Tamil Nadu| ಸಿಎಂ ವಿಜಯ್ ಕರೂರ್ ಭೇಟಿಗೆ ತಡೆ ನೀಡಲು ನಕಾರ; DMK ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

File Photo: PTI
ಹೊಸದಿಲ್ಲಿ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ಟಿವಿಕೆ ನಾಯಕರು ಕರೂರ್ ಕಾಲ್ತುಳಿತದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡುವುದನ್ನು ಹಾಗೂ ಅವರೊಂದಿಗೆ ಮಾತನಾಡುವುದನ್ನು ತಡೆಯಬೇಕೆಂಬ ಡಿಎಂಕೆ ಪಕ್ಷದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ನ್ಯಾಯಾಲಯವನ್ನು ರಾಜಕೀಯ ವೇದಿಕೆಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಬಳಿಕ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಪರಿಗಣಿಸಿ ವಜಾಗೊಳಿಸಿದೆ.
ಸೆಪ್ಟೆಂಬರ್ 2025ರ ಕರೂರ್ ಕಾಲ್ತುಳಿತದಲ್ಲಿ ಮೃತರಾದವರ ಕುಟುಂಬಗಳೊಂದಿಗೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ಇತರ ಟಿವಿಕೆ ನಾಯಕರು ಸಂವಹನ ನಡೆಸುವುದನ್ನು ಮತ್ತು ಸಾರ್ವಜನಿಕ ಹೇಳಿಕೆಗಳನ್ನು ನೀಡುವುದನ್ನು ತಡೆಯಬೇಕೆಂದು ಕೋರಿ ಡಿಎಂಕೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಡಿಎಂಕೆ ತನ್ನ ಅರ್ಜಿಯಲ್ಲಿ, ಟಿವಿಕೆ ಮುಖಂಡ ಅಧವ್ ಅರ್ಜುನ ಅವರು ಮಾಡಿದ್ದಾರೆನ್ನಲಾದ ಕೆಲವು ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿತ್ತು. ಆ ಹೇಳಿಕೆಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಮತ್ತು 41 ಜನರನ್ನು ಬಲಿಪಡೆದ ಕರೂರ್ ಕಾಲ್ತುಳಿತ ಪ್ರಕರಣದ ಸಿಬಿಐ ತನಿಖೆಗೆ ಅಡ್ಡಿಪಡಿಸಬಹುದು ಎಂದು ಅದು ಪ್ರತಿಪಾದಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಪೀಠವು, ಈ ಪ್ರಕರಣದ ಕುರಿತು ಈಗಾಗಲೇ ಸಿಬಿಐ ತನಿಖೆಗೆ ಆದೇಶಿಸಿರುವುದನ್ನು ಉಲ್ಲೇಖಿಸಿ, ಡಿಎಂಕೆ ಸಲ್ಲಿಸಿರುವ ಈ ಅರ್ಜಿಯ ಮೂಲ ಆಧಾರವನ್ನೇ ಪ್ರಶ್ನಿಸಿದೆ.
“ಮುಖ್ಯಮಂತ್ರಿಯವರ ಭೇಟಿಯನ್ನು ಸುಪ್ರೀಂ ಕೋರ್ಟ್ ನಿಯಂತ್ರಿಸಬೇಕು ಮತ್ತು ಅವರ ಪ್ರವಾಸದ ಕಾರ್ಯಕ್ರಮವನ್ನು ನಾವೇ ನಿಗದಿಪಡಿಸಬೇಕು ಎಂದು ನೀವು ಬಯಸುತ್ತೀರಾ?" ಎಂದು ನ್ಯಾಯಪೀಠವು ಪ್ರಶ್ನಿಸಿದೆ.
ಜುಲೈ 10 ರಂದು ವಿಜಯ್ ಅವರು ಕರೂರ್ ಗೆ ಭೇಟಿ ನೀಡಲಿದ್ದು, ಅನುಕಂಪದ ಆಧಾರದ ಮೇಲಿನ ಉದ್ಯೋಗ ನೇಮಕಾತಿ ಆದೇಶಗಳು ಮತ್ತು ಇತರ ಆರ್ಥಿಕ ನೆರವು ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಲು ನಿರ್ಧರಿಸಿದ್ದಾರೆ.
ಈ ಅರ್ಜಿದಾರರ ವಾದವನ್ನು ಪ್ರಶ್ನಿಸಿದ ನ್ಯಾಯಪೀಠವು, "ಕಾರ್ಯಾಂಗದ ಮುಖ್ಯಸ್ಥರಾದ ಮುಖ್ಯಮಂತ್ರಿ , ಈಗಾಗಲೇ ಭರವಸೆ ನೀಡಿರುವ ಸೌಲಭ್ಯಗಳನ್ನು ವಿತರಿಸಲು ಹೋದರೆ, ಅದು ಸಂತ್ರಸ್ತರ ಮೇಲೆ ಹೇಗೆ ಪ್ರಭಾವ ಬೀರುತ್ತದೆ?" ಎಂದು ಪ್ರಶ್ನಿಸಿದೆ .
ಡಿಎಂಕೆ ಪರ ಹಾಜರಾಗಿದ್ದ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು, "ನಮ್ಮ ಕಳವಳವು ಕೇವಲ ಕಾರ್ಯಾಂಗದ ಕಾರ್ಯವೈಖರಿಯ ಬಗ್ಗೆ ಅಲ್ಲ. ಬದಲಾಗಿ, ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಆರೋಪಿಯೂ ಆಗಿದ್ದಾರೆ" ಎಂದು ವಾದಿಸಿದ್ದಾರೆ. ಆದರೆ ಪ್ರತಿವಾದಿ ಪರ ವಕೀಲರು ತಕ್ಷಣ ಮಧ್ಯಪ್ರವೇಶಿಸಿ, ದಾಖಲಾಗಿರುವ ಯಾವುದೇ ಎಫ್ಐಆರ್ ಗಳಲ್ಲಿ ಮುಖ್ಯಮಂತ್ರಿಯವರ ಹೆಸರನ್ನು ಆರೋಪಿಯನ್ನಾಗಿ ಸೇರಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ನ್ಯಾಯಾಲಯವು, "ದಯವಿಟ್ಟು ಪರಿಶೀಲಿಸಿ, ಈ ಪ್ರಕರಣದಲ್ಲಿ ಸಚಿವರು ಆರೋಪಿಗಳಾಗಿದ್ದಾರೆಯೇ ಹೊರತು ಮುಖ್ಯಮಂತ್ರಿಯವರಲ್ಲ" ಎಂದು ತಿಳಿಸಿದೆ.
ಈ ಅರ್ಜಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ಅರ್ಜಿಯನ್ನು ಮತ್ತಷ್ಟು ಮುಂದುವರಿಸದಂತೆ ಅರ್ಜಿದಾರರಿಗೆ ಎಚ್ಚರಿಕೆ ನೀಡಿ ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಾಲಯದ ಅಕ್ಟೋಬರ್ 2025ರ ನಿರ್ದೇಶನಗಳ ಪ್ರಕಾರ, ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಜಯ್ ರಾಸ್ತೋಗಿ ಅವರ ನೇತೃತ್ವದ ಮೂರು ಸದಸ್ಯರ ಸಮಿತಿಯು ಸಿಬಿಐ ತನಿಖೆಯನ್ನು ಮೇಲ್ವಿಚಾರಣೆ ನಡೆಸುತ್ತಿದೆ.






