Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೀಲಿ ಬಾವುಟ
  5. ಪ್ರಜಾಪ್ರಭುತ್ವದ ನೋವಿನ ಮೂಲವಿರುವುದು...

ಪ್ರಜಾಪ್ರಭುತ್ವದ ನೋವಿನ ಮೂಲವಿರುವುದು ಚುನಾವಣಾ ಆಯೋಗದ ಬೆರಳ ಮುಳ್ಳಲ್ಲಿ!

ನಿಖಿಲ್ ಕೋಲ್ಪೆನಿಖಿಲ್ ಕೋಲ್ಪೆ17 Oct 2025 11:21 AM IST
share
ಪ್ರಜಾಪ್ರಭುತ್ವದ ನೋವಿನ ಮೂಲವಿರುವುದು ಚುನಾವಣಾ ಆಯೋಗದ ಬೆರಳ ಮುಳ್ಳಲ್ಲಿ!

ಯಾರಾದರೂ ಗಂಭೀರ ಆರೋಪ ಮಾಡಿದಾಗ, ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗ ನಿಷ್ಪಕ್ಷ ತನಿಖೆಯನ್ನು ಮಾಡಬೇಕಾಗಿತ್ತು. ಆದರೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನೇ ಹೊರಗೆ ತಳ್ಳಿದ ಸಮಿತಿಯಿಂದ ಸಂಶಯಾಸ್ಪದವಾಗಿ ಆಯ್ಕೆಯಾದ ಮುಖ್ಯ ಚುನಾವಣಾ ಕಮಿಷನರ್ ಜ್ಞಾನೇಶ್ ಕುಮಾರ್ ನಡೆದುಕೊಂಡ ರೀತಿ ಗುಲಾಮಗಿರಿಯ ಸಂಶಯವನ್ನು ಇನ್ನಷ್ಟು ಬಲಪಡಿಸಿದೆ.

ಬಿಹಾರದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಗೆ ಮುಂಚಿತವಾಗಿ ಭಾರತೀಯ ಚುನಾವಣಾ ಆಯೋಗವು ಅವಸರವಸರವಾಗಿ ಕೈಗೊಂಡ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಕರ್ನಾಟಕದ ಆಳಂದ ವಿಧಾನಸಭಾ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಬಹಿರಂಗವು ಉಂಟುಮಾಡಿರುವ ವಿವಾದವು ಭಾರತದ ಪ್ರಜಾಪ್ರಭುತ್ವವು ಎದುರಿಸುತ್ತಿರುವ ಅಪಾಯದ ಗಂಭೀರ ಮುನ್ಸೂಚನೆಯಾಗಿದೆ. ಒಬ್ಬನಿಗೆ ಮೈಯಿಡೀ ನೋಯುತ್ತಿದ್ದಂತೆ ಭಾಸವಾಗುತ್ತಿತ್ತು. ಎಲ್ಲಿ ಮುಟ್ಟಿದರೂ ನೋವು. ಇದಕ್ಕೆ ಕಾರಣ-ಮುಟ್ಟುವ ಬೆರಳಿಗೆ ಚುಚ್ಚಿದ್ದ ಮುಳ್ಳು ಎಂಬುದು ಚುನಾವಣಾ ಆಯೋಗದಷ್ಟೇ ಹಳೆಯ ಹಳಸಲು ಜೋಕು. ಆದರೀಗ ಇದು ನಗುವ ವಿಷಯವಲ್ಲ. ನಮ್ಮ ಪ್ರಜಾಪ್ರಭುತ್ವದ ದೇಹದ ಅನುಭವಕ್ಕೆ ಬರುತ್ತಿರುವ ನೋವಿನ ಮೂಲವಿರುವುದು ಮತಯಂತ್ರದ ಗುಂಡಿ ಒತ್ತಲು ಪ್ರಜೆಗಳಿಗೆ ಅನುವು ಮಾಡಿಕೊಡುವ ಜವಾಬ್ದಾರಿ ಇರುವ ಚುನಾವಣಾ ಆಯೋಗ ಎಂಬ ಅದರ ಬೆರಳಿಗೇ ಚುಚ್ಚಿರುವ ಮುಳ್ಳಲ್ಲಿ ಎಂಬುದು ಈಗ ಹೆಚ್ಚು ಹೆಚ್ಚು ಖಾತರಿಯಾಗುತ್ತಿದೆ. ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಚುಚ್ಚಿದರೆ, ಆಯೋಗಕ್ಕಿಂತ ಹೆಚ್ಚಾಗಿ ಬಿಜೆಪಿಯು ನೋವಿನಿಂದ ಕಿರಿಚಾಡುತ್ತಿರುವುದು ಇವೆರಡರ ನಡುವಿನ ಅಕ್ರಮ ಸಂಬಂಧದ ಬಗ್ಗೆ ಸಂಶಯವನ್ನು ಇನ್ನಷ್ಟು ಬಲಗೊಳಿಸುತ್ತದೆ.

ಚುನಾವಣಾ ಆಯೋಗವು ತನ್ನ ಮೂಲ ಉದ್ದೇಶವನ್ನು ‘ಅಕ್ರಮ ಬಾಂಗ್ಲಾ ವಲಸಿಗರನ್ನು’ (ಮುಸ್ಲಿಮರೆಂದು ಓದಿಕೊಳ್ಳಬಹುದು) ಪತ್ತೆ ಹಚ್ಚುವುದು ಎಂದು ಬಣ್ಣಿಸಿತ್ತು. ಆದರೆ, ಸಿಕ್ಕಿರುವುದು 7.42 ಕೋಟಿ ಮತದಾರರಲ್ಲಿ ಕೇವಲ ಮೂರು ಮಂದಿ- ಅದೂ ‘ಸಂಶಯಿತ’ ಬಾಂಗ್ಲಾ ದೇಶಿಯರು! ಈಗ ಕೆಲವು ವಾಸ್ತವಾಂಶಗಳು ಏನು ಎಂಬುದನ್ನು ಅಂಕಿಅಂಶಗಳ ಮೂಲಕ ನೋಡೋಣ. ಬಿಹಾರದಲ್ಲಿ ಈಗ ಇರುವ ನೋಂದಾಯಿತ ಮತದಾರರು 7.42 ಕೋಟಿ. ಲಕ್ಷಾಂತರ ‘ಅನರ್ಹ’ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬುದು ಚುನಾವಣಾ ಆಯೋಗದ ವಾದ. ಬಿಹಾರದಲ್ಲಿ ಮಾತ್ರವೇ, ಅದೂ ಚುನಾವಣೆಗಳು ಇನ್ನೇನು ನಡೆಯಲಿವೆ ಎಂದಿರುವಾಗ ಅವಸರವಸರವಾಗಿ ಇದನ್ನು ಕೈಗೆತ್ತಿಕೊಳ್ಳಲು ಕಾರಣಗಳೇನು? ಆಯೋಗದ ಬಳಿ ಉತ್ತರಗಳಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ವಿರೋಧ ಪಕ್ಷಗಳು, ಮುಖ್ಯವಾಗಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಸಹಿತ ‘ಇಂಡಿಯಾ’ ಕೂಟ ಈ ಕ್ರಮವನ್ನು ಬಲವಾಗಿ ವಿರೋಧಿಸಿದ್ದು, ಬಡವರು, ದಲಿತರು, ಮುಸ್ಲಿಮರು, ಊರಿಂದ ಊರಿಗೆ ಕೆಲಸಕ್ಕಾಗಿ ವಲಸೆ ಹೋಗುವ ದೊಡ್ಡ ಜನವಿಭಾಗಗಳ ಅರ್ಹ ಮತದಾರರ ಮತದಾನದ ಹಕ್ಕನ್ನು ಕಸಿಯಲಾಗಿದೆ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕಲಾಗಿದೆ ಎಂಬ ಗಂಭೀರ ಆರೋಪ ಮಾಡಿವೆ.

ಚುನಾವಣಾ ಆಯೋಗವು ಎಸ್‌ಐಆರ್ ಬಳಿಕ ಸೆಪ್ಟಂಬರ್ 30ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ಬಿಹಾರದಲ್ಲಿ 7.42 ಕೋಟಿ ಮತದಾರರಿದ್ದಾರೆ. ಕರಡು ಪಟ್ಟಿಯಿಂದ ಕಿತ್ತುಹಾಕಲಾಗಿದ ಜನರ ಸಂಖ್ಯೆ ಸುಮಾರು 65 ಲಕ್ಷ. (ನಂತರ ಸುಪ್ರೀಂ ಕೋರ್ಟ್ ಈ ಹೆಸರುಗಳನ್ನು ಏಕೆ ಕಿತ್ತುಹಾಕಲಾಯಿತು ಎಂಬ ಬಗ್ಗೆ ವಿವರಗಳನ್ನು ನೀಡಬೇಕು ಎಂದು- ಆಯೋಗದ ಕುಂಟು ನೆಪಗಳನ್ನೆಲ್ಲಾ ಮೂಲೆಗೆ ತಳ್ಳಿ- ಆದೇಶ ನೀಡಿತು.) ಅದರ ಪ್ರಕಾರ, ಪತ್ತೆಯಾಗದ ಮತದಾರರು ಸುಮಾರು 35.7 ಲಕ್ಷ. ಅಂದರೆ, ಬೂತ್ ಮಟ್ಟದ ಅಧಿಕಾರಿಯ ಭೇಟಿ ಸಂದರ್ಭದಲ್ಲಿ ವಿಳಾಸದಲ್ಲಿ ಇಲ್ಲದವರು. ಇವರನ್ನು ಚುನಾವಣಾ ಆಯೋಗವು ಯಾವುದೇ ಆಧಾರವಿಲ್ಲದೆ ಮೃತರು, ದೀರ್ಘ ಕಾಲ ವಲಸೆ ಹೋದವರು, ಬೇರೆ ಕಡೆಗಳಲ್ಲಿ ನೋಂದಾಯಿಸಿಕೊಂಡವರು ಎಂದು ಪರಿಗಣಿಸಿದೆ. ಇನ್ನುಳಿದಂತೆ ಸ್ವತಂತ್ರ ತನಿಖೆಯು 15 ವಿಧಾನಸಭಾ ಕ್ಷೇತ್ರಗಳಲ್ಲಿ 67,826 ನಕಲಿ ಮತದಾರರನ್ನು ಪತ್ತೆಹಚ್ಚಿದೆ. ಅದೇ ಕ್ಷೇತ್ರಗಳಲ್ಲಿ ಎರಡು ಸಲ ನೋಂದಣಿಯಾದ ಮತದಾರರಾಗಿರುವ ಸಂಶಯವಿರುವ 34,392 ಹೆಸರುಗಳಿವೆ. ಈ ಪ್ರಕರಣಗಳಲ್ಲಿ ಹೆಸರು, ವಿಳಾಸ, ಸಂಬಂಧಿಕರು, ಸ್ವಲ್ಪ ವ್ಯತ್ಯಾಸದೊಂದಿಗೆ ವಯಸ್ಸು ಇದ್ದು, ಎರಡೆರಡು ಗುರುತುಚೀಟಿ ಹೊಂದಿರುವ ಸಾಧ್ಯತೆಗಳಿವೆ. ಕೇವಲ 15 ಕ್ಷೇತ್ರಗಳಲ್ಲಿ ಇಷ್ಟಾದರೆ, ಬಿಹಾರದ 243 ಕ್ಷೇತ್ರಗಳಲ್ಲಿ ಎಷ್ಟಿರಬಹುದೆಂದು ನೀವೇ ಊಹಿಸಬಹುದು. ಕೇವಲ ಮೂರೇ ಕ್ಷೇತ್ರಗಳಲ್ಲಿ 80,000ದಷ್ಟು ಹೆಸರುಗಳು ಅಸ್ತಿತ್ವದಲ್ಲೇ ಇಲ್ಲದ ಹೆಸರು, ನಕಲಿ ವಿಳಾಸಗಳಲ್ಲಿ ನೋಂದಣಿಯಾಗಿವೆ. ಇಲ್ಲಿ ಕುತೂಹಲಕಾರಿಯಾದ ವಿಷಯವನ್ನು ಗಮನಿಸಬೇಕು. ಅದೆಂದರೆ, 1.32 ಕೋಟಿ ಮತದಾರರು ನಕಲಿ ಅಥವಾ ಪಾಳುಬಿದ್ದಿರುವ ವಿಳಾಸಗಳಲ್ಲಿ, 20 ಅಥವಾ ಹೆಚ್ಚು ಜನರಿರುವ ಗುಂಪುಗಳಲ್ಲಿ ನೋಂದಣಿಯಾಗಿದ್ದಾರೆ. ಒಂದು ವರದಿಯ ಪ್ರಕಾರ, 650 ಜನರು ‘ವಾಸಿಸುವ’ 20ಕ್ಕೂ ಹೆಚ್ಚು ‘ಮನೆ’ಗಳಿವೆ. ಇಡೀ ಪಟ್ಟಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ 14.35 ಲಕ್ಷದಷ್ಟು ಎರಡು ಸಲ ನೋಂದಣಿಯಾದ ಮತದಾರರು ಇದ್ದಾರೆ ಎಂದರೆ ಆಯೋಗ ಇಷ್ಟೆಲ್ಲಾ ನಾಟಕದ ನಂತರ ಮಾಡಿದ್ದೇನು ಎಂಬ ಪ್ರಶ್ನೆ ಏಳುತ್ತದೆ.

ಇದರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಾಯಕರೆಂದರೆ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ. ಕಾಂಗ್ರೆಸ್ ಪಕ್ಷವು EAGLE (Empowered Action Group of Leaders and Experts) ಎಂಬ ತಜ್ಞರ ತಂಡವನ್ನು ರಚಿಸಿದ್ದು, ಅಧಿಕೃತವಾಗಿ 30 ಲಕ್ಷ ಅರ್ಹ ಮತದಾರರನ್ನು ಕಿತ್ತುಹಾಕಲಾಗಿರುವ ಆರೋಪ ಮಾಡಿದೆ. ಈಗ ‘‘ವೋಟ್ ಚೋರ್, ಗದ್ದಿ ಚೋಡ್’’ ಎಂಬುದು ಪಕ್ಷದ ಅಧಿಕೃತ ಅಭಿಯಾನವಾಗಿದೆ. ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) ನಾಯಕರು ಕೂಡಾ ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ಮತ್ತು ಸುಪ್ರೀಂಕೋರ್ಟಿನಲ್ಲಿ ಪ್ರಮುಖ ಅರ್ಜಿದಾರ ಯೋಗೇಂದ್ರ ಯಾದವ್ ಅವರು, ನ್ಯಾಯಾಲಯಕ್ಕೆ ವಿವರವಾದ ದತ್ತಾಂಶ ವಿಶ್ಲೇಷಣೆಯನ್ನು ಸಲ್ಲಿಸಿದ್ದು, ‘ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತದಾರರ ಕುಸಿತ’ ನಡೆದಿದ್ದು, ಇಡೀ ಪ್ರಕ್ರಿಯೆಯನ್ನು ‘ವ್ಯವಸ್ಥಿತವಾಗಿ ಹೊರದಬ್ಬಲಾಯಿತು’ ಎಂದು ಆರೋಪಿಸಿದ್ದಾರೆ. ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರೂ ಇದೇ ರೀತಿಯ ಆಧಾರ ಸಹಿತ ಆರೋಪಗಳನ್ನು ಮಾಡಿದ್ದಾರೆ.

ಯಾರಾದರೂ ಇಂತಹ ಗಂಭೀರ ಆರೋಪ ಮಾಡಿದಾಗ, ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗ ನಿಷ್ಪಕ್ಷ ತನಿಖೆಯನ್ನು ಮಾಡಬೇಕಾಗಿತ್ತು. ಆದರೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನೇ ಹೊರಗೆ ತಳ್ಳಿದ ಸಮಿತಿಯಿಂದ ಸಂಶಯಾಸ್ಪದವಾಗಿ ಆಯ್ಕೆಯಾದ ಮುಖ್ಯ ಚುನಾವಣಾ ಕಮಿಷನರ್ ಜ್ಞಾನೇಶ್ ಕುಮಾರ್ ನಡೆದುಕೊಂಡ ರೀತಿ ಗುಲಾಮಗಿರಿಯ ಸಂಶಯವನ್ನು ಇನ್ನಷ್ಟು ಬಲಪಡಿಸಿದೆ. ಸುದ್ದಿಗೋಷ್ಠಿಯೊಂದನ್ನು ಕರೆದ ಅವರು, ದೂರುದಾರ ರಾಹುಲ್ ಗಾಂಧಿಯೇ ತಪ್ಪಿತಸ್ಥರು ಎಂಬಂತೆ ವರ್ತಿಸಿ, ಅವರು ಅಫಿಡವಿಟ್ ಸಲ್ಲಿಸಬೇಕು, ಇಲ್ಲವಾದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಬೆದರಿಕೆಯನ್ನೇ ಹಾಕಿ, ನಂತರ ಸುಪ್ರೀಕೋರ್ಟಿನಲ್ಲಿ ತಪರಾಕಿಗೆ ಒಳಗಾಗಿದ್ದಾರೆ. ಮತದಾರರ ವೀಡಿಯೊ ದಾಖಲೆ ಕೇಳಿದಾಗ ‘ಮಾತೆಯರ’ ಗೌಪ್ಯ, ಖಾಸಗಿತನ, ‘ಭಾರತೀಯ ಸಂಸ್ಕೃತಿ’, ‘ಬಡವರ ಕಣ್ಣೀರು’ ಇತ್ಯಾದಿಯಾಗಿ ಸನಾತನ ಆರೆಸ್ಸೆಸ್ ಮತ್ತು ನಾಟಕೀಯ ಭಾವನಾತ್ಮಕ ಭಾಷೆಯಲ್ಲಿ ಮಾತನಾಡಿ, ಕುಂಟು ನೆಪಗಳನ್ನು ನೀಡಿದ್ದಾರೆ.

ಇಲ್ಲಿ ಕುಂಟು ನೆಪಗಳನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್ ನಿಲುವು ಮಹತ್ವದ್ದು. ಅದು ಚುನಾವಣಾ ಆಯೋಗದ ‘ವಿರುದ್ಧ ಹೋರಾಟ’ ಮಾಡದಿದ್ದರೂ, ಚುನಾವಣಾ ಆಯೋಗದ ಆಟಾಟೋಪಗಳಿಗೆ ಕಡಿವಾಣ ಹಾಕುವ ಮತ್ತು ಅದರ ಕ್ರಮಗಳು ಸರಿಯಿಲ್ಲವೆಂದು ಸಾರುವ ಕೆಲವು ಚಾಟಿಯಂತಹ ಆದೇಶಗಳನ್ನು ನೀಡಿದೆ. ಅವುಗಳಲ್ಲಿ ಮುಖ್ಯವಾದವು: 1. ಕರಡು ಪಟ್ಟಿಯಿಂದ 65 ಲಕ್ಷ ಮತದಾರರನ್ನು ಕಿತ್ತುಹಾಕಿರುವುದಕ್ಕೆ ಕಾರಣ ನೀಡಬೇಕು. (ರಾಹುಲ್ ಗಾಂಧಿಗೆ ಅದನ್ನು ನೋಡಲು ನೂರಾರು ವರ್ಷಗಳು ಬೇಕು ಎಂದು ಸಿಟ್ಟಿನಿಂದ ಕುಹಕವಾಡಿದ್ದ ಬಿಹಾರದ ಚುನಾವಣಾ ಆಯುಕ್ತರಿಗೆ ಹಾಕಿದ ಛೀಮಾರಿಯಂತಿದೆ ಇದು.) 2. ಹೊಸದಾಗಿ ಸೇರಿಸಲಾದ ಮತದಾರರ ಗುರುತಿನ ಬಗ್ಗೆ ಹೆಚ್ಚಿನ ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ತೋರಿಸಬೇಕು. 3. ಪಟ್ಟಿಯಿಂದ ಕಿತ್ತು ಹಾಕಲಾದ ಮತದಾರರಿಗೆ ಮೇಲ್ಮನವಿ ಸಲ್ಲಿಸಲು ಉಚಿತ ಕಾನೂನು ನೆರವು ಒದಗಿಸಬೇಕು. ಇದೊಂದೇ ಅರ್ಹ ಮತದಾರರನ್ನು ಕಿತ್ತುಹಾಕಲಾಗಿರುವ ಬಗ್ಗೆ ಸುಪ್ರೀಂ ಕೋರ್ಟಿಗೆ ಮನವರಿಕೆ ಆಗಿರುವುದಕ್ಕೆ ಸಾಕ್ಷಿಯಾಗದೆ?

ಜೊತೆಗೆ ‘ರಿಪೋರ್ಟರ್ಸ್ ಕಲೆಕ್ಟಿವ್’ ಎಂಬ ಪತ್ರಕರ್ತರ ಸಂಘಟನೆ ಸ್ವತಂತ್ರ ತನಿಖೆ ನಡೆಸಿ, ಹಲವಾರು ಅಂಕಿಅಂಶ ಆಧರಿತ ವರದಿಗಳನ್ನು ಪ್ರಕಟಿಸಿ, ಹಲವಾರು ವ್ಯವಸ್ಥಿತ ಮತ್ತು ಸಾಮೂಹಿಕ ಅಕ್ರಮಗಳನ್ನೂ, ಚುನಾವಣಾ ಆಯೋಗದ ಶಾಮೀಲಾತಿ ಸಾಧ್ಯತೆಗಳನ್ನೂ ಬಹಿರಂಗಪಡಿಸಿದೆ. ಮೇಲೆ ಹೇಳಿದ ನಕಲಿ, ಎರಡು ಮತಚೀಟಿಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವುದು ಇದೇ ಸಂಘಟನೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಸರಕಾರೇತರ ಸಂಘಟನೆ ಮತ್ತು ಆಯೋಗಕ್ಕೆ ಮೊದಲ ದೂರು ಸಲ್ಲಿಸಿದ ಸಿಪಿಐ-ಎಂಎಲ್ ಲಿಬರೇಷನ್ ಪಕ್ಷವೂ ಮತಗಳ್ಳತನದ ಹಲವಾರು ಆಧಾರಗಳನ್ನು ಒದಗಿಸಿವೆ.

ಒಂದೇ ನಕಲಿ ವಿಳಾಸದಲ್ಲಿ ಬೇರೆಬೇರೆ ಜಾತಿಗಳ ಮತದಾರರು ದೊಡ್ಡ ಸಂಖ್ಯೆಯಲ್ಲಿ ನೋಂದಣಿಯಾಗಿರುವುದು (ಒಂದು ಕ್ಷೇತ್ರದಲ್ಲಿ 509 ಮಂದಿ ಬೇರೆಬೇರೆ ಜಾತಿಯವರು ಒಂದೇ ನಕಲಿ ವಿಳಾಸದಿಂದ ಮತದಾರರ ಪಟ್ಟಿ ಸೇರಿದ್ದರು!), ವಿಳಾಸವನ್ನು ‘0’ ಎಂದು ನಮೂದಿಸಿರುವುದು, ತಂದೆ, ಗಂಡ ಕೂಡಾ ‘0’ ಆಗಿರುವುದು, ನಕಲಿ ಮತದಾರರು ದೊಡ್ಡ ಸಂಖ್ಯೆಯಲ್ಲಿ ಉಳಿದುಕೊಂಡಿರುವುದು, ಅರ್ಹರ ಹೆಸರನ್ನು ತೆಗೆದು ಹಾಕಿರುವುದು ಇತ್ಯಾದಿ ಹಲವಾರು ನಂಬಲಾರದ ವಿಚಿತ್ರಗಳನ್ನು ಚುನಾವಣಾ ಆಯೋಗವು ಬಿಹಾರದಲ್ಲಿ ನಡೆಸಿದೆ. ಮುಸ್ಲಿಮ್ ಬಾಹುಳ್ಯದ ಸೀಮಾಂಚಲ ಪ್ರದೇಶದಲ್ಲಿಯೇ ಹೆಚ್ಚಿನ ಮತದಾರರನ್ನು ಕಿತ್ತು ಹಾಕಲಾಗಿದೆ ಎಂಬುದು ಇಡೀ ಎಸ್‌ಐಆರ್‌ನ ಉದ್ದೇಶವನ್ನು ಸಂಶಯಕ್ಕೀಡು ಮಾಡಿದೆ. ಇತ್ತೀಚೆಗೆ ಸತ್ತಿದ್ದಾರೆ ಎಂದು ಮತದಾರರ ಪಟ್ಟಿಯಿಂದ ಕಿತ್ತುಹಾಕಲಾಗಿದ್ದ ಐವರು- ‘ಜೀವಂತವಾಗಿ’ ಆಯೋಗದ ಮುಂದೆ ಹಾಜರಾಗಿರುವ ಪತ್ರಿಕಾ ವರದಿ ಕೇವಲ ಒಂದು ಉದಾಹರಣೆ ಅಷ್ಟೇ. ಆರಂಭಿಕ ಪಟ್ಟಿಯಲ್ಲಿದ್ದು, ಚುನಾವಣಾ ಆಯೋಗವು ಕಿತ್ತುಹಾಕಿದ 65 ಲಕ್ಷ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ಸುಪ್ರೀಂಕೋರ್ಟ್ ಚಾಟಿ ಬೀಸಿದ ನಂತರ ಬಿಡುಗಡೆ ಮಾಡಿದುದರಿಂದಲೇ ಈ ಕೆಲವು ಅಕ್ರಮಗಳು ಬಯಲಾದದ್ದು. ಇಲ್ಲವಾದಲ್ಲಿ ಈ ‘ವೋಟ್ ಚೋರಿ’ ಪತ್ತೆಯಾಗುತ್ತಲೇ ಇರಲಿಲ್ಲ!

ಕೆಲವು ಮತದಾರರ ಹೆಸರುಗಳನ್ನು ಆನ್‌ಲೈನ್ ಆಗಿ, ನೆರೆಕರೆಯವರ ಮಾಹಿತಿಯಂತೆ ತೆಗೆಯಲಾಗಿದೆ ಎಂದೂ, ಆ ನೆರೆಕರೆಯವರಿಗೂ ಈ ವಿಷಯ ಗೊತ್ತಿಲ್ಲ ಎಂದೂ ವರದಿಗಳು ಬಂದವು. ಆಗ ಕಣ್ಣನ್ ಗೋಪಿನಾಥನ್ ಎಂಬ ಮಾಜಿ ಐಎಎಸ್ ಅಧಿಕಾರಿ ಮತದಾರರ ಆನ್‌ಲೈನ್ ನೋಂದಣಿ ಮತ್ತು ಹೆಸರು ತೆಗೆಯುವ ಪ್ರಕ್ರಿಯೆಯ ಬಗ್ಗೆ ಗಂಭೀರ ಭದ್ರತಾ ಲೋಪಗಳನ್ನು ಎತ್ತಿದ್ದರು. ಅವರು ಆಯೋಗದ ವಿಎಚ್‌ಎ ಸಾಫ್ಟ್‌ವೇರ್ ಮತ್ತು ಮತದಾರರ ಪೋರ್ಟಲ್‌ಗಳು ತೀರಾತೀರಾ ಕಳಪೆಯಾಗಿದ್ದು, ಇವು 100ರಲ್ಲಿ ಕೇವಲ 15 ಮೋಝಿಲ್ಲಾ ಅಬ್ಸರ್ವೇಟರಿ (Mozilla Observatory) ಅಂಕಗಳನ್ನು ಪಡೆದಿರುವುದಾಗಿ ಆರೋಪಿಸಿದ್ದರು. ಮೋಝಿಲ್ಲಾ ಎಂಬುದು ಉಚಿತ ಸಾಫ್ಟ್‌ವೇರ್ ಪ್ರತಿಪಾದಕರ ಸ್ವತಂತ್ರ ಲಾಭರಹಿತ ಸಂಸ್ಥೆಯಾಗಿದ್ದು, ನೀವು ಯಾವುದೇ ಸೈಟಿನ ಭದ್ರತೆಯನ್ನು ಅಲ್ಲಿ ಪರಿಶೀಲಿಸಬಹುದು. ನಾನು ಅದನ್ನು ಪರಿಶೀಲಿಸಿದಾಗ ಇದು ನಿಜವೆಂದೂ, ಆಯೋಗವು ಆರೋಪದ ಬಳಿಕ ಅದನ್ನು ಸುಧಾರಿಸಲು ಯತ್ನಿಸಿ ಅದನ್ನು 20ಕ್ಕೆ ಏರಿಸಿತ್ತು! ವಾಸ್ತವದಲ್ಲಿ ಈ ಸೈಟನ್ನೇ ಕೆಲದಿನ ಸುಧಾರಣೆಗೆ ಎಂದಿರಬೇಕು- ಮುಚ್ಚಿತ್ತು. ಆದರೆ ಈ ಅಂಕವೂ ತೀರಾ ಕಳಪೆ. ಹಣಕಾಸಿನ ಸೈಬರ್ ವಂಚನೆಯ ರೀತಿಯಲ್ಲಿಯೇ ಮತದಾರರ ಹೆಸರುಗಳನ್ನು ತೆಗೆಯುವ ಮತ್ತು ಸೇರಿಸುವ ಜಾಲಗಳು ಕಾರ್ಯಾಚರಿಸುತ್ತಿರುವ ಸಂಶಯ ಬಂದಾಗ, ಹಾಗೆ ಮಾಡಲು ಸಾಧ್ಯವೇ ಇಲ್ಲ ಎಂದಿದ್ದ ಚುನಾವಣಾ ಆಯೋಗವು, ತಕ್ಷಣವೇ ಇದಕ್ಕೆ ಹೊಸದಾಗಿ ಒಟಿಪಿ ವ್ಯವಸ್ಥೆಯನ್ನು ತರುವ ಮೂಲಕ ತನ್ನ ದೋಷವನ್ನು ಪರೋಕ್ಷವಾಗಿ ಒಪ್ಪಿಕೊಂಡಿತ್ತು.

ಇನ್ನೂ ಕೆಲವು ನಿಯಮಗಳನ್ನು ಉಲ್ಲಂಘಿಸಿದ ವಿಚಿತ್ರ ವಿಷಯಗಳಿವೆ. ಎಸ್‌ಐಆರ್ ವೇಳೆ ಎರಡೆರಡು ನೋಂದಣಿ ಮತ್ತು ನಕಲಿ, ಮೋಸ ಇತ್ಯಾದಿಗಳನ್ನು ಪತ್ತೆ ಹಚ್ಚಲೆಂದೇ ವಿಶೇಷವಾಗಿ ರೂಪಿಸಲಾಗಿದ್ದ ಸಾಫ್ಟ್‌ವೇರನ್ನು ಚುನಾವಣಾ ಆಯೋಗವು ಬಳಸುವ ಗೋಜಿಗೇ ಹೋಗಿಲ್ಲ! ಮೇಲಾಗಿ, ಆಯೋಗಕ್ಕೆ ARONET 2.0 ಮತ್ತು ERONET 2.0 ಎಂಬ ಆಂತರಿಕ ಕಂಪ್ಯೂಟರ್ ಪ್ರೋಗ್ರಾಮ್‌ಗಳು ಇವೆ. ಇವುಗಳಲ್ಲಿ ಸಂಶಯಾಸ್ಪದ ದಾಖಲೆಗಳನ್ನು ಪತ್ತೆಹಚ್ಚುವ ಸ್ವಂತ ಸಾಮರ್ಥ್ಯ ಇದೆ. ಇವುಗಳನ್ನು ಎಸ್‌ಐಆರ್ ವೇಳೆ ರಾಜ್ಯದ ಅಧಿಕಾರಿಗಳಿಗೆ ಒದಗಿಸಿಯೇ ಇಲ್ಲ. ಇದು ಆಯೋಗದ ಸ್ವಂತ ನಿಯಮಗಳ ಉಲ್ಲಂಘನೆಯಾಗಿದ್ದು, ಅದರ ಕುರಿತಾದ ಸಂಶಯಗಳು ಬಹುತೇಕ ಸಾಬೀತಾಗುತ್ತವೆ. ಇನ್ನೊಂದು ದೋಷವೆಂದರೆ, ಎಸ್‌ಐಆರ್ ವೇಳೆ ಕೇವಲ 82 ಶೇಕಡಾ ದತ್ತಾಂಶಗಳನ್ನು ಮಾತ್ರವೇ ಅವಸರವಸರವಾಗಿ ಎಂಟ್ರಿ ಮಾಡಿರುವುದು ಸಾಬೀತಾಗಿದೆ.

ಇವನ್ನೆಲ್ಲಾ ನೋಡಿದಾಗ ನಿಷ್ಪಕ್ಷವಾಗಿ ಚುನಾವಣೆ ನಡೆಸಬೇಕಾದ ಕಾವಲು ನಾಯಿ (watch dog) ಆಗಬೇಕಾದ ಸ್ವಾಯತ್ತ ಚುನಾವಣಾ ಆಯೋಗವು, ಮಡಿಲ ನಾಯಿ (lap dog) ಆಗಿರುವ ಸಂಶಯ ಬಲವಾಗುತ್ತದೆ. ಇದು ಭಾರತದ ಪ್ರಜಾಪ್ರಭುತ್ವಕ್ಕೇ ಗಂಭೀರ ಅಪಾಯ. ಬಿಹಾರ ಮಾತ್ರವಲ್ಲ; ಇಡೀ ದೇಶದ ಮತದಾರರು ಈ ‘ವೋಟ್ ಚೋರಿ’ಯನ್ನು ಗಂಭೀರವಾಗಿ ವಿರೋಧಿಸದಿದ್ದರೆ, ವೋಟ್ ಚೋರರು ಎಲ್ಲೆಡೆ ಮತ್ತೆ ಮತ್ತೆ ಗಾದಿ ಏರುವುದು ನಿಶ್ಚಿತ.

share
ನಿಖಿಲ್ ಕೋಲ್ಪೆ
ನಿಖಿಲ್ ಕೋಲ್ಪೆ
Next Story
X