Manipura | ರಾಷ್ಟ್ರಪತಿ ಆಳ್ವಿಕೆ ಅಂತ್ಯ; ಮುಖ್ಯಮಂತ್ರಿಯಾಗಿ ಯುಮ್ನಾಮ್ ಖೇಮ್ ಚಂದ್ ಸಿಂಗ್ ಪ್ರಮಾಣವಚನ

Photo Credit: PTI
ಇಂಫಾಲ್: ಮಣಿಪುರದ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಾಮ್ ಖೇಮ್ಚಂದ್ ಸಿಂಗ್ ಬುಧವಾರ ಇಂಫಾಲ್ ನ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಫೆಬ್ರವರಿ 2025ರಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಗೊಳಿಸಲಾಯಿತು.
ಖೇಮ್ಚಂದ್ ಸಿಂಗ್ ಅವರೊಂದಿಗೆ ಬಿಜೆಪಿಯ ನೆಮ್ಚಾ ಕಿಪ್ಗೆನ್, ಗೋವಿಂದಾಸ್ ಕೊಂಥೌಜಮ್, ನಾಗಾ ಪೀಪಲ್ಸ್ ಫ್ರಂಟ್ ನ ಲೋಸಿ ದಿಖೋ ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಲೋಕೆನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ನೆಮ್ಚಾ ಕಿಪ್ಗೆನ್ ಅವರು ರಾಜ್ಯದ ಮೊದಲ ಕುಕಿ ಸಮುದಾಯದ ಉಪಮುಖ್ಯಮಂತ್ರಿಯಾಗಲಿದ್ದು, ಲೋಸಿ ದಿಖೋ ಮತ್ತೊಬ್ಬ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಪ್ರಮಾಣವಚನ ಸಮಾರಂಭದಲ್ಲಿ ಬಿಜೆಪಿ ಶಾಸಕರು, ಪಕ್ಷದ ಹಿರಿಯ ನಾಯಕರು ಹಾಗೂ ಎನ್ಡಿಎ ಮೈತ್ರಿ ಕೂಟದ ಪ್ರಮುಖರು ಉಪಸ್ಥಿತರಿದ್ದರು. ಹೊಸ ಸಂಪುಟದ ರಚನೆಯೊಂದಿಗೆ ರಾಜ್ಯದಲ್ಲಿ ಶಾಂತಿ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಖೇಮ್ಚಂದ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ವಿಕಸಿತ್ ಭಾರತ್’ ಮತ್ತು ʼವಿಕಸಿತ್ ಮಣಿಪುರ’ ಗುರಿ ಸಾಧನೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಖೇಮ್ಚಂದ್ ಸಿಂಗ್ ದೀರ್ಘಕಾಲದ RSS ಕಾರ್ಯಕರ್ತರಾಗಿದ್ದು, ರಾಜ್ಯ ರಾಜಕಾರಣದಲ್ಲಿ ವಿವಿಧ ಸಂಘಟನೆ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ವಹಿಸಿಕೊಂಡ ಅನುಭವ ಹೊಂದಿದ್ದಾರೆ. ಟೇಕ್ವಾಂಡೋ ಕ್ರೀಡೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವ ಅವರು ಟೇಕ್ವಾಂಡೋ ಫೆಡರೇಶನ್ ಆಫ್ ಇಂಡಿಯಾದ ಮಾಜಿ ಉಪಾಧ್ಯಕ್ಷರಾಗಿದ್ದಾರೆ.
2012ರ ವಿಧಾನಸಭಾ ಚುನಾವಣೆಯಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಿ ಸೋಲು ಕಂಡ ಅವರು, 2013ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಸಿಂಗಜಮೇ ಯುಮ್ನಮ್ ಲೈಕೈನಲ್ಲಿ ಜನಿಸಿದ ಅವರು 1978ರಲ್ಲಿ ಇಂಫಾಲ್ ನ ರಾಮ್ ಲಾಲ್ ಪಾಲ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಅವರಿಗೆ ಪತ್ನಿ ಹಾಗೂ ಒಬ್ಬ ಪುತ್ರ ಇದ್ದಾರೆ.
ರಾಜ್ಯದಲ್ಲಿ ಹಿಂಸಾಚಾರ ಮತ್ತು ಆಡಳಿತ ವೈಫಲ್ಯ ಆರೋಪಗಳ ನಡುವೆ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಕಳೆದ ವರ್ಷದ ಫೆ. 9ರಂದು ರಾಜೀನಾಮೆ ಸಲ್ಲಿಸಿದ್ದರು. ಬಳಿಕ ರಾಜ್ಯದಲ್ಲಿ ಕರ್ಫ್ಯೂ ಹಾಗೂ ಇಂಟರ್ನೆಟ್ ನಿರ್ಬಂಧ ಕ್ರಮಗಳು ಜಾರಿಯಾಗಿದ್ದರೂ ಹಿಂಸಾಚಾರ ಮುಂದುವರಿದಿತ್ತು. ಕುಕಿ–ಝೋ ಸಮುದಾಯ ಸೇರಿದಂತೆ ಹಲವು ಗುಂಪುಗಳ ನಡುವೆ ಉದ್ಭವಿಸಿದ ಜನಾಂಗೀಯ ಉದ್ವಿಗ್ನತೆ ರಾಜಕೀಯ ಅಸ್ಥಿರತೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲೇ ನಾಯಕತ್ವ ಬದಲಾವಣೆ ನಡೆದು, ಹೊಸ ಸರ್ಕಾರ ರಚನೆಯಾಗಿದೆ.







