ಪಾಟ್ನಾ | ಬಿಜೆಪಿ ನಾಯಕ, ಯೂಟ್ಯೂಬರ್ ಮನೀಶ್ ಕಶ್ಯಪ್ ರನ್ನು ಥಳಿಸಿ ಕೋಣೆಯಲ್ಲಿ ಕೂಡಿಹಾಕಿದ ಕಿರಿಯ ವೈದ್ಯರು!
ವೈದ್ಯರೊಂದಿಗೆ ಅನುಚಿತ ವರ್ತನೆ ಆರೋಪ

Photo: india today
ಪಾಟ್ನಾ: ಯೂಟ್ಯೂಬರ್ ಮತ್ತು ಬಿಜೆಪಿ ನಾಯಕ ಮನೀಶ್ ಕಶ್ಯಪ್ ಅವರು ಸೋಮವಾರ ಪಾಟ್ನಾದ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕಿರಿಯ ವೈದ್ಯರೊಂದಿಗೆ ವಾಗ್ವಾದ ನಡೆಸಿದ ಬಳಿಕ ಕಿರಿಯ ವೈದ್ಯರು ಅವರನ್ನು ಕೋಣೆಯಲ್ಲಿ ಕೂಡಿಹಾಕಿ ಥಳಿಸಿರುವ ಘಟನೆ ನಡೆದಿದೆ.
ಕಶ್ಯಪ್ ಮಧ್ಯಾಹ್ನ ರೋಗಿಯ ಪರವಾಗಿ ಮಾತನಾಡಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ಭೇಟಿಯ ಸಮಯದಲ್ಲಿ, ಅವರು ಮಹಿಳಾ ಕಿರಿಯ ವೈದ್ಯರೊಂದಿಗೆ ಜಗಳವಾಡಿದ್ದಾರೆ ಎನ್ನಲಾಗಿದೆ.
ಕಶ್ಯಪ್ ಈ ವಿಷಯಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಆವರಣದಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದಾಗ ಪರಿಸ್ಥಿತಿ ತೀವ್ರಗೊಂಡಿದೆ ಎನ್ನಲಾಗಿದೆ. ಯೂಟ್ಯೂಬರ್ ಆಗಿರುವ ಕಶ್ಯಪ್ ಅವರ ನಡೆಯು ಕರ್ತವ್ಯದಲ್ಲಿದ್ದ ಕಿರಿಯ ವೈದ್ಯರ ಕೋಪಕ್ಕೆ ಕಾರಣವಾಯಿತು. ಬಳಿಕ ಅವರು ಕಶ್ಯಪ್ ಅವರನ್ನು ಸುಮಾರು ಮೂರು ಗಂಟೆಗಳ ಕಾಲ ಕೋಣೆಯೊಳಗೆ ಕೂಡಿಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕಿರಿಯ ವೈದ್ಯರು ಕಶ್ಯಪ್ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮೂಲಗಳ ಪ್ರಕಾರ, ಕಶ್ಯಪ್ ಮಹಿಳಾ ಸಹೋದ್ಯೋಗಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವೈದ್ಯರೊಬ್ಬರು ಹೇಳಿದ್ದು, ವಾಗ್ವಾದಕ್ಕೆ ಕಾರಣವಾಯಿತು ಎನ್ನಲಾಗಿದೆ. ಯೂಟ್ಯೂಬರ್ ಕಶ್ಯಪ್ ಬೆಂಬಲಿಗರು, ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದರು.
ಆದರೆ ನಂತರದ ಬೆಳವಣಿಗೆಯಲ್ಲಿ, ಮನೀಶ್ ಕಶ್ಯಪ್ ಅವರ ಬೆಂಬಲಿಗರು ಇಡೀ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಆಸ್ಪತ್ರೆಯಲ್ಲಿ ಈ ರೀತಿಯ ಘಟನೆಯೇ ನಡೆದಿಲ್ಲ ಎಂದು ಹೇಳಿಕೊಂಡರು.
ಈ ಕುರಿತು ಪ್ರತಿಕ್ರಿಯಿಸಿದ ಪಿರ್ಬಹೋರ್ ಪೊಲೀಸ್ ಠಾಣೆಯ ಉಸ್ತುವಾರಿ ಅಬ್ದುಲ್ ಹಲೀಮ್, ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಕಡೆಯವರೊಡನೆ ರಾಜಿ ಮಾಡಿಸಿದ್ದಾರೆ ಎಂದು ದೃಢಪಡಿಸಿದರು. ಈ ಕುರಿತು ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಅವರು ಹೇಳಿದ್ದಾರೆ.







