ವಿದ್ಯಾರ್ಥಿನಿಗೆ ಶುಲ್ಕ ವಿನಾಯಿತಿ ಭರವಸೆ ನೀಡಿದ್ದ ಆದಿತ್ಯನಾಥ್: ಸಾಧ್ಯವಿಲ್ಲವೆಂದ ಶಾಲಾ ಆಡಳಿತ ಮಂಡಳಿ
ಆರೆಸ್ಸೆಸ್ನ ವಿದ್ಯಾಭಾರತಿ ನಡೆಸುತ್ತಿದ್ದ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ

Photo | NDTV
ಗೋರಖ್ ಪುರ್: ನಾನು ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಹೊಂದಿರುವುದರಿಂದ, ನನಗೆ ಆರ್ಥಿಕ ನೆರವು ನೀಡಿ ಎಂದು ಏಳನೆ ತರಗತಿಯ ವಿದ್ಯಾರ್ಥಿನಿಯೋರ್ವಳು ಮಾಡಿದ್ದ ಮನವಿ ಉತ್ತರ ಪ್ರದೇಶದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಏಳನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪಂಖುರಿ ತ್ರಿಪಾಠಿ ಎಂಬ ವಿದ್ಯಾರ್ಥಿನಿಯ ತಂದೆ ರಾಜೀವ್ ಕುಮಾರ್ ತ್ರಿಪಾಠಿ ಅವರಿಗೆ ಅಪಘಾತವೊಂದರಲ್ಲಿ ಕಾಲಿಗೆ ತೀವ್ರ ಗಾಯವಾಗಿತ್ತು. ಅವರ ಕುಟುಂಬ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ.
ಹೀಗಾಗಿ, ನಮ್ಮ ಪುತ್ರಿಯ ವಿದ್ಯಾಭ್ಯಾಸ ಮುಂದುವರಿಕೆಗೆ ನೆರವು ನೀಡಬೇಕು ಎಂದು ಪಂಖುರಿ ತ್ರಿಪಾಠಿಯ ಕುಟುಂಬ ಮುಖ್ಯಮಂತ್ರಿ ಆದಿತ್ಯನಾಥ್ ಅವರಲ್ಲಿ ಮನವಿ ಮಾಡಿತ್ತು. ಪಂಖುರಿ ತ್ರಿಪಾಠಿಯ ಶಿಕ್ಷಣಕ್ಕೆ ಯಾವುದೇ ಅಡತಡೆಯುಂಟಾಗುವುದಿಲ್ಲ ಎಂದು ಆದಿತ್ಯನಾಥ್ ಕೂಡ ಭರವಸೆ ನೀಡಿದ್ದರು.
ಪಂಖುರಿ ತ್ರಿಪಾಠಿ ಆರೆಸ್ಸೆಸ್ ಶಿಕ್ಷಣ ಘಟಕವಾದ ವಿದ್ಯಾಭಾರತಿ ನಡೆಸುತ್ತಿರುವ ಗೋರಖ್ ಪುರ್ ನ ಪಕ್ಕಿಬಾಗ್ನಲ್ಲಿರುವ ಸರಸ್ವತಿ ಶಿಶು ಮಂದಿರದಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆಯ ಮಾಸಿಕ ಬೋಧನಾ ಶುಲ್ಕ 1,650 ಆಗಿದೆ. ಆಕೆಯ ಒಟ್ಟು 18,000 ರೂ. ಬೋಧನಾ ಶುಲ್ಕ ಬಾಕಿ ಉಳಿದಿದೆ. ಆದರೆ, ಆದಿತ್ಯನಾಥ್ ಭರವಸೆ ಬಳಿಕವೂ ಶಾಲಾ ಆಡಳಿತ ಮಂಡಳಿಯು ಶುಲ್ಕ ವಿನಾಯಿತಿಗೆ ನಿರಾಕರಿಸಿದೆ ಎಂದು ವಿದ್ಯಾರ್ಥಿನಿ ಕುಟುಂಬ ಆರೋಪಿಸಿದೆ.
ʼಶಾಲಾ ಆಡಳಿತ ಮಂಡಳಿಯು ಶುಲ್ಕ ವಿನಾಯಿತಿ ನೀಡುವುದಕ್ಕೆ ನಿರಾಕರಿಸುತ್ತಿದ್ದು, ನಮ್ಮ ಶಾಲೆಯಲ್ಲಿ ಅಂತಹ ಯಾವುದೇ ನಿಯಮಗಳಿಲ್ಲ ಎಂದು ಪಟ್ಟು ಹಿಡಿದಿದೆʼ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಈ ಆರೋಪ ಇದೀಗ ಉತ್ತರ ಪ್ರದೇಶದಲ್ಲಿ ರಾಜಕೀಯ ವಿವಾದಕ್ಕೆ ತಿರುಗಿದೆ. ಈ ಸಂಬಂಧ ವಿರೋಧ ಪಕ್ಷ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ.
ಆದರೆ, ಮುಖ್ಯಮಂತ್ರಿ ಆದಿತ್ಯನಾಥ್ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ನಮ್ಮ ಪುತ್ರಿಯ ಕನಸು ನನಸಾಗುವಂತೆ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಪಂಖುರಿ ತ್ರಿಪಾಠಿ ಕುಟುಂಬವಿದೆ.







