Zee ಸ್ಥಾಪಕ ಸುಭಾಷ್ ಚಂದ್ರ ಅವರಿಗೆ ಹಿನ್ನಡೆ: ಸಾಲ ಇತ್ಯರ್ಥ ಆದೇಶಕ್ಕೆ NCLT ತಡೆ

ಜೀ ಗ್ರೂಪ್ ಸಂಸ್ಥಾಪಕ ಸುಭಾಷ್ಚಂದ್ರ | Photo: Zeenews
ಹೊಸದಿಲ್ಲಿ: 22,000 ಕೋಟಿ ರೂ.ಗೂ ಅಧಿಕ ಸಾಲಬಾಕಿಗೆ ಪ್ರತಿಯಾಗಿ ಕೇವಲ 6.5 ಕೋಟಿ ರೂ.ಗಳನ್ನು ಪಾವತಿಸಿ ದಿವಾಳಿತನ ಪ್ರಕ್ರಿಯೆಯಿಂದ ಮುಕ್ತಿ ಪಡೆಯಲು ಝೀ ಗ್ರೂಪ್ ಸ್ಥಾಪಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸುಭಾಷ್ ಚಂದ್ರ ಅವರಿಗೆ ಅನುಮತಿಸಿದ್ದ ಆ.25ರ ಆದೇಶವನ್ನು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯ (ಎನ್ಸಿಎಲ್ಟಿ) ಐವರು ಸದಸ್ಯರ ಪೀಠವು ಮಂಗಳವಾರ ತಡೆಹಿಡಿದಿದೆ.
ಇಬ್ಬರು ಸದಸ್ಯರ ಪೀಠದಲ್ಲಿ ಭಿನ್ನಾಭಿಪ್ರಾಯ ಮೂಡಿದ ನಂತರ ನಿಲೇಶ್ ಶರ್ಮಾ ಅವರ ಏಕಸದಸ್ಯ ಪೀಠವು ಟೈ-ಬ್ರೇಕರ್ ಆಗಿ ಸುಭಾಷ್ಚಂದ್ರಗೆ ನಿರಾಳತೆ ನೀಡಿದ್ದ ಆ.25ರ ಆದೇಶವನ್ನು ಹೊರಡಿಸಿತ್ತು.
ವಿವಾದಕ್ಕೆ ಸಂಬಂಧಿಸಿದ ಎಲ್ಲರಿಗೆ ನೋಟಿಸ್ ಹೊರಡಿಸಿರುವ ಐವರು ಸದಸ್ಯರ ವಿಶೇಷ ಪೀಠವು, ಮುಂದಿನ ಆದೇಶದವರೆಗೆ ಸುಭಾಷ್ ಚಂದ್ರ ಅವರು ತನ್ನ ಯಾವುದೇ ಆಸ್ತಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಮಾರಾಟ ಮಾಡಲು ಅಥವಾ ವರ್ಗಾವಣೆ ಮಾಡಲು ನಿರ್ಬಂಧ ವಿಧಿಸಿದೆ.
ಕೇವಲ 6.5 ಕೋಟಿ ರೂ.ಪಾವತಿಸಿ ಝೀ ಗ್ರೂಪ್ ಕಂಪೆನಿಗಳ ಸಾಲಕ್ಕೆ ನೀಡಿದ್ದ ವೈಯಕ್ತಿಕ ಗ್ಯಾರಂಟಿಗಳನ್ನು ಇತ್ಯರ್ಥಗೊಳಿಸುವ ಸುಭಾಷ್ಚಂದ್ರ ಪ್ರಸ್ತಾವವನ್ನು ಅನುಮೋದಿಸಿದ್ದ ಏಕಸದಸ್ಯ ಪೀಠದ ಆದೇಶವು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ತನ್ನ ವಿರುದ್ಧದ ಈ ಬೆಳವಣಿಗೆಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕಾರಣ ಎಂದು ಸುಭಾಷ್ಚಂದ್ರ ಆರೋಪಿಸಿದ್ದರು.
ತಾನು ಯಾವುದೇ ಬ್ಯಾಂಕ್ಗಳಿಂದ ವೈಯಕ್ತಿಕವಾಗಿ 22,000 ಕೋಟಿ ರೂ. ಸಾಲ ಪಡೆದಿಲ್ಲ, ಬದಲಿಗೆ ಗ್ರೂಪ್ನ ವಿವಿಧ ಕಂಪೆನಿಗಳ ಸಾಲಕ್ಕೆ ವೈಯಕ್ತಿಕ ಗ್ಯಾರಂಟಿ ಮಾತ್ರ ನೀಡಿದ್ದೆ ಎಂದು ಅವರು ಪ್ರತಿಪಾದಿಸಿದ್ದರು.
ಸಾಲ ಮರುಪಾವತಿಯನ್ನು ಸ್ವೀಕರಿಸಲು ಒಪ್ಪಿದ ಕೆಲವು ಸಾಲದಾತರು ಅವರ ನಿಕಟ ಸಂಬಂಧಿಕರಿಗೆ ಸೇರಿದ ಕಂಪೆನಿಗಳಾಗಿವೆ ಎಂಬ ಆರೋಪವೂ ವಿವಾದವನ್ನು ಹೆಚ್ಚಿಸಿತ್ತು.
ಪ್ರಕರಣದಲ್ಲಿ ಯಾವುದೇ ಸ್ಪಷ್ಟ ಬಹುಮತದ ತೀರ್ಪು ಬಾರದ ಹಿನ್ನೆಲೆಯಲ್ಲಿ, ಎನ್ಸಿಎಲ್ಟಿ ಅಧ್ಯಕ್ಷ ನ್ಯಾಯಮೂರ್ತಿ ಅನುಪಿಂದರ್ ಸಿಂಗ್ ಗ್ರೆವಾಲ್ ಅವರ ನಿರ್ದೇಶನದ ಮೇರೆಗೆ ಎನ್ಸಿಎಲ್ಟಿ ಇತಿಹಾಸದಲ್ಲೇ ಮೊದಲ ಬಾರಿಗೆ ಐವರು ಸದಸ್ಯರ ವಿಶೇಷ ಪೀಠವನ್ನು ರಚಿಸಿ ಹೊಸದಾಗಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ. ಮೂವರು ಸದಸ್ಯರ ಹಿಂದಿನ ಅಭಿಪ್ರಾಯಗಳಲ್ಲಿ ಒಬ್ಬರು ಕೆಲವು ನಿಬಂಧನೆಗಳೊಂದಿಗೆ ಒಪ್ಪಿಗೆ ಸೂಚಿಸಿದರೆ, ಮತ್ತೊಬ್ಬರು ಸಂಪೂರ್ಣವಾಗಿ ತಿರಸ್ಕರಿಸಿದ್ದರು ಮತ್ತು ಮೂರನೆಯವರು ಭಿನ್ನವಾದ ಶರತ್ತುಗಳೊಂದಿಗೆ ಅನುಮೋದಿಸಿದ್ದರು. ಹೀಗಾಗಿ ಅಲ್ಲಿ ಯಾವುದೇ ಸ್ಪಷ್ಟ ಬಹುಮತದ ತೀರ್ಪು ಮೂಡಿಬಂದಿರಲಿಲ್ಲ ಎಂದು ಎನ್ಸಿಎಲ್ಟಿ ಹೇಳಿದೆ.






