರಾ ಅವರೊಂದಿಗಿನ ಸಂಬಂಧವನ್ನು ಸಾರ್ವಜನಿಕವಾಗಿ ಕಡಿದುಕೊಂಡಿವೆ. ಹಳೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವರ್ಷಗಳ ಹಿಂದಿನ ಸಂಭಾಷಣೆಗಳು ಮತ್ತೆ ಮುಂಚೂಣಿಗೆ ಬರುತ್ತಿದ್ದು, ಕೇವಲ ಒಬ್ಬ ಶಿಕ್ಷಕನ ನಡತೆಯ ಬಗ್ಗೆ ಮಾತ್ರವಲ್ಲದೆ, ಆಧುನಿಕ ಆಧ್ಯಾತ್ಮಿಕ ಸಂಸ್ಥೆಗಳಲ್ಲಿನ ಅಧಿಕಾರ ಶಾಹಿ, ಮೌನ ಮತ್ತು ಹೊಣೆಗಾರಿಕೆಯ ಪ್ರಶ್ನೆಗಳೂ ಈಗ ಎದ್ದಿವೆ.
"ಜನರು ಹೆಚ್ಚಾಗಿ ಅಸಹಾಯಕ ಸ್ಥಿತಿಯಲ್ಲಿ ಇಲ್ಲಿಗೆ ಬರುತ್ತಾರೆ ಮತ್ತು ತಾವು ನಂಬಿದ ವ್ಯಕ್ತಿಯ ಕೈಗೆ ತಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಳ್ಳುತ್ತಾರೆ" ಎಂದು ಸಂತ್ರಸ್ತ ಮಹಿಳೆಯೊಬ್ಬರು 'ದಿ ಪ್ರಿಂಟ್'ಗೆ ತಿಳಿಸಿದ್ದಾರೆ. "ಬುದ್ಧಿಗಿಂತ ದೇಹಕ್ಕೆ ವಿಷಯಗಳು ಬೇಗ ಅರ್ಥವಾಗುತ್ತವೆ. ಅಲ್ಲಿ ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಜನರಿಗೆ ವರ್ಷಗಳೇ ಹಿಡಿದವು. ಕೆಲವೊಮ್ಮೆ ಮತ್ತೊಬ್ಬ ಮಹಿಳೆ ತನಗಾದ ಅನುಭವವನ್ನು ಹೇಳಿಕೊಂಡಾಗಷ್ಟೇ ಇವರಿಗೂ ಆ ಸತ್ಯ ತಿಳಿಯುತ್ತಿತ್ತು.
Anand Mehrotra, founder of Rishikesh-based Sattva Yoga Academy | Photo: Facebook
►ವೆಬ್ಸೈಟ್ ಹೇಗೆ ಸಕ್ರಿಯಗೊಂಡಿತು?
ವರ್ಷಗಳಿಂದ ಸಮುದಾಯದಲ್ಲಿ ರಹಸ್ಯವಾಗಿ ಹರಿದಾಡುತ್ತಿದ್ದ ಆರೋಪಗಳ ಬಗ್ಗೆ ಸತ್ತ್ವ ಯೋಗ ಅಕಾಡೆಮಿಯ ಮಾಜಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಹೋದ್ಯೋಗಿಗಳ ನಡುವೆ ತಿಂಗಳುಗಟ್ಟಲೆ ನಡೆದ ಚರ್ಚೆಯ ನಂತರ, ಜೂನ್ 15 ರಂದು ಹವಾಯಿಯಿಂದ 'ಸೇಫ್ಹೌಸ್' (SafeHouse) ವೆಬ್ಸೈಟ್ ಲೈವ್ ಆಯಿತು. ಸತ್ತ್ವ ಸಂಸ್ಥೆಯಿಂದ ಸಾಕಷ್ಟು ಪ್ರಯೋಜನ ಪಡೆದಿದ್ದ ಮಾಜಿ ಸದಸ್ಯರ ಆಂತರಿಕ ಹೋರಾಟವಾಗಿ ಆರಂಭವಾದ ಈ ಪ್ರಯತ್ನ, ಅಂತಿಮವಾಗಿ ಸಮುದಾಯದಲ್ಲಿ ತೊಂದರೆಗೊಳಗಾದ ಮಹಿಳೆಯರ ಸಾಕ್ಷ್ಯಗಳು, ದಾಖಲೆಗಳು ಮತ್ತು ಕಾಲಗಣನೆಯನ್ನು ಒಳಗೊಂಡ ಸಾರ್ವಜನಿಕ ದಾಖಲಾತಿಯಾಗಿ ಬದಲಾಯಿತು.
ಈ ಇಡೀ ಪ್ರಯತ್ನದ ಕೇಂದ್ರಬಿಂದುವಾಗಿದ್ದವರು ಹವಾಯಿ ಮೂಲದ ವಕೀಲೆ ಹಾಗೂ ಸತ್ತ್ವ ಸಂಸ್ಥೆಯ ಮಾಜಿ ವಿದ್ಯಾರ್ಥಿನಿ ಕ್ರಿಸ್ಟಿನಾ ಲಿಜ್ಜಿ. ʼದಿ ಪ್ರಿಂಟ್ʼ ಜತೆ ಮಾತನಾಡಿದ ಅವರು ಆರಂಭದಲ್ಲಿ ಈ ಆರೋಪಗಳನ್ನು ನಂಬಲು ತಮಗೆ ಕಷ್ಟವಾಗಿತ್ತು ಎಂದಿದ್ದಾರೆ.
"ನಾನು ಸತ್ತ್ವ ಸಂಸ್ಥೆಗೆ ತುಂಬಾ ನಿಷ್ಠಳಾಗಿದ್ದೆ. ಅಲ್ಲಿನ ಬೋಧನೆಗಳು ಮತ್ತು ಯೋಗಾಭ್ಯಾಸಗಳನ್ನು ಪ್ರೀತಿಸುತ್ತಿದ್ದೆ. ಅದು ನನಗೆ ತುಂಬಾ ಒಳಿತನ್ನು ಮಾಡಿತ್ತು" ಎಂದು ಲಿಜ್ಜಿ ಹೇಳಿದ್ದಾರೆ.
2026 ಎಪ್ರಿಲ್ ನಲ್ಲಿ ಸತ್ತ್ವ ಕ್ಯಾಲಿಫೋರ್ನಿಯಾ ಸಂಸ್ಥೆಯು ಸತ್ತ್ವ ಯೋಗ ಅಕಾಡೆಮಿ ಮತ್ತು ಸತ್ತ್ವ ಯೋಗ ಗ್ಲೋಬಲ್ ಜೊತೆಗಿನ ತನ್ನ ಸಂಬಂಧವನ್ನು ಕೊನೆಗೊಳಿಸುವುದಾಗಿ ಘೋಷಿಸಿದಾಗ ಮಾತ್ರ ತಮಗೆ ಈ ಆರೋಪಗಳ ಬಗ್ಗೆ ತಿಳಿಯಿತು ಎಂದು ಲಿಜ್ಜಿ ಹೇಳುತ್ತಾರೆ. ಆರಂಭದಲ್ಲಿ ಸಮುದಾಯದಲ್ಲಿ ಈ ಬಿರುಕನ್ನು ಕೇವಲ ವ್ಯಾಪಾರ ವಿವಾದ ಎಂದು ಬಿಂಬಿಸಲಾಗಿತ್ತು. ಆದರೆ, "ನೈತಿಕ ಉಲ್ಲಂಘನೆಗಳ" ಕಾರಣದಿಂದಾಗಿ ಸಂಸ್ಥೆಯನ್ನು ಮುಚ್ಚಲಾಗುತ್ತಿದೆ ಎಂದು ಸತ್ತ್ವ ಕ್ಯಾಲಿಫೋರ್ನಿಯಾದಿಂದ ಬಂದ ಇಮೇಲ್ ಲಿಜ್ಜಿ ಅವರಗೆ ಮತ್ತಷ್ಟು ತನಿಖೆ ನಡೆಸುವಂತೆ ಪ್ರೇರೇಪಿಸಿತು.
"ಅದು ನನಗೆ ಸರಿಯಾಗಿ ಕಾಣಿಸಲಿಲ್ಲ," ಎಂದು ಲಿಜ್ಜಿ ಹೇಳಿದ್ದಾರೆ. "ನಂತರ ಆನಂದ್ ಅವರೊಂದಿಗೆ ಸಭೆ ನಡೆಯಲಿದೆ ಎಂದು ನನಗೆ ತಿಳಿಯಿತು. ನಾನು ಸಮುದಾಯದ ಜನರೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ಇದು ಮೊದಲ ಬಾರಿಯೇನೂ ಆಗಿರಲಿಲ್ಲ. ಇದು ಈ ಹಿಂದೆ ಕೂಡ ನಡೆದಿತ್ತು ಎಂಬುದು ನನಗೆ ಮನವರಿಕೆಯಾಯಿತು ಎಂದಿದ್ದಾರೆ.
►ಎಲ್ಲವನ್ನೂ ಬದಲಿಸಿದ ಆ ಒಂದು ಮೀಟಿಂಗ್
ಸತ್ತ್ವ ಕ್ಯಾಲಿಫೋರ್ನಿಯಾ ಸಂಸ್ಥೆಯನ್ನು ಬಜರಂಗ್ ಮೋರನ್ ಮತ್ತು ಗೇಬ್ರಿಯಲ್ ಗೆಂಡ್ರಾನ್ ಮುನ್ನಡೆಸುತ್ತಿದ್ದರು. ಇವರು ಸತ್ತ್ವ ಯೋಗ ಅಕಾಡೆಮಿಯ ಸಂಯೋಜನೆಯೊಂದಿಗೆ ಯೋಗ ಶಿಕ್ಷಕರ ತರಬೇತಿ ನೀಡುತ್ತಾ, ಕ್ಯಾಲಿಫೋರ್ನಿಯಾದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕ್ಯಾಲಿಫೋರ್ನಿಯಾದಿಂದ ಫೋನ್ ಕರೆ ಮೂಲಕ 'ದಿ ಪ್ರಿಂಟ್' ಜೊತೆ ಮಾತನಾಡಿದ ಬಜರಂಗ್, ಈ ವರ್ಷದ ಎಪ್ರಿಲ್ನಲ್ಲಿ ತಮಗೆ ಮತ್ತು ತಮ್ಮ ಪಾಲುದಾರರಿಗೆ ಸ್ನೇಹಿತರೊಬ್ಬರಿಂದ ಕರೆ ಬಂದಿತ್ತು ಎಂದು ತಿಳಿಸಿದರು. ಆನಂದ್ ಮೆಹ್ರೋತ್ರಾ ಅವರಿಂದ ಕಿರುಕುಳಕ್ಕೊಳಗಾಗಿದ್ದ ಮಹಿಳೆಯೊಬ್ಬರು ಸತ್ತ್ವ ಸಂಸ್ಥೆಯನ್ನು ತೊರೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಆ ಕರೆಯಲ್ಲಿತ್ತು. ಅವರು ಈ ವಿಷಯದ ಬಗ್ಗೆ ತನಿಖೆ ನಡೆಸಲು ಪ್ರಾರಂಭಿಸಿದಾಗ, ಮೆಹ್ರೋತ್ರಾ ಇತರ ವಿದ್ಯಾರ್ಥಿನಿಯರೊಂದಿಗೂ ಇಂತಹ ಸಂಬಂಧ ಹೊಂದಿದ್ದರು ಎಂಬ ಆರೋಪಗಳು ಕೇಳಿಬಂದವು.
"ನಾನು ಕ್ಯಾಲಿಫೋರ್ನಿಯಾದಲ್ಲಿದ್ದರೂ, ಭಾರತಕ್ಕೆ ಬಂದು ಆನಂದ್ ಅವರನ್ನು ಖುದ್ದಾಗಿ ಭೇಟಿಯಾಗಲು ನಿರ್ಧರಿಸಿದೆ" ಎಂದು ಬಜರಂಗ್ ಹೇಳಿದ್ದಾರೆ.
ಎಪ್ರಿಲ್ 28 ರಂದು ಋಷಿಕೇಶಕ್ಕೆ ಬಂದು ಮೆಹ್ರೋತ್ರಾ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ಭೇಟಿಯಾದೆ. ಸಂತ್ರಸ್ತ ಮಹಿಳೆಯರ ಮಾತನ್ನು ತಾವು ನಂಬಿರುವುದಾಗಿ ಮತ್ತು ಸತ್ತ್ವ ಸಂಸ್ಥೆಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ಸತ್ತ್ವ ಕ್ಯಾಲಿಫೋರ್ನಿಯಾ ನಿರ್ಧರಿಸಿದೆ ಎಂದು ಮೆಹ್ರೋತ್ರಾಗೆ ತಿಳಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿತ್ತು ಎಂದು ಬಜರಂಗ್ ತಿಳಿಸಿದ್ದಾರೆ.
ಆ ಸಭೆಯಲ್ಲಿ, ಮೆಹ್ರೋತ್ರಾ ಇಬ್ಬರು ವಿದ್ಯಾರ್ಥಿನಿಯರೊಂದಿಗೆ "ಅನುಚಿತವಾಗಿ ನಡೆದುಕೊಂಡ ಹಲವು ಘಟನೆಗಳನ್ನು" ಒಪ್ಪಿಕೊಂಡಿದ್ದರು ಎಂದು ಬಜರಂಗ್ ಆರೋಪಿಸಿದ್ದಾರೆ. ಈ ಆರೋಪಗಳನ್ನು ನಂತರ ಬಜರಂಗ್ ಅವರು ಮೆಹ್ರೋತ್ರಾಗೆ ಕಳುಹಿಸಿದ ಇಮೇಲ್ನಲ್ಲಿ ಉಲ್ಲೇಖಿಸಲಾಗಿತ್ತು. ಈ ಇಮೇಲ್ ಈಗ 'ಸೇಫ್ಹೌಸ್' ವೆಬ್ಸೈಟ್ನಲ್ಲಿ ಸಾರ್ವಜನಿಕವಾಗಿ ಲಭ್ಯವಿದೆ.
ಆ ಇಮೇಲ್ನಲ್ಲಿ ಹೀಗಿತ್ತು: "2026 ಎಪ್ರಿಲ್ 28 ಮಂಗಳವಾರದಂದು ಸತ್ತ್ವ ಯೋಗ ಅಕಾಡೆಮಿಯ ನಿಮ್ಮ ಕಚೇರಿಯಲ್ಲಿ ನಡೆದ ನಮ್ಮ ಸಭೆಯಲ್ಲಿ, ನೀವು ವಿದ್ಯಾರ್ಥಿನಿಯರೊಂದಿಗೆ ನಡೆಸಿದ ವೈಯಕ್ತಿಕ ಒಡನಾಟದ ಹಲವು ಘಟನೆಗಳನ್ನು ಒಪ್ಪಿಕೊಂಡಿದ್ದೀರಿ... ಗುರು ಮತ್ತು ಶಿಷ್ಯರ ನಡುವಿನ ಅಸಮಾನ ಅಧಿಕಾರದ ದುರುಪಯೋಗದಿಂದಾಗಿ ಆ ಮಹಿಳೆಯರು ಬಲಿಪಶುಗಳಾಗಿದ್ದಾರೆ ಎಂದು ನಾವು ನಂಬುತ್ತೇವೆ."
ಬಜರಂಗ್ ಮತ್ತು ಮೆಹ್ರೋತ್ರಾ ನಡುವೆ ನಡೆದ ಭೇಟಿಯನ್ನು ಖಚಿತಪಡಿಸುವ ವಾಟ್ಸಾಪ್ ಸಂದೇಶಗಳನ್ನು 'ದಿ ಪ್ರಿಂಟ್' ಪರಿಶೀಲಿಸಿದೆ. ಅಂದೇ ಸಂಜೆ ಮೆಹ್ರೋತ್ರಾ ತಮಗೆ ಸಂದೇಶ ಕಳುಹಿಸಿ, ಈ ಸಂಭಾಷಣೆಯನ್ನು ರಹಸ್ಯವಾಗಿಡುವಂತೆ ವಿನಂತಿಸಿದ್ದರು ಎಂದು ಬಜರಂಗ್ ಹೇಳಿದ್ದಾರೆ.
Gabriel (left) and Bajrang (right) with Anand Mehrotra | Photo: Instagram/@sattvayogaacademyglobal
"ನಮ್ಮ ಭೇಟಿಯಲ್ಲಿ ನಡೆದ ವಿಷಯವನ್ನು ರಹಸ್ಯವಾಗಿಡಲು ಅವರು ನನ್ನನ್ನು ಕೇಳಿಕೊಂಡರು. ಆದರೆ ಯಾವುದೇ ವಿಷಯವನ್ನು ಮುಚ್ಚಿಡಲು ನಾನು ಒಪ್ಪಿರಲಿಲ್ಲ" ಎಂದು ಬಜರಂಗ್ ಸ್ಪಷ್ಟಪಡಿಸಿದ್ದಾರೆ.
ಬಳಿಕ ಬಜರಂಗ್ ಅವರು ಸಭೆಯಲ್ಲಿ ಪ್ರಸ್ತಾಪವಾದ ಮಹಿಳೆಯರನ್ನು ಸಂಪರ್ಕಿಸಿದರು. ಅವರಲ್ಲಿ ಒಬ್ಬ ಮಹಿಳೆ, ಯಾರಾದರೂ ಪ್ರಶ್ನಿಸಿದರೆ ತಮ್ಮ ನಡುವಿನ ಸಂಬಂಧದ ಬಗ್ಗೆ ಯಾರಿಗೂ ಹೇಳದಂತೆ ಮೆಹ್ರೋತ್ರಾ ತನಗೆ ತಿಳಿಸಿದ್ದರು ಎಂದರು. ಮತ್ತೊಬ್ಬ ಮಹಿಳೆ, ಮೆಹ್ರೋತ್ರಾ ಅದನ್ನು "ಹೀಲಿಂಗ್ ಸೆಷನ್" ಎಂದು ಕರೆದಿರುವುದನ್ನು ಸಂಪೂರ್ಣವಾಗಿ ನಿರಾಕರಿಸಿದರು.
ಈ ಇಡೀ ಬೆಳವಣಿಗೆಯೇ ಒಂದು ವೈಯಕ್ತಿಕ ಆತಂಕವು ಸಾಮೂಹಿಕ ಹೋರಾಟವಾಗಿ ಬದಲಾಗಲು ಕಾರಣವಾಯಿತು ಎಂದು ಲಿಜ್ಜಿ ಹೇಳಿದ್ದಾರೆ.
►ಬಯಲಾದ ವ್ಯವಸ್ಥಿತ ನಡವಳಿಕೆ
ಲಿಜ್ಜಿ ಅವರು ಮಾಜಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ಈ ಆರೋಪಗಳು ಕೇವಲ 'ಸೇಫ್ಹೌಸ್' ವೆಬ್ಸೈಟ್ನಲ್ಲಿ ಪ್ರಕಟವಾದ ನಾಲ್ಕು ಸಾಕ್ಷ್ಯಗಳಿಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ಅದನ್ನೂ ಮೀರಿದ್ದವು ಎಂಬುದು ಅವರಿಗೆ ಸ್ಪಷ್ಟವಾಯಿತು.
"ವೆಬ್ಸೈಟ್ನಲ್ಲಿರುವ ನಾಲ್ಕು ಹೇಳಿಕೆಗಳು ನಾನು ವೈಯಕ್ತಿಕವಾಗಿ ಮಾತನಾಡಿದ ಮಹಿಳೆಯರದ್ದಾಗಿದೆ. ಆದರೆ ಇಂತಹ ಇನ್ನು ಅನೇಕ ಮಹಿಳೆಯರಿದ್ದಾರೆ." ಅಂತಾರೆ ಲಿಜ್ಜಿ.
ಲಿಜ್ಜಿಯವರ ಪ್ರಕಾರ, ಮೆಹ್ರೋತ್ರಾ ವಿರುದ್ಧ ಕೇಳಿಬರುತ್ತಿರುವ ಮೂರನೇ ಹಂತದ ಆರೋಪಗಳನ್ನು ಈ ವೆಬ್ಸೈಟ್ ಪ್ರತಿನಿಧಿಸುತ್ತದೆ. ಮೊದಲ ಬಾರಿಗೆ ಸಾರ್ವಜನಿಕವಾಗಿ ದೂರುಗಳು ಕೇಳಿಬಂದಿದ್ದು 2015 ರಲ್ಲಿ. ಮಾಜಿ ಸದಸ್ಯರೊಂದಿಗಿನ ಮಾತುಕತೆಯಿಂದ 2009 ರಷ್ಟು ಹಳೆಯದಾದ ಕೆಲವು ಘಟನೆಗಳೂ ಅವರ ಗಮನಕ್ಕೆ ಬಂದಿವೆ. ಆದರೆ, ಸಂಘಟಕರು ಇವೆಲ್ಲವನ್ನೂ ಸೇರಿಸಿ ಒಂದು ಸ್ಪಷ್ಟವಾದ ಟೈಮ್ ಲೈನ್ ಸಿದ್ಧಪಡಿಸಲು ಇನ್ನು ಕೆಲಸ ಮಾಡುತ್ತಿದ್ದಾರೆ.
ಈ ಹಿಂದಿನ ಆರೋಪಗಳು ಕೇಳಿಬಂದಾಗ ತಮಗೆ ಅದರ ಬಗ್ಗೆ ಅರಿವಿರಲಿಲ್ಲ ಎಂದು ಬಜರಂಗ್ ಹೇಳಿದ್ದಾರೆ. 2020 ರ ಸುಮಾರಿಗೆ ನಡೆದ ಒಂದು ಘಟನೆಯನ್ನು ಅವರು ನೆನಪಿಸಿಕೊಂಡರು. ವಿದ್ಯಾರ್ಥಿನಿಯೊಬ್ಬಳು ಮೆಹ್ರೋತ್ರಾ ಅವರೊಂದಿಗೆ ಮದ್ಯ ಸೇವಿಸಿದ ನಂತರ ಎಚ್ಚರಗೊಂಡಾಗ, ತನ್ನ ಒಪ್ಪಿಗೆಯಿಲ್ಲದೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಭಾವಿಸಿದ್ದರು. ಆ ಸಮಯದಲ್ಲಿ ಬಜರಂಗ್ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಮೆಹ್ರೋತ್ರಾ ತಾವು ಮದ್ಯ ಸೇವಿಸುತ್ತಿದ್ದೇನೆ ಎಂಬುದನ್ನೇ ನಿರಾಕರಿಸಿದ್ದರು.
ಅವರು ನನ್ನ ಗುರುಗಳಾಗಿದ್ದರಿಂದ ನಾನು ಅವರನ್ನು ನಂಬಿದ್ದೆ. ಆದರೆ ಅವರು ಮದ್ಯ ಸೇವಿಸುತ್ತಾರೆ ಎಂಬ ವಿಷಯ ನನಗೆ ಈ ವರ್ಷವಷ್ಟೇ ತಿಳಿಯಿತು. ಈಗ ಹಿಂತಿರುಗಿ ನೋಡಿದಾಗ, ಅವರು ನನಗೆ ಸುಳ್ಳು ಹೇಳಿದ್ದರು ಎಂಬುದು ಮನವರಿಕೆಯಾಗುತ್ತಿದೆ ಅಂತಾರೆ ಬಜರಂಗ್ .
ಹೆಚ್ಚಿನ ಮಹಿಳೆಯರು ಮುಂದೆ ಬಂದು ಮಾತನಾಡತೊಡಗಿದಾಗ, ಎಲ್ಲರ ಕಥೆಯಲ್ಲೂ ಒಂದು ಸಾಮ್ಯತೆ ಕಂಡುಬಂತು ಎಂದು ಹೇಳಿದ್ದಾರೆ ಲಿಜ್ಜಿ.
"ತಾವು ತುಂಬಾ ವಿಶೇಷ ವ್ಯಕ್ತಿ ಹಾಗೂ ತಮಗೆ ಮಾತ್ರ ಈ ರೀತಿ ಆಗುತ್ತಿದೆ ಎಂದು ಆ ಮಹಿಳೆಯರು ಭಾವಿಸಿದ್ದರು. ಆದರೆ ಇದೊಂದು ವ್ಯವಸ್ಥಿತವಾದ ನಡವಳಿಕೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ವರ್ಷಗಳೇ ಬೇಕಾದವು."
ತಾವು ಅನುಭವಿಸಿದ್ದು ಗುರು-ಶಿಷ್ಯರ ನಡುವಿನ ಅಸಮಾನ ಅಧಿಕಾರದ ದುರುಪಯೋಗ ಎಂಬುದನ್ನು ಒಪ್ಪಿಕೊಳ್ಳಲು ಅನೇಕ ಮಹಿಳೆಯರು ವರ್ಷಗಳ ಕಾಲ ಹೋರಾಡಬೇಕಾಯಿತು. ಆರಂಭದಲ್ಲಿ ಮೆಹ್ರೋತ್ರಾ ನೀಡುತ್ತಿದ್ದ ಗಮನವನ್ನು ಮಾರ್ಗದರ್ಶನ, ಆಧ್ಯಾತ್ಮಿಕ ದಾರಿ ಅಥವಾ ಒಂದು ವಿಶೇಷ ಒಡನಾಟ ಎಂದು ಭಾವಿಸಿದ್ದಾಗಿ ಹಲವರು ತಿಳಿಸಿದ್ದಾರೆ. ಆದರೆ, ನಂತರದ ದಿನಗಳಲ್ಲಿ ಅದು ಕೇವಲ ತಮ್ಮನ್ನು ದುರುಪಯೋಗಪಡಿಸಿಕೊಳ್ಳಲು ಮಾಡಿದ ವ್ಯವಸ್ಥಿತ ಸಂಚು ಮತ್ತು ಕುತಂತ್ರ ಎಂಬುದನ್ನು ಅವರು ಅರಿತುಕೊಂಡರು.
ಸತ್ತ್ವ ಸಂಸ್ಥೆಯಿಂದ ಹೊರಬರುವುದು ಕೂಡ ಅಲ್ಲಿ ನಡೆದ ಕಿರುಕುಳವನ್ನು ಗುರುತಿಸುವಷ್ಟೇ ಕಷ್ಟದ ಕೆಲಸವಾಗಿತ್ತು. ಅನೇಕ ಜನರಿಗೆ ಸತ್ತ್ವ ಕೇವಲ ಒಂದು ಯೋಗ ಶಾಲೆಯಾಗಿರಲಿಲ್ಲ.ಅದು ಅವರ ಕೆಲಸ, ಅವರ ಸ್ನೇಹಿತರ ಬಳಗ, ಅವರ ಮನೆ ಮತ್ತು ಅವರ ಇಡೀ ಆಧ್ಯಾತ್ಮಿಕ ಸಮುದಾಯವಾಗಿತ್ತು. ಇದರ ವಿರುದ್ಧ ಧ್ವನಿ ಎತ್ತಿದರೆ ತಮ್ಮ ಗುರುಗಳನ್ನು ಮಾತ್ರವಲ್ಲದೆ, ತಮ್ಮ ವೃತ್ತಿಜೀವನ, ಸಾಮಾಜಿಕ ವಲಯ ಮತ್ತು ತಮ್ಮವರಿಗಿದ್ದ ಆಪ್ತತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ ಮಹಿಳೆಯರಲ್ಲಿತ್ತು ಅಂತಾರೆ ಲಿಜ್ಜಿ.
►'ಸೇಫ್ಹೌಸ್' ಪ್ರಕಟಿಸಿದ್ದೇನು?
'ಸೇಫ್ಹೌಸ್' ವೆಬ್ಸೈಟ್ ನಾಲ್ಕು ಮಹಿಳೆಯರ ಹೇಳಿಕೆಗಳನ್ನು ಒಳಗೊಂಡಿದೆ. ತಾವು ವಿದ್ಯಾರ್ಥಿಗಳಾಗಿದ್ದಾಗ ಅಥವಾ ಅಲ್ಲಿ ಕೆಲಸ ಮಾಡುತ್ತಿದ್ದಾಗ ಮೆಹ್ರೋತ್ರಾ ಅವರೊಂದಿಗೆ ನಡೆದ ಒಪ್ಪಿಗೆಯ ಹಾಗೂ ಒಪ್ಪಿಗೆಯಿಲ್ಲದ ನಡವಳಿಕೆಗಳ ಅನುಭವಗಳನ್ನು ಅವರು ಇದರಲ್ಲಿ ವಿವರಿಸಿದ್ದಾರೆ. ವೆಬ್ಸೈಟ್ ಪ್ರಕಾರ, ಒಂದು ಹೇಳಿಕೆಯು ಕೇವಲ ಒಂದು ಘಟನೆಗೆ ಸಂಬಂಧಿಸಿದ್ದಾಗಿದ್ದರೆ, ಉಳಿದ ಮೂರು ಹೇಳಿಕೆಗಳು ಹಲವು ವರ್ಷಗಳ ಅವಧಿಯಲ್ಲಿ ನಡೆದ ಸಂಬಂಧಗಳನ್ನು ವಿವರಿಸುತ್ತವೆ.
ಈ ಇಡೀ ಪ್ರಯತ್ನವನ್ನು ಸಂಯೋಜಿಸುತ್ತಿರುವ ಮತ್ತು ಸಂತ್ರಸ್ತ ಮಹಿಳೆಯರ ಪರವಾಗಿ ಮಾತನಾಡಲು ಅಧಿಕಾರ ಹೊಂದಿರುವ ಲಿಜ್ಜಿ, ಕಾನೂನು ಹೋರಾಟದ ಆಯ್ಕೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
"ಕಾನೂನಿನ ಹಾದಿ ತುಂಬಾ ಸಂಕೀರ್ಣವಾಗಿದೆ" ಎಂದ ಅವರು, ಈ ಘಟನೆಗಳು ನಡೆದಿರುವುದು ಭಾರತದಲ್ಲಿ, ಆದರೆ ಸಂತ್ರಸ್ತ ಮಹಿಳೆಯರು ಬೇರೆ ಬೇರೆ ದೇಶಗಳ ನಾಗರಿಕರಾಗಿದ್ದಾರೆ .ಹೊಣೆಗಾರಿಕೆಯನ್ನು ಹೇಗೆ ನಿಗದಿಪಡಿಸಬೇಕು ಎಂಬುದನ್ನು ನಾವು ನಿರ್ಧರಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.
One of the written statements of a woman published on the SafeHouse website | Photo: SafeHouse
'ಸೇಫ್ಹೌಸ್' ಈಗ ಕೇವಲ ಸಾಕ್ಷ್ಯಗಳನ್ನು ಪ್ರಕಟಿಸುವ ತಾಣವಾಗಿ ಉಳಿದಿಲ್ಲ. ಅದರಾಚೆಗೆ ಬೆಳೆದು ಅದೊಂದು ಬೆಂಬಲ ಜಾಲವಾಗಿ ಮಾರ್ಪಟ್ಟಿದೆ. ಸಂತ್ರಸ್ತರಿಗೆ ಬೆಂಬಲ ನೀಡುವ ಗುಂಪುಗಳನ್ನು ರಚಿಸುವುದು, ಮಾನಸಿಕ ಆಘಾತಗಳನ್ನು ನಿವಾರಿಸುವ ಥೆರಪಿಸ್ಟ್ಗಳ ಸಂಪರ್ಕ ಕಲ್ಪಿಸುವುದು, ಆಪ್ತಸಮಾಲೋಚನೆ ಮತ್ತು ಕಾನೂನು ವೆಚ್ಚಗಳಿಗಾಗಿ ಧನಸಹಾಯ ಸಂಗ್ರಹಿಸುವುದು ಹಾಗೂ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಪ್ರಕ್ರಿಯೆಗಳನ್ನು ಇದು ನಡೆಸುತ್ತಿದೆ.
ತಮ್ಮ ಹೇಳಿಕೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಮುಂದೆ ಬಂದಿರುವ ಮಹಿಳೆಯರಿಗೆ, ತಪ್ಪಿತಸ್ಥರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದೇ ನ್ಯಾಯದ ಮೊದಲ ಹೆಜ್ಜೆಯಾಗಿದೆ.
"ಜನರು ತಮ್ಮ ಮಾತನ್ನು ಕೇಳಬೇಕೆಂದು ಅವರು ಬಯಸುತ್ತಿದ್ದಾರೆ. ನಡೆದ ಘಟನೆಯನ್ನು ತಳ್ಳಿಹಾಕುವ ಬದಲಿಗೆ, ಅದನ್ನು ಒಪ್ಪಿಕೊಳ್ಳಬೇಕು ಎಂಬುದಷ್ಟೇ ಅವರ ಆಶಯವಾಗಿದೆ." ಎಂದು ಲಿಜ್ಜಿ ಹೇಳಿದ್ದಾರೆ.
ಮತ್ತೊಂದೆಡೆ, ಮಾಜಿ ವಿದ್ಯಾರ್ಥಿಗಳು ಇನ್ಸ್ಟಾಗ್ರಾಮ್ ಮತ್ತು ರೆಡ್ಡಿಟ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ 2020 ರಷ್ಟು ಹಳೆಯದಾದ ಸಂಭಾಷಣೆಗಳು ಮತ್ತೆ ಮುಂಚೂಣಿಗೆ ಬರುತ್ತಿವೆ.
►ಮೋಹನ್ ಚಟ್ಟಿ ಪರಿಸ್ಥಿತಿ
ಋಷಿಕೇಶದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಗ್ರಾಮೀಣ ಕಣಿವೆ ಪ್ರದೇಶ ಮೋಹನ್ ಚಟ್ಟಿಯಲ್ಲಿ ಜೂನ್ ತಿಂಗಳು ಸಾಮಾನ್ಯವಾಗಿ ಅತ್ಯಂತ ಗಿಜಿಗುಡುವ ಸಮಯ. ಸಾಹಸ ಪ್ರವಾಸೋದ್ಯಮ, ಐಷಾರಾಮಿ ರೆಸಾರ್ಟ್ಗಳು ಮತ್ತು ಯೋಗ ಕೇಂದ್ರಗಳಿಗೆ ಹೆಸರಾಗಿರುವ ಈ ಪ್ರದೇಶಕ್ಕೆ ಭಾರತ ಮತ್ತು ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.
ಆದರೆ ಜೂನ್ ಕೊನೆಯ ವಾರದಲ್ಲಿ 'ದಿ ಪ್ರಿಂಟ್' ತಂಡ ಭೇಟಿ ನೀಡಿದಾಗ, ಸತ್ತ್ವ ಯೋಗ ಅಕಾಡೆಮಿ ಆವರಣ ಸಾಧಾರಣ ರೀತಿಗಿಂತ ಭಿನ್ನವಾಗಿ ಶಾಂತವಾಗಿತ್ತು. ಗುಡ್ಡಗಾಡು ರಸ್ತೆಯ ತಿರುವೊಂದರಲ್ಲಿ, ಅಕಾಡೆಮಿಯ ಬಿಳಿ ಮರದ ಲಾಂಛನವಿರುವ ನೀಲಿ ಬೋರ್ಡ್ ಪ್ರವೇಶ ದ್ವಾರವನ್ನು ಸೂಚಿಸುತ್ತಿತ್ತು. ಅಲ್ಲಿಂದ ಸ್ವಲ್ಪ ದೂರದ ಇಳಿಜಾರಿನಲ್ಲಿ "ಸತ್ತ್ವ ರಿಟ್ರೀಟ್" ಎಂದು ಬರೆದಿರುವ ಹಳೆಯ ಬೋರ್ಡ್ನ ಕೆಳಗೆ ಕಪ್ಪು ಕಬ್ಬಿಣದ ಗೇಟ್ ಇತ್ತು. ಅದರ ಆಚೆಗಿನ ಇಡೀ ಆವರಣ ದಟ್ಟವಾದ ಹಸಿರಿನ ನಡುವೆ ಅಡಗಿದ್ದು, ಮರಗಳ ನಡುವಿನಿಂದ ಕೇವಲ ಕಟ್ಟಡಗಳ ಮೇಲ್ಛಾವಣಿಗಳು ಮಾತ್ರ ಕಾಣಿಸುತ್ತಿದ್ದವು. ಗೇಟ್ ಪಕ್ಕದ ಸಣ್ಣ ಕೋಣೆಯಲ್ಲಿ ಭದ್ರತಾ ಸಿಬ್ಬಂದಿ ಕುಳಿತಿದ್ದರು. ಪ್ರವೇಶ ದ್ವಾರದ ಒಂದು ಬದಿಯಲ್ಲಿ ಒಣಗಲು ಹಾಕಿದ್ದ ಬಟ್ಟೆಗಳಿದ್ದ ಸಾಲು ಕೋಣೆಗಳು ಮತ್ತು ಕೆಲವು ನಿಲುಗಡೆ ಮಾಡಿದ್ದ ಕಾರುಗಳಿದ್ದವು. ಆ ಕಾವಲುಗಾರನನ್ನು ಬಿಟ್ಟರೆ ಅಲ್ಲಿ ಬೇರೆ ಯಾರೂ ಕಾಣಿಸಲಿಲ್ಲ.
ಅಕಾಡೆಮಿ ಮುಚ್ಚಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ಅಲ್ಲಿಗೆ ಸಾಮಾನ್ಯವಾಗಿ ವಿದೇಶಿಯರೇ ಹೆಚ್ಚು ಬರುತ್ತಾರೆ ಎಂದು ಸುತ್ತಮುತ್ತಲಿನ ಅಂಗಡಿಗಳು ಮತ್ತು ಹೋಟೆಲ್ಗಳ ಮಾಲಕರು ತಿಳಿಸಿದ್ದಾರೆ.
The Sattva Yoga Academy campus in Mohan Chatti | Photo: Vitasta Kaul
ಹೆಸರು ಹೇಳಲು ಇಚ್ಛಿಸದ ಅಕಾಡೆಮಿಯ ಹಳೆಯ ವಿದ್ಯಾರ್ಥಿಯೊಬ್ಬರು, ತರಗತಿಗಳು ಎಂದಿನಂತೆ ನಡೆಯುತ್ತಿವೆ. ಹೆಚ್ಚಿನ ವಿದ್ಯಾರ್ಥಿಗಳ ತರಬೇತಿ ಮುಕ್ತಾಯದ ಹಂತದಲ್ಲಿದೆ ಎಂದು ಹೇಳಿದರು. ಆರೋಪಗಳ ಬಗ್ಗೆ ಕೇಳಿದಾಗ, "ಅಕಾಡೆಮಿಯ ಒಳಗಿನ ವಾತಾವರಣ ಪಾರದರ್ಶಕವಾಗಿದೆ, ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ಚಿತ್ರಣವೇ ಬೇರೆಯಾಗಿದೆ" ಎಂದರು.
ಅಲ್ಲಿನ ವ್ಯವಸ್ಥಾಪಕ ರಮೇಶ್ ಸೆಮ್ವಾಲ್, ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ತಮಗೆ ಅಧಿಕಾರವಿಲ್ಲ ಎಂದು ತಿಳಿಸಿದರು. ಅಕಾಡೆಮಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಮಳೆಗಾಲದಲ್ಲಿ ರಸ್ತೆಗಳು ಬಂದ್ ಆಗುವ ಕಾರಣ ಶೀಘ್ರದಲ್ಲೇ ವಾರ್ಷಿಕ ಮಳೆಗಾಲದ ರಜೆಯನ್ನು ಘೋಷಿಸಲಾಗುವುದು ಎಂದು ಅವರು ಹೇಳಿದರು.
ಸತ್ತ್ವ ಯೋಗ ಅಕಾಡೆಮಿಯು ಈ ಆರೋಪಗಳನ್ನು ಸಾರ್ವಜನಿಕವಾಗಿ ನಿರಾಕರಿಸಿದೆ. ಆದರೂ, ಸಂಸ್ಥೆಯ ವರ್ಚಸ್ಸು ಇಸ್ಪೀಟ್ ಎಲೆಗಳ ಬಂಗಲೆಯಂತೆ ಕುಸಿಯುತ್ತಿದೆ. ಈ ವಿವಾದ ಮುಂಚೂಣಿಗೆ ಬಂದಾಗಿನಿಂದ, ಸತ್ತ್ವ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದ 'ಸತ್ತ್ವ ಕ್ಯಾಲಿಫೋರ್ನಿಯಾ', 'ಸತ್ತ್ವ ಸ್ಯಾಂಚುರಿ ಆಸ್ಟ್ರೇಲಿಯಾ', 'ಯುಕೆ ಸತ್ತ್ವ' ಮತ್ತು 'ಸತ್ತ್ವ ಟಸ್ಕನಿ' ಸೇರಿದಂತೆ ಹಲವು ಅಂತರರಾಷ್ಟ್ರೀಯ ಶಾಖೆಗಳು ಅಕಾಡೆಮಿ ಮತ್ತು ಮೆಹ್ರೋತ್ರಾ ಅವರೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿರುವುದಾಗಿ ಘೋಷಿಸಿವೆ.
ವಿವರವಾದ ಪ್ರಶ್ನಾವಳಿಯೊಂದಿಗೆ 'ದಿ ಪ್ರಿಂಟ್' ಇಮೇಲ್, ವಾಟ್ಸಾಪ್ ಮತ್ತು ಫೋನ್ ಮೂಲಕ ಆನಂದ್ ಮೆಹ್ರೋತ್ರಾ ಮತ್ತು ಸತ್ತ್ವ ಯೋಗ ಅಕಾಡೆಮಿಯನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ, ವರದಿ ಪ್ರಕಟವಾಗುವವರೆಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಆನಂದ್ ಮೆಹ್ರೋತ್ರಾ ಮತ್ತು ಸತ್ತ್ವ ಯೋಗ ಅಕಾಡೆಮಿಯ ಅಧಿಕೃತ ವೆಬ್ಸೈಟ್ಗಳು ಪ್ರಸ್ತುತ 'ಅಂಡರ್ ಮೇಂಟೆನೆನ್ಸ್' ಎಂದು ತೋರಿಸುತ್ತಿವೆ. ಅವರ ಇನ್ಸ್ಟಾಗ್ರಾಮ್ ಖಾತೆಗಳ ವಿವರಗಳು ಕೂಡ ಈಗ ಸಾರ್ವಜನಿಕರಿಗೆ ಕಾಣಿಸುತ್ತಿಲ್ಲ.
ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಋಷಿಕೇಶದ ಲಕ್ಷ್ಮಣ್ ಝೂಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಭಾರತದಲ್ಲಿ ಯೋಗ ಸಂಸ್ಥೆಗಳು ಇಂತಹ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಕಳೆದ ಹಲವು ವರ್ಷಗಳಲ್ಲಿ, ದೇಶದ ಪ್ರಮುಖ ಯೋಗ ಶಾಲೆಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳು ಲೈಂಗಿಕ ದೌರ್ಜನ್ಯ, ಕಿರುಕುಳ, ಒತ್ತಡ ಹೇರಿಕೆ ಮತ್ತು ಇತರ ದುರ್ನಡತೆಯ ಆರೋಪಗಳನ್ನು ಎದುರಿಸಿವೆ. 2012 ರಲ್ಲಿ ಚೆನ್ನೈನ ಯೋಗ ಕೇಂದ್ರವೊಂದು ಶೋಷಣೆಯ ಆರೋಪ ಎದುರಿಸಿತ್ತು. 2017 ರಲ್ಲಿ ಕೇರಳದ ಯೋಗ ಕೇಂದ್ರವೊಂದರ ವಿರುದ್ಧ ಕಾನೂನುಬಾಹಿರ ಬಂಧನ ಮತ್ತು ದೈಹಿಕ ಕಿರುಕುಳದ ಆರೋಪ ಕೇಳಿಬಂದಾಗ ಪೊಲೀಸ್ ಹಾಗೂ ನ್ಯಾಯಾಲಯದ ಪ್ರಕ್ರಿಯೆಗಳು ನಡೆದಿದ್ದವು. ಹಾಗೆಯೇ 2020 ರಲ್ಲಿ ಋಷಿಕೇಶದ ಯೋಗ ಕೇಂದ್ರವೊಂದರಲ್ಲಿ ಜಪಾನ್ ದೇಶದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೂವರು ಸಿಬ್ಬಂದಿಯನ್ನು ಬಂಧಿಸಲಾಗಿತ್ತು.
►ಕಾನೂನು ಬೆದರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಮುಂದೆ ಬಂದು ಧ್ವನಿ ಎತ್ತಿದ ಮಹಿಳೆಯರು ಹಾಗೂ ಈ ಆರೋಪಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿದವರು ಕಾನೂನು ಬೆದರಿಕೆಗಳನ್ನು ಎದುರಿಸಿದ್ದಾರೆ ಎಂದು 'ಸೇಫ್ಹೌಸ್' ವೆಬ್ಸೈಟ್ ಆರೋಪಿಸಿದೆ. ವೆಬ್ಸೈಟ್ನಲ್ಲಿ ತಮ್ಮ ಹೇಳಿಕೆ ಪ್ರಕಟಿಸಿದ ಮಹಿಳೆಯೊಬ್ಬರಿಗೆ ಕಾನೂನು ಕ್ರಮ ಜರುಗಿಸುವ ಬೆದರಿಕೆ ಹಾಕಲಾಗಿತ್ತು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ಈ ಆರೋಪಗಳ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊಗಳನ್ನು ಹಂಚಿಕೊಂಡಿದ್ದ 3.2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತದ ಪ್ರಮುಖ ಯೋಗ ಶಿಕ್ಷಕ ಹಾಗೂ ಇನ್ಫ್ಲುಯೆನ್ಸರ್ ಒಬ್ಬರಿಗೂ ಸತ್ತ್ವ ಸಂಸ್ಥೆಯಿಂದ ಕಾನೂನು ನೋಟಿಸ್ಗಳು ಬಂದಿದ್ದವು. ಇದರ ಬೆನ್ನಲ್ಲೇ ಆ ವಿಡಿಯೊಗಳನ್ನು ಡಿಲೀಟ್ ಮಾಡಲಾಗಿತ್ತು ಎಂದು ವೆಬ್ಸೈಟ್ ತಿಳಿಸಿದೆ. ಆ ನಂತರ ಅವರು ಈ ಕಾನೂನು ಬೆದರಿಕೆಗಳ ಬಗ್ಗೆ ಮತ್ತು ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಅಗತ್ಯದ ಬಗ್ಗೆ ವಿಡಿಯೊಗಳನ್ನು ರೀ ಪೋಸ್ಟ್ ಮಾಡಿದ್ದರಾದರೂ, ಅವುಗಳನ್ನು ಕೂಡ ತೆಗೆದುಹಾಕಲಾಗಿತ್ತು ಎಂದು ವೆಬ್ಸೈಟ್ ಹೇಳಿದೆ.
ಹೆಸರು ಹೇಳಲು ಇಚ್ಛಿಸದ ಆ ಇನ್ಫ್ಲುಯೆನ್ಸರ್, ಈ ಆರೋಪಗಳ ಬಗ್ಗೆ ಪೋಸ್ಟ್ ಮಾಡಿದ ನಂತರ ತಮಗೆ ಕಾನೂನು ನೋಟಿಸ್ಗಳು ಬಂದಿರುವುದನ್ನು 'ದಿ ಪ್ರಿಂಟ್' ಮುಂದೆ ಖಚಿತಪಡಿಸಿದ್ದಾರೆ. ಈ ಕಾರಣದಿಂದಾಗಿ ತಾವು ಈ ವಿಷಯದಿಂದ ಸಾರ್ವಜನಿಕವಾಗಿ ದೂರ ಉಳಿಯಲು ನಿರ್ಧರಿಸಿರುವುದಾಗಿ ಅವರು ತಿಳಿಸಿದರು. ತಮ್ಮ ವಿಡಿಯೊಗಳಿಗೆ ಬಂದ ಪ್ರತಿಕ್ರಿಯೆಗಳು ಕೇವಲ ಸತ್ತ್ವ ಸಂಸ್ಥೆಯ ಆರೋಪಗಳಿಗಷ್ಟೇ ಸೀಮಿತವಾಗಿರಲಿಲ್ಲ, ಬದಲಿಗೆ ಇತರ ಆಧ್ಯಾತ್ಮಿಕ ಸಂಸ್ಥೆಗಳಲ್ಲೂ ತಮಗಾದ ಇಂತಹದೇ ಅನುಭವಗಳನ್ನು ಹಲವು ಫಾಲೋವರ್ಸ್ ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಜೂನ್ 19 ರ ಹೊತ್ತಿಗೆ, ಗೂಗಲ್ನಂತಹ ಜಾಲತಾಣಗಳಲ್ಲಿ ಸತ್ತ್ವ ಸಂಸ್ಥೆಯ ಬಗ್ಗೆ ಈ ಹಿಂದೆ ನೀಡಿದ್ದ ಸಕಾರಾತ್ಮಕ ರಿವ್ಯೂ ತಿದ್ದುಪಡಿ ಮಾಡಿದ ಅಥವಾ ನಕಾರಾತ್ಮಕ ವಿಮರ್ಶೆಗಳನ್ನು ರೀಪೋಸ್ಟ್ ಮಾಡಿದ ವಿದ್ಯಾರ್ಥಿಗಳ ವಿಮರ್ಶೆಗಳನ್ನು ಡಿಲೀಟ್ ಮಾಡಲಾಗಿದೆ ಎಂದು 'ಸೇಫ್ಹೌಸ್' ವೆಬ್ಸೈಟ್ ಆರೋಪಿಸಿದೆ. ಪ್ರಸ್ತುತ ಗೂಗಲ್ನಲ್ಲಿ ಈ ಸಂಸ್ಥೆಯ ರೇಟಿಂಗ್ 4.9 ರಷ್ಟಿದ್ದರೂ, 'ಟ್ರಸ್ಟ್ಪೈಲಟ್' ತಾಣದಲ್ಲಿ ಇದರ ರೇಟಿಂಗ್ 2.6 ಕ್ಕೆ ಕುಸಿದಿದೆ.
ಈ ಆರೋಪಗಳು ತೀರಾ ಹೊಸದೇನಲ್ಲ. '@sattvayogaaccountability' ಎಂಬ ಇನ್ಸ್ಟಾಗ್ರಾಮ್ ಖಾತೆಯು ಡಿಸೆಂಬರ್ 2021 ರಿಂದಲೇ ಸತ್ತ್ವ ಸಂಸ್ಥೆಯ ಮಾಜಿ ವಿದ್ಯಾರ್ಥಿಗಳ ಅನುಭವಗಳು ಮತ್ತು ವಿಮರ್ಶೆಗಳನ್ನು ಪೋಸ್ಟ್ ಮಾಡುತ್ತಾ ಬಂದಿದೆ. ಸತ್ತ್ವ ಸಂಸ್ಥೆಯಲ್ಲಿ ಹಲವರು ಎದುರಿಸಿದ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯಗಳನ್ನು ಈ ಪೋಸ್ಟ್ಗಳು ಪುನರುಚ್ಚರಿಸುತ್ತವೆ. 'ದಿ ಪ್ರಿಂಟ್' ಈ ಇನ್ಸ್ಟಾಗ್ರಾಮ್ ಖಾತೆಯನ್ನು ಸಂಪರ್ಕಿಸಲು ಪ್ರಯತ್ನಿಸಿದೆಯಾದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಜೂನ್ 29 ರಂದು 'ಸೇಫ್ಹೌಸ್' ವೆಬ್ಸೈಟ್ ಮಾಹಿತಿ ನೀಡಿರುವಂತೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಕ್ರಿಸ್ಟಿನಾ ಲಿಜ್ಜಿ, ಬಜರಂಗ್, ವೆಬ್ಸೈಟ್ನಲ್ಲಿ ಹೇಳಿಕೆ ಪ್ರಕಟಿಸಿದ ಇಬ್ಬರು ಮಹಿಳೆಯರು ಹಾಗೂ ವಿವಿಧ ಇಂಟರ್ನೆಟ್ ಹೋಸ್ಟಿಂಗ್ ಸಂಸ್ಥೆಗಳ ವಿರುದ್ಧ ರಿಟ್ ಅರ್ಜಿ ಸಲ್ಲಿಸುವ ಉದ್ದೇಶವನ್ನು ವ್ಯಕ್ತಪಡಿಸಿ ಸತ್ತ್ವ ಸಂಸ್ಥೆಯ ವಕೀಲರು ನೋಟಿಸ್ ಜಾರಿ ಮಾಡಿದ್ದಾರೆ. ಈ ಮೂಲಕ ವೆಬ್ಸೈಟ್, ಅದರ ಬೆಂಬಲ ಗುಂಪು ಮತ್ತು ಅದಕ್ಕೆ ಸಂಬಂಧಿಸಿದ ಲಿಂಕ್ಗಳನ್ನು ತೆಗೆದುಹಾಕಲು ಕೋರಿದ್ದಾರೆ. ಜೂನ್ 30 ರ ದಿನಾಂಕವಿರುವ ಮತ್ತೊಂದು ನೋಟಿಸ್ನಲ್ಲಿ, ಇದೇ ವ್ಯಕ್ತಿಗಳ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡುವ ಮತ್ತು ವೆಬ್ಸೈಟ್ ತೆಗೆದುಹಾಕುವುದರ ಜೊತೆಗೆ 3 ಕೋಟಿ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಬೇಡಿಕೆ ಇಡಲಾಗಿದೆ.
ವೆಬ್ಸೈಟ್ನಲ್ಲಿ ಪ್ರಕಟವಾಗಿರುವ ಎಲ್ಲಾ ಮಾಹಿತಿಗೂ ತಾವು ಬದ್ಧವಾಗಿರುವುದಾಗಿ ಲಿಜ್ಜಿ 'ದಿ ಪ್ರಿಂಟ್'ಗೆ ತಿಳಿಸಿದ್ದಾರೆ. "ಕಾನೂನು ನೋಟಿಸ್ಗಳಲ್ಲಿರುವ ಆರೋಪಗಳು ಆಧಾರರಹಿತವಾಗಿವೆ. ವೆಬ್ಸೈಟ್ನಲ್ಲಿ ಹಂಚಿಕೊಳ್ಳಲಾದ ಸತ್ಯದ ಪರವಾಗಿ ನಾನು ಎಂದಿಗೂ ನಿಲ್ಲುತ್ತೇನೆ ಮತ್ತು ನ್ಯಾಯಾಲಯದಲ್ಲಿ ಸತ್ಯಕ್ಕೆ ಜಯ ಸಿಗಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
►ಸಂತ್ರಸ್ತ ಮಹಿಳೆಯರು ಹೇಳುವುದೇನು?
ಮುಂದೆ ಬಂದು ಧ್ವನಿ ಎತ್ತಿರುವ ನಾಲ್ಕೂ ಜನ ಮಹಿಳೆಯರು ಭಾರತದ ಹೊರಗಿನವರಾಗಿದ್ದಾರೆ. ಅವರ ಅನುಭವಗಳು ಬೇರೆ ಬೇರೆ ವರ್ಷಗಳು, ದೇಶಗಳು ಮತ್ತು ಸತ್ತ್ವ ಯೋಗ ಅಕಾಡೆಮಿಯೊಂದಿಗಿನ ಅವರ ಒಡನಾಟದ ವಿಭಿನ್ನ ಹಂತಗಳಿಗೆ ಸಂಬಂಧಿಸಿದ್ದಾಗಿವೆ. ಆದರೆ, ಇವೆಲ್ಲದರ ನಡುವೆ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ವೈಯಕ್ತಿಕ ಆಪ್ತತೆಯ ನಡುವಿನ ಗೆರೆಯನ್ನು ಮಸುಕುಗೊಳಿಸುವುದು, ಸಂಬಂಧಗಳನ್ನು ರಹಸ್ಯವಾಗಿಡುವುದು, ಗುರು-ಶಿಷ್ಯರ ನಡುವಿನ ಅಸಮಾನ ಅಧಿಕಾರದ ದುರುಪಯೋಗ ಮತ್ತು ತಮಗಾದ ಅನುಭವವನ್ನು ಅರ್ಥಮಾಡಿಕೊಳ್ಳಲು ವರ್ಷಗಳ ಕಾಲ ಹೆಣಗಾಡುವುದು ಹೀಗೆ ಕೆಲವು ಸಾಮಾನ್ಯ ಸಾಮ್ಯತೆಗಳು ಎದ್ದುಕಾಣುತ್ತವೆ.
ಸೇಫ್ಹೌಸ್ ವೆಬ್ಸೈಟ್ನಲ್ಲಿ ಪ್ರಕಟವಾಗಿರುವ ತನ್ನ ಲಿಖಿತ ಹೇಳಿಕೆಯಲ್ಲಿ ಮಹಿಳೆಯೊಬ್ಬಳು, ತಾನು 2015 ರಲ್ಲಿ ಯೋಗ ಶಿಕ್ಷಕರ ತರಬೇತಿಗಾಗಿ ಭಾರತಕ್ಕೆ ಬಂದಾಗ ತನಗೆ 23 ವರ್ಷ ವಯಸ್ಸಾಗಿತ್ತು ಎಂದು ಬರೆದುಕೊಂಡಿದ್ದಾಳೆ. ಧ್ಯಾನದ ಸಮಯದಲ್ಲಿ ಉಂಟಾಗುತ್ತಿದ್ದ ಅತಿಯಾದ ಆತಂಕ ಮತ್ತು ಅಸಹಾಯಕತೆಯಿಂದಾಗಿ ಅವಳು ಮೆಹ್ರೋತ್ರಾ ಅವರ ಮಾರ್ಗದರ್ಶನವನ್ನು ಕೋರಿದ್ದಳು. ಆಗ ಮೆಹ್ರೋತ್ರಾ, ಸೂರ್ಯಾಸ್ತದ ನಂತರ ಯಾರೂ ಇಲ್ಲದ ಸಮಯದಲ್ಲಿ ಬಂದು ತಮ್ಮನ್ನು ಒಂಟಿಯಾಗಿ ಭೇಟಿಯಾಗುವಂತೆ, "ಈ ವಿಷಯವನ್ನು ಯಾರಿಗೂ ಹೇಳದಂತೆ" ಮತ್ತು ಬಿಳಿ ಬಟ್ಟೆ ಧರಿಸಿ ಬರುವಂತೆ ತನಗೆ ತಿಳಿಸಿದ್ದರು ಎಂದು ಅವಳು ಆರೋಪಿಸಿದ್ದಾಳೆ.
ಅದೊಂದು 'ಹೀಲಿಂಗ್ ಸೆಷನ್' ಎಂದು ತಾನು ನಂಬಿದ್ದ ಸಮಯದಲ್ಲಿ, ಮೆಹ್ರೋತ್ರಾ ಮಂತ್ರಗಳನ್ನು ಪಠಿಸುತ್ತಾ ತನ್ನ ಒಪ್ಪಿಗೆಯಿಲ್ಲದೆ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದರು ಎಂದು ಆ ಮಹಿಳೆ ಹೇಳಿದ್ದಾಳೆ. "ನನ್ನ ದೇಹ ಮರಗಟ್ಟಿಹೋಗಿತ್ತು. ಅಸುರಕ್ಷಿತ ಭಾವನೆ ಮತ್ತು ಗೊಂದಲವಿದ್ದರೂ, ನಾನು ಯಾವುದೇ ಶಕ್ತಿಯಿಲ್ಲದೆ ಆಘಾತದಿಂದ ಅಲ್ಲಿ ಕುಳಿತಿದ್ದೆ. ತಾನು ಅಲ್ಲಿಂದ ಹೊರಡುವ ಮುನ್ನ, ಈ ಘಟನೆಯ ಬಗ್ಗೆ ಯಾರೊಂದಿಗೂ, ವಿಶೇಷವಾಗಿ ಸಮುದಾಯದ ಇತರ ಮಹಿಳೆಯರೊಂದಿಗೆ ಎಂದಿಗೂ ಮಾತನಾಡಬಾರದು ಎಂದು ಮೆಹ್ರೋತ್ರಾ ತನಗೆ ತಾಕೀತು ಮಾಡಿದ್ದರು ಎಂದಿದ್ದಾಳೆ.
"ನಾನು ಮೌನವಾಗಿದ್ದೆ. ನನ್ನ ನಂಬಿಕಸ್ಥ ಸ್ನೇಹಿತರಿಗೆ ಈ ವಿಷಯವನ್ನು ತಿಳಿಸಲು ನನಗೆ ವರ್ಷಗಳೇ ಬೇಕಾದವು. ಮಹಿಳೆಯರೊಂದಿಗಿನ ತಮ್ಮ ಸಂಬಂಧಗಳು ಪರಸ್ಪರ ಒಪ್ಪಿಗೆಯಿಂದ ಕೂಡಿದ್ದವು ಎಂಬ ಮೆಹ್ರೋತ್ರಾ ಅವರ ಸಾರ್ವಜನಿಕ ಹೇಳಿಕೆಯನ್ನು ಓದಿದ ಮೇಲಷ್ಟೇ ತಾನು ಮುಂದೆ ಬಂದು ಮಾತನಾಡಲು ನಿರ್ಧರಿಸಿದ್ದಾಗಿ ಅವಳು ಹೇಳಿದ್ದಾಳೆ. "ಅವರು ನನ್ನನ್ನು ಸ್ಪರ್ಶಿಸಲು ನಾನು ಒಪ್ಪಿಗೆ ನೀಡಿರಲಿಲ್ಲ. ನಮ್ಮ ನಡುವಿನ ಆ ಒಡನಾಟಕ್ಕೆ ನನ್ನ ಒಪ್ಪಿಗೆ ಇರಲಿಲ್ಲ," ಎಂದು ಅವಳು ಸ್ಪಷ್ಟಪಡಿಸಿದ್ದಾಳೆ.
ಮತ್ತೊಬ್ಬ ಮಹಿಳೆ, ತಾನು 2014 ರಲ್ಲಿ ಸತ್ತ್ವ ಸಂಸ್ಥೆಗೆ ಮೊದಲ ಬಾರಿಗೆ ವಿದ್ಯಾರ್ಥಿಯಾಗಿ ಬಂದಿದ್ದಾಗಿ ತಿಳಿಸಿದ್ದಾಳೆ. ವರ್ಷಗಳ ನಂತರ ಅವಳು ಆ ಸಂಸ್ಥೆಯಲ್ಲಿ ಹೆಚ್ಚು ತೊಡಗಿಸಿಕೊಂಡು, ಅಂತಿಮವಾಗಿ ಯೋಗ ಶಿಕ್ಷಕಿಯಾಗಿ ಮತ್ತು ಉದ್ಯೋಗಿಯಾಗಿ ಕೆಲಸ ನಿರ್ವಹಿಸಿದ್ದಾರೆ. ತನ್ನ ವೃತ್ತಿಪರ ಗುರುತು, ಆದಾಯ, ಸ್ನೇಹ ಮತ್ತು ಆಧ್ಯಾತ್ಮಿಕ ಜೀವನ ಎಲ್ಲವೂ ಸತ್ತ್ವ ಸಂಸ್ಥೆಯೊಂದಿಗೆ ಬೆರೆತುಹೋಗಿದ್ದರಿಂದ, ತಾನು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಆ ಸಮುದಾಯದ ಮೇಲೆಯೇ ಅವಲಂಬಿತಳಾಗುವಂತಾಯಿತು ಎಂದು ಅವರು ತನ್ನ ಹೇಳಿಕೆಯಲ್ಲಿ ವಿವರಿಸಿದ್ದಾರೆ. 2017 ಮತ್ತು 2026 ರ ನಡುವೆ, ಮೆಹ್ರೋತ್ರಾ ಅವರೊಂದಿಗೆ ತಾನು "ಬಲವಂತದ" ಸಂಬಂಧಕ್ಕೆ ಸಿಲುಕುವಂತಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ. ಆಕೆಯ ಹೇಳಿಕೆಯ ಪ್ರಕಾರ, ಬ್ಯುಸಿನೆಸ್ ಮೀಟಿಂಗ್ , ಹೀಲಿಂಗ್ ಸೆಷನ್ಗಳು ಮತ್ತು ಧ್ಯಾನದ ಅವಧಿಗಳು ಎಂದು ಬಿಂಬಿಸಲಾದ ಸಮಯಗಳಲ್ಲಿ ಹಲವು ಬಾರಿ "ಬೇಡದ ಲೈಂಗಿಕ ಸಂಪರ್ಕ ಮತ್ತು ಅನುಚಿತ ಸ್ಪರ್ಶಗಳು" ನಡೆದಿದ್ದವು. ಈ ಭೇಟಿಗಳು ಕೇವಲ ಮುಖಾಮುಖಿ ಭೇಟಿಗೆ ಸೀಮಿತವಾಗಿರದೆ, ವರ್ಷಗಳ ಕಾಲ ಫೋಟೊಗಳು ಮತ್ತು ವಿಡಿಯೊ ಕರೆಗಳನ್ನು ಕೇಳುವ ಮೂಲಕ ಮುಂದುವರಿದಿದ್ದವು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ತನಗೆ ಅಸಹನೀಯ ಅನಿಸಿದಾಗಲೆಲ್ಲಾ ತಾನು ವ್ಯಕ್ತಪಡಿಸುತ್ತಿದ್ದ ಆತಂಕವನ್ನು ಮೆಹ್ರೋತ್ರಾ ಆಧ್ಯಾತ್ಮಿಕ ಭಾಷೆಯ ಮೂಲಕ ಬೇರೆಡೆಗೆ ತಿರುಗಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಮಹಿಳೆಯ ಹೇಳಿಕೆ ಪ್ರಕಾರ, "ನಾವು ಯಾವುದೇ ತಪ್ಪು ಮಾಡಿಲ್ಲ", "ಇಲ್ಲಿ ಯಾವುದೇ ಅಪರಾಧ ನಡೆಯುತ್ತಿಲ್ಲ" ಮತ್ತು "ನಾವು ಕೇವಲ ಪ್ರಜ್ಞೆಯನ್ನು ಹಂಚಿಕೊಳ್ಳುತ್ತಿದ್ದೇವೆ" ಎಂದು ಮೆಹ್ರೋತ್ರಾ ಹೇಳುತ್ತಿದ್ದರು. ಇದರಿಂದಾಗಿ ಮಹಿಳೆ ಮೆಹ್ರೋತ್ರಾ ಅವರ ನಡವಳಿಕೆಯನ್ನು ಪ್ರಶ್ನಿಸುವ ಬದಲಿಗೆ, ತನ್ನ ಸ್ವಂತ ಅಂತಃಪ್ರಜ್ಞೆಯನ್ನೇ ಅನುಮಾನಿಸುವಂತಾಯಿತು.
"ನನ್ನ ಸ್ವಂತ ಅಂತಃಪ್ರಜ್ಞೆಯನ್ನು ನಂಬಲು ನನಗೆ ಸಹಾಯ ಮಾಡುವ ಬದಲಿಗೆ, ಅವರು ನನ್ನಲ್ಲೇ ಸಂದೇಹ ಮೂಡುವಂತೆ ಮಾಡಿದರು. ನನಗೆ ಅಸಹನೀಯ, ಭಯ ಅಥವಾ ಗೊಂದಲ ಉಂಟಾದಾಗಲೆಲ್ಲಾ, ನನ್ನ ಗಡಿಯನ್ನು ಯಾರೋ ಮೀರಿದ್ದಾರೆ ಎಂದು ಭಾವಿಸುವ ಬದಲಿಗೆ, ನನ್ನಲ್ಲೇ ಆಧ್ಯಾತ್ಮಿಕ ತಿಳುವಳಿಕೆಯ ಕೊರತೆಯಿದೆ ಎಂದು ನಾನು ಭಾವಿಸತೊಡಗಿದೆ" ಎಂದು ಮಹಿಳೆ ಬರೆದಿದ್ದಾರೆ.
ಆ ಹೊತ್ತಿಗೆ ತಾನು "ಆರ್ಥಿಕವಾಗಿ ಅವಲಂಬಿತಳಾಗಿದ್ದೆ", "ಭಾವನಾತ್ಮಕವಾಗಿ ಒಂಟಿಯಾಗಿದ್ದೆ" ಮತ್ತು "ಸತ್ತ್ವ ಸಮುದಾಯದಲ್ಲಿ ಸಿಲುಕಿಕೊಂಡಿದ್ದೆ" ಆದಕಾರಣ ತಾನು ಮೌನವಾಗಿರಬೇಕಾಯಿತು ಎಂದು ಅವಳು ಹೇಳಿದ್ದಾಳೆ. "ಆಧ್ಯಾತ್ಮಿಕ ಪ್ರಭಾವ, ಭಾವನಾತ್ಮಕ ಬಾಂಧವ್ಯ, ಆರ್ಥಿಕ ಉಳಿವು, ಸಮುದಾಯದ ಒಡನಾಟ, ವೃತ್ತಿಪರ ಗುರುತು ಮತ್ತು ವೈಯಕ್ತಿಕ ಅಸಹಾಯಕತೆ ಎಲ್ಲವೂ ಒಂದಕ್ಕೊಂದು ಬೆರೆತುಹೋದಾಗ, ಆ ಸಂಬಂಧದಿಂದ ಹೊರಬರುವುದು ಕೇವಲ ಅಲ್ಲಿಂದ ನಡೆದುಹೋಗುವಷ್ಟು ಸುಲಭವಾಗಿರುವುದಿಲ್ಲ," ಎಂದು ಅವಳು ವಿವರಿಸಿದ್ದಾಳೆ.
ಮೆಹ್ರೋತ್ರಾ ಅವರನ್ನು ಪ್ರಶ್ನಿಸಿದ ಇತರರನ್ನು ಹೇಗೆ "ಕಡೆಗಣಿಸಲಾಯಿತು, ಅಪಪ್ರಚಾರ ಮಾಡಲಾಯಿತು, ಹೊರಗಿಡಲಾಯಿತು ಅಥವಾ ಮೌನಗೊಳಿಸಲಾಯಿತು" ಎಂಬುದನ್ನು ತಾನು ನೋಡಿದ್ದರಿಂದ ಸಾರ್ವಜನಿಕವಾಗಿ ಮಾತನಾಡಲು ತಡ ಮಾಡಿದ್ದಾಗಿ ಅವರು ತಿಳಿಸಿದ್ದಾಳೆ. ಈ ಆರೋಪಗಳು ಸಾರ್ವಜನಿಕವಾಗಿ ಹೊರಬಂದ ಮೇಲಷ್ಟೇ, ಅದು ತನ್ನ ಆಧ್ಯಾತ್ಮಿಕ ತಿಳುವಳಿಕೆಯ ವೈಫಲ್ಯವಾಗಿರದೆ "ಬಲವಂತದ ಮತ್ತು ದೌರ್ಜನ್ಯದ ಸಂಬಂಧದ ವ್ಯವಸ್ಥಿತ ಸಂಚು" ಎಂಬುದನ್ನು ತಾನು ಅರಿತುಕೊಂಡಿದ್ದಾಗಿ ಅವಳು ಹೇಳಿದ್ದಾರೆ.
ಮೂರನೇ ಮಹಿಳೆ, ರಹಸ್ಯ, ಗೊಂದಲ ಮತ್ತು ನಿರಂತರ ಆತ್ಮಸಂದೇಹದಿಂದ ಕೂಡಿದ ವರ್ಷಗಳ ಕಾಲದ ಸಂಬಂಧವನ್ನು ವಿವರಿಸಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದ ಸಮಯದಲ್ಲಿ 2022 ರಲ್ಲಿ ತಾನು ಮತ್ತೆ ಸತ್ತ್ವ ಸಂಸ್ಥೆಗೆ ಮರಳಿದಾಗ, ತನಗೆ " ಅಲ್ಲಿಂದ ಸಂಪೂರ್ಣವಾಗಿ ಹೊರಬರಲು" ಕಷ್ಟವಾಯಿತು ಎಂದು ಅವರು ತನ್ನ ಪತ್ರದಲ್ಲಿ ಬರೆದಿದ್ದಾರೆ. ಆ ವರ್ಷ ನಡೆದ ಒಂದು ಭೇಟಿಯ ಸಮಯದಲ್ಲಿ ತಾನು "ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಸಂಪೂರ್ಣವಾಗಿ ಬಳಲಿಹೋಗುವಂತೆ" ಮಾಡಲಾಯಿತು ಎಂದು ಅವರು ಆರೋಪಿಸಿದ್ದು, ಅದರ ನಂತರ ತನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯ ಕ್ಷೀಣಿಸಿತು ಎಂದಿದ್ದಾಳೆ. ತನಗಾದ ಅನುಭವದ ಒಂದು ಭಾಗವನ್ನು ತಾನು ಅಲ್ಲಿದ್ದ ಸಿಬ್ಬಂದಿಯೊಬ್ಬರ ಬಳಿ ಹಂಚಿಕೊಂಡಾಗ, ಅವರು "ಆಘಾತಕ್ಕೊಳಗಾದಂತೆ" ಕಂಡುಬಂದರು ಮತ್ತು ಮೆಹ್ರೋತ್ರಾ ಇಂತಹ ನಡವಳಿಕೆಯನ್ನು ನಿಲ್ಲಿಸಿದ್ದಾರೆ ಎಂದು ತಾನು ಭಾವಿಸಿದ್ದಾಗಿ ತನಗೆ ತಿಳಿಸಿದರು ಎಂದಿದ್ದಾರೆ. ಈ ಘಟನೆಯ ಬೆನ್ನಲ್ಲೇ ಅವರು ಅಕಾಡೆಮಿಯನ್ನು ತೊರೆಯಲು ನಿರ್ಧರಿಸಿದ್ದಾರೆ.
ಅಲ್ಲಿಂದ ಹೊರಡುವ ಮುನ್ನ ತಾನು ಮೆಹ್ರೋತ್ರಾ ಅವರನ್ನು ಭೇಟಿಯಾಗಿ ತನಗೆ ಹುಷಾರಿಲ್ಲ ಎಂದು ತಿಳಿಸಿದ್ದಾಗಿ ಮಹಿಳೆ ಹೇಳಿದ್ದಾರೆ. ಆದರೆ, ತಮ್ಮ ನಡುವೆ ನಡೆದ ಘಟನೆಯ ಬಗ್ಗೆ ಮಾತನಾಡುವ ಬದಲಿಗೆ, ಮೆಹ್ರೋತ್ರಾ ಮಹಿಳೆಯ ಜಾತಕವನ್ನು ಪರಿಶೀಲಿಸಿ, ಆಕೆಯ ಸ್ಥಿತಿಗೆ ಗ್ರಹಗತಿಗಳ ಕಠಿಣ ಸ್ಥಿತ್ಯಂತರವೇ ಕಾರಣ ಎಂದು ಹೇಳಿದರು ಎಂದು ಮಹಿಳೆ ಆರೋಪಿಸಿದ್ದಾರೆ. "ಏನೂ ನಡೆಯದೇ ಇರುವಂತೆ ಅವರು ನಾಟಕವಾಡಿದ್ದರಿಂದ ನನಗೆ ಸಂಪೂರ್ಣವಾಗಿ ದಿಕ್ಕುತೋಚದಂತಾಯಿತು. ಮನೆಗೆ ಮರಳಿದ ನಂತರ ತಾನು "ತೀವ್ರ ದೈಹಿಕ ಮತ್ತು ಮಾನಸಿಕ ಸಂಕಟವನ್ನು" ಅನುಭವಿಸಿದ್ದಾಗಿ ಮಹಿಳೆ ತಿಳಿಸಿದ್ದಾರೆ. ಸಮುದಾಯದಲ್ಲಿದ್ದ ಇತರರು ನೆಮ್ಮದಿಯಿಂದ ಇರುವುದನ್ನು ನೋಡಿ ಅವರಲ್ಲಿದ್ದ ಗೊಂದಲ ಮತ್ತಷ್ಟು ಹೆಚ್ಚಾಯಿತು. "ನಾನು ಇಡೀ ಸಮುದಾಯವನ್ನು ಗಮನಿಸುತ್ತಿದ್ದೆ ಮತ್ತು ಇತರರು ಚೆನ್ನಾಗಿರುವುದನ್ನು ಕಂಡಾಗ, ನನಗಾದ ಅನುಭವದ ಬಗ್ಗೆ ನನ್ನಲ್ಲೇ ಆತ್ಮಸಂದೇಹ ಮೂಡತೊಡಗಿತು" ಎಂದು ಅವರು ಬರೆದಿದ್ದಾರೆ.
ಆತಂಕ, ನಿದ್ರಾಹೀನತೆ ಮತ್ತು ಭಾವನಾತ್ಮಕ ಸಂಕಟಗಳು ಹೆಚ್ಚಾಗತೊಡಗಿದವು. ತಾನು ಈ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದಾಗಲೆಲ್ಲಾ, ಸಮಸ್ಯೆಯನ್ನು ನೇರವಾಗಿ ಬಗೆಹರಿಸುವ ಬದಲಿಗೆ ಯೋಗಾಭ್ಯಾಸ ಮತ್ತು ಧ್ಯಾನದ ಕಡೆಗೆ ಗಮನ ಹರಿಸುವಂತೆ ಅವರಿಗೆ ತಿಳಿಸಲಾಗುತ್ತಿತ್ತು. ಇದು ಆಕೆಯ ಸ್ವಂತ ನಿರ್ಧಾರಗಳ ಮೇಲೆಯೇ ಅಪನಂಬಿಕೆ ಮೂಡುವಂತೆ ಮಾಡಿತು. "ರಹಸ್ಯವಾಗಿಡುವುದು, ಪಾರದರ್ಶಕತೆಯ ಕೊರತೆ ಮತ್ತು ಸಮುದಾಯದೊಳಗಿನ ಇಂತಹ ವಾತಾವರಣವೇ ನನಗೆ ಮಾನಸಿಕವಾಗಿ ತೀವ್ರ ಆಘಾತವನ್ನುಂಟುಮಾಡಿದವು. ಇವು ನನ್ನಲ್ಲಿ ಗೊಂದಲ, ಭಯ ಮತ್ತು ಆತ್ಮಸಂದೇಹವನ್ನು ಸೃಷ್ಟಿಸಿದವು," ಎಂದು ಅವರು ಬರೆದಿದ್ದಾರೆ.
ಇತರ ಮಹಿಳೆಯರ ಅನುಭವಗಳ ಬಗ್ಗೆ ತಿಳಿದುಕೊಂಡ ಮೇಲಷ್ಟೇ ತನಗಾದ ಅನುಭವದ ಸಂಪೂರ್ಣ ಸತ್ಯ ತನಗೆ ಅರ್ಥವಾಯಿತು ಎಂದು ಅವರು ಹೇಳಿದ್ದಾರೆ. ಇತರ ಮಹಿಳೆಯರೂ ಇಂತಹದೇ ವ್ಯವಸ್ಥಿತ ನಡವಳಿಕೆಯನ್ನು ವಿವರಿಸಿದ್ದನ್ನು ಕೇಳಿದಾಗ ಮತ್ತು ಮೆಹ್ರೋತ್ರಾ ತನಗಾದ ಅನುಭವವನ್ನು ಇತರರ ಮುಂದೆ ಕೇವಲ ಒಂದು 'ಹೀಲಿಂಗ್ ಸೆಷನ್' ಎಂದು ಬಿಂಬಿಸಿ, ಉಳಿದ ವಿಷಯಗಳನ್ನು ಕೇವಲ ವದಂತಿಗಳು ಎಂದು ತಳ್ಳಿಹಾಕಿದ್ದನ್ನು ತಿಳಿದಾಗ ಈ ನಡವಳಿಕೆಯು ಕೇವಲ ಒಂದು ಆಕಸ್ಮಿಕ ಘಟನೆಯಾಗಿರದೆ, ಇದೊಂದು ವ್ಯವಸ್ಥಿತವಾದ ದೊಡ್ಡ ಸಂಚಿನ ಭಾಗ ಎಂಬ ತೀರ್ಮಾನಕ್ಕೆ ತಾನು ಬರಲು ಸಾಧ್ಯವಾಯಿತು ಎಂದು ಅವರು ತನ್ನ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
►'ಸಮೃದ್ಧವಾಗಿ ಬೆಳೆಯುತ್ತಿದ್ದ ಸಮುದಾಯ'
'ದಿ ಪ್ರಿಂಟ್' ತಂಡವು ನಾಲ್ಕನೇ ಮಹಿಳೆಯೊಂದಿಗೆ ಮಾತನಾಡಿತು. ಅವರು 2019 ರಲ್ಲಿ ತನ್ನ 29 ನೇ ವಯಸ್ಸಿನಲ್ಲಿ, ಮೊದಲು ಮಾರ್ಚ್ನಲ್ಲಿ 200 ಗಂಟೆಗಳ ಯೋಗ ಶಿಕ್ಷಕರ ತರಬೇತಿಗಾಗಿ ಮತ್ತು ನಂತರ ನವೆಂಬರ್ನಲ್ಲಿ 300 ಗಂಟೆಗಳ ತರಬೇತಿಗಾಗಿ ಸತ್ತ್ವ ಸಂಸ್ಥೆಗೆ ಬಂದಿದ್ದರು.
ತನ್ನ ಲಿಖಿತ ಹೇಳಿಕೆಯಲ್ಲಿ ಅವರು, "ಅಲ್ಲಿನ ಬೋಧನೆಗಳು" ಮತ್ತು ಸ್ವತಃ ಆನಂದ್ ಮೆಹ್ರೋತ್ರಾ ಅವರ ವ್ಯಕ್ತಿತ್ವ ತನಗೆ "ತುಂಬಾ ಇಷ್ಟವಾಗಿತ್ತು" ಎಂದು ಬರೆದಿದ್ದಾರೆ. "ಬೋಧನೆಗಳಿಗೂ ಮತ್ತು ಆ ಬೋಧನೆ ನೀಡುವ ವ್ಯಕ್ತಿಗೂ ಇರುವ ವ್ಯತ್ಯಾಸ ತಿಳಿಯದೆ, ನಾನು ಅವರ ಬಗ್ಗೆ ಒಂದು ರೀತಿಯ ಭ್ರಮೆಗೆ ಒಳಗಾಗಿದ್ದೆ. ಅವರನ್ನು ಅತ್ಯುನ್ನತ ಸ್ಥಾನದಲ್ಲಿಟ್ಟು ಆರಾಧಿಸುತ್ತಿದ್ದೆ," ಎಂದು ಅವರು ಉಲ್ಲೇಖಿಸಿದ್ದಾರೆ.
ವೆಬ್ಸೈಟ್ ಲೈವ್ ಆದಾಗಿನಿಂದ ಕಳೆದ ಕೆಲವು ವಾರಗಳು ತನಗೆ ತೀವ್ರ ಭಾವನಾತ್ಮಕ ಆಘಾತದ ದಿನಗಳಾಗಿದ್ದವು ಎಂದು ಅವರು 'ದಿ ಪ್ರಿಂಟ್' ಮುಂದೆ ಹೇಳಿಕೊಂಡಿದ್ದಾರೆ.
"ಆರಂಭದಲ್ಲಿ ತುಂಬಾ ಭಯವಿತ್ತು. ತಾನು ತೀರಾ ಅಸಹಾಯಕಳು ಮತ್ತು ಎಲ್ಲರ ಮುಂದೆ ಸಿಕ್ಕಿಬಿದ್ದಿದ್ದೇನೆ ಎಂಬ ಭಾವನೆ ಕಾಡುತ್ತಿತ್ತು. ಇದು ಅತ್ಯಂತ ವೈಯಕ್ತಿಕ ಮತ್ತು ಸೂಕ್ಷ್ಮವಾದ ವಿಷಯ. ಇದರ ಬಗ್ಗೆ ನಾನು ನನ್ನ ಹೇಳಿಕೆಯಲ್ಲಿ ಅತ್ಯಂತ ಮುಕ್ತವಾಗಿ ಮಾತನಾಡಿದ್ದೇನೆ. ದೊಡ್ಡ ಜನಸಮೂಹದ ಮುಂದೆ ಬೆತ್ತಲಾಗಿ ನಿಂತಂತೆ ನನಗೆ ಭಾಸವಾಗುತ್ತಿತ್ತು." ಆದರೆ ಸಮುದಾಯದ ಬಹುತೇಕ ಜನರಿಂದ ಬಂದ ಪ್ರತಿಕ್ರಿಯೆಗಳನ್ನು ನೋಡಿದ ನಂತರ, ಆ ಭಯ ನಿಧಾನವಾಗಿ ನಿರಾಳತೆಗೆ ದಾರಿ ಮಾಡಿಕೊಟ್ಟಿತು. ಜನರಿಂದ ಸಿಕ್ಕ ಬೆಂಬಲ ಮತ್ತು ಪ್ರೋತ್ಸಾಹ ಅತ್ಯಂತ ಸಕಾರಾತ್ಮಕವಾಗಿತ್ತು. ಇದು ನನಗೆ ಹೆಚ್ಚಿನ ಧೈರ್ಯ ಮತ್ತು ಶಕ್ತಿಯನ್ನು ನೀಡಿತು. ದೊಡ್ಡದೊಂದು ಆತಂಕ ದೂರವಾದಂತೆ ಅನಿಸಿತು.ಇದರ ಬೆನ್ನಲ್ಲೇ, ಸಮುದಾಯದ ಇನ್ನು ಅನೇಕ ಜನರು ತಮಗಾದ ಅನುಭವಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದಾಗ ಅವಳಿಗೆ ಕೋಪ, ಬೇಸರ ಮತ್ತು ತೀವ್ರ ದುಃಖ ಉಂಟಾಯಿತು ಎಂದು ಅವರು ಹೇಳಿದ್ದಾರೆ.
ಸಮುದಾಯದ ಜನರಿಂದ ಅನೇಕ ಕಥೆಗಳು ಹೊರಬಂದವು. ಅವೆಲ್ಲವೂ ಕೇವಲ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿರಲಿಲ್ಲ. ಬದಲಿಗೆ ಅವರ ದುರ್ನಡತೆ, ಅಧಿಕಾರದ ದುರುಪಯೋಗ ಮತ್ತು ತಾರತಮ್ಯದ ನಡವಳಿಕೆಗಳ ಬಗ್ಗೆಯೂ ಇದ್ದವು.. ಇವೆಲ್ಲವನ್ನೂ ಓದಿದಾಗ, ಇದು ಕೇವಲ ನನ್ನ ಮತ್ತು ಆ ನಾಲ್ಕು ಮಹಿಳೆಯರ ಕಥೆಯಲ್ಲ ಎಂಬುದು ನನಗೆ ಮನವರಿಕೆಯಾಯಿತು. ಅನೇಕ ಜನರು ಇಂತಹ ಕಹಿ ಅನುಭವಗಳನ್ನು ವರ್ಷಗಳ ಕಾಲ ಮೌನವಾಗಿ ನುಂಗಿಕೊಂಡಿದ್ದರು ಎಂಬ ವಿಷಯ ನನಗೆ ಹೆಚ್ಚು ಆಘಾತ ತಂದಿತು. ತಮಗೆ ಕೆಟ್ಟ ಅನುಭವಗಳಾಗಿದ್ದರೂ ಅದನ್ನು ಯಾರೊಂದಿಗೂ ಹಂಚಿಕೊಳ್ಳದೆ ತಮ್ಮಲ್ಲೇ ಇಟ್ಟುಕೊಂಡಿದ್ದ ಎಷ್ಟೋ ಜನರಿದ್ದಾರೆ ಎಂದ ಆಕೆ ಇದು ನನ್ನಲ್ಲಿ ಈವರೆಗೆ ಬತ್ತಿಹೋಗಿದ್ದ ತೀವ್ರ ಆಕ್ರೋಶವನ್ನು ಮತ್ತೆ ಕೆರಳಿಸಿತು .ಅನೇಕ ಮಹಿಳೆಯರಿಗೆ ತಮಗೆ ನಡೆದಿರುವುದು ದೌರ್ಜನ್ಯ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಒಂದು ಸುದೀರ್ಘ ಪ್ರಕ್ರಿಯೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ತನ್ನ ಲಿಖಿತ ಹೇಳಿಕೆಯಲ್ಲಿ ಮತ್ತು 'ದಿ ಪ್ರಿಂಟ್'ಗೆ ನೀಡಿದ ಸಂದರ್ಶನದಲ್ಲಿ, ಬೋಧನೆ ಮತ್ತು ಬೋಧಕನನ್ನು ಬೇರ್ಪಡಿಸಲು ಸಾಧ್ಯವಾಗದಂತಹ ವಾತಾವರಣ ಅಲ್ಲಿತ್ತು ಎಂಬುದನ್ನು ಮಹಿಳೆ ವಿವರಿಸಿದ್ದಾರೆ. ಹೊರಗಿನಿಂದ ನೋಡುವವರಿಗೆ ಸತ್ತ್ವ ಸಂಸ್ಥೆಯು "ಜ್ಞಾನಿ ಗುರು ಮತ್ತು ಸುಂದರವಾದ ಶಿಕ್ಷಕ ವೃಂದವನ್ನು ಹೊಂದಿರುವ, ಸಮೃದ್ಧವಾಗಿ ಬೆಳೆಯುತ್ತಿರುವ ಒಂದು ಸಮುದಾಯ" ದಂತೆ ಕಾಣಿಸುತ್ತಿತ್ತು. ಆದರೆ ಅದರ ಒಳಗೆ ನಂಬಿಕೆ, ಅಧಿಕಾರ ಮತ್ತು ಸಂಪೂರ್ಣ ಶರಣಾಗತಿಯ ಹೆಸರಿನಲ್ಲಿ ಅತ್ಯಂತ ಸಂಕೀರ್ಣವಾದ ವ್ಯವಸ್ಥೆಯೊಂದು ನಡೆಯುತ್ತಿತ್ತು. ಅಲ್ಲಿಂದ ಹೊರಬರುವುದು ಕೂಡ ಸಮಸ್ಯೆಯನ್ನು ಗುರುತಿಸುವಷ್ಟೇ ಕಷ್ಟದ ಕೆಲಸವಾಗಿತ್ತು ಎಂದು ಅವರು ಹೇಳಿದ್ದಾರೆ.
ನಮ್ಮ ಬೆಂಬಲಕ್ಕೆ ಯಾರೂ ಇಲ್ಲ ಎಂದು ಅನಿಸಿದಾಗ ತುಂಬಾ ಭಯವಾಗುತ್ತದೆ. ಕೆಲವೊಮ್ಮೆ ಅಲ್ಲಿಂದ ಹೊರಬರಲು ಒಂದು ದಾರಿ ಸಿಗುವವರೆಗೆ ಎಲ್ಲವೂ ಸರಿಯಾಗಿದೆ ಎಂಬಂತೆ ನಾಟಕವಾಡಬೇಕಾಗುತ್ತದೆ. ಒಂಟಿತನ ಮತ್ತು ಅಪಮಾನದ ಭಯವೇ ಜನರು ಧ್ವನಿ ಎತ್ತದಂತೆ ತಡೆಯುತ್ತಿತ್ತು ಎಂದು ಅವರು ಹೇಳಿದರು.
ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ನೀವು ಸಂಪೂರ್ಣವಾಗಿ ಒಂಟಿಯಾಗಿದ್ದೀರಿ ಎಂಬ ಭಾವನೆ ಮೂಡುತ್ತದೆ. ಇದರ ಸುತ್ತ ಸಾಕಷ್ಟು ಅಪಮಾನ ಮತ್ತು ಗೊಂದಲಗಳಿರುತ್ತವೆ. ತಪ್ಪಿತಸ್ಥರು ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಈಗ ಹಿಂತಿರುಗಿ ನೋಡಿದಾಗ, ಸತ್ತ್ವ ಸಂಸ್ಥೆಯ ಆಪ್ತ ವಲಯದಲ್ಲಿದ್ದ ಅನೇಕ ಮಹಿಳೆಯರು ಕೇವಲ ಈ ವ್ಯವಸ್ಥೆಯ ಭಾಗವಾಗಿರದೆ, ಅವರೂ ಇದರ ಬಲಿಪಶುಗಳಾಗಿದ್ದರು ಎಂಬುದು ತನಗೆ ಅರ್ಥವಾಗುತ್ತಿದೆ ಎಂದು ಮಹಿಳೆ ಹೇಳಿದ್ದಾರೆ.
ಅವರೂ ಕೂಡ ಯಾವುದೋ ಒಂದು ಹಂತದಲ್ಲಿ ಸಂತ್ರಸ್ತರಾಗಿದ್ದರು. ಅಲ್ಲಿದ್ದ ಎಲ್ಲಾ ಮಹಿಳೆಯರೂ ಒಂದೇ ರೀತಿಯ ನೋವನ್ನು ಅನುಭವಿಸುತ್ತಿದ್ದರು.ಗೌರವದ ಹಪಾಹಪಿ, ಗುರುತಿಸಿಕೊಳ್ಳುವ ಹಂಬಲ ಮತ್ತು ತಾವೊಬ್ಬ ವಿಶೇಷ ವ್ಯಕ್ತಿ ಎಂದು ತೋರಿಸಿಕೊಳ್ಳುವ ಹಂಬಲ ಅವರಲ್ಲಿತ್ತು. ವಂಚಕನೊಬ್ಬ ಇದನ್ನು ಸುಲಭವಾಗಿ ಗುರುತಿಸಿ, ಅವರ ಆ ಅಸಹಾಯಕತೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾನೆ. ಇಂತಹ ವಾತಾವರಣವು ಮಹಿಳೆಯರ ನಡುವೆ ಒಗ್ಗಟ್ಟಿನ ಬದಲಿಗೆ ಸ್ಪರ್ಧೆ ಮತ್ತು ಈರ್ಷೆಯನ್ನು ಸೃಷ್ಟಿಸುತ್ತಿತ್ತು. ನಮ್ಮ ನಡುವೆ ಮತ್ಸರವಿತ್ತು. ನಾವು ಹೊರಗಡೆ ಸೋದರಿಯರಂತೆ ನಟಿಸುತ್ತಿದ್ದರೂ, ಒಳಗೊಳಗೆ ಒಬ್ಬರನ್ನೊಬ್ಬರು ಹಾಗೆ ನಡೆಸಿಕೊಳ್ಳುತ್ತಿರಲಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.
ಇಷ್ಟೆಲ್ಲಾ ನಡೆದಿದ್ದರೂ, ಅವಳು ಯೋಗಾಭ್ಯಾಸವನ್ನು ಕೈಬಿಟ್ಟಿಲ್ಲ. ತನಗಾದ ಮಾನಸಿಕ ಆಘಾತದಿಂದ ಹೊರಬರಲು ಥೆರಪಿ ಪಡೆಯುತ್ತಿರುವ ಅವರು, ಯೋಗ, ಧ್ಯಾನ ಮತ್ತು ಇತರ ಆಧ್ಯಾತ್ಮಿಕ ಅಭ್ಯಾಸಗಳನ್ನು ಮುಂದುವರಿಸಿದ್ದಾರೆ.
ವ್ಯಂಗ್ಯವೆಂದರೆ, ಆನಂದ್ ಅವರ ಮೂಲಕ ನನಗೆ ಈ ಯೋಗ ಪದ್ಧತಿಗಳು ಸಿಕ್ಕಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಆದರೆ ಆನಂದ್ ಖುದ್ದಾಗಿ ತಾವು ಬಿಂಬಿಸಿಕೊಳ್ಳುವಂತಹ ವ್ಯಕ್ತಿಯಂತೂ ಖಂಡಿತಾ ಅಲ್ಲ ಎಂದು ಅವರು ಆರೋಪಿಸಿದ್ದಾರೆ.
ಸಾರ್ವಜನಿಕವಾಗಿ ಮಾತನಾಡುವ ಮುನ್ನ ತಾನು ಈ ವಿಷಯವನ್ನು ಮೆಹ್ರೋತ್ರಾ ಅವರೊಂದಿಗೆ ವೈಯಕ್ತಿಕವಾಗಿ ಚರ್ಚಿಸಲು ಪ್ರಯತ್ನಿಸಿದೆ. ಆಗ ಅವರು ಮಾಡಿದ ಮೊದಲ ಕೆಲಸವೆಂದರೆ ನನ್ನ ಮಾತನ್ನು ಅರ್ಧಕ್ಕೆ ಕತ್ತರಿಸಿದ್ದು ಮತ್ತು ನನ್ನನ್ನು ಮತ್ತೆ ತಮ್ಮ ಕುತಂತ್ರದಿಂದ ಮರಳು ಮಾಡಲು ಪ್ರಯತ್ನಿಸಿದ್ದು" ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಅಕಾಡೆಮಿಯು ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ ಮೇಲಷ್ಟೇ, ಸಾರ್ವಜನಿಕವಾಗಿ ಧ್ವನಿ ಎತ್ತುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ತಾನು ಬಂದಿದ್ದಾಗಿ ಸಂತ್ರಸ್ತೆ ಹೇಳಿದ್ದಾರೆ.
"ಅವರು 'ಹೌದು, ಇದೆಲ್ಲವೂ ನಿಜ' ಎಂದು ಒಪ್ಪಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಆದರೆ ಕನಿಷ್ಠಪಕ್ಷ ಅವರು ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಇದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದಾದರೂ ಹೇಳಬಹುದಿತ್ತು," ಎಂದರು.
ಸಂತ್ರಸ್ತೆಯ ಪ್ರಕಾರ, ಹೊಣೆಗಾರಿಕೆ ಎಂಬುದು ಶಿಕ್ಷೆಯಿಂದ ಆರಂಭವಾಗುವುದಿಲ್ಲ, ಬದಲಿಗೆ ತಪ್ಪನ್ನು ಒಪ್ಪಿಕೊಳ್ಳುವುದರಿಂದ ಆರಂಭವಾಗುತ್ತದೆ.
ಈ ಮೊದಲ ಹೆಜ್ಜೆಯನ್ನಿಡದೆ ಯಾವುದೇ ನೈಜ ಪರಿಹಾರ ಸಾಧ್ಯವಿಲ್ಲ ಎಂದು ಸಂತ್ರಸ್ತೆ ಬಲವಾಗಿ ನಂಬಿದ್ದಾರೆ. ಅವರು ಈ ಆರೋಪಗಳನ್ನು ನಿರಾಕರಿಸುವವರೆಗೆ ಬದಲಾವಣೆಯ ಯಾವುದೇ ಸಾಧ್ಯತೆಯಿಲ್ಲ ಎಂದ ಸಂತ್ರಸ್ತೆ, ಅವರು ತಮ್ಮ ತಪ್ಪನ್ನು ನೋಡಲು ಸಿದ್ಧರಾದ ಕ್ಷಣದಲ್ಲೇ, ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಕನಿಷ್ಠಪಕ್ಷ ಆ ನೋವಿನಿಂದ ಗುಣಮುಖರಾಗುವ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.
The entrance to Sattva Yoga Academy in Mohan Chatti, on the outskirts of Rishikesh | Photo: Vitasta Kaul
►ಬಿಕ್ಕಟ್ಟಿನ ಸುಳಿಯಲ್ಲಿ ಯೋಗ ಸಮುದಾಯ
ಈ ಗಂಭೀರ ಆರೋಪಗಳು ಋಷಿಕೇಶದ ಒಟ್ಟಾರೆ ಯೋಗ ಸಮುದಾಯದಲ್ಲೂ ತೀವ್ರ ಚರ್ಚೆ ಹಾಗೂ ಚಿಂತನೆಗೆ ಕಾರಣವಾಗಿವೆ. ಯೋಗ ಅಸೋಸಿಯೇಷನ್ ಮಾಹಿತಿ ಪ್ರಕಾರ, ಈ ಭಾಗದಲ್ಲಿ ಸದ್ಯ 100 ಕ್ಕೂ ಹೆಚ್ಚು ಸಕ್ರಿಯ ಯೋಗ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಋಷಿಕೇಶದ ಯೋಗ ಅಸೋಸಿಯೇಷನ್ ಅಧ್ಯಕ್ಷ ಬಿಪಿನ್ ಬಲೋನಿ ಮಾತನಾಡಿ, ಸಂಸ್ಥೆಯು ಇನ್ನು ಸತ್ಯಾಸತ್ಯತೆಗಳನ್ನು ಪರಿಶೀಲಿಸುತ್ತಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ನಾವು ತರಾತುರಿಯಲ್ಲಿ ಯಾವುದೇ ಕ್ರಮ ಕೈಗೊಳ್ಳಬಾರದು. ನಾವು ಇನ್ನು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ ಮತ್ತು ನೈಜ ದಾಖಲೆಗಳಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದರು.
ಅಸೋಸಿಯೇಷನ್ ವತಿಯಿಂದ ಮೆಹ್ರೋತ್ರಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ ಮತ್ತು ಆರೋಪ ಮಾಡಿರುವ ಮಹಿಳೆಯರೊಂದಿಗೂ ತಾವು ಮಾತನಾಡಿಲ್ಲ ಎಂದು ಬಲೋನಿ ತಿಳಿಸಿದರು. ಅಂತರ್ಜಾಲದಲ್ಲಿ ಪ್ರಕಟವಾಗಿರುವ ಹೇಳಿಕೆಗಳು ಮತ್ತು ಸ್ಥಳೀಯ ಯೋಗ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳ ಆಧಾರದ ಮೇಲೆ ತಮಗೆ ಈ ವಿಷಯ ತಿಳಿದಿದೆ ಎಂದು ಅವರು ಹೇಳಿದರು.
ಈ ವಿವಾದದ ಸುತ್ತ ಭಿನ್ನ ಆಯಾಮದ ವಾದಗಳು ಕೇಳಿಬರುತ್ತಿವೆ . ಒಂದೆಡೆ ಮಹಿಳೆಯರು 'ಸೇಫ್ಹೌಸ್' ವೆಬ್ಸೈಟ್ನಲ್ಲಿ ಮಾಡಿರುವ ಗಂಭೀರ ಆರೋಪಗಳಿದ್ದರೆ, ಮತ್ತೊಂದೆಡೆ ಸತ್ತ್ವ ಸಂಸ್ಥೆಯ ಮಾಜಿ ಸಹೋದ್ಯೋಗಿಗಳ ನಡುವಿನ ವ್ಯಾಪಾರ ವಿವಾದದಿಂದಾಗಿ ಈ ಗದ್ದಲ ಸೃಷ್ಟಿಯಾಗಿದೆ ಎಂಬ ವಾದವೂ ಇದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಆರೋಪಗಳು ಕೇಳಿಬಂದ ತಕ್ಷಣವೇ ಯೋಗ ಶಿಕ್ಷಕರು ಬಾಲಿ, ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ, ಇದರಿಂದಾಗಿ ಋಷಿಕೇಶದಲ್ಲಾಗುತ್ತಿದ್ದ ಯೋಗ ವ್ಯವಹಾರಗಳು ಬೇರೆ ದೇಶಗಳ ಪಾಲಾಗುತ್ತಿವೆ ಎಂದೂ ಅವರು ಆರೋಪಿಸಿದರು.
ಯೋಗ ಶಾಲೆಗಳ ಮೇಲೆ ಬಲವಾದ ಕಣ್ಗಾವಲು ಮತ್ತು ನಿಯಂತ್ರಣದ ಅಗತ್ಯವನ್ನು ಈ ಆರೋಪಗಳು ಎತ್ತಿ ತೋರಿಸಿವೆ ಎಂದು ಬಲೋನಿ ಹೇಳಿದರು. ಆದರೆ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವುದು ಅಷ್ಟು ಸುಲಭವಲ್ಲ ಎಂಬುದನ್ನೂ ಅವರು ಒಪ್ಪಿಕೊಂಡರು. "ಖಂಡಿತವಾಗಿಯೂ ನಮಗೆ ಕಟ್ಟುನಿಟ್ಟಾದ ನಿಯಮಗಳ ಅಗತ್ಯವಿದೆ," ಎಂದ ಅವರು, "ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಎಲ್ಲಾ ಶಾಲೆಗಳನ್ನು ಒಂದೇ ವೇದಿಕೆಗೆ ತಂದು, ಅವರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡುವುದು ತುಂಬಾ ಕಷ್ಟದ ಕೆಲಸ. ರಾಜ್ಯ ಸರ್ಕಾರ ಮತ್ತು ನಮ್ಮ ಅಸೋಸಿಯೇಷನ್ ಜಂಟಿಯಾಗಿ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು," ಎಂದು ಅಭಿಪ್ರಾಯಪಟ್ಟರು.
ಯೋಗ ಅಸೋಸಿಯೇಷನ್ ಯಾವುದೇ ಶಾಸನಬದ್ಧ ನಿಯಂತ್ರಣ ಸಂಸ್ಥೆಯಲ್ಲ. ಹಾಗಾಗಿ ಋಷಿಕೇಶದ ಸುತ್ತಮುತ್ತಲಿನ ಮೂರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಖಾಸಗಿ ಯೋಗ ಶಾಲೆಗಳ ಮೇಲೆ ನಿಯಮಗಳನ್ನು ಹೇರುವ ಅಧಿಕಾರ ತಮಗಿಲ್ಲ ಎಂದು ಬಲೋನಿ ಸ್ಪಷ್ಟಪಡಿಸಿದರು. ಸತ್ತ್ವ ಅಕಾಡೆಮಿಯು ಸದ್ಯ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ ಎಂಬ ಮಾಹಿತಿ ತಮಗೆ ಬಂದಿದೆ ಎಂದಿದ್ದಾರೆ ಅವರು.
ಪ್ರಪಂಚದ ಅತಿ ದೊಡ್ಡ ಯೋಗ ಮಾನ್ಯತೆ ಸಂಸ್ಥೆಗಳಲ್ಲಿ ಒಂದಾದ 'ಯೋಗ ಅಲಯನ್ಸ್' ಗೆ ಈ ಆರೋಪಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು 'ಸೇಫ್ಹೌಸ್' ವೆಬ್ಸೈಟ್ ತಿಳಿಸಿದೆ. ದುರ್ನಡತೆಗೆ ಸಾಥ್ ನೀಡಿದ ಸತ್ತ್ವ ಯೋಗ ಅಕಾಡೆಮಿ ಮತ್ತು ಅಲ್ಲಿನ ಮುಖ್ಯ ಶಿಕ್ಷಕರ ವಿರುದ್ಧದ ಮಾನ್ಯತೆಯನ್ನು ರದ್ದುಗೊಳಿಸುವ ಅಥವಾ ಅಮಾನತುಗೊಳಿಸುವ ಕುರಿತು ಸಂಸ್ಥೆಯು "ತನಿಖೆ ನಡೆಸುತ್ತಿದೆ" ಎಂದು ವೆಬ್ಸೈಟ್ ಉಲ್ಲೇಖಿಸಿದೆ.
ಈ ವಿಷಯದ ಕುರಿತು ತಾವು ತನಿಖೆ ಆರಂಭಿಸಿರುವುದನ್ನು 'ಯೋಗ ಅಲಯನ್ಸ್' ಸಂಸ್ಥೆಯು 'ದಿ ಪ್ರಿಂಟ್' ಮುಂದೆ ಖಚಿತಪಡಿಸಿದೆ. ನಿರ್ದಿಷ್ಟ ದೂರುಗಳು ಅಥವಾ ತನಿಖೆಯ ವಿವರಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಂಸ್ಥೆಯು, "ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ತನಿಖೆಯ ವರದಿ ಬರುವವರೆಗೆ ಈ ಯೋಗ ಶಾಲೆ ಹಾಗೂ ಅದಕ್ಕೆ ಸಂಬಂಧಿಸಿದ ಶಿಕ್ಷಕರ ಮಾನ್ಯತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದೇವೆ" ಎಂದು ತಿಳಿಸಿದೆ.
ಕೃಪೆ: theprint.in






