ಈ ನೆಲದ ಔದಾರ್ಯವೇ ಬಾಬಾ ಸಾಹೇಬರ ಕನಸುಗಳು

ಆಸಕ್ತರ ಬಳಗವೆಲ್ಲ ಸೇರಿ ಬಾಬಾ ಸಾಹೇಬರ ಕುರಿತು ಹತ್ತು ದಿನಗಳ ‘ಬಹುರೂಪಿ ಬಾಬಾಸಾಹೇಬ ಸಮತೆಯೆಡೆಗೆ’ ಎನ್ನುವ ಶೀರ್ಷಿಕೆಯೊಂದಿಗೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಹಾಗೂ ಜನವರಿ 11ರಿಂದ 18ರವರೆಗೆ ‘ನಮ್ಮ ನಡಿಗೆ ಆಲೋಚನೆಗಳ ಕಡೆಗೆ’ ಎಂಬ ಒಂದು ಪ್ರಮುಖ ವೈಚಾರಿಕ ಚಿಂತನೆಯಲ್ಲಿ ತೊಡಗಿಸಿದ್ದು ಅಪೂರ್ವವಾದ ಸಂವೇದನಾಶೀಲತೆಗೆ ಸಾಕ್ಷಿಯಾಯಿತು.
ಜಗತ್ತಿನ ಯಾವ ಮೂಲೆಯಲ್ಲಿ ನಿಂತು ನೋಡಿದರೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕಾಣುತ್ತಾರೆ. ಅಂತಹ ಘನತೆಯ ವಿದ್ವತ್ತು ಅವರದು. ಅವರೊಂದು ಮಾನವೀಯತೆಯ ಮಹಾಸಾಗರ. ಇವರ ಚಿಂತನೆಯಲ್ಲಿ ನಾವು ಮುಳುಗಿ ಎಚ್ಚರದಲ್ಲೇ ಇರಬೇಕು ಎನ್ನುವುದನ್ನು ಇತ್ತೀಚೆಗೆ ನಮ್ಮ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಇವರೊಂದಿಗೆ ರಂಗಾಯಣದ ರಂಗಕರ್ಮಿಗಳು ಮತ್ತು ಅತ್ಯಂತ ಕ್ರಿಯಾಶೀಲರಾದ ಡಾ. ನರೇಂದ್ರಕುಮಾರ್, ಡಾ. ಸೋಮಶೇಖರ್ ಮತ್ತು ಗುಲ್ಬರ್ಗಾದ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು ಲೇಖಕ ಅಪ್ಪುಗೆರೆ ಸೋಮಶೇಖರ್, ಇವರ ಬೆನ್ನೆಲುಬಾಗಿ ದೇವರಾಜು ಬಸವರಾಜಣ್ಣ ಮತ್ತು ಇವರೆಲ್ಲರ ಕನಸಿಗೆ ಒತ್ತಾಸೆಯಾಗಿ ನಿಂತಿದ್ದು ಕರ್ನಾಟಕ ಸರಕಾರದ ಮಂತ್ರಿ ಡಾ. ಎಚ್.ಸಿ. ಮಹದೇವಪ್ಪ ಮತ್ತು ಕನ್ನಡ, ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಹೀಗೆ ಅನೇಕ ಆಸಕ್ತರ ಬಳಗವೆಲ್ಲ ಸೇರಿ ಬಾಬಾ ಸಾಹೇಬರ ಕುರಿತು ಹತ್ತು ದಿನಗಳ ‘ಬಹುರೂಪಿ ಬಾಬಾಸಾಹೇಬ ಸಮತೆಯೆಡೆಗೆ’ ಎನ್ನುವ ಶೀರ್ಷಿಕೆಯೊಂದಿಗೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಹಾಗೂ ಜನವರಿ 11ರಿಂದ 18ರವರೆಗೆ ‘ನಮ್ಮ ನಡಿಗೆ ಆಲೋಚನೆಗಳ ಕಡೆಗೆ’ ಎಂಬ ಒಂದು ಪ್ರಮುಖ ವೈಚಾರಿಕ ಚಿಂತನೆಯಲ್ಲಿ ತೊಡಗಿಸಿದ್ದು ಅಪೂರ್ವವಾದ ಸಂವೇದನಾಶೀಲತೆಗೆ ಸಾಕ್ಷಿಯಾಯಿತು.
ಈ ಎಂಟು ದಿನಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷವಾಗಿ ಜನಸಾಮಾನ್ಯರನ್ನು ಒಳಗೊಳ್ಳುವಂತಾಗಿದ್ದವು. ನಾವು ನಾಳೆಗಳಿಗಾಗಿ ವರ್ತಮಾನದಲ್ಲಿ ನಿಂತು ಇತಿಹಾಸ ನೋಡಬೇಕು. ಇದನ್ನು ದೇವನೂರ ಮಹಾದೇವ ಎಷ್ಟು ಸರಳವಾಗಿ ಹೇಳಿದ್ದಾರೆಂದರೆ ‘‘ಯಾವುದನ್ನೇ ಆದರೂ ನಾವು ಒಂದು ಹೆಜ್ಜೆ ಹಿಂದೆ ನಿಂತು ನೋಡುವ ಕ್ರಮವಿದೆಯಲ್ಲ ಆಗ ನಾಳೆಯ ಸ್ಪಷ್ಟತೆ ಸಿಗುತ್ತದೆ.’’ ಈ ಮಾತನ್ನೇ ಮುಂದುವರಿಸುವುದಾದರೆ ಕುವೆಂಪುರವರು ಹೇಳಿದ ‘ಶ್ರೀ ಸಾಮಾನ್ಯನೇ ಜಗಮಾನ್ಯ’ ಎನ್ನುವುದನ್ನು ರಂಗಾಯಣ ಬಹುರೂಪಗಳಲ್ಲಿ ಅಂಬೇಡ್ಕರ್ ಅವರನ್ನು ಎಲ್ಲರಿಗೂ ತೋರಿಸುವ ಪ್ರಯತ್ನ ಮಾಡಿತು. ಬೀದಿ ನಾಟಕದಿಂದ ಚಾಲನೆ, ಚಲನೆಗೊಂಡ ಈ ಕಾರ್ಯಕ್ರಮ ‘ಪಂಜಾಬ್‌ನ ಅಂತರ್‌ರಾಷ್ಟ್ರೀಯ ಗಾಯಕಿ ಗಿನ್ನಿ ಮಾಯಿ ಅವರ ಅದ್ಭುತ ಹಾಡಿನ ಕಲರವದೊಂದಿಗೆ ನಾಳೆಯ ಸಮತೆಯನ್ನು ಅನುರಣಿಸುತ್ತಿತ್ತು.
ದಿನಾಂಕ 17ಮತ್ತು 18ರಂದು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ಅದರಲ್ಲಿ ವ್ಯಕ್ತವಾದ ಪ್ರಖರ ವೈಚಾರಿಕ ಚಿಂತನೆ ಮತ್ತೆ ಮತ್ತೆ ಕಾಡಿಸಿ, ಚಿಂತಿಸುವಂತಾಗಿದೆ. ಇದರ ಸಹಯೋಗ ಡಾ.ಬಿ.ಆರ್ ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು. ಈ ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ನೆನಪು ಮಾಡುವುದಾದರೆ ‘ದಿ ವೈರ್’ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಮಾತಿಗಾಗಿ ಇಡೀ ಸಭಾಂಗಣ ಕೇಳುವ ಕಿವಿಯಾಗಿತ್ತು. ‘ಫ್ಯಾಶಿಸಂ’ ಅನ್ನು ಪ್ರಾರಂಭದಲ್ಲೇ ಪ್ರತಿರೋಧ ತೋರದಿದ್ದರೆ ಅದು ದೇಶ ಮತ್ತು ಜನರನ್ನು ನಾಶ ಮಾಡುತ್ತದೆ. ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿದ್ದ ಭಾರತ ಮತ್ತು ಅಮೆರಿಕದಲ್ಲಿ ಕಾಣುತ್ತಿರುವುದು ಇದನ್ನೇ. ಜರ್ಮನಿ ಇಟಲಿಗಳಲ್ಲಿ ಏನಾಯಿತು ಎಂಬ ಇತಿಹಾಸ ಕಣ್ಣ ಮುಂದಿದೆ. ಪ್ರಜಾಪ್ರಭುತ್ವ ನಿರಂಕುಶತ್ವಕ್ಕೆ ಹೊರಳುವ ಮೊದಲೇ ಪ್ರತಿರೋಧ ತೋರದಿದ್ದರೆ ನಾಳೆಗಳು ಕಠಿಣವಾಗಿರುತ್ತವೆ. ‘ಫ್ಯಾಶಿಸಂ’ ಎಂಬುದು ಎಂದಿಗೂ ದೊಡ್ಡ ಘೋಷಣೆಯೊಂದಿಗೆ ಬರುವುದಿಲ್ಲ. ಅಧಿಕಾರ ಹಿಡಿದ ನಂತರ ತನಗೆ ಬೇಕಾದ ಕಾನೂನು ಜಾರಿಗೆಗೊಳಿಸುತ್ತದೆ. ಭಾಷೆ, ಧರ್ಮ, ಸಂಸ್ಕೃತಿ ಹೆಸರಲ್ಲಿ ಸಾಮಾಜಿಕ ಶ್ರೇಣೀಕರಣವನ್ನು ಜೀವಂತವಾಗಿರಿಸುತ್ತದೆ ಎನ್ನುತ್ತಾರೆ ಸಿದ್ಧಾರ್ಥ ವರದರಾಜನ್.
ಅಂಬೇಡ್ಕರ್‌ರನ್ನು ಹೊಗಳುವ ನಾಯಕರು ಅವರ ಹೋರಾಟದ ಮಾದರಿಯಲ್ಲಿ ನಡೆದವರ ವಿರುದ್ಧವೇ ಪ್ರಕರಣವನ್ನು ದಾಖಲಿಸುವುದು ದ್ವಂದ್ವ ನಿಲುವಲ್ಲವೇ? ಹೀಗೆ ಸಂವಿಧಾನ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಇವುಗಳ ಘನತೆಯ ಕುರಿತು ಇಂತಹವುಗಳನ್ನು ಅಪ್ರಸ್ತುತಗೊಳಿಸುತ್ತಿರುವುದನ್ನು ಕುರಿತು, ಗಂಭೀರವಾಗಿ ಮಾತನಾಡಿದರು. ಭಾರತದ ಸಂವಿಧಾನ ಆಶಯ ಮತ್ತು ಬಿಕ್ಕಟ್ಟುಗಳ ಕುರಿತು ಮಾತನಾಡಿದ ಪ್ರೊ.ಎ. ನಾರಾಯಣ್ ರವರ ಮಾತು ಸಭಿಕರಲ್ಲಿ ವಿದ್ಯುತ್ ಸಂಚಲನಕ್ಕೆ ಕಾರಣವಾಯಿತು. ಅವರ ಮಾತುಗಳು ಹೀಗಿವೆ: ‘‘ಈ ದೇಶದಲ್ಲಿ ಸಂವಿಧಾನ ಎಂಬ ಪರಿಕಲ್ಪನೆ ಹುಟ್ಟುವ ಹಂತದಿಂದ ಮುಂದೆ ಹುಟ್ಟಲಿರುವ ಸಂವಿಧಾನ ಅದು ನಮ್ಮ ವೈರಿ. ಅದನ್ನು ನಾವು ಶತಾಯಗತಾಯ ವಿರೋಧಿಸುತ್ತೇವೆ ಎಂದು ಪಣತೊಟ್ಟ ಶಕ್ತಿಗಳು ಇವತ್ತು ಭಾರತದಲ್ಲಿ ಬೃಹತ್ ಪ್ರಮಾಣದ ರಾಜಕೀಯ ಶಕ್ತಿಯನ್ನು ಅವಾಹಿಸಿಕೊಂಡು ಆಳ್ವಿಕೆ ನಡೆಸುತ್ತಿವೆ. ಸಂವಿಧಾನದ ಬಿಡಿಬಿಡಿಯಾದಂತಹ ಬಿಕ್ಕಟ್ಟುಗಳು ಈ ದೊಡ್ಡ ಬಿಕ್ಕಟ್ಟಿನ ಭಾಗ ಎಂದು ನಾವು ಊಹಿಸದೇ ಹೋದರೆ ನಮಗೆ ಬಿಕ್ಕಟ್ಟಿಗೆ ಪರಿಹಾರ ಗೋಚರವಾಗುವುದು ಸಾಧ್ಯವಿಲ್ಲ’’ ಎಂದು ಸಂವಿಧಾನ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವುದನ್ನು ಅತ್ಯಂತ ಸಂಕ್ಷಿಪ್ತವಾಗಿ ಅರ್ಥೈಸಿದರು. ಸಂವಿಧಾನವನ್ನು ಉಳಿಸುವುದಕ್ಕೆ ನಾವು ಕಟಿಬದ್ಧರಾಗಬೇಕು ಎನ್ನುವುದನ್ನು ಸ್ಪಷ್ಟವಾಗಿ ಹೇಳುವ ಮೂಲಕ ನಮ್ಮೆಲ್ಲರನ್ನು ಎಚ್ಚರಿಸಿದರು. ಇಂತಹ ಪ್ರಖರ ಚಿಂತನಾಗೋಷ್ಠಿಗಳು ಎರಡು ದಿನ ನಡೆದಿದ್ದಾದರೂ ಆ ಎಲ್ಲಾ ಚಿಂತನೆಗಳು ನಾಳೆಗೂ ಉಳಿದಿದ್ದು ವಿಚಾರ ಸಂಕಿರಣದ ವಿಶೇಷವಾಗಿತ್ತು.
ಬೆಂಗಳೂರಿನ ದಟ್ಟ ಜನಸಾಂದ್ರತೆಯಲ್ಲಿದ್ದವರಿಗೆ ಮೈಸೂರಿಗೆ ಹೋದರೆ ಮೈಸೂರು ವಿಶ್ರಾಂತಿಯಲ್ಲಿದೆ ಎಂದೆನಿಸುತ್ತದೆ. ಈ ಸಲ ಮೈಸೂರಿಗೆ ಹೋದರೆ ದೇವನೂರ ಮಹಾದೇವರವರನ್ನು ಭೇಟಿಯಾಗಲೇಬೇಕೆಂದು ನಿಶ್ಚಯಿಸಿದ್ದೆ. ‘ವೈಕಂ ಪ್ರಶಸ್ತಿ’ ಬಂದಾಗ ಅವರ ಬಗ್ಗೆ ಬರೆದಿದ್ದೆ. ಆನಂತರ ಯಾವುದೋ ವಿಷಯಕ್ಕೆ ನನಗೆ ಕ್ಲಾಸ್ ತೆಗೆದುಕೊಂಡಿದ್ದರು. ಆನಂತರ ಇವರ ಆರೋಗ್ಯದ ಬಗ್ಗೆ ರವಿಭಾಗಿಯೊಂದಿಗೆ ಆಗಾಗ ಮಾತನಾಡಿದಾಗಲೆಲ್ಲ ಇವತ್ತು ಮಾತನಾಡಲೇಬೇಕು ಅನಿಸುತ್ತಿತ್ತು. ಆದರೆ ಆಗಿರಲಿಲ್ಲ. ಮೊನ್ನೆ ನಮ್ಮ ನರೇಂದ್ರಕುಮಾರ್ ಫೋನ್ ಮಾಡಿ ಎರಡು ದಿನದ ರಾಷ್ಟ್ರೀಯ ವಿಚಾರಣಾ ಸಂಕಿರಣಕ್ಕೆ ಬರಬೇಕು ಎಂದಾಗ ಖುಷಿ ಆಯಿತು ಮತ್ತು ಕವಿತಾ ಮೊದಲು ದೇವನೂರರನ್ನು ಭೇಟಿಯಾಗಲೇಬೇಕೆಂದಿದ್ದು, 16ನೇ ತಾರೀಕು ಸಂಜೆ ಅವರ ಮನೆಗೆ ಹೋದೆವು. ನನಗೆ ಸಣ್ಣ ತಳಮಳವಿತ್ತು. ಏನಾದರೂ ಓದಿದ್ದರೆ ಆ ಓದಿನ ಬಗ್ಗೆ ಏನನ್ನಿಸುತ್ತದೆ ಎಂದು ಕೇಳುತ್ತಾರೆ. ಆಗ ನನಗೆ ತಕ್ಷಣಕ್ಕೆ ಏನು ನೆನಪು ಬರುವುದಿಲ್ಲ. ಆದರೂ ಧೈರ್ಯದಿಂದ ನಿಂತಿದ್ದೆವು. ಸುಮಿತ್ರಾ ಮೇಡಂ ನಗುನಗುತ್ತಾ ಸ್ವಾಗತಿಸಿದ್ದರು. ಮಹಾದೇವ ಮಲಗಿದ್ದವರು ಈಗಷ್ಟೇ ಎದ್ದಿದ್ದಾರೆ ಎಂದರು. ಆಗ ಸ್ವಲ್ಪ ನಿರಾಳವಾಯಿತು. ಅವರ ಮನಸ್ಸು ಪ್ರಶಾಂತವಾಗಿರುತ್ತದೆ ಎಂದು ಭಾವಿಸುತ್ತಿರುವಾಗ ಮಹಾದೇವ ಅವರು ಒಳಗಿನಿಂದ ಬಂದು ಆತ್ಮೀಯವಾಗಿ ನಮ್ಮನ್ನು ಕಂಡಾಗ ನಮ್ಮಿಬ್ಬರಿಗೂ ಸಂತೋಷವಾಯಿತು. ನಾವು ಮೈಸೂರಿಗೆ ಬಂದ ಕಾರಣ ತಿಳಿಸಿದೆವು. ಬೇರೆ ಬೇರೆ ವಿಷಯ ಮಾತನಾಡುತ್ತಾ ‘ವಾರ್ತಾಭಾರತಿ’ಯಲ್ಲಿ ನಿಮ್ಮ ಕಾಲಂ ಅನ್ನು ಮೇಡಂ ಓದುತ್ತಿರುತ್ತಾರೆ ಎಂದು ಹೇಳಿದರು. ಆಗ ನನಗೆ ಇನ್ನೂ ಖುಷಿ ಆಯಿತು. ಇತ್ತೀಚೆಗೆ ಅವರು ಬರೆದ ಲೇಖನದ ಬಗ್ಗೆ ಮಾತನಾಡುತ್ತಾ ದಲಿತ ಸಾಹಿತ್ಯ ಶಿಬಿರದಲ್ಲಿ ಡಾ. ನೆಲ್ಲುಕುಂಟೆ ವೆಂಕಟೇಶ್ ತುಂಬಾ ಗಂಭೀರವಾಗಿ ಮಾತನಾಡಿದ್ದಾರೆ. ನಾವೆಲ್ಲ ಅದನ್ನು ಗಮನಿಸಬೇಕು ಅಂದರು. ಇದ್ದಷ್ಟು ಹೊತ್ತು ದೇವನೂರ ರವರು ಲವಲವಿಕೆಯಿಂದ ಮಾತನಾಡಿದರು. ಹಾಗೇ ಎಸ್. ಮಂಜುನಾಥ್ ಅವರ ‘ಹೆಬ್ಬೆರಳ ನಿಬ್ಬೆರಗು’ ಕವನ ಸಂಕಲನವನ್ನು ಅವರಿಗೆ ಕೊಟ್ಟೆ. ನಾನು ಓದುತ್ತೇನೆ ಎಂದರು. ತುಂಬಾ ಒಳ್ಳೆಯ ಕವನ ಸಂಕಲನ ಎಂದೆ. ಹೊರಡುವಾಗ ಅವರ ಮನೆಯ ಬಾಗಿಲಿಗೆ ತೋರಣದಂತಿದ್ದ ವೀಳ್ಯದೆಲೆ ಬಳ್ಳಿಯ ಎಲೆಗಳನ್ನು ಕೊಯ್ಯಬಹುದೇ ಎಂದೆ. ಅದಕ್ಕೆ ನಮ್ಮ ಕವಿತಾ ‘‘ಬೇಡ ಕತ್ತಲಾಗಿದೆ. ಇಳಿಸಂಜೆಯಲ್ಲಿ ಬಳ್ಳಿಯನ್ನು ನೋಯಿಸಬಾರದು’’ ಎಂದರು. ನಮ್ಮನ್ನು ಬೀಳ್ಕೊಡಲು ನಿಂತಿದ್ದ ದೇವನೂರರವರು ‘‘ಬಳ್ಳಿಗೆ ಸ್ಸಾರಿ ಹೇಳಿ ಕೊಯ್ಯಬಹುದು’’ ಅಂದರು. ಆಗ ಈ ಮಾತು ಬಳ್ಳಿಗೂ ಕೇಳಿಸಿರಬಹುದು ಎಂದೆನಿಸಿತು ನನಗೆ. ‘ದೇವನೂರು ಎಂದರೆ ಹಾಗೆ’ ಡಾ. ಮಿತಾಗೆ ಹೇಳಿ ಎರಡು ಎಲೆಗಳನ್ನು ಕೊಯ್ದು ನಮ್ಮಿಬ್ಬರಿಗೂ ಒಂದೊಂದು ಎಲೆ ಕೊಟ್ಟರು’. ಅಲ್ಲಿಂದ ಬರುವಾಗ ಬಹುರೂಪಿ ಆಹ್ವಾನ ಪತ್ರಿಕೆಯಲ್ಲಿದ್ದ ‘ಸಮತೆ’ ಪದ ನೆನಪಿಗೆ ಬರುತ್ತಿತ್ತು. ಈ ಪದವನ್ನು ದೇವನೂರು ಹೇಳಿರಬಹುದೇ ಅನಿಸಿತು. ನಾವು ಮಾತನಾಡಿದ ಗಳಿಗೆಯಷ್ಟು ಸುಮಿತ್ರಮೇಡಂ ನಗುನಗುತ್ತಾ ಉತ್ಸಾಹದಲ್ಲಿದ್ದರು. ದೇವನೂರ ಮಹಾದೇವರ ಉಸಿರು, ಉತ್ಸಾಹ, ಚೈತನ್ಯ ಸುಮಿತ್ರಾ ಮೇಡಂರವರೇ ಆಗಿದ್ದಾರೆ ಎಂದೆನಿಸಿತು. ಸಮತೆಯನ್ನೇ ಉಸಿರಾಡುವ ದೇವನೂರ ಮಹಾದೇವ ನಮ್ಮಂತಹವರೆಲ್ಲರಿಗೂ ಬಹಳ ದೊಡ್ಡ ಸ್ಫೂರ್ತಿ. ಅವರೊಟ್ಟಿಗೆ ಕಳೆದ ಎಲ್ಲಾ ಕ್ಷಣಗಳು ಒಂದು ಅನುಭೂತಿ ಪಡೆದಂತೆ ಆಗಿರುತ್ತದೆ.
ಬಹುರೂಪಿ ವಿಚಾರಣ ಸಂಕಿರಣದಲ್ಲಿ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಡಾ. ಎಚ್.ಸಿ ಮಹದೇವಪ್ಪ ಇಂತಹ ಕಾರ್ಯಕ್ರಮಗಳಿಗೆ ತುಂಬಾ ಉತ್ಸಾಹದಿಂದ ಹಂಬಲದಿಂದ ಭಾಗವಹಿಸುತ್ತಾರೆ. ಅವರ ಪಾಲ್ಗೊಳ್ಳುವಿಕೆ ಬಾಬಾ ಸಾಹೇಬರ ಕಲ್ಯಾಣದ ಕನಸುಗಳನ್ನು ಹೆಚ್ಚು ಹೆಚ್ಚು ತೊಡಗಿಸುವುದಾಗಿರುತ್ತದೆ. ಆ ಕಾರಣಕ್ಕೆ ಇಂತಹ ವಿಚಾರ ಸಂಕಿರಣಕ್ಕೆ, ಸಂಘಟಕರಿಗೆ ಇನ್ನು ಹೆಚ್ಚಿನ ಧನ ಸಹಾಯ ಕೇಳಬೇಕಿತ್ತು ಎಂದು ಮಾತನಾಡಿದ್ದು ಸಂಘಟಕರಿಗೆ ಈ ವಿಚಾರ ಸಂಕಿರಣದ ಅರ್ಥವನ್ನು ಹೆಚ್ಚಿಸಿತ್ತು. ಮಹದೇವಪ್ಪನವರು ವೈಚಾರಿಕ ಚಿಂತನಶೀಲರು ಎನ್ನುವುದನ್ನು ಅವರ ಭಾಷಣಗಳಲ್ಲಿ ಅರ್ಥ ಮಾಡಿಕೊಂಡಿದ್ದೇವೆ. ಇಂತಹ ಕ್ರಿಯಾಶೀಲ ಸಚಿವರು ನಾಡಿನ ಬೇರೆ ಬೇರೆ ಕಡೆ ಅಂದರೆ ಮಂಗಳೂರು, ಶಿವಮೊಗ್ಗ, ಬೀದರ್, ಗುಲ್ಬರ್ಗಾ ಕಡೆ ಅಂಬೇಡ್ಕರ್ ಅರಿವನ್ನು ಸಾಕಾರಗೊಳಿಸುವುದಕ್ಕೆ ಇಂತಹ ಕಾರ್ಯಕ್ರಮವನ್ನು ರೂಪಿಸಿದರೆ ಆ ಭಾಗದ ಜನರು ಕೂಡ ಬಾಬಾ ಸಾಹೇಬರನ್ನು ಮತ್ತು ಇತರ ಚಿಂತಕರನ್ನು ಅರಿಯಲು ಸಾಧ್ಯವಾಗುತ್ತದೆ. ಹಾಗೆಯೇ ಸಂಸ್ಕೃತಿ ಇಲಾಖೆಯು ಸಹ ರಾಜ್ಯದ ಎಲ್ಲಾ ರಂಗಾಯಣಗಳಲ್ಲೂ ಬಹುರೂಪಿ ಉತ್ಸವ ಆಯೋಜಿಸಿದರೆ ಸಾಮರಸ್ಯದ ಆಶಯಗಳಿಗೆ ರೆಕ್ಕೆ ಕಟ್ಟಬಹುದು. ನಾಡಿನ ಜನತೆಗೆ ಸರಕಾರ ಹಸಿವು ಮುಕ್ತ ಕರ್ನಾಟಕ ಮಾಡಲು ಅನ್ನ ಕೊಟ್ಟಿದೆ. ಹಾಗೆಯೇ ಮಾನಸಿಕ ದಾರಿದ್ರ್ಯ ಮುಕ್ತ ಮಾಡಲು ಇಂತಹ ವಿಚಾರ ಸಂಕಿರಣಗಳು ಅತ್ಯಗತ್ಯ ಎನ್ನುವುದು ಅವರಿಗೂ ಗೊತ್ತಿದೆ. ಇಂತಹದ್ದನ್ನು ಮುಂದುವರಿಸಿ ಎನ್ನುವುದು ನಮ್ಮೆಲ್ಲರ ಆಶಯ.







