ವಿವಾದಾತ್ಮಕ ಹೇಳಿಕೆ | ಯೂಟ್ಯೂಬರ್ ರಣವೀರ್ ಅಲಹಾಬಾದಿಯಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್

ರಣವೀರ್ ಅಲಹಾಬಾದಿಯ (Photo:X/Ranveer Allahbadia)
ಹೊಸದಿಲ್ಲಿ : ಇಂಡಿಯಾಸ್ ಗಾಟ್ ಲೇಟೆಂಟ್ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಕುರಿತಂತೆ ದಾಖಲಾದ ಎಫ್ಐಆರ್ ಗೆ ಸಂಬಂಧಿಸಿ ಯೂಟ್ಯೂಬರ್ ಮತ್ತು ಪಾಡ್ ಕಾಸ್ಟರ್ ರಣವೀರ್ ಅಲಹಾಬಾದಿಯ ಅವರಿಗೆ ಸುಪ್ರೀಂ ಕೋರ್ಟ್ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಕಾಮಿಡಿಯನ್ ಸಮಯ್ ರೈನಾ ಆತಿಥ್ಯದ ‘ಇಂಡಿಯಾಸ್ ಗಾಟ್ ಲೇಟೆಂಟ್’ ರಿಯಾಲಿಟಿ ಶೋನಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಕಾರಣಕ್ಕೆ ಅವರ ವಿರುದ್ಧ ವಿವಿಧ ರಾಜ್ಯಗಳಲ್ಲಿ ಎಫ್ಐಆರ್ ಗಳು ದಾಖಲಾಗಿತ್ತು.
ಎಫ್ಐಆರ್ಗಳ ವಿರುದ್ಧ ರಣವೀರ್ ಅಲಹಾಬಾದಿಯ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿವಿಧ ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಗಳನ್ನು ಒಗ್ಗೂಡಿಸಬೇಕು ಎಂದು ಮನವಿ ಮಾಡಿದ್ದರು.
ಅರ್ಜಿ ವಿಚಾರಣೆಯ ವೇಳೆ ರಣವೀರ್ ಅಲಹಾಬಾದಿಯ ಅವರನ್ನು ತರಾಟಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು, ಇಂತಹ ನಡವಳಿಕೆಯನ್ನು ಖಂಡಿಸಬೇಕು, ಪಾಡ್ ಕ್ಯಾಸ್ಟರ್ ಮನಸ್ಸಿನಲ್ಲಿ ಕೊಳಕು ಇತ್ತು. ಅವರು ಅದನ್ನು ಕಾರ್ಯಕ್ರಮದಲ್ಲಿ 'ವಾಂತಿ' ಮಾಡಿದ್ದಾರೆ ಎಂದು ಹೇಳಿದರು.





