AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

Screengrab:X/ANI
ಹೊಸದಿಲ್ಲಿ: ‘ AI ಇಂಪ್ಯಾಕ್ಟ್ ಶೃಂಗಸಭೆ 2026’ರಲ್ಲಿ ತಂತ್ರಜ್ಞಾನ ಕ್ಷೇತ್ರದ ಉನ್ನತ ಸಿಇಒಗಳು ಕೃತಕ ಬುದ್ಧಿಮತ್ತೆಯ ಕ್ರಾಂತಿಕಾರಿ ಬೆಳವಣಿಗೆಯ ಕುರಿತು ಮಾತನಾಡುತ್ತಿದ್ದ ವೇಳೆ, ಭಾರತ–ಅಮೆರಿಕ ವ್ಯಾಪಾರ ಚೌಕಟ್ಟು ಒಪ್ಪಂದವನ್ನು ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಶೃಂಗಸಭೆ ನಡೆಯುತ್ತಿದ್ದ ಸ್ಥಳದ ಒಂದು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗ ಹೊರಭಾಗದಲ್ಲಿ ಏಕಾಏಕಿ ಘೋಷಣೆಗಳ ಶಬ್ದ ಕೇಳಿಬಂದಿತು. ಆಗ ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು NDTVಗೆ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾದ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಅಮೆರಿಕದೊಂದಿನ ಹೊಸ ವ್ಯಾಪಾರ ಒಪ್ಟಂದದಿಂದ ಭಾರತಕ್ಕೆ ನ್ಯಾಯಯುತ ಪ್ರಯೋಜನಗಳು ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಒಪ್ಪಂದದನ್ವಯ ದೇಶೀಯ ಕೈಗಾರಿಕೆ ಹಾಗೂ ಕೃಷಿ ವಲಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಮೊದಲಿನಿಂದಲೇ ಆಕ್ಷೇಪ ವ್ಯಕ್ತಪಡಿಸುತ್ತಿದೆ.
AI ಶೃಂಗಸಭೆಯನ್ನು ಅಡ್ಡಿಪಡಿಸುವ ಪ್ರಯತ್ನವನ್ನು ದೇಶದ ಬೆಳವಣಿಗೆಯ ಕುರಿತು ಕಾಂಗ್ರೆಸ್ ನ ಹೊಟ್ಟಕಿಚ್ಚಿನ ಪರಿಣಾಮ ಎಂದು ಬಿಜೆಪಿ ಟೀಕಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಪಕ್ಷದ ವಕ್ತಾರ ನಳಿನ್ ಕೊಹ್ಲಿ, “ಕಾಂಗ್ರೆಸ್ ಗೆ AI ಎಂದರೆ ‘ಭಾರತ ವಿರೋಧಿ’. ಕಾಂಗ್ರೆಸ್ ಮತ್ತೊಮ್ಮೆ INCಯು ವಾಸ್ತವದಲ್ಲಿ ANC — ರಾಷ್ಟ್ರೀಯ ವಿರೋಧಿ ಕಾಂಗ್ರೆಸ್ ಎಂದು ಸಾಬೀತುಪಡಿಸಿದೆ. ಪ್ರತಿಭಟನಾಕಾರರು ಕೇವಲ ಶರ್ಟ್ ಧರಿಸದವರಲ್ಲ, ವ್ಯಕ್ತಿತ್ವವಿಲ್ಲದವರೂ ಆಗಿದ್ದಾರೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಡತೆಗೆಟ್ಟ ಪಕ್ಷ: ಬಿಜೆಪಿ
ಕೃತಕ ಬುದ್ಧಿಮತ್ತೆ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪ್ರತಿಭಟನೆ ನಡೆಸಿರುವುದಕ್ಕಾಗಿ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹ್ಝಾದ್ ಪೂನಾವಾಲಾ ಶುಕ್ರವಾರ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ‘‘ಕಾಂಗ್ರೆಸ್ ನಡತೆಗೆಟ್ಟ, ಬುದ್ಧಿಯಿಲ್ಲದ ಮತ್ತು ಭಾವನೆಗಳಿಲ್ಲದ ಪಕ್ಷವಾಗಿದೆ’’ ಎಂದು ಅವರು ಬಣ್ಣಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಪ್ರಗತಿಯನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು, ಇದು ರಾಷ್ಟ್ರೀಯ ಸಾಧನೆಗಳ ವಿರುದ್ಧದ ಪ್ರತಿಭಟನೆಯಾಗಿದೆ ಎಂದು ಬಿಜೆಪಿ ವಕ್ತಾರ ಹೇಳಿಕೊಂಡರು.
‘‘ತನಗೆ ಎಐ ಎಂದರೆ ಆ್ಯಂಬೀಶಿಯಸ್ ಇಂಡಿಯಾ (ಮಹತ್ವಾಕಾಂಕ್ಷಿ ಭಾರತ), ಆರ್ಟಿಫೀಶಿಯಲ್ ಇಂಟಲಿಜನ್ಸ್ (ಕೃತಕ ಬುದ್ಧಿಮತ್ತೆ), ಆ್ಯಸ್ಪಿರೇಶನಲ್ ಇಂಡಿಯಾ (ಆಶೋತ್ತರಗಳನ್ನು ಹೊಂದಿದ ಭಾರತ) ಅಲ್ಲ ಎನ್ನುವುದನ್ನು ಕಾಂಗ್ರೆಸ್ ಮತ್ತೊಮ್ಮೆ ಸಾಬೀತುಪಡಿಸಿದೆ. ಅವರಿಗೆ ಎಐ ಎಂದರೆ ಆ್ಯಂಟಿ ಇಂಡಿಯಾ (ಭಾರತ ವಿರೋಧಿ). ಇದು ಐಎನ್ಸಿ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್) ಅಲ್ಲ, ಇದು ಎಎನ್ಸಿ (ಆ್ಯಂಟಿ ನ್ಯಾಶನಲ್ ಕಾಂಗ್ರೆಸ್- ಭಾರತ ವಿರೋಧಿ ಕಾಂಗ್ರೆಸ್). ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ರಿಂದ ಹಿಡಿದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿವರೆಗೆ, ಸ್ಯಾಮ್ ಆಲ್ಟ್ಮನ್ರಿಂದ ಹಿಡಿದು ಸುಂದರ್ ಪಿಚೈವರೆಗೆ ಎಲ್ಲಾ ತಂತ್ರಜ್ಞಾನ ಕಂಪೆನಿಗಳ ಮುಖ್ಯಸ್ಥರು ಸಮ್ಮೇಳನವನ್ನು ಹೊಗಳುತ್ತಿದ್ದಾರೆ’’ ಎಂದು ಪೂನಾವಾಲಾ ಹೇಳಿದರು.







