ಚುನಾವಣಾ ಆಯೋಗಕ್ಕೆ ಬೇಕಿದೆ ‘ಸರ್ಜರಿ’!

ಚುನಾವಣಾ ಆಯೋಗದ ಸಿಇಸಿ ಮತ್ತು ಇಸಿಗಳ ಆಯ್ಕೆ ಪ್ರಕ್ರಿಯೆಯಲ್ಲೇ ಲೋಪವಿದೆ. ಅದನ್ನು ಬದಲಾವಣೆ ಮಾಡಿ ಪ್ರಕ್ರಿಯೆಯನ್ನು ಬಿಗಿಗೊಳಿಸಬೇಕು. ಸರಕಾರದ ನಿಯಂತ್ರಣ ತಪ್ಪಬೇಕು. ಇದು ಬದಲಾಗದಿದ್ದರೆ ಯಾವುದೇ ಪಕ್ಷದ ಸರಕಾರವಿದ್ದರೂ ದುರುಪಯೋಗ ಆಗುತ್ತದೆ. ಪ್ರಧಾನಿ, ಅವರೇ ಆಯ್ಕೆ ಮಾಡಿದ ಸಂಪುಟ ದರ್ಜೆ ಸಚಿವರು, ಲೋಕಸಭೆ ವಿರೋಧ ಪಕ್ಷದ ನಾಯಕರನ್ನೊಳಗೊಂಡ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಅವರ ಜತೆ ಮುಖ್ಯ ನ್ಯಾಯಮೂರ್ತಿಗಳೂ ಇರಬೇಕು. ಬೇರೆ ಕ್ಷೇತ್ರಗಳ ತಜ್ಞರೂ ಸೇರಬೇಕು. ಮುಖ್ಯ ನ್ಯಾಯಮೂರ್ತಿಯನ್ನು ಇದರಿಂದ ಹೊರಗಿಡಲಾಗಿದೆ. ಈ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಆಗಬೇಕಿದೆ.
‘‘ನಾನು ಸರಕಾರಕ್ಕಾಗಿ ಕೆಲಸ ಮಾಡುತ್ತೇನೆ. ಆದರೆ, ಸರಕಾರದ ಅಡಿಯಾಳಲ್ಲ. ನಮ್ಮದು ಭಾರತ ಚುನಾವಣಾ ಆಯೋಗವೇ ವಿನಾ ಸರಕಾರದ ಆಯೋಗವಲ್ಲ’’ ಎಂದು ಮೂರೂವರೆ ದಶಕದ ಹಿಂದೆ (1990) ಮುಖ್ಯ ಚುನಾವಣಾ ಕಮಿಷನರ್ (ಸಿಇಸಿ) ಆಗಿದ್ದ ಟಿ.ಎನ್. ಶೇಷನ್ ಗುಡುಗಿದ್ದರು. ಸಿಇಸಿ ಕುರ್ಚಿಯಲ್ಲಿ ಕೂತ ಬಳಿಕ ಅವರು ಕಾನೂನು ಸಚಿವರ ಭೇಟಿಗೆ ಹೋಗಲಿಲ್ಲ. ಕ್ಯಾಬಿನೆಟ್ ಸೆಕ್ರೆಟರಿ ಕಚೇರಿ ಬಾಗಿಲು ಕಾಯಲಿಲ್ಲ. ಅಷ್ಟೇ ಅಲ್ಲ, ‘ಇದು ಮಾಡಿ, ಅದು ಮಾಡಿ. ಅದನ್ನು ಮಾಡಬೇಡಿ, ಇದನ್ನು ಮಾಡಬೇಡಿ’ ಎಂದು ಸಚಿವರು ಕಳಿಸುತ್ತಿದ್ದ ಅನಧಿಕೃತ ಟಿಪ್ಪಣಿಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡದೆ, ಹಿಂದಿರುಗಿಸುತ್ತಿದ್ದರು. ‘‘ಅನಧಿಕೃತ ಟಿಪ್ಪಣಿ ಕಳಿಸಬೇಡಿ. ನಾನು ನಿಮ್ಮ ಸೇವಕನಲ್ಲ’’ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರು.
ಸ್ವತಃ ಶೇಷನ್, ರಾಜೀವ್ ಗಾಂಧಿ ಸರಕಾರದಲ್ಲಿ ಕ್ಯಾಬಿನೆಟ್ ಸೆಕ್ರೆಟರಿ ಆಗಿದ್ದವರು. ಫೈಲ್‌ಗಳು ಹೇಗೆ ರವಾನೆಯಾಗುತ್ತವೆ ಎಂಬುದು ಅವರಿಗೆ ಗೊತ್ತಿತ್ತು. ಹೀಗಾಗಿ, ಕಾನೂನು ಸಚಿವರನ್ನು ಭೇಟಿಯಾಗಲು ಅವರು ನಿರಾಕರಿಸಿದ್ದರು. ‘ಅಗತ್ಯವಿದ್ದರೆ ಕಾನೂನು ಕಾರ್ಯದರ್ಶಿಯೇ ನನ್ನ ಬಳಿ ಬರಲಿ’ ಎಂದು ಖಡಕ್ ಸಂದೇಶ ಕಳಿಸಿದ್ದರು. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಆಪ್ತ ಕಾರ್ಯದರ್ಶಿ ಕರೆ ಮಾಡಿದರೂ ಕೇರ್ ಮಾಡಲಿಲ್ಲ. ಆ ಧೈರ್ಯ-ತಾಕತ್ತು, ನೇರ-ನಿಷ್ಠುರ ನಡೆ ಎಷ್ಟು ಅಧಿಕಾರಿಗಳಿಗೆ ಬರಲು ಸಾಧ್ಯ.
ಮುಖ್ಯ ಚುನಾವಣಾ ಕಮಿಷನರ್ ಆಗಿ ಮಾಡಿದ ಕೆಲಸಗಳಿಂದಾಗಿ ಶೇಷನ್ ಈಗಲೂ ಜನ ಮಾನಸದಲ್ಲಿ ಉಳಿದಿದ್ದಾರೆ. ‘ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ. ಯಾರ ಹಂಗಿಲ್ಲದೆ ಸ್ವತಂತ್ರವಾಗಿ ಕೆಲಸ ಮಾಡಬಹುದು’ ಎಂದು ತೋರಿಸಿದರು. ರಾಜಕಾರಣಿಗಳಿಗೆ ಸಿಂಹ ಸ್ವಪ್ನವಾಗಿದ್ದರು. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ಒಮ್ಮೆ ಚುನಾವಣೆ ಮುಂದೂಡುವುದಾಗಿ ಬೆದರಿಕೆ ಹಾಕಿದ್ದರು. ‘ಬೂತ್ ರಿಗ್ಗಿಂಗ್’ ಆರೋಪ ಸಂಬಂಧ ಕೆಲವು ಉಪ ಚುನಾವಣೆಗಳನ್ನು ರದ್ದು ಮಾಡಿದ್ದರು.
ಈಗ ಪರಿಸ್ಥಿತಿ ಉಲ್ಟಾ ಆಗಿದೆ. ‘ಚುನಾವಣಾ ಆಯೋಗವು ಕೇಂದ್ರ ಸರಕಾರ, ಅದರಲ್ಲೂ ಪ್ರಧಾನಿ ಮತ್ತು ಗೃಹ ಸಚಿವರ ಅಧೀನದಲ್ಲಿ ಕೆಲಸ ಮಾಡುತ್ತಿದೆ’ ಎಂಬ ಆರೋಪ ಎದುರಿಸುತ್ತಿದೆ. ಕಳೆದ ವರ್ಷ (2025) ಆರಂಭವಾದ ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ’ ಆಯೋಗದ ನಡೆಯನ್ನೇ ಶಂಕಿಸುವಂತೆ ಮಾಡಿದೆ. ಇಆರ್‌ಒಗಳ ಅಧಿಕಾರ ಮೊಟಕು; ಹೊಸ ಮತದಾರರ ಸೇರ್ಪಡೆಯಲ್ಲಿ ಹಸ್ತಕ್ಷೇಪ; ದತ್ತಾಂಶ ನಿಯಂತ್ರಣ-ನಿರ್ವಹಣೆ; ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರು ಕಿತ್ತುಹಾಕುವ ಮೇಲ್ಮನವಿ ಎಲ್ಲ ಪ್ರಮುಖ ವಿಷಯಗಳಲ್ಲಿ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವ ದೂರು ಮುಖ್ಯ ಚುನಾವಣಾ ಕಮಿಷನರ್ ಜ್ಞಾನೇಶ್ ಕುಮಾರ್ ಅವರ ಮೇಲಿದೆ, ಆಯೋಗದ ಕಮಿಷನರ್ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಭಿನ್ನಮತ ಹಾಕಿದ್ದಾರೆ. ಇಬ್ಬರೂ 10 ತಿಂಗಳಲ್ಲಿ 14 ಭಿನ್ನಮತ ದಾಖಲಿಸಿದ್ದಾರೆ ಎಂಬ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಕೋಲಾಹಲ ಸೃಷ್ಟಿಸಿದೆ.
‘ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿವೆ’ ಎಂದು ಮೊದಲು ದನಿ ಎತ್ತಿದವರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ. ಅವರ ಆರೋಪಗಳಿಗೆ ಬೆಲೆ ಸಿಕ್ಕಿರಲಿಲ್ಲ. ಈಗ ಇಬ್ಬರು ಕಮಿಷನರ್‌ಗಳ ಭಿನ್ನಮತ ಬಹಿರಂಗವಾಗುತ್ತಿದ್ದಂತೆ ‘ಕಾಂಗ್ರೆಸ್ ನಾಯಕನ ಆರೋಪದಲ್ಲಿ ಹುರುಳಿದೆ’ ಎಂದು ನಂಬಬೇಕಿದೆ. ಈ ಬೆಳವಣಿಗೆಯಿಂದ ವಿರೋಧ ಪಕ್ಷಗಳು ಮೈಕೊಡವಿ ಎದ್ದಿವೆ. ಚುನಾವಣಾ ಆಯೋಗದ ಮಾಜಿ ಮುಖ್ಯ ಕಮಿಷನರ್, ಮಾಜಿ ಕಮಿಷನರ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ರಾಜಕೀಯ ಪಂಡಿತರು ಮೌನ ಮುರಿದಿದ್ದಾರೆ. ಸಿಇಸಿ ಕಾರ್ಯವೈಖರಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಮುಂದಿನ ವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಇದರಿಂದ ಸಿಇಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಎಲ್ಲೆಡೆಯಿಂದ ಅವರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ‘ಜ್ಞಾನೇಶ್ ಕುಮಾರ್ ಒತ್ತಡಕ್ಕೆ ಮಣಿಯುವರೇ’ ಎಂದು ಹೇಳುವುದು ಕಷ್ಟ.
ಮೂವರು ಸದಸ್ಯರ ಚುನಾವಣಾ ಆಯೋಗ ಸರ್ವಾನುಮತ ಇಲ್ಲವೇ, ಬಹುಮತದ ಆಧಾರದಲ್ಲಿ ತೀರ್ಮಾನ ಕೈಗೊಳ್ಳಬೇಕು. 1995ರಲ್ಲಿ ಶೇಷನ್ ಮತ್ತು ಕೇಂದ್ರ ಸರಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅದರಂತೆ, ‘ಮೂವರು ಕಮಿಷನರ್ ಸರಿಸಮಾನರು. ಮುಖ್ಯ ಚುನಾವಣಾ ಕಮಿಷನರ್ ಗೆ ಪರಮಾಧಿಕಾರ (ವೀಟೊ) ಇಲ್ಲ’. ಮುಖ್ಯ ಚುನಾವಣಾ ಕಮಿಷನರ್ ಹಾಗೂ ಕಮಿಷನರ್‌ಗಳ ನಡುವೆ ಹಿಂದೆಯೂ ‘ಟಗ್ ಆಫ್ ವಾರ್’ ನಡೆದಿವೆ. ಅನೇಕರು ಭಿನ್ನಮತ ದಾಖಲಿಸಿದ್ದಾರೆ. ಸದ್ಯ, ಜ್ಞಾನೇಶ್ ಕುಮಾರ್ ವಿರುದ್ಧ ಸಂಧು ಮತ್ತು ಜೋಶಿ ಕ್ಯಾಬಿನೆಟ್ ಸೆಕ್ರೆಟರಿಗೆ ದೂರು ಕೊಟ್ಟಿದ್ದಾರೆ. ದೂರಿನ ಮೇಲೆ ಅವರು ಏನು ಕ್ರಮ ಕೈಗೊಳ್ಳಲು ಸಾಧ್ಯ? ಹೆಚ್ಚೆಂದರೆ, ಪ್ರಧಾನಿ ಗಮನಕ್ಕೆ ತಂದಿರಬಹುದು.
ಸಿಇಸಿ ವಿರುದ್ಧ ರಾಷ್ಟ್ರಪತಿಗೆ ದೂರು ಕೊಡಬಹುದಿತ್ತು. ಅವರ ಕಾರ್ಯವೈಖರಿ ಪ್ರತಿಭಟಿಸಿ ಕಮಿಷನರ್ ಹುದ್ದೆಗೆ ರಾಜೀನಾಮೆ ಸಲ್ಲಿಸಬಹುದಿತ್ತು. ಪತ್ರಿಕಾ ಗೋಷ್ಠಿ ಕರೆದು ಮಾತನಾಡಬಹುದಿತ್ತು. ಹಿಂದೆ, ಸುಪ್ರೀಂ ಕೋರ್ಟ್ ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ನ್ಯಾಯಮೂರ್ತಿ ವಿರುದ್ಧ ಆರೋಪ ಮಾಡಿರುವ ನಿದರ್ಶನ ಕಣ್ಣ ಮುಂದಿದೆ. ಸಂಧು ಹಾಗೂ ಜೋಷಿ ಇದ್ಯಾವುದೂ ಮಾಡಲಿಲ್ಲ. ಈ ದಾರಿ ಹಿಡಿಯಲು ಯಾವ ಅಡ್ಡಿಯೂ ಇರಲಿಲ್ಲ. ಬಹುಶಃ ನೇರ ಸಂಘರ್ಷಕ್ಕಿಳಿಯಲು ಹೆದರಿರಬಹುದು.
2019ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ‘ಮಾದರಿ ನೀತಿ ಸಂಹಿತೆ’ ಉಲ್ಲಂಘಿಸಿದ ಆರೋಪದ ಮೇಲೆ ದೂರು ದಾಖಲಾಗಿದ್ದವು. ಆಗಿನ ಮುಖ್ಯ ಕಮಿಷನರ್ ಸುನಿಲ್ ಅರೋರ ಮತ್ತು ಕಮಿಷನರ್ ಸುಶೀಲ್ ಚಂದ್ರ ಬಹುಮತ ಆಧಾರದಲ್ಲಿ ‘ಕ್ಲೀನ್ ಚಿಟ್’ ಕೊಟ್ಟರು. ಮತ್ತೊಬ್ಬ ಕಮಿಷನರ್ ಅಶೋಕ್ ಲಾವಸ ಭಿನ್ನಮತ ಹಾಕಿದರು. ಅವರ ಭಿನ್ನಮತ ಅಧಿಕೃತವಾಗಿ ರೆಕಾರ್ಡ್ ಆಗಲಿಲ್ಲ. ಆನಂತರ ಸಿಇಸಿಗೆ ಪತ್ರ ಬರೆದರು. ಮೂರೇ ತಿಂಗಳಲ್ಲಿ ಲಾವಸ ಕುಟುಂಬ ಆದಾಯ ತೆರಿಗೆ ಇಲಾಖೆ, ಈ.ಡಿ. ವಿಚಾರಣೆ ಎದುರಿಸಬೇಕಾಯಿತು. ಇಂತಹ ಪರಿಸ್ಥಿತಿ ತಮಗೂ ಎದುರಾಗಬಹುದೆಂದು ಇಬ್ಬರೂ ಅಂಜಿರಬಹುದು.
ಇದೊಂದೇ ಅಲ್ಲ, ಸಿಇಸಿಗಿರುವ ಕಾನೂನು ರಕ್ಷಣೆ ಕಮಿಷನರ್‌ಗೆ ಇಲ್ಲ. ಅವರ ಪದಚ್ಯುತಿ ಸುಲಭವಲ್ಲ. ಮುಖ್ಯ ಚುನಾವಣಾ ಕಮಿಷನರ್ ವಿರುದ್ಧ ದೋಷಾರೋಪ ಮಾಡಿ ಪದಚ್ಯುತಿಗೊಳಿಸುವ ನೋಟಿಸ್‌ಗೆ ಲೋಕಸಭೆಯ 100 ಸದಸ್ಯರು ಅಥವಾ ರಾಜ್ಯಸಭೆಯ 50 ಸದಸ್ಯರ ಸಹಿ ಬೇಕು. ಲೋಕಸಭೆ ಸ್ಪೀಕರ್ ಇಲ್ಲವೇ ರಾಜ್ಯಸಭೆ ಚೇರ್ಮನ್ ಅದನ್ನು ಸ್ವೀಕರಿಸಬೇಕು. ಜ್ಞಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳು ನೋಟಿಸ್ ನೀಡಿದ್ದವು. ಲೋಕಸಭೆ ಸ್ಪೀಕರ್ ಹಾಗೂ ರಾಜ್ಯಸಭೆ ಚೇರ್ಮನ್ ಅದನ್ನು ತಿರಸ್ಕರಿಸಿದರು. ನೋಟಿಸ್ ಸ್ವೀಕರಿಸಿದರೆ ವಿಚಾರಣೆಗೆ ಸಮಿತಿ ರಚಿಸಬೇಕು. ಸಮರ್ಥಿಸಿಕೊಳ್ಳಲು ಅವರಿಗೆ ಅವಕಾಶ ಕೊಡಬೇಕು. ಆರೋಪ ಸಾಬೀತಾದರೆ 2/3ರಷ್ಟು ಬಹುಮತದಲ್ಲಿ ಪದಚ್ಯುತಿ ನಿರ್ಣಯ ಅಂಗೀಕರಿಸಬೇಕು. ಆನಂತರ ರಾಷ್ಟ್ರಪತಿಗೆ ಕಳಿಸಬೇಕು. ಹೊಸ ತಿದ್ದುಪಡಿ ಪ್ರಕಾರ, ಸಿಇಸಿ ವಿರುದ್ಧ ಕ್ರಿಮಿನಲ್/ಸಿವಿಲ್ ಪ್ರಕರಣ ದಾಖಲಿಸುವಂತಿಲ್ಲ. ಅವರನ್ನು ಬಂಧಿಸುವಂತಿಲ್ಲ. ನಿವೃತ್ತಿ ನಂತರವೂ ಅವರಿಗೆ ರಕ್ಷಣೆ ಇದೆ. ಜ್ಞಾನೇಶ್ ಕುಮಾರ್ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಇದೂ ಕಾರಣವಿರಬಹುದು. ಆದರೆ, ಕಮಿಷನರ್ ಹುದ್ದೆಯಲ್ಲಿದ್ದವ ರನ್ನು ತೆಗೆಯುವುದು ಕಷ್ಟವಲ್ಲ. ಸಿಇಸಿ ಶಿಫಾರಸಿನ ಮೇಲೆ ರಾಷ್ಟ್ರಪತಿಗಳು ಅವರನ್ನು ತೆಗೆದು ಹಾಕಬಹುದು. ಹಿಂದೆ, ಎನ್.ಗೋಪಾಲಸ್ವಾಮಿ ಮುಖ್ಯ ಚುನಾವಣಾ ಕಮಿಷನರ್ ಆಗಿದ್ದಾಗ ಕಮಿಷನರ್ ನವೀನ್ ಚಾವ್ಲಾ ಅವರನ್ನು ವಜಾ ಮಾಡುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡಿದ್ದರು. ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಶಿಫಾರಸನ್ನು ತಿರಸ್ಕರಿಸಿದ್ದರು.
ಮುಖ್ಯ ಚುನಾವಣಾ ಕಮಿಷನರ್ ಮತ್ತು ಕಮಿಷನರ್ ನಡುವಿನ ಆಂತರಿಕ ಕಿತ್ತಾಟದ ಬಳಿಕ ಶನಿವಾರ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಭೆ ನಡೆಸಿದ್ದಾರೆ. ಪೂರ್ಣ ಮನಸ್ಸಿನಿಂದ ಕುಳಿತಿದ್ದರೋ ಅಥವಾ ಒಲ್ಲದ ಮನಸ್ಸಿನಿಂದ ಕುಳಿತಿದ್ದರೋ ಗೊತ್ತಿಲ್ಲ. ಮೂವರು ಸಭೆ ಸೇರಿದ್ದರ ಹಿಂದೆ ಪ್ರಭಾವಿಗಳ ಕೈವಾಡ ಇರಬಹುದು. ಚುನಾವಣಾ ಆಯೋಗ ಇಷ್ಟೊಂದು ರಾದ್ದಾಂತ ಮಾಡಿಕೊಂಡು ಲೋಪಗಳನ್ನು ಸರಿಪಡಿಸಲು ಮುಂದಾಗಿದೆ. ಮೊದಲೇ ಈ ಕೆಲಸ ಮಾಡಿದ್ದರೆ ಸಂಸ್ಥೆಯ ಘನತೆ- ಗೌರವ ಉಳಿಯುತಿತ್ತು.
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಹೆಸರಿನಲ್ಲಿ ದೊಡ್ಡ ಸಂಖ್ಯೆಯ ಮತದಾರರನ್ನು ಕೈಬಿಟ್ಟಿರುವುದು ಸಮಸ್ಯೆಯ ಮೂಲ. 2002ರಲ್ಲಿ ಎಸ್‌ಐಆರ್ ಪ್ರಕ್ರಿಯೆ ಸರಳವಾಗಿ ನಡೆಯಿತು. ಬಿಎಲ್‌ಒಗಳು ಮನೆಮನೆಗೆ ಭೇಟಿ ಕೊಟ್ಟು ಪರಿಶೀಲಿಸಿದ್ದರು. ಅಕ್ಕಪಕ್ಕದಲ್ಲಿ ವಿಚಾರಿಸಿದ್ದರು. ಸ್ವಯಂ ಘೋಷಣೆಗೆ ಅವಕಾಶವಿತ್ತು. ಲೋಪಗಳನ್ನು ಸ್ಥಳೀಯ ಮಟ್ಟದಲ್ಲಿ ಇಆರ್‌ಒಗಳು ಪರಿಶೀಲಿಸಿದ್ದರು. ಆಗ ಜೆ.ಎಂ. ಲಿಂಗ್ಡೊ ಸಿಇಸಿ. ಅದೇ ಮಾನದಂಡ ಅನುಸರಿಸಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರಲಿಲ್ಲ. ಯಾರಿಗೋ ಅನುಕೂಲ ಮಾಡಲು ಹೋಗಿ ಜ್ಞಾನೇಶ್ ಕುಮಾರ್ ವಿವಾದಕ್ಕೆ ಸಿಲುಕಿದ್ದಾರೆ.
ಕೊನೆಯದಾಗಿ ಒಂದು ಮಾತು ಹೇಳಬೇಕು. ಚುನಾವಣಾ ಆಯೋಗದ ಸಿಇಸಿ ಮತ್ತು ಇಸಿಗಳ ಆಯ್ಕೆ ಪ್ರಕ್ರಿಯೆಯಲ್ಲೇ ಲೋಪವಿದೆ. ಅದನ್ನು ಬದಲಾವಣೆ ಮಾಡಿ ಪ್ರಕ್ರಿಯೆಯನ್ನು ಬಿಗಿಗೊಳಿಸಬೇಕು. ಸರಕಾರದ ನಿಯಂತ್ರಣ ತಪ್ಪಬೇಕು. ಇದು ಬದಲಾಗದಿದ್ದರೆ ಯಾವುದೇ ಪಕ್ಷದ ಸರಕಾರವಿದ್ದರೂ ದುರುಪಯೋಗ ಆಗುತ್ತದೆ. ಪ್ರಧಾನಿ, ಅವರೇ ಆಯ್ಕೆ ಮಾಡಿದ ಸಂಪುಟ ದರ್ಜೆ ಸಚಿವರು, ಲೋಕಸಭೆ ವಿರೋಧ ಪಕ್ಷದ ನಾಯಕರನ್ನೊಳಗೊಂಡ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಅವರ ಜತೆ ಮುಖ್ಯ ನ್ಯಾಯಮೂರ್ತಿಗಳೂ ಇರಬೇಕು. ಬೇರೆ ಕ್ಷೇತ್ರಗಳ ತಜ್ಞರೂ ಸೇರಬೇಕು. ಮುಖ್ಯ ನ್ಯಾಯಮೂರ್ತಿಯನ್ನು ಇದರಿಂದ ಹೊರಗಿಡಲಾಗಿದೆ. ಈ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಆಗಬೇಕಿದೆ. ಇಂಥ ವ್ಯವಸ್ಥೆ ಜಾರಿಗೆ ಜನ ಒಕ್ಕೊರಲಿನಿಂದ ಒತ್ತಾಯಿಸಬೇಕಿದೆ. .
(ಅಂಕಣಕಾರರು ಹಿರಿಯ ಪತ್ರಕರ್ತರು)






