ನೀರಜ್ ಚೋಪ್ರಾಗೆ 2 ವರ್ಷದಲ್ಲಿ ಮೊದಲ ಡೈಮಂಡ್ ಲೀಗ್ ಜಯ

PC: x.com/India_AllSports
ಹೊಸದಿಲ್ಲಿ: ಭಾರತದ ಒಲಿಂಪಿಕ್ ಪದಕ ವಿಜೇತ ಅಥ್ಲೀಟ್ ನೀರಜ್ ಛೋಪ್ರಾ ಶುಕ್ರವಾರ ಪ್ಯಾರೀಸ್ ನಲ್ಲಿ ನಡೆದ ಟೂರ್ನಿಯಲ್ಲಿ ಎರಡು ವರ್ಷದಲ್ಲಿ ಮೊಟ್ಟಮೊದಲ ಬಾರಿಗೆ ಡೈಮಂಡ್ ಲೀಗ್ ಜಯಿಸಿದರು. ಸತತವಾಗಿ ಎರಡನೇ ಸ್ಥಾನ ಪಡೆಯುತ್ತಾ ಬಂದ ಚೋಪ್ರಾ ಶುಕ್ರವಾರ ಜರ್ಮನಿಯ ಜೂಲಿಯನ್ ವೆಬೆರ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದರು.
ಐದು ಅಥ್ಲೀಟ್ ಗಳು 90 ಮೀಟರ್ ದೂರವನ್ನು ಮೀರಿದ ಈ ಸ್ಪರ್ಧಾತ್ಮಕ ಫೀಲ್ಡ್ ನಲ್ಲಿ ಮೊದಲ ಎಸೆತದಲ್ಲೇ ಅಚ್ಚರಿಯ 88.16 ಮೀಟರ್ ದೂರವನ್ನು ತಲುಪಿದರು. ಬಳಿಕ ಪ್ರಯತ್ನಗಳಲ್ಲಿ 85.10 ಮೀಟರ್, ಮೂರು ಫೌಲ್ ಗಳು ಹಾಗೂ ಅಂತಿಮ ಥ್ರೋನಲ್ಲಿ 82.89 ಮೀಟರ್ ಸಾಧಿಸಿದರು.
ಮೊದಲ ಥ್ರೋನಲ್ಲಿ 87.88 ಮೀಟರ್ ಎಸೆದ ಜೂಲಿಯನ್ ವೆಬೆರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಬ್ರೆಝಿಲ್ ನ ಲೂಯಿಝ್ ಮೌರಿಸಿಯೊ ಡ ಸಿಲ್ವಾ ಮೂರನೇ ಸುತ್ತಿನಲ್ಲಿ 86.62 ಮೀಟರ್ ನೊಂದಿಗೆ ತೃತೀಯ ಸ್ಥಾನಿಯಾದರು. ಇದಕ್ಕೂ ಮುನ್ನ ಚೋಪ್ರಾ ದೋಹಾ ಡೈಮಂಡ್ ಲೀಗ್ ನಲ್ಲಿ 90.23 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರೂ ವೆಬೆರ್ ಅವರ ಅಪೂರ್ವ ಸಾಧನೆ (91.06) ಯ ಕಾರಣದಿಂದ ದ್ವಿತೀಯ ಸ್ಥಾನಿಯಾಗಿದ್ದರು.
ಬಳಿಕ ಮೇ 23ರಂದು ಪೋಲಂಡ್ ನಲ್ಲಿ ನಡೆದ ಜನೂಝ್ ಕುಸೊಸಿನ್ಸ್ಕಿ ಸ್ಮಾರಕ ಟೂರ್ನಿಯಲ್ಲಿ ವೆಬೆರ್ 86.12 ಮೀಟರ್ ದೂರ ಸಾಧಿಸಿ ಅಗ್ರಸ್ಥಾನಿಯಾದರೆ, ಚೋಪ್ರಾ 84.14 ಮೀಟರ್ ನೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದರು.
ಇದಕ್ಕೂ ಮುನ್ನ 2023ರ ಜೂನ್ ನಲ್ಲಿ 87.66 ಮೀಟರ್ ನೊಂದಿಗೆ ಚೋಪ್ರಾ ಕೊನೆಯ ಡೈಮಂಡ್ ಲೀಗ್ ಪ್ರಶಸ್ತಿ ಡಪೆದಿದ್ದರು. ಬಳಿಕ ಈ ಜಯದ ವರೆಗೆ ಸತತ ಆರು ಡೈಮಂಡ್ ಲೀಗ್ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನಿಯಾಗಿದ್ದರು. ಇದಕ್ಕೂ ಮುನ್ನ ಪ್ಯಾರೀಸ್ ನಲ್ಲಿ 2017ರ ಜ್ಯೂನಿಯರ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 84.67 ಮೀಟರ್ ನೊಂದಿಗೆ ಐದನೇ ಸ್ಥಾನ ಪಡೆದಿದ್ದರು.







