ಕಲ್ಲು-ಮುಳ್ಳಿನ ಹಾದಿಯಲ್ಲಿ ಅಖಿಲೇಶ್

ಅಖಿಲೇಶ್ ಸಣ್ಣಪುಟ್ಟ ಪಕ್ಷಗಳನ್ನು ತಮ್ಮೊಟ್ಟಿಗೆ ಕರೆದೊಯ್ಯುವ ಮನಸ್ಸು ಹೊಂದಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಸೋಲಿಸಲು ಒಂದೊಂದು ಮತವೂ ಮುಖ್ಯ ಎಂದು ಅವರಿಗೆ ಗೊತ್ತಿದೆ. ಹೀಗಾಗಿ, ಸಮಾಜವಾದಿ ಪಕ್ಷದ ಕೋಟಾದಲ್ಲಿ ಸಣ್ಣಪುಟ್ಟ ಪಕ್ಷಗಳಿಗೂ ಪಾಲು ಕೊಡುವ ಔದಾರ್ಯ ಹೊಂದಿದ್ದಾರೆ. ಅದೇ ಮನೋಭಾವನೆ ಕಾಂಗ್ರೆಸ್ ನಾಯಕರಿಗಿದ್ದರೆ ಮೈತ್ರಿ ಸಮಸ್ಯೆಯಾಗುವುದಿಲ್ಲ. ಎಲ್ಲವೂ ತಮಗೇ ಬೇಕೆಂದರೆ ಮೈತ್ರಿ ಉಳಿಯುವುದಿಲ್ಲ. ಈ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್-ಎಸ್ಪಿ ಮೈತ್ರಿ ಏನಾಗಲಿದೆ ಎಂಬ ಕುತೂಹಲ.
ಸಮಾಜವಾದಿ ಪಕ್ಷದ ಮುಖಂಡ, ಉತ್ತರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ರಾಜಕೀಯವಾಗಿ ಮಾಗಿದ್ದಾರೆ. ಅಪ್ಪನ ತೊಡೆ ಮೇಲೆ ಕೂತು ರಾಜಕಾರಣ ನೋಡಿ ಬೆಳೆದರೂ, ಜಾಣ್ಮೆಯಲ್ಲಿ ಮುಲಾಯಂ ಸಿಂಗ್ ಅವರನ್ನು ಮೀರಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಅವರ ರಾಜಕೀಯ ಪ್ರೌಢಿಮೆ ಸಾಬೀತಾಗಿದೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್ಪಿ) ‘ಪೀಡ’ (ಪಿಚಡಾ, ದಲಿತ್, ಅಲ್ಪಸಂಖ್ಯಾತ್) ಪ್ರಯೋಗ ಯಶಸ್ವಿಯಾದರೆ ದೇಶದ ರಾಜಕೀಯ ಚಿತ್ರಣ ಬದಲಾಗಬಹುದು.
ಉತ್ತರ ಪ್ರದೇಶ ದೊಡ್ಡ ರಾಜ್ಯ. ಮುಂದಿನ ವರ್ಷದ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿದೆ. ಚುನಾವಣಾ ಆಯೋಗ ಜನವರಿಯಲ್ಲಿ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ. ಒಮ್ಮೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿ, ಅಭ್ಯರ್ಥಿ ಪಟ್ಟಿ ಬಿಡುಗಡೆಯಾದರೆ ‘ಅಖಾಡ’ ರಂಗೇರಲಿದೆ. ಒಟ್ಟು 403 ಸ್ಥಾನಗಳನ್ನು ಒಳಗೊಂಡಿರುವ ವಿಧಾನಸಭೆಯಲ್ಲಿ ಅತೀ ಹೆಚ್ಚು ಸ್ಥಾನ ಗೆದ್ದಿರುವ ಬಿಜೆಪಿಯ ಯೋಗಿ ಆದಿತ್ಯನಾಥ್ ಸರಕಾರ ಅಧಿಕಾರದಲ್ಲಿದೆ. ಕಳೆದ ಎರಡು ಅವಧಿಯಿಂದ ಸತತವಾಗಿ ಆಡಳಿತ ನಡೆಸುತ್ತಿರುವ ಯೋಗಿ ಮೂರನೇ ಬಾರಿ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದ್ದಾರೆ. ಅವರಿಗೆ ‘ಆಡಳಿತ ವಿರೋಧಿ ಅಲೆ’ ಇದೆ. ಅವರ ‘ಬುಲ್ಡೋಜರ್ ನ್ಯಾಯ’ದ ಬಗ್ಗೆ ಪರ-ವಿರುದ್ಧದ ಜನಾಭಿಪ್ರಾಯಗಳಿವೆ. ಯೋಗಿ ಆದಿತ್ಯನಾಥ್ ವಿರುದ್ಧದ ಜನಾಭಿಪ್ರಾಯ ಬಳಸಿಕೊಳ್ಳುವುದು ವಿರೋಧ ಪಕ್ಷಗಳ ಕೈಯಲ್ಲಿದೆ. ವಿರೋಧ ಪಕ್ಷಗಳ ನಡುವೆ ಅಕಸ್ಮಾತ್ ಹೊಂದಾಣಿಕೆ ಏರ್ಪಡದಿದ್ದರೆ ಯೋಗಿ ಅವರಿಗೆ ಅಡ್ಡಿ-ಆತಂಕ ಇರುವುದಿಲ್ಲ. ಗೆಲುವಿನ ಹಾದಿ ಸುಗಮವಾಗಲಿದೆ.
ಈಗಾಗಲೇ ಐಎನ್ಡಿಐಎ (ಇಂಡಿಯಾ ಬ್ಲಾಕ್) ಒಕ್ಕೂಟದ ಪ್ರಮುಖ ಪಾಲುದಾರ ಪಕ್ಷಗಳಾದ ಸಮಾಜವಾದಿ ಪಕ್ಷ (ಎಸ್ಪಿ), ಕಾಂಗ್ರೆಸ್ ನಡುವೆ ಕ್ಷೇತ್ರಗಳ ಹಂಚಿಕೆ ಮಾತುಕತೆ ಶುರುವಾಗಿದೆ. ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ’ದ (ಎನ್ಡಿಎ) ಮಿತ್ರ ಪಕ್ಷಗಳ ಮಧ್ಯೆಯೂ ಸೀಟು ಹಂಚಿಕೆ ಚರ್ಚೆ ನಡೆಯುತ್ತಿದೆ. ಸೋಮವಾರ ಎಸ್ಪಿ-ಕಾಂಗ್ರೆಸ್ ನಡುವೆ ಮೊದಲ ಸುತ್ತಿನ ಸಮಾಲೋಚನೆ ನಡೆಯಿತು. ಮಂಗಳವಾರ ಎರಡನೇ ಸುತ್ತಿನ ಮಾತುಕತೆ ಮುಗಿದಿದೆ. ಕಾಂಗ್ರೆಸ್ 131 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆಯಂತೆ. ಮೊದಲು 181 ಕ್ಷೇತ್ರ ಕೇಳಿತ್ತು. ಎಸ್ಪಿ 26 ಕ್ಷೇತ್ರ ಕೊಡುವುದಾಗಿ ಹೇಳಿದೆ. ಚರ್ಚೆ ತಾರ್ಕಿಕ ಅಂತ್ಯ ಕಂಡಿಲ್ಲ. ಇನ್ನು ಒಂದೆರಡು ಸುತ್ತು ನಡೆಯಲಿದೆ. ಕಾಂಗ್ರೆಸ್ಗೆ ಅಂತಿಮವಾಗಿ 50 ಕ್ಷೇತ್ರ ಕೊಡಬಹುದು ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ. ಒಂದು ಪಕ್ಷ ಕಾಂಗ್ರೆಸ್ 100 ಸೀಟು ಬೇಕೆಂದು ಪಟ್ಟು ಹಿಡಿದರೆ ಮೈತ್ರಿಗೇ ಭಂಗ ಬರಬಹುದು.
2022ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗೆದ್ದಿದ್ದು 111 ಸ್ಥಾನ. ಇದರ ಮಿತ್ರ ಪಕ್ಷಗಳು 14 ಸ್ಥಾನ ಪಡೆದಿದ್ದವು. ಆಗ ಕಾಂಗ್ರೆಸ್ಗೆ ಸಿಕ್ಕಿದ್ದು ಬರೀ ಎರಡು ಸ್ಥಾನ. ಅದು ಸ್ಪರ್ಧಿಸಿದ್ದು 399 ಕ್ಷೇತ್ರಗಳಲ್ಲಿ. ಪಡೆದಿದ್ದು ಶೇ. 2.33ರಷ್ಟು ಮತಗಳನ್ನು. ಎಸ್ಪಿ ಮತ್ತು ಕಾಂಗ್ರೆಸ್ ಮಧ್ಯೆ ಮೈತ್ರಿ ಇರಲಿಲ್ಲ. ಎರಡೂ ಪಕ್ಷಗಳು ಪ್ರತ್ಯೇಕವಾಗಿ ಹೋರಾಡಿದ್ದವು. ಜತೆಗೆ ಹೋಗಿದ್ದರೆ ಹೆಚ್ಚು ಸ್ಥಾನ ಗೆಲ್ಲಬಹುದಿತ್ತು. ಬಿಜೆಪಿ ಗೆದ್ದಿದ್ದು 255 ಸ್ಥಾನ.
2024ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ ಮಿತ್ರ ಪಕ್ಷಗಳು 43 ಸ್ಥಾನ ಗೆದ್ದಿವೆ. (ಎಸ್ಪಿ 37, ಕಾಂಗ್ರೆಸ್ 6), ಎನ್ಡಿಎ ಮಿತ್ರ ಪಕ್ಷಗಳು 36 ಕ್ಷೇತ್ರಗಳಲ್ಲಿ ಆಯ್ಕೆ (ಬಿಜೆಪಿ 33, ಆರ್ಎಲ್ಡಿ 2, ಅಪ್ನಾ ದಳ 1) ಆಗಿವೆ. ಅಲ್ಲದೆ, ಆಝಾದ್ ಸಮಾಜ್ ಪಾರ್ಟಿ 1 ಸ್ಥಾನ ಪಡೆದಿದೆ.
2022ರ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆ ಹೋಲಿಸಿ, ವಿಶ್ಲೇಷಿಸಿದರೆ ‘ವಿರೋಧ ಪಕ್ಷಗಳ ಒಗ್ಗಟ್ಟಿನಲ್ಲಿ ಬಲವಿದೆ’ ಎಂಬುದು ಸ್ಪಷ್ಟವಾಗುತ್ತದೆ. ಲೋಕಸಭೆಯಲ್ಲಿ ಕಾಂಗ್ರೆಸ್ಗೆ ಬಂದಿದ್ದು ಶೇ. 9.46ರಷ್ಟು ಮತಗಳು. ಅದಕ್ಕೆ ಬೆಂಬಲವಾಗಿ ನಿಂತಿದ್ದು ಎಸ್ಪಿ. ಅಂದರೆ, ಜತೆಗೂಡಿದ್ದರಿಂದ ಹೆಚ್ಚು ಸ್ಥಾನ-ಮತಗಳನ್ನು ಪಡೆಯಲು ಸಾಧ್ಯವಾಯಿತು. ಕಾಂಗ್ರೆಸ್ಗೆ ಎಸ್ಪಿ ಬಿಟ್ಟಿದ್ದು 17 ಕ್ಷೇತ್ರಗಳನ್ನು. ಇದು ಎಸ್ಪಿಗೆ ತುಟ್ಟಿಯಾಯಿತು. ರಾಷ್ಟ್ರೀಯ ಜನತಾದಳವನ್ನು (ಆರೆಲ್ಡಿ) ಒಟ್ಟಿಗೆ ಒಯ್ದಿದ್ದರೆ ಇನ್ನೂ ಎರಡು-ಮೂರು ಸ್ಥಾನಗಳು ಹೆಚ್ಚುತ್ತಿದ್ದವು. ಆರ್ಎಲ್ಡಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಲಿಷ್ಠವಾಗಿದೆ. ಏಕೆಂದರೆ, ಅದು ಜಾಟರ ಅಡ್ಡ. ಆರ್ಎಲ್ಡಿಗೆ ಜಾತಿಯೇ ಬಂಡವಾಳ.
ಉತ್ತರ ಪ್ರದೇಶದಲ್ಲಿ ಕಳೆದುಹೋಗಿರುವ ನೆಲೆ ಕಂಡುಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ. ಇದು 140 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ರಾಷ್ಟ್ರೀಯ ಪಕ್ಷದ ಹೀನಾಯ ಸ್ಥಿತಿ. ಕಾಂಗ್ರೆಸ್ ನಾಯಕತ್ವ ವಹಿಸಿದ್ದ, ವಹಿಸುತ್ತಿರುವ ನೆಹರೂ-ಗಾಂಧಿ ಕುಟುಂಬಕ್ಕೆ ಈ ರಾಜ್ಯ ರಾಜಕೀಯ ಬದುಕು ನೀಡುತ್ತಿದೆ. ನೆಹರೂ ಅವರಿಂದ ರಾಹುಲ್ವರೆಗೆ ಎಲ್ಲರ ಕೈ ಹಿಡಿದಿದೆ. ಯಾವುದೇ ಪಕ್ಷ ಒಮ್ಮೆ ನೆಲೆ ಕಳೆದುಕೊಂಡರೆ ಮತ್ತೆ ಚೇತರಿಕೆ ಕಷ್ಟ. ಇದೇ ಪರಿಸ್ಥಿತಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ ಬಂದೊದಗಿದೆ. ಅದಕ್ಕೆ ನಿಜವಾದ ಶಕ್ತಿ-ಸಾಮರ್ಥ್ಯದ ಅರಿವಿಲ್ಲ. ಪಕ್ಷದ ನಾಯಕರು ಭ್ರಮೆಯಲ್ಲಿದ್ದಾರೆ. ವಾಸ್ತವ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಅರಿಯುವ ವ್ಯವಧಾನವೂ ಇಲ್ಲ. ಅನಗತ್ಯವಾಗಿ ಹೆಚ್ಚು ಕ್ಷೇತ್ರ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಗೆಲುವು ಸಾಧ್ಯವಿರುವ ಕ್ಷೇತ್ರಗಳನ್ನು ಕೇಳಿದರೆ ಅಡ್ಡಿಯಿಲ್ಲ. ಎಲ್ಲ ತನಗೇ ಬೇಕೆಂದರೆ ಹೇಗೆ? ಎಐಸಿಸಿ ನಾಯಕರು ಹಿಂದಿನ ಅನುಭವದಿಂದ ಪಾಠ ಕಲಿತಿಲ್ಲ. ಒಂದು ಚುನಾವಣೆ ಗೆದ್ದ ತಕ್ಷಣ ಎಲ್ಲ ಚುನಾವಣೆಗಳನ್ನು ಗೆದ್ದೇ ಬಿಡುತ್ತೇವೆ ಎಂಬ ಭಾವನೆ ಬೆಳೆಸಿಕೊಂಡಿದ್ದಾರೆ. ಸಮಸ್ಯೆ ಇರುವುದು ಅಲ್ಲೇ.
2017ರ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಕಾಂಗ್ರೆಸ್ಗೆ ಅಖಿಲೇಶ್ 105 ಕ್ಷೇತ್ರ ಬಿಟ್ಟಿದ್ದರು. ಗೆದ್ದಿದ್ದು ಏಳು ಕಡೆ ಮಾತ್ರ. ಗಾಂಧಿ ಕುಟುಂಬಕ್ಕೆ ಸುರಕ್ಷಿತವೆಂದು ಭಾವಿಸಲಾಗಿರುವ ರಾಯ್ಬರೇಲಿ, ಅಮೇಠಿ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದರು. 2017ರ ಸೀಟು ಹಂಚಿಕೆ ಮಾನದಂಡದ ಆಧಾರದ ಮೇಲೆ ಕಾಂಗ್ರೆಸ್ ಅಧಿಕ ಕ್ಷೇತ್ರಗಳನ್ನು ಕೇಳುತ್ತಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆದಿದೆ. 90ರ ದಶಕದಲ್ಲಿ ಅಯೋಧ್ಯೆ ರಾಮನನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿದ ಬಿಜೆಪಿ ನಾಯಕರು ಸದ್ಯ ಕೃಷ್ಣನ ಭಜನೆ ಮಾಡುತ್ತಿದ್ದಾರೆ. ಮಥುರಾ ಕೃಷ್ಣ ದೇವಸ್ಥಾನದ ವಿವಾದ ಕೆದಕುತ್ತಿದ್ದಾರೆ. ಆದರೆ, ‘ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ’ ಅಸ್ತ್ರವಾಗಿ ಸಿಕ್ಕಿರುವುದು ವಿರೋಧ ಪಕ್ಷಗಳ ಅದೃಷ್ಟ. ಅದನ್ನು ಸಮರ್ಪಕವಾಗಿ ಬಳಸಿದರೆ ರಾಜಕೀಯವಾಗಿ ಲಾಭ ಆಗಬಹುದು. ಮಥುರಾ ವಿವಾದವನ್ನು ಜನರು ಹೇಗೆ ನೋಡುತ್ತಾರೆ ಎಂಬುದರ ಮೇಲೆ ಬಿಜೆಪಿ ಭವಿಷ್ಯ ನಿರ್ಧಾರವಾಗಲಿದೆ.
ಯೋಗಿಗಷ್ಟೇ ಅಲ್ಲ, ಮೋದಿಗೂ ಉತ್ತರ ಪ್ರದೇಶ ಮುಖ್ಯ. ಏಕೆಂದರೆ ಅವರು ಆರಿಸಿ ಬಂದಿರುವುದು ಈ ರಾಜ್ಯದಿಂದಲೇ. ಹೇಗಾದರೂ ಸರಿ ಸರಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಅಕಸ್ಮಾತ್ ಸರಕಾರ ಹೋದರೆ ಪ್ರಧಾನಿ ವರ್ಚಸ್ಸಿಗೂ ಧಕ್ಕೆ ಆಗುತ್ತದೆ. ಅವರ ಬದಲಾವಣೆಗೆ ಬಿಜೆಪಿಯೊಳಗೆ ಒತ್ತಾಯ ಬರಬಹುದು.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ದೊಡ್ಡ ನೆಲೆ ಇದೆ. ಅದು ಸುಖಾಸುಮ್ಮನೆ ಬಂದಿಲ್ಲ. ಸಣ್ಣಪುಟ್ಟ ಜಾತಿಗಳನ್ನು ಒತ್ತಟ್ಟಿಗೆ ತರಲು ಅಖಿಲೇಶ್ ಯಾದವ್ ಶ್ರಮಪಟ್ಟಿದ್ದಾರೆ. ಯಾದವರ ಜತೆಗೆ ಸಣ್ಣಪುಟ್ಟ ಹಿಂದುಳಿದ ಜಾತಿಗಳನ್ನು ಬೆಸೆದಿದ್ದಾರೆ. ದಲಿತರು ಹಾಗೂ ಮುಸ್ಲಿಮ್ ಸಮುದಾಯವನ್ನು ಪೋಣಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ‘ಸೋಷಿಯಲ್ ಇಂಜಿನಿಯರಿಂಗ್’ ಅಚ್ಚುಕಟ್ಟಾಗಿ ಮಾಡಿದ್ದಾರೆ.
ಮುಲಾಯಂ ಅವಧಿಯಲ್ಲಿ ಹೀಗಿರಲಿಲ್ಲ. ಮುಸ್ಲಿಮರು-ಯಾದವರ (ಎಂ-ವೈ) ಧ್ರುವೀಕರಣದಲ್ಲಿ ರಾಜಕಾರಣ ಮಾಡಿದ್ದರು. ನೆರೆಯ ಬಿಹಾರದಲ್ಲಿ ಲಾಲೂ ಮಾಡಿದ್ದು ಅದನ್ನೇ. ಅಖಿಲೇಶ್ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಆದರೆ, ಲಾಲು ಅವರ ಪುತ್ರ ತೇಜಸ್ವಿ ಅವರಿಗೆ ಇಂಥ ಪ್ರಯೋಗ ನಡೆಸಲು ಸಾಧ್ಯವಾಗಲಿಲ್ಲ. ಅದರಿಂದ ಬಿಹಾರದಲ್ಲಿ ವಿರೋಧ ಪಕ್ಷಗಳಿಗೆ ಸೋಲಾಯಿತು. ಅಲ್ಲೂ ಆರ್ಜೆಡಿ- ಕಾಂಗ್ರೆಸ್ ಪೂರ್ಣ ಮನಸ್ಸಿನಿಂದ ಒಗ್ಗೂಡಿರಲಿಲ್ಲ ಎಂಬುದು ಕಟುಸತ್ಯ. ಅಲ್ಲದೆ, ಎಸ್ಐಆರ್ ಭೂತ ವಿರೋಧ ಪಕ್ಷಗಳನ್ನು ಕಾಡಿತು.
ಅಖಿಲೇಶ್ ಸಣ್ಣಪುಟ್ಟ ಪಕ್ಷಗಳನ್ನು ತಮ್ಮೊಟ್ಟಿಗೆ ಕರೆದೊಯ್ಯುವ ಮನಸ್ಸು ಹೊಂದಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಸೋಲಿಸಲು ಒಂದೊಂದು ಮತವೂ ಮುಖ್ಯ ಎಂದು ಅವರಿಗೆ ಗೊತ್ತಿದೆ. ಹೀಗಾಗಿ, ಸಮಾಜವಾದಿ ಪಕ್ಷದ ಕೋಟಾದಲ್ಲಿ ಸಣ್ಣಪುಟ್ಟ ಪಕ್ಷಗಳಿಗೂ ಪಾಲು ಕೊಡುವ ಔದಾರ್ಯ ಹೊಂದಿದ್ದಾರೆ. ಅದೇ ಮನೋಭಾವನೆ ಕಾಂಗ್ರೆಸ್ ನಾಯಕರಿಗಿದ್ದರೆ ಮೈತ್ರಿ ಸಮಸ್ಯೆಯಾಗುವುದಿಲ್ಲ. ಎಲ್ಲವೂ ತಮಗೇ ಬೇಕೆಂದರೆ ಮೈತ್ರಿ ಉಳಿಯುವುದಿಲ್ಲ. ಈ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್-ಎಸ್ಪಿ ಮೈತ್ರಿ ಏನಾಗಲಿದೆ ಎಂಬ ಕುತೂಹಲ.
ಸದ್ಯಕ್ಕೆ ಉತ್ತರ ಪ್ರದೇಶದ ರಾಜಕಾರಣ ‘ಒಂದು ರಾಜ್ಯ ಹತ್ತಾರು ವಾರಸುದಾರರು’ ಎನ್ನುವಂತಾಗಿದೆ. ಅಖಿಲೇಶ್ ಒಂದು ಕಡೆ ಬಿಜೆಪಿ ನೇತೃತ್ವದ ಎನ್ಡಿಎ ಜತೆ ಗುದ್ದಾಡಬೇಕು. ಮತ್ತೊಂದೆಡೆ ಚಂದ್ರಶೇಖರ್ ಆಝಾದ್ರ ಆಝಾದ್ ಸಮಾಜ್ ಪಾರ್ಟಿ- ಎಎಂಐಎಂ ಮೈತ್ರಿ ಜತೆ ಹೋರಾಡಬೇಕು. ಸಾಲದೆಂಬಂತೆ, ಮಾಯಾವತಿ ಅವರ ಬಹುಜನ ಸಮಾಜದ ಸವಾಲು ಬೇರೆ. ಆಝಾದ್ ಮತ್ತು ಮಾಯಾವತಿ ದಲಿತರ ಮತಗಳಿಗೆ ಕನ್ನ ಹಾಕುವ ಪ್ರಯತ್ನದಲ್ಲಿದ್ದಾರೆ. ಎಎಂಐಎಂ ಮುಸ್ಲಿಮ್ ಮತಗಳ ಮೇಲೆ ಕಣ್ಣಿಟ್ಟಿದೆ. ಇಷ್ಟೊಂದು ಅಡ್ಡಿ-ಆತಂಕವಿದ್ದರೂ ಅಖಿಲೇಶ್ ಗೆದ್ದು ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದ್ದಾರೆ. ಅವರ ಜತೆ ಕಾಂಗ್ರೆಸ್ ಮತ್ತಿತರ ಪಕ್ಷಗಳು ಕೈಜೋಡಿಸಬೇಕು. ರಾಜಸ್ಥಾನದ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಭಾರೀ ಗೆಲುವು ದಾಖಲಿಸಿದೆ. ಈ ಗೆಲುವು ಉತ್ತರ ಪ್ರದೇಶ ಇಂಡಿಯಾ ಬ್ಲಾಕ್ ಮೈತ್ರಿಗೆ ತೊಡಕಾಗದಿದ್ದರೆ ಎಸ್ಪಿ-ಕಾಂಗ್ರೆಸ್ಗೆ ಎದುರಾಳಿ ಬಿಜೆಪಿ ನೇತೃತ್ವದ ಎನ್ಡಿಎ ಎದುರಿಸುವುದು ಸುಲಭ.
(ಅಂಕಣಕಾರರು ಹಿರಿಯ ಪತ್ರಕರ್ತರು)






