ದಲಿತ ಚಳವಳಿಯಿಂದ ನಾನು ಉಸಿರಾಡುತ್ತಿದ್ದೇನೆ

ಒಮ್ಮೆ ಪುಸ್ತಕದ ಪ್ರೀತಿ ಬಂದುಬಿಟ್ಟರೆ ನಮ್ಮೊಳಗೆ ಸಂತಸ ಹೆಚ್ಚಾಗುತ್ತಾ ಹೋಗುತ್ತದೆ. ಲೋಕದ ಹಿತ ಬಯಸುವ ಮತ್ತು ಜೀವ ಪ್ರೀತಿ ಉಳ್ಳ ಪುಸ್ತಕಗಳಿಂದ ವಿಶ್ವಮಾನವ ಪ್ರಜ್ಞೆ ಜಾಗೃತವಾಗುತ್ತದೆ. ಓದುವ ಲಹರಿಯ ಖುಷಿ ಓದುಗರಿಗೆ ಮಾತ್ರ ದಕ್ಕುತ್ತದೆ. ಈ ಮಾತನ್ನು ಏಕೆ ಹೇಳುತ್ತಿದ್ದೇನೆಂದರೆ ‘ಎಡ್ವನ್ ಆರ್ನಾಲ್ಡ್’ ಅವರ ‘ದಿ ಲೈಟ್ ಆಫ್ ಏಶ್ಯ’ ಇದು ಬುದ್ಧನ ಕುರಿತಿರುವ ಒಂದು ಅದ್ಭುತ ಕಾವ್ಯ ಪುಸ್ತಕವನ್ನು ಮತ್ತೆ ಮತ್ತೆ ಓದುತ್ತಿದ್ದೇನೆ. ಇದೊಂದು ಬೆಳದಿಂಗಳ ಭಾವಲಹರಿ. ಇದನ್ನು ಕನ್ನಡಕ್ಕೆ ಡಾ. ಮಹಾದೇವರವರು ಭಾಷಾಂತರಿಸಿದ್ದಾರೆ. ಇದನ್ನು ಓದಿ ಮುಗಿಸಿದ ಮೇಲೆ ಇದರ ಕುರಿತು ಬರೆಯುತ್ತೇನೆ. ಈಗ ಕಳೆದ ವಾರ ಎರಡು ಮುಖ್ಯ ಕಾರ್ಯಕ್ರಮಗಲ್ಲಿ ಭಾಗವಹಿಸಿದ್ದೆ. ಅದನ್ನು ಹಂಚಿಕೊಳ್ಳುವ ಇರಾದೆ ನನಗೆ. ಒಂದು ಭೀಮಾ ಕೋರೆಗಾಂವ್ ವಿಜಯೋತ್ಸವ ನಮ್ಮ ಸಕಲೇಶಪುರದಲ್ಲಿ ನಡೆದಿದ್ದು, ಇನ್ನೊಂದು ಕರ್ನಾಟಕ ಸಾಹಿತ್ಯ ಅಕಾಡಮಿ ಹಮ್ಮಿಕೊಂಡಿದ್ದ ‘ಸಾಹಿತ್ಯ ಮತ್ತು ಚಳವಳಿ’ ಕುರಿತ ಮೂರು ದಿನಗಳ ಶಿಬಿರ. ನಾಡಿನೆಲ್ಲೆಡೆಯಿಂದ ಬಂದಿದ್ದ ಸುಮಾರು 80 ಶಿಬಿರಾರ್ಥಿಗಳಿಗೆ ಒಂದು ಬೋಧನಾ ಪ್ರಧಾನವಾದ ಭಾಷಣಗಳು ಮತ್ತು ದಲಿತ ಸಂಘರ್ಷ ಸಮಿತಿಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಅದರಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನೇ ಶೋಷಿತ ಸಮುದಾಯಕ್ಕಾಗಿ ಒತ್ತೆ ಇಟ್ಟ ಹೋರಾಟಗಾರರ ಕಥನವನ್ನು ಒಳಗೊಂಡಿದ್ದು. ಒಂದು ಅಪರೂಪದ ಶಿಬಿರದಲ್ಲಿ ಭಾಗವಹಿಸಿದ ಖುಷಿ ನನಗೆ. ಈ ಎರಡು ಕಾರ್ಯಕ್ರಮಗಳ ಆಶಯ ಒಂದೇ ಆಗಿದೆ.
ಭೀಮಾ ಕೋರೆಗಾಂವ್ ವಿಜಯೋತ್ಸವದ ಸಂಭ್ರಮ ಕಳೆದ ಎಂಟು ವರ್ಷಗಳಿಂದ ಹೊಸ ತಲೆಮಾರಿನ ಉತ್ಸಾಹದ ತರುಣರು ಮತ್ತು ಹಳೆ ತಲೆಮಾರಿನ ಮಾಗಿದ ಮನಸ್ಸಿನ ದಸಂಸ ಕಾರ್ಯಕರ್ತರು ಸೇರಿ ಇಡೀ ತಾಲೂಕಿನ ಶೋಷಿತ ಸಮುದಾಯದ ಜನರನ್ನು ಒಂದೆಡೆ ಸೇರಿಸಿ ಒಂದು ರೀತಿಯ ಸಮುದಾಯದ ಹಬ್ಬವೆನ್ನುವಂತೆ ಕುಣಿದು ಕುಪ್ಪಳಿಸಿ ಸಂತೋಷವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇದಕ್ಕೆ ಮೂಲ ಕಾರಣ ಮಹಾರ್ ಸಮುದಾಯದ ವೀರ ಸೈನಿಕರಾದರೆ, ಇದನ್ನು ಜಗತ್ತಿಗೆ ಪರಿಚಯಿಸಿದ್ದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಬಹುಶಃ ಉಳಿದ ಸಮುದಾಯದ ಜನ ಏನೇನಕ್ಕೆಲ್ಲಾ ಸಂತೋಷ, ಖುಷಿಗಾಗಿ ಹಬ್ಬ ಮಾಡುತ್ತಾರೆ. ಆದರೆ ಈ ಜನ ಮಾತ್ರ ಸಂತೋಷ ಪಡುವ, ಹೆಮ್ಮೆ ಪಡುವ, ಸ್ವಾಭಿಮಾನದಿಂದ ಬದುಕುವ ನೂರೆಂಟು ಕಾರಣಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಅನೇಕ ಕಾಣ್ಕೆಗಳನ್ನು ಕೊಟ್ಟು ಹೋಗಿದ್ದಾರೆ. ಅದನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅನೇಕ ಮಹನೀಯರು ಬಂದಿದ್ದರು. ಅದರಲ್ಲಿ ವಿಶೇಷವಾಗಿ ಈ ನಾಡಿನ ಹೆಸರಾಂತ ಲೇಖಕರು, ಕವಿಗಳು, ಚಿಂತಕರು ಮತ್ತು ವೈದ್ಯರಾದ ಡಾ. ಅನುಪಮಾ ಇದ್ದರು. ಅವರು ಭೀಮಾ ಕೋರೆಗಾಂವ್ ನೆನಪಿನ ಸ್ತಂಭವನ್ನು ಎಳೆಯುವುದರ ಮೂಲಕ ಉದ್ಘಾಟಿಸಿದರು. ನಂತರ ಬೆಳಗ್ಗೆ 11:30ರಿಂದ ಪ್ರಾರಂಭವಾದ ಮೆರವಣಿಗೆ, ಕುಣಿತ, ಜೈ ಭೀಮ್ ಘೋಷಣೆಗಳು, ಅಂಬೇಡ್ಕರ್ ಕುರಿತ ಹಾಡುಗಳು ಮುಗಿಲು ಮುಟ್ಟಿದ್ದವು. ಈ ಮೆರವಣಿಗೆ ಮತ್ತು ಈ ಕುಣಿತ ಕೊನೆಗೊಂಡಿದ್ದು ಸಂಜೆ 4:30ಕ್ಕೆ. ಈ ಮೆರವಣಿಗೆಯಲ್ಲಿ ಹೆಣ್ಣುಮಕ್ಕಳು, ವಿದ್ಯಾರ್ಥಿಗಳು, ಎಲ್ಲಾ ವಯೋಮಾನದ ಜನರು ಕುಣಿದಿದ್ದನ್ನು ಗಮನಿಸಿದ ಡಾ.ಎಚ್.ಎಸ್.ಅನುಪಮಾರವರು ಇವರಿಗೆ ಸುಸ್ತೇ ಆಗಿಲ್ಲವೇ? ಇವರ ಕಾಲುಗಳು ನೋಯುವುದಿಲ್ಲವೇ? ಎಂದು ಪ್ರಶ್ನೆ ಮಾಡುತ್ತಲೇ ಉತ್ತರವನ್ನು ಅವರೇ ಹೇಳಿದ್ದರು.
ಶತಮಾನಗಳಿಂದಲೂ ಜಾತಿ-ಧರ್ಮದ ದೌರ್ಜನ್ಯಕ್ಕೆ ತುತ್ತಾಗಿ ತಮ್ಮೊಳಗಿನ ಅಭಿವ್ಯಕ್ತಿಯನ್ನೇ ಹಿಂದೂ ಧರ್ಮ ನಾಶ ಮಾಡಿತ್ತು. ಆ ಅಸಹನೆಯ ಸಲುವಾಗಿಯೇ ಈ ಕುಣಿತ ಪ್ರತಿಭಟನೆಯ ರೂಪಕವಾಗಿರಬಹುದು ಮತ್ತು ಈ ಕುಣಿತದಿಂದ ಈ ನೆಲ ಇನ್ನಷ್ಟು ಪುಳಕಿತವಾಗಿರಬಹುದು. ಅದಕ್ಕೆ ಅವರು ಎಷ್ಟು ಕುಣಿದರೂ ಸಾಕೆನಿಸುತ್ತಿಲ್ಲ. ಮುಚ್ಚಿಟ್ಟ ಸತ್ಯದ ಇತಿಹಾಸವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ತೆರೆದು ತೋರಿಸಿದ್ದರಿಂದ ಈ ಎಲ್ಲಾ ಸಂತೋಷಗಳನ್ನು ಈ ಸಮುದಾಯ ಅನುಭವಿಸುತ್ತಿದೆ. ಇದನ್ನು ನೋಡುವುದೇ ಒಂದು ರೀತಿಯ ಸೋಜಿಗ. ನನಗೂ ಕೂಡ ಹಾಗೆಯೇ ಅನಿಸಿದ್ದು ಸುಳ್ಳಲ್ಲ. ಆ ಭಾಗದಲ್ಲಿ ಕಾಫಿ ತೋಟಗಳಲ್ಲಿ ಒಂದು ರೀತಿಯ ಜೀತದ ಹಾಗೇ ಕೆಲಸ ಮಾಡುವ ನಮ್ಮ ಜನ ಅನೇಕ ವಿಷಯಗಳಲ್ಲಿ ವಂಚಿತರಾಗಿದ್ದಾರೆ. ಆದರೆ ಈ ಕಾಫಿ ಬೆಳೆಗಾರರಿಗೆ ಇವರ ಕಷ್ಟ-ಸುಖ ಸಂತೋಷಗಳು ಅರ್ಥವಾಗಿರುವುದಿಲ್ಲ. ಅವರು ಯಾವಾಗಲೂ ಇಂತಹ ಸಮುದಾಯವನ್ನು ಶೋಷಣೆ ಮಾಡುತ್ತಲೇ ಸಂಪಾದನೆ ಮತ್ತು ಲಾಭದ ಕಡೆಗೆ ಯೋಚನೆ ಮಾಡುತ್ತಿರುತ್ತಾರೆ. ಇವರಿಗೆ ಕಾಫಿ ಬೆಳೆಯುವ ಲಾಭನಷ್ಟಗಳು, ಇದರ ಸಮ್ಮೇಳನಗಳಲ್ಲೇ ಮುಳುಗಿ ಹೋಗಿರುತ್ತಾರೆ. ಕಾಫಿ ಗಿಡದ ಒಗ್ಗು ಮಾಡುವುದರಿಂದ ಹಿಡಿದು ಆ ಗಿಡ ಹೂವಾಗಿ, ಹಣ್ಣಾಗಿ, ಫಸಲು ಬರುವವರೆಗೂ ಕೃಷಿ ಕೂಲಿ ಕಾರ್ಮಿಕರ ಪಾಲೇ ಹೆಚ್ಚಿರುತ್ತದೆ. ಮಾಲಕರಿಗೆ ಇವರ ಬದುಕು ಬವಣೆಗಳ ಬಗ್ಗೆ ಅಷ್ಟು ಆಸಕ್ತಿ ಇರುವುದಿಲ್ಲ. ಈ ಕೃಷಿ ಕೂಲಿ ಕಾರ್ಮಿಕರು, ಕಾಫಿ ಎಸ್ಟೇಟ್ ಮಾಲಕರು ಲೈನ್ ಮನೆಗಳನ್ನು ನಿರ್ಮಿಸಿರುತ್ತಾರೆ. ಆ ಮನೆಗಳನ್ನು ನೋಡಿದರೆ ಹಂದಿ-ನಾಯಿಗಳು ಬದುಕಲೂ ಯೋಗ್ಯವಾಗಿರುವುದಿಲ್ಲ. ಅಂತಹ ಮನೆಗಳಲ್ಲಿ ಈ ಕಾರ್ಮಿಕರ ಬದುಕು ದುಸ್ಥಿತಿಯಲ್ಲಿದೆ. ಇವರ ಮಕ್ಕಳ ಶಿಕ್ಷಣ, ಇವರ ಆರೋಗ್ಯ, ಯಾರಿಗೂ ಬೇಕಾಗಿಲ್ಲ. ಕಾಫಿ ಕುಡಿಯುವವರಿಗೆ ಅದರ ವಾಸನೆ ಘಮ ಘಮ ಅನಿಸುತ್ತದೆ. ಒಂದೊಳ್ಳೆಯ ರುಚಿಯೂ ಕೊಡುತ್ತದೆ. ಆದರೆ ಅಲ್ಲಿ ದುಡಿಯುವವರಿಗೆ ಮಾತ್ರ ಕಾಫಿ ಪರಿಮಳದ ಬದುಕಿಲ್ಲ. ಅವರ ಬದುಕಿನ ಕುರಿತಾಗಲಿ, ಕಷ್ಟಗಳ ಬಗ್ಗೆ ಆಗಲಿ, ಮಾಲಕರನ್ನು ಪ್ರಶ್ನಿಸುವಂತಿಲ್ಲ. ಏನೇ ಪ್ರಶ್ನೆ ಮಾಡಿದ್ದರೂ ಆ ಎಸ್ಟೇಟ್‌ನಿಂದ ನಾಳೆಗೆ ಕೂಲಿ ಇಲ್ಲದಂತಾಗುತ್ತದೆ. ಹೀಗೆ ಎಲ್ಲವನ್ನೂ ಸಹಿಸಿಕೊಂಡು ಇಂದಿಗೂ ಬದುಕುತ್ತಿದ್ದಾರೆ. ಈ ಕುರಿತು ಒಂದೆರೆಡು ಮಾತುಗಳನ್ನು ನಾನು ಆಡಿದೆ. ಆ ಸಭೆಯಲ್ಲಿ ಮಾತನಾಡಿದೆ. ನಾವು ಜಯದ ಸಂಭ್ರಮದಲ್ಲಿ ಮುಳುಗಿದ್ದೇವೆ. ಆದರೆ ನಮ್ಮ ಬದುಕು ಜಯದ ಹಾದಿಯಲ್ಲಿ ಇಲ್ಲ. ದಿನವೂ ಯುದ್ಧದಲ್ಲಿ ಗೆಲ್ಲುವ ಮತ್ತು ದಿನಬೆಳಗಾದರೆ ಜಯಿಸುವ ಕನಸುಗಳೊಂದಿಗೆ ಬದುಕಬೇಕಾಗಿದೆ. ಆದ್ದರಿಂದ ನಿನ್ನೆಯ ಇತಿಹಾಸವನ್ನು ನೆನಪು ಮಾಡಿಕೊಳ್ಳುತ್ತಲೇ ವರ್ತಮಾನದಲ್ಲಿ ಎಚ್ಚರಿಕೆಯಿಂದಿರಬೇಕಾದ ಮತ್ತು ನಾಳೆಯ ಬಗ್ಗೆ ಹೆಚ್ಚು ಜಾಗೃತವಾಗಿರುವ ಅಗತ್ಯ ಮತ್ತು ಅನಿವಾರ್ಯತೆ ವಿಶೇಷವಾಗಿ ದಲಿತರಿಗೆ ಬೇಕಾಗಿದೆ.
ಇಂತಹದ್ದೇ ವಿಷಯಗಳನ್ನಿಟ್ಟುಕೊಂಡೇ ದಲಿತ ಸಾಹಿತ್ಯ ಮತ್ತು ಚಳವಳಿ-50 ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ವೆಂಕಟಗಿರಿ ಸಭಾಂಗಣದಲ್ಲಿ ನಡೆದದ್ದು ವಿಶೇಷವಾಗಿತ್ತು. ಈ ಚಳವಳಿಗೆ ಪ್ರಮುಖ ಕಾರಣಕರ್ತರಲ್ಲೊಬ್ಬರಾದ ಡಾ. ಸಿದ್ದಲಿಂಗಯ್ಯ, ಡಾ.ಡಿ.ಆರ್.ನಾಗರಾಜ್, ಬರಗೂರು ರಾಮಚಂದ್ರಪ್ಪ ಈ ವಿಶ್ವವಿದ್ಯಾಲಯದಲ್ಲಿಯೇ ಕಲಿತವರು ಮತ್ತು ಕಲಿಸಿದವರು ಆಗಿದ್ದರು. ಇದನ್ನು ಆಯೋಜಿಸಿದ್ದವರು ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯ. ಕಳೆದ 50 ವರ್ಷಗಳಿಂದ ನಾವು ಏನು ಮಾತನಾಡುತ್ತಾ ಬಂದಿದ್ದೇವೋ, ಆ ಮಾತುಗಳನ್ನೇ ಅಲ್ಲಿ ಬಂದಿದ್ದ ಬಹುತೇಕ ಮುಖ್ಯ ಭಾಷಣಕಾರರು ಮಾತನಾಡಿದರು. ಹಿಂದಿನ ತಲೆಮಾರಿನ ದಲಿತ ಚಳವಳಿಯ ಹೋರಾಟಗಾರರು ಬರಹಗಾರರು ಆಗಿದ್ದರು. ಬಹುಶಃ ಕನ್ನಡ ಚರಿತ್ರೆಯಲ್ಲೇ ಹೋರಾಟಗಾರರು ಬರಹಗಾರರಾಗಿರುವುದು, ಬರಹಗಾರರು ಹೋರಾಟಗಾರರಾಗಿರುವುದು ದಲಿತ ಸಂಘರ್ಷ ಸಮಿತಿಯಲ್ಲಿ ಮಾತ್ರ. ಇದು ಒಂದು ರೀತಿಯ 12ನೇ ಶತಮಾನದಲ್ಲಿ ನಡೆದ ವಚನ ಚಳವಳಿಯ ಮುಂದುವರಿದ ಭಾಗವೇ ಎಂದು ಬಹುತೇಕರಿಗೆ ಗೊತ್ತಿರುವ ವಿಷಯವೇ ಆಗಿದೆ. ಅಲ್ಲಿ ಕೂಡ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಮನಸ್ಥಿತಿಯ ಚಿಂತಕರು ಒಂದೆಡೆಯಾದರೆ ಇದನ್ನು ದಮನ ಮಾಡುವ ಜಾತಿ ಮತ್ತು ಧಾರ್ಮಿಕ ಮನಸ್ಥಿತಿಯರ ನಡುವೆ ದೊಡ್ಡ ಕ್ರಾಂತಿಯೇ ನಡೆದಿದ್ದು ಇತಿಹಾಸ. ಆದರೆ ಈಗ ಲಿಖಿತ ಸಂವಿಧಾನವಿದ್ದು, ಸಮಸಮಾಜದ ಕನಸಿಗಾಗಿ ಸಂವಿಧಾನ ಕೂಡ ಒತ್ತಾಸೆಯಾಗಿದ್ದರೂ ಇವತ್ತಿಗೂ ಅದೇ ಧಾರ್ಮಿಕ ಮನಸ್ಥಿತಿಯ ಸನಾತಿಗಳ ಬಿಗಿಮುಷ್ಟಿಯಿಂದ ಶೋಷಿತ ಸಮುದಾಯಗಳು ಒದ್ದಾಡುವಂತಾಗಿದೆ. ಇದಕ್ಕಾಗಿ ಕಳೆದ 5 ದಶಕಗಳಿಂದ ದಲಿತ ಚಳವಳಿ ನಡೆಯುತ್ತಾ ಬಂದಿದೆ. ಇದನ್ನು ಶಿಕ್ಷಿತ ಸಮುದಾಯದ ಹೊಸತಲೆಮಾರಿಗೆ ದಾಟಿಸುವುದಕ್ಕಾಗಿ ರೂಪಿಸಿದ್ದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು.
90ರ ಶಕದ ನಂತರ ದಲಿತ ಚಳವಳಿ ಬೇರೆ ಬೇರೆ ಕಾರಣಕ್ಕೆ ಪಲ್ಲಟಗೊಂಡಿತು. ಅದು ವಿಭಜನೆಯಲ್ಲ: ಒಂದೇ ಕುಟುಂಬದಲ್ಲೇ ಭಿನ್ನ ಆಲೋಚನೆಗಳು, ನಡೆನುಡಿಗಳು ಇರುತ್ತವೆ. ಯಾರು ಯಾರಿಗೂ ಯಾವುದನ್ನು ಹೇರಿ ಸಂಕೋಲೆಗಳಿಂದ ಕಟ್ಟಿ ಹಾಕಲಾಗುವುದಿಲ್ಲ. ಆದರೂ ಒಂದು ಕೌಟುಂಬಿಕ ವ್ಯವಸ್ಥೆಯಲ್ಲಿ ಎಲ್ಲರನ್ನು ಒಳಗೊಳ್ಳುವುದು ಸಹಜವೇ ಆದರೂ ಮಕ್ಕಳು ತಂದೆ-ತಾಯಿಯಿಂದ ಸ್ವತಂತ್ರವಾಗಿ ಬದುಕುವುದನ್ನು ಹಂಬಲಿಸುತ್ತಾರೆ. ಹಾಗಂತ ಸಂಬಂಧಗಳನ್ನು ಬಿಟ್ಟು ಇರಲಾಗುವುದಿಲ್ಲ. ಹಾಗೇಯೇ ದಲಿತ ಸಂಘರ್ಷ ಸಮಿತಿಯ ಕನಸುಗಳು ಮತ್ತು ಆಶೋತ್ತರಗಳು ಒಂದೇ ಕಡೆ ನಿಂತ ನೀರಾಗಿರುವುದಿಲ್ಲ. ಅದು ಕೂಡ ಚಲನೆಯಲ್ಲಿರುತ್ತದೆ. ದಲಿತ ಸಮುದಾಯ ಎಂದರೆ ನೂರೊಂದು ಜಾತಿಗಳು, ಬಯಲಲ್ಲಿ ಬೆಳೆದದ್ದು. ಅನೇಕ ಸಣ್ಣಪುಟ್ಟ ಜಾತಿಗಳು ಈ ಸಮುದಾಯಕ್ಕೆ ಸೇರುತ್ತವೆಯಾದರೂ ಈಗಲೂ ಅವು ದಲಿತ ಸಂಘರ್ಷ ಸಮಿತಿಯೊಂದಿಗೆ ಒಳಗೊಂಡಿಲ್ಲ ಎನ್ನುವುದು ಬೇಸರದ ಸಂಗತಿಯೇ ಆದರೂ ಅವರೆಲ್ಲರ ಪರವಾಗಿ ದಲಿತ ಸಂಘರ್ಷ ಸಮಿತಿ ಮುನ್ನಡೆಯುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಳಮೀಸಲಾತಿ ಕಾರಣ ಗೆರೆ ಎಳೆದಂತೆ ಆಯಾಯ ಜಾತಿಗಳು ತಮ್ಮ ಪಾಲನ್ನು ಕೇಳಲಾರಂಭಿಸಿದಾಗ ಪ್ರಾರಂಭದ ದಿನಗಳ ಆಶಯಕ್ಕೆ ಧಕ್ಕೆಯಾಯಿತು ಎನ್ನುವ ಆತಂಕ ಸರಿಯೆನಿಸಿದರೂ ಸಮುದಾಯಗಳ ಬದುಕಿನ ಪ್ರಶ್ನೆ ಬಂದಾಗ ಆಯಾಯ ಜಾತಿಗಳು ತಮ್ಮ ಹಕ್ಕುಗಳನ್ನು ಕೇಳಿದ್ದು ನ್ಯಾಯವೇ. ಆದರೆ ದಲಿತ ಸಂಘರ್ಷ ಸಮಿತಿ ಎಂದೂ ಒಡೆದು ಹೋಗಿಲ್ಲ ಅಥವಾ ಬಿಡಿಬಿಡಿಯಾಗಿಲ್ಲ. ಇದರ ಆಶಯ ಕಟ್ಟಕಡೆಯ ಮನುಷ್ಯನ ಬಿಡುಗಡೆ. ಆ ಆಶಯ ಇವತ್ತಿಗೂ ಗಟ್ಟಿಯಾಗಿದೆ. ಇಂತಹ ಎಲ್ಲಾ ಆಲೋಚನೆಗಳು ಚರ್ಚೆ, ಸಂವಾದಗಳು, ಅನುಭವದ ಮಾತುಗಳು ಇಲ್ಲಿ ಬಂದು ಹೋದವು. ವಿಶೇಷವಾಗಿ ಗಮನ ಸೆಳೆದಿದ್ದು ದಲಿತ ಚಳವಳಿ ಮತ್ತು ಮಹಿಳೆಯರು. ದಲಿತ ಚಳವಳಿಯಲ್ಲಿ ಹೆಣ್ಣಿನ ಒಳಗೊಳ್ಳುವಿಕೆಯನ್ನು ನೋಡಿದರೆ ನಮ್ಮೊಳಗಿನ ಕಣ್ಣೇ ತೆರೆದಿಲ್ಲ ಎನ್ನುವುದು ಈ ಗೋಷ್ಠಿಯಲ್ಲಿ ಮಾತನಾಡಿದ ಬಹುತೇಕ ಎಲ್ಲಾ ಮಹಿಳೆಯರ ಮಾತುಗಳಲ್ಲಿ ಅಭಿವ್ಯಕ್ತಗೊಂಡಿತು. ದಲಿತ ಸಂಘರ್ಷ ಸಮಿತಿ ಕೂಡ ಮುಂದಿನ ದಿನಗಳಲ್ಲಿ ಇದರ ಅರಿವನ್ನು ಪಡೆದುಕೊಂಡು ಮಹಿಳೆಯರನ್ನು ಮತ್ತು ವಿದ್ಯಾರ್ಥಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳದೆ ಮುಂದಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿ ಮುನ್ನೆಡೆಯುವುದು ಕಷ್ಟಸಾಧ್ಯವಾಗಬಹುದು. ಇನ್ನೊಂದು ಪ್ರಮುಖ ಗೋಷ್ಠಿ ‘ದಲಿತ ಚಳವಳಿ ಮತ್ತು ನಾನು’ ಹಾಗೂ ಮುಂದಿನ ಹಾದಿ. ಈ ಗೋಷ್ಠಿಯಲ್ಲಿ ಮಾತನಾಡಿದ ಕುಂದೂರ್ ತಿಮ್ಮಯ್ಯನವರ ಮಾತುಗಳಿಂದ ಇಡೀ ಸಭಾಂಗಣ ರೋಮಾಂಚನಗೊಂಡಿತು. ಹೇಳಿಕೇಳಿ ನಾನು ಶ್ರೀರಾಂಪುರದ ರೌಡಿಯಾಗಿದ್ದೆ. ಜನರಿಗೆ ಹಿಂಸೆ ಕೊಡುತ್ತಾ ಆನಂದಿಸುತ್ತಿದ್ದೆ. ಇದೇ ನನ್ನ ಬದುಕು ಎಂದುಕೊಂಡಿದ್ದೆ. ಆದರೆ ನಾನು ಇವತ್ತು ಮನುಷ್ಯನಾಗಿ ನಿಂತಿರುವುದಕ್ಕೆ ದಲಿತ ಸಂಘರ್ಷ ಸಮಿತಿಯೇ ಕಾರಣ ಎಂದಾಗ ಶಿಬಿರಾರ್ಥಿಗಳು ಸೇರಿದಂತೆ ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಅಭಿನಂದಿಸಿದರು. ಇದನ್ನು ಹೇಳುವಾಗ ನಾನು ಕಾಲೇಜು ದಿನಗಳಲ್ಲಿ ಹಾಸನದಲ್ಲಿರುವಾಗ ಬಿ. ಕೃಷ್ಣಪ್ಪನವರ ಭಾಷಣ ಕೇಳಿದ್ದು ನೆನಪಾಯಿತು. ಅವರು ಮಾತನಾಡುತ್ತಾ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತ ಎಂದರೆ ಆತ ಮೊದಲು ಮನುಷ್ಯನಾಗಬೇಕು, ಆಮೇಲೆ ಸಮಾಜವನ್ನು ಮಾನವೀಕರಣಗೊಳಿಸಬೇಕು ಎಂದು ಹೇಳಿದರು. ಈ ಮಾತು ಕಳೆದ 5 ದಶಕಗಳಿಂದ ಈ ನಾಡಿನಲ್ಲಿ ನಡೆದ ಮಾನವೀಕರಣಗೊಳ್ಳುವ ದಲಿತ ಚಳವಳಿ ಕರ್ನಾಟಕದ ಆಧುನಿಕ ಸಂದರ್ಭದ ಎಲ್ಲಾ ಚಳವಳಿಗಳ ತಾಯಿಯ ಸ್ಥಾನದಲ್ಲಿ ನಿಂತಿದೆ ಅನಿಸುತ್ತದೆ. ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲಾ ಪ್ರಜ್ಞಾವಂತರ ಕೈಯಲ್ಲಿದೆ.
ಸ್ವಾತಂತ್ರ್ಯದ ನಂತರ ನಮ್ಮ ನಾಡಿನಲ್ಲಿ ಅನೇಕ ಚಳವಳಿಗಳು ರೂಪುಗೊಂಡು ಮನುಷ್ಯರ ಹಕ್ಕುಗಳಿಗಾಗಿ ಹೋರಾಡಿವೆ. ಅದರಲ್ಲೂ ತುರ್ತು ಪರಿಸ್ಥಿತಿಯ ನಂತರದ ಕರ್ನಾಟಕದಲ್ಲಿ ರೈತ ಚಳವಳಿ, ಬಂಡಾಯ ಚಳವಳಿ, ಕಾರ್ಮಿಕ ಚಳವಳಿ... ಹೀಗೆ ಹಲವು ಚಳವಳಿಗಳು ಮನುಷ್ಯರ ಹಕ್ಕು ಶ್ರಮಕ್ಕೆ ಪ್ರತಿಫಲ ದೊರಕಿಸಿ ಕೊಡುವುದಕ್ಕಾಗಿ ಮತ್ತು ಬದುಕನ್ನು ಸುಧಾರಿಸುವ ಅಗತ್ಯಗಳಿಗಾಗಿ ಹೋರಾಟ ನಡೆಸಿವೆ. ಭಾಷೆ ಮತ್ತು ಸಾಂಸ್ಕೃತಿಕ ಸುಧಾರಣೆಗಾಗಿಯೂ ಪ್ರತಿಭಟನೆಗಳಾಗಿವೆ. ಇವೆಲ್ಲಕ್ಕೂ ತಾಯಿಬೇರು ದಲಿತ ಚಳವಳಿ ಮತ್ತು ಅದನ್ನು ರಚಿಸಿದ ದಲಿತ ಸಂಘರ್ಷ ಸಮಿತಿ. ಏಕೆಂದರೆ ಮನುಷ್ಯನ ಘನತೆ ಮತ್ತು ಸಾಮಾಜಿಕ ಸಮತೆಗಾಗಿ ಹೋರಾಟ ಮಾಡಿದ ಏಕೈಕ ಚಳವಳಿ ದಲಿತ ಚಳವಳಿ. ನಾವು ಮನುಜರು ಎನ್ನುವ ನೆಲದಲ್ಲಿ ಅಸ್ಪಶ್ಯತೆಯನ್ನು ಆಚರಿಸಲಾಗುತ್ತಿದೆ ಎಂದರೆ ಅದಕ್ಕಿಂತ ಮನುಕುಲದ ಹೇಯ ಮತ್ತೊಂದಿಲ್ಲ. ಇದನ್ನು ಹೋಗಲಾಡಿಸಲು ದಸಂಸ ಇನ್ನಿಲ್ಲದಂತೆ ಹೋರಾಡಿದೆ, ಹೋರಾಡುತ್ತಿದೆ. ಅದಕ್ಕಾಗಿಯೇ ಹೇಳಿದ್ದು ದಲಿತ ಚಳವಳಿ ಎಂದರೆ ಮನುಷ್ಯರನ್ನು ವಿಶ್ವಮಾನವರನ್ನಾಗಿಸುವ ಚಳವಳಿ. ಇವತ್ತು ನನ್ನಂಥವರು ಉಸಿರಾಡುತ್ತಿದ್ದರೆ ಅದಕ್ಕೆ ದಸಂಸವೇ ಮುಖ್ಯ ಕಾರಣ, ಅಷ್ಟೇ ಏಕೆ Dalith organization is a oxygen bank of this society ಎಂದು ನಿಸ್ಸಂಶಯವಾಗಿ ಹೇಳುತ್ತೇನೆ. ದಲಿತ ಚಳವಳಿ ಎಂದರೆ ಈ ಸಮಾಜದ ಕಟ್ಟಕಡೆಯ ಮನುಷ್ಯನ ಬದುಕಿನ ಚಳವಳಿ. ಇನ್ನಾದರೂ ಈ ನೆಲದ ಪ್ರಾಜ್ಞರು ಅಸ್ಪೃಶ್ಯತೆಯನ್ನು ತೊಳೆದು ವಿಶ್ವಮಾನವರಾಗಲಿ ಎಂದು ನನ್ನ ಮನಮಿಡಿಯುತ್ತಿದೆ.







