ಅಡ್ವಾಣಿ ಹಾದಿಗೆ ಶಿಷ್ಯರೇ ತೊಡಕು

ಬಿಜೆಪಿಗೆ ಮೋದಿ ಅವರ ನಾಯಕತ್ವ ಸಿಕ್ಕಿರಬಹುದು. ಆದರೆ, ಪಕ್ಷವನ್ನು ಶೂನ್ಯದಿಂದ ಕಟ್ಟಿದ್ದು ಅಡ್ವಾಣಿ ಮತ್ತು ಅವರ ಸಂಗಡಿಗರು. ಹಿರಿಯ ನಾಯಕ ರಥ ಯಾತ್ರೆ ನಡೆಸದಿದ್ದರೆ ಬಿಜೆಪಿ ಇಷ್ಟೊಂದು ಪ್ರಬಲವಾಗಿ ಬೆಳೆಯುತ್ತಿರಲಿಲ್ಲ. ಆ ಪಕ್ಷ ಅಧಿಕಾರಕ್ಕೆ ಬರುವ ಹೊತ್ತಿಗೆ ಅಡ್ವಾಣಿ ರಾಜಕೀಯವಾಗಿ ಜಾರಿದ್ದರು.
ಲಾಲ್ಕೃಷ್ಣ ಅಡ್ವಾಣಿ ರಾಜಕಾರಣದ ದುರಂತ ನಾಯಕ. ಅವರಷ್ಟು ನತದೃಷ್ಟ ನಾಯಕ ಮತ್ತೊಬ್ಬರು ಇರಲಿಕ್ಕಿಲ್ಲ. ಶೂನ್ಯದಿಂದ ಭಾರತೀಯ ಜನತಾ ಪಕ್ಷ ಕಟ್ಟಿ, ಅಧಿಕಾರ ಹಿಡಿಯುವ ಹಂತಕ್ಕೆ ತಂದ ಅವರಿಗೆ ಪ್ರಧಾನ ಮಂತ್ರಿ ಕುರ್ಚಿಯಲ್ಲಿ ಕೂರುವ ಯೋಗ ಒಲಿಯಲಿಲ್ಲ. ‘ಇರುವೆ ಕಟ್ಟಿದ ಹುತ್ತದಲ್ಲಿ ಹಾವು ಸೇರಿತು’ ಎಂಬ ಗಾದೆಯಂತೆ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರಿದರು. ಅಡ್ವಾಣಿಯವರನ್ನು ಮೂಲೆಗೆ ಸರಿಸಿದರು. ಅವರಿಗೆ ಮಾಡಿದ ಅವಮಾನ ಅಷ್ಟಿಷ್ಟಲ್ಲ. ಎಲ್ಲವನ್ನು ನುಂಗಿಕೊಂಡು ನೂರನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿರಿಯ ನಾಯಕನ ಜಾಗದಲ್ಲಿ ಬೇರೆ ಯಾರಿದ್ದರೂ ಪಕ್ಷ ತೊರೆಯುತ್ತಿದ್ದರೇನೊ. ಪಕ್ಷ ನಿಷ್ಠೆ ಅವರನ್ನು ಕಟ್ಟಿಹಾಕಿದೆ.
2002ರಲ್ಲಿ ಅಡ್ವಾಣಿ ಆ ಒಂದು ತಪ್ಪು ಮಾಡದಿದ್ದರೆ ದೇಶದ ರಾಜಕೀಯ ಚಿತ್ರಣವೇ ಬೇರೆ ಆಗಿರುತ್ತಿತ್ತೇನೊ. ಮೋದಿ ಅವರ ರಾಜಕೀಯ ಭವಿಷ್ಯವೇ ಮಸುಕಾಗುತ್ತಿತ್ತೇನೊ. ಕೇಂದ್ರ ಗೃಹ ಸಚಿವರಾಗಿದ್ದ ಅಡ್ವಾಣಿ ದುಡುಕಿದರು. ತಮ್ಮ ಭವಿಷ್ಯದ ಬಗ್ಗೆ ಎಳ್ಳಷ್ಟೂ ಚಿಂತಿಸದೆ, ಮೋದಿ ಅವರ ರಕ್ಷಣೆಗೆ ನಿಂತರು. ಗುಜರಾತ್ ಗಲಭೆಯಿಂದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೊಂದಿದ್ದರು. ರಾಜ್ಯ ಸರಕಾರದ ವಿರುದ್ಧ ಕ್ರಮಕ್ಕೆ ಉತ್ಸುಕವಾಗಿದ್ದರು. ಆದರೆ, ಅಡ್ವಾಣಿ ಒಪ್ಪಲಿಲ್ಲ. ‘ಕ್ರಮಕ್ಕೆ ಮುಂದಾದರೆ ಪಕ್ಷದೊಳಗೆ ಕೋಲಾಹಲ ಸೃಷ್ಟಿಯಾಗಬಹುದು’ ಎಂದು ಎಚ್ಚರಿಸಿದ್ದರು. ತಮ್ಮ ಹಾದಿಗೆ ಮೋದಿಯವರೇ ಅಡ್ಡಿಯಾಗಬಹುದು ಎಂದು ಅವರು ನಿರೀಕ್ಷಿಸಿರಲಿಲ್ಲ. ಆಗಲೇ ಸಂವಿಧಾನಾತ್ಮಕ ಪ್ರಕ್ರಿಯೆಗಳನ್ನು ಕೈಗೊಂಡಿದ್ದರೆ ಅಡ್ವಾಣಿ ಅವರಿಗೆ ಪ್ರಧಾನಿಯಾಗುವ ಯೋಗ ಸಿಗುತ್ತಿತ್ತೇನೊ. ಬಳಿಕ ಅವರಿಗೆ ತಪ್ಪಿನ ಅರಿವಾಗಿರಬಹುದು.
ಗುಜರಾತ್ ಗಲಭೆಯ ಹಿನ್ನೆಲೆಯಲ್ಲಿ ವಾಜಪೇಯಿ ಅವರೇ ಪ್ರಧಾನಿ ಹುದ್ದೆ ತ್ಯಜಿಸಲು ಬಯಸಿದ್ದರು. ಆಗ ಸಂಸತ್ ಅಧಿವೇಶನ ನಡೆದಿತ್ತು. ತಮ್ಮ ಕಚೇರಿಯಲ್ಲಿ ಬಿಳಿ ಹಾಳೆ ತೆಗೆದು ರಾಜೀನಾಮೆ ಬರೆಯಲು ಹೋದ ಅವರನ್ನು ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ತಡೆದರು. ಈ ಬೆಳವಣಿಗೆ ಬಳಿಕ ರಾಜ್ಯ ಸರಕಾರದ ವಿರುದ್ಧ ಕ್ರಮ ಕೈಗೊಳ್ಳಲು ವಾಜಪೇಯಿ ಉದ್ದೇಶಿಸಿದ್ದರು. ಟಿ.ವಿ. ಕಾರ್ಯಕ್ರಮವೊಂದರಲ್ಲಿ ಸ್ವತಃ ಜಸ್ವಂತ್ ಸಿಂಗ್ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ. ಅದೇ ವರ್ಷ ಎಪ್ರಿಲ್ನಲ್ಲಿ ಗುಜರಾತ್ಗೆ ಭೇಟಿ ನೀಡಿದ್ದ ವಾಜಪೇಯಿ, ‘‘ಮುಖ್ಯಮಂತ್ರಿ ರಾಜಧರ್ಮ ಪಾಲಿಸಬೇಕು’’ ಎಂದು ಪಕ್ಕದಲ್ಲಿದ್ದ ಮೋದಿ ಅವರಿಗೆ ಕಿವಿ ಮಾತು ಹೇಳಿದ್ದರು.
ಅಡ್ವಾಣಿ, ಬಿಜೆಪಿಯ ಪ್ರಭಾವಿ ನಾಯಕ. ವಾಜಪೇಯಿ ಅವರ ನಂತರದ ಸ್ಥಾನದಲ್ಲಿದ್ದವರು. ಖಟ್ಟರ್ ಹಿಂದುತ್ವವಾದಿ. ಆರೆಸ್ಸೆಸ್ ಸಿದ್ಧಾಂತಕ್ಕೆ ಜೋತು ಬಿದ್ದವರು. ಸೈದ್ಧಾಂತಿಕವಾಗಿ ರಾಜಿ ಮಾಡಿಕೊಂಡವರಲ್ಲ. ಪಕ್ಷ ಸಂಘಟನೆಗೆ ಬದ್ಧತೆಯಿಂದ ದುಡಿದವರು. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ವಿಷಯ ಮುಂದಿಟ್ಟುಕೊಂಡು ‘ರಥ ಯಾತ್ರೆ’ ನಡೆಸಿದರು. ಆಗ ಜನರು ಇಟ್ಟಿಗೆ ಕೊಟ್ಟರು. ದೇಣಿಗೆ ಕೊಟ್ಟರು. ಆಭರಣ ಕೊಟ್ಟರು. ಮಸೀದಿ-ಮಂದಿರ ವಿವಾದ ಪ್ರಧಾನವಾಗಿಟ್ಟುಕೊಂಡು ರಥ ಯಾತ್ರೆ ನಡೆಸುವಾಗ ಅವರ ರಾಜಕೀಯ ಲೆಕ್ಕಾಚಾರ ಬೇರೆಯೇ ಇತ್ತು. ಸುಪ್ರೀಂ ಕೋರ್ಟ್ಗೆ ನೀಡಿದ್ದ ಮುಚ್ಚಳಿಕೆಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಬಾಬರಿ ಮಸೀದಿ ನೆಲಸಮ ಮಾಡಲಾಯಿತು. ಆದರೆ, ದೇಶದ ಇತಿಹಾಸದಲ್ಲಿ ಇದೊಂದು ಮಾಸದ ಗಾಯವಾಯಿತು. ಸರ್ವಧರ್ಮ ಸಮನ್ವಯತೆಗೆ ಘಾಸಿ ಮಾಡಿತು. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಅಶಾಂತಿ ಮೆರೆಯಿತು. ಈ ರಥ ಯಾತ್ರೆ ನಡೆಸದಿದ್ದರೆ ಮಸೀದಿ ಉಳಿಯುತ್ತಿತ್ತು. ಮಂದಿರವೂ ತಲೆ ಎತ್ತುತ್ತಿರಲಿಲ್ಲ. ದೇಣಿಗೆ ಲೂಟಿ ಆಗುತ್ತಿರಲಿಲ್ಲ. ಹಿಂದೂ ಮತಗಳನ್ನು ಒಗ್ಗೂಡಿಸುವ ಏಕೈಕ ಉದ್ದೇಶದಿಂದ ಅವರು ರಥ ಯಾತ್ರೆ ನಡೆಸಿದರು.
1989ರ ಡಿಸೆಂಬರ್ನಿಂದ ನವೆಂಬರ್ 1990ರವರೆಗೆ ಅಧಿಕಾರದಲ್ಲಿದ್ದ ವಿ.ಪಿ. ಸಿಂಗ್ ಸರಕಾರ ಮಂಡಲ್ ವರದಿ ಜಾರಿಗೊಳಿಸಿ, ಇತರ ಹಿಂದುಳಿದ ವರ್ಗಗಳಿಗೆ ಶೇ. 27 ಮೀಸಲಾತಿ ಕೊಡುವ ನಿರ್ಧಾರ ಕೈಗೊಂಡಿತು. ಇದು ಹಿಂದುಳಿದ ಜಾತಿಗಳಲ್ಲಿ ಸಾಮಾಜಿಕ-ರಾಜಕೀಯ ಜಾಗೃತಿಗೆ ಕಾರಣವಾಯಿತು. ಇದಕ್ಕೆ ಪರ್ಯಾಯವಾಗಿ ಬಿಜೆಪಿ ಕಮಂಡಲ್ ಹಿಡಿಯಿತು. 1989ರ ಲೋಕಸಭಾ ಚುನಾವಣೆಯಲ್ಲೇ ಮಂಡಲ್- ಕಮಂಡಲ್ ಪ್ರಮುಖ ವಿಷಯ. 1984ರ ಅಕ್ಟೋಬರ್ 31ರಂದು ನಡೆದ ಇಂದಿರಾ ಗಾಂಧಿ ಹತ್ಯೆ ಅನುಕಂಪದ ಅಲೆಯಲ್ಲಿ ಪ್ರಚಂಡ ಗೆಲುವು ದಾಖಲಿಸಿದ್ದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಐದೇ ವರ್ಷದಲ್ಲಿ ಬಹುಮತ ಕಳೆದುಕೊಂಡು 197 ಸ್ಥಾನಗಳಿಗೆ ಕುಸಿದಿತ್ತು. ಜನತಾ ದಳ 143 ಸ್ಥಾನ ಪಡೆದಿತ್ತು. ಬಿಜೆಪಿ 85 ಸ್ಥಾನ ಗೆದ್ದಿತ್ತು. ‘ನ್ಯಾಷನಲ್ ಫ್ರಂಟ್’ ಸರಕಾರ ಅಧಿಕಾರ ಹಿಡಿಯಿತು. ಜನತಾ ದಳ ಮಂಡಲ್ ವರದಿ ಒಬಿಸಿ ವರ್ಗಗಳನ್ನು ಹಿಡಿದುಕೊಂಡರೆ, ಬಿಜೆಪಿ ಅಯೋಧ್ಯೆ ಬಾಬರಿ ಮಸೀದಿ ವಿವಾದ ಕೆದಕಿತು. ಈ ಸಂಘರ್ಷಕ್ಕೆ ವಿ.ಪಿ. ಸಿಂಗ್ ಸರಕಾರ ಬಲಿಯಾಯಿತು. ಅಚ್ಚರಿಯ ಸಂಗತಿ ಎಂದರೆ, ನ್ಯಾಷನಲ್ ಫ್ರಂಟ್ ಸರಕಾರಕ್ಕೆ ಪರಸ್ಪರ ಎದುರಾಳಿಗಳಾಗಿದ್ದ ಬಿಜೆಪಿ ಮತ್ತು ಎಡ ಪಕ್ಷಗಳು ಹೊರಗಿನಿಂದ ಬೆಂಬಲಿಸಿದ್ದವು. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗಿತ್ತು. ಮಂದಿರ ವಿವಾದ ವ್ಯಾಪಕತೆ ಪಡೆದುಕೊಂಡಿದ್ದು ಆಗಲೇ. ಆರಂಭದಲ್ಲಿ ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನ ಪಡೆದಿದ್ದ ಬಿಜೆಪಿ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯಿತು.
ಬಿಜೆಪಿ 1991ರ ಚುನಾವಣೆಯಲ್ಲಿ 120 ಸ್ಥಾನ ಪಡೆದಿತ್ತು. ಕಾಂಗ್ರೆಸ್ 244 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಡಿಎಂಕೆ ಮತ್ತು ಜೆಎಂಎಂ ಬೆಂಬಲದಲ್ಲಿ ಪಿ.ವಿ. ನರಸಿಂಹರಾವ್ ಸರಕಾರ ಮಾಡಿದರು. ಆ ಮಾತು ಬೇರೆ. 1996ರ ಚುನಾವಣೆಯಲ್ಲಿ ಬಿಜೆಪಿ ವಾಜಪೇಯಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿತು. ಹಿಂದಿನ ವರ್ಷ ಮುಂಬೈಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕಾರಿಣಿಯಲ್ಲಿ ವಾಜಪೇಯಿ ಅವರ ಹೆಸರನ್ನು ಸ್ವತಃ ಅಡ್ವಾಣಿ ಅವರೇ ಸೂಚಿಸಿದ್ದರು. 543 ಸದಸ್ಯ ಬಲದ ಲೋಕಸಭೆಯಲ್ಲಿ ಸರಕಾರ ರಚಿಸಲು ಅಗತ್ಯವಿರುವ 272 ಸ್ಥಾನಗಳು ಬಿಜೆಪಿಗೆ ಬರುವುದಿಲ್ಲವೆಂಬ ಅರಿವು ಆ ಪಕ್ಷದ ನಾಯಕರಿಗಿತ್ತು. ಹೀಗಾಗಿ, ಉದಾರವಾದಿ ನಾಯಕ ವಾಜಪೇಯಿ ಅವರನ್ನು ಬಿಂಬಿಸಲಾಯಿತು. ಮೈತ್ರಿ ರಾಜಕಾರಣಕ್ಕೆ ವಾಜಪೇಯಿ ಹೇಳಿ ಮಾಡಿಸಿದ ನಾಯಕರಾಗಿದ್ದರು. ಆಡ್ವಾಣಿ ಅವರಂತೆ ಹಿಂದುತ್ವಕ್ಕೆ ಅವರು ಜೋತು ಬಿದ್ದಿರಲಿಲ್ಲ. ಉದಾರತೆ ಬೆಳೆಸಿಕೊಂಡಿದ್ದರು. ಅವರ ‘ಸೆಕ್ಯುಲರ್ ಔಟ್ಲುಕ್’ ಹಲವು ಪ್ರಾದೇಶಿಕ ಪಕ್ಷಗಳು ಬೆಂಬಲಿಸುವಂತೆ ಮಾಡಿತ್ತು. ಅವರ ಕಾರಣಕ್ಕೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಫಾರೂಕ್ ಅಬ್ದುಲ್ಲಾ ಮತ್ತಿತರರು ಬೆಂಬಲ ಕೊಟ್ಟಿದ್ದು. 1996ರಲ್ಲಿ ವಾಜಪೇಯಿ 13 ದಿನ ಸರಕಾರ ಮಾಡಿದರು. 1998ರಲ್ಲಿ 13 ತಿಂಗಳು ಆಡಳಿತ ನಡೆಸಿದರು. ಪುನಃ 1999ರಿಂದ 2004ರವರೆಗೆ ಐದು ವರ್ಷ ಅವರದ್ದೇ ಸರಕಾರ. 2004ರಲ್ಲೂ ಅವರೇ ಪ್ರಧಾನಿ ಅಭ್ಯರ್ಥಿಯಾದರೂ ಗೆಲ್ಲಲಾಗಲಿಲ್ಲ. ‘ಇಂಡಿಯಾ ಶೈನಿಂಗ್’ ಘೋಷಣೆಯೊಂದಿಗೆ ಚುನಾವಣೆಗೆ ಹೋದರೂ ಮತದಾರರ ಕಣ್ಣಿಗೆ ಬಿಜೆಪಿ ಮಸುಕಾಗಿ ಕಂಡಿತು. ಆಗ ಯುಪಿಎ ಅಧಿಕಾರ ಹಿಡಿಯಿತು. 2009ರಲ್ಲಿ ಅಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದರೂ ಪ್ರಯೋಜನ ವಾಗಲಿಲ್ಲ. ಯುಪಿಎ ಆಡಳಿತಕ್ಕೆ ಜನ ಒಪ್ಪಿಗೆ ಮುದ್ರೆ ಒತ್ತಿದರು. ಡಾ. ಮನಮೋಹನ್ ಸಿಂಗ್ ಸರಕಾರದ ಕಾರ್ಯಕ್ರಮಗಳು ಜನರಿಗೆ ಹಿಡಿಸಿದ್ದವು. ಆಡಳಿತ ವಿರೋಧಿ ಅಲೆ ಇರಲಿಲ್ಲ. 2014ರಲ್ಲಿ ಭ್ರಷ್ಟಾಚಾರ ಆರೋಪಗಳ ಸುಳಿಗೆ ಯುಪಿಎ ಸಿಕ್ಕಿಕೊಂಡಿತ್ತು. ಆರೋಪಗಳು ಸಾಬೀತಾಗಲಿಲ್ಲ.
ಬಿಜೆಪಿ ರಾಜಕಾರಣಕ್ಕೆ ರಾಮ ಏಣಿಯಾದ. ಏಣಿ ತುದಿಯಲ್ಲಿ ನಿಂತಿದ್ದ ಅಡ್ವಾಣಿ ಮಾತ್ರ ಕೆಳಗೆ ಬಿದ್ದರು. ಅದರ ಅರಿವಾಗುವಷ್ಟರಲ್ಲಿ ಕಾಲ ಮಿಂಚಿತ್ತು. ಗುಜರಾತ್ ಗಲಭೆ ಮನು ಕುಲಕ್ಕೆ ಕಪ್ಪು ಚುಕ್ಕೆಯಾದರೂ, ಇಡೀ ದೇಶ ಮೋದಿಯವರತ್ತ ನೋಡುವಂತೆ ಮಾಡಿತು. ಅವರು ರಾಷ್ಟ್ರ ರಾಜಕಾರಣದ ‘ಸೆಂಟರ್ ಸ್ಟೇಜ್’ ಗೆ ಬರಲು ಕಾರಣವಾಯಿತು. ಅಡ್ವಾಣಿ ಅವರ ಗ್ರಾಫ್ ಇಳಿಯಿತು.
ದೇಶದ ರಾಜಕಾರಣ ಮತ್ತೊಂದು ಮಗ್ಗಲಿಗೆ ಹೊರಳಿದ್ದು 2013ರಲ್ಲಿ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಗೋವಾದಲ್ಲಿ ಸೇರಿತ್ತು. ಆ ಹೊತ್ತಿಗೆ ನಾಯಕತ್ವದ ಹೊಣೆ ನರೇಂದ್ರ ಮೋದಿ ಹೆಗಲಿಗೆ ಬೀಳಲಿದೆ ಎಂಬ ಮಾಹಿತಿ ಆ ಪಕ್ಷದೊಳಗೆ ಹರಡಿತ್ತು. ಅಡ್ವಾಣಿ ಮುನಿಸಿಕೊಂಡು ಕಾರ್ಯಕಾರಿಣಿಗೆ ಬೆನ್ನು ತಿರುಗಿಸಿದ್ದರು. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡುವುದು ಅವರಿಗಿಷ್ಟವಿರಲಿಲ್ಲ. ತಮ್ಮನ್ನು ಬಿಂಬಿಸದಿದ್ದರೂ ಪರವಾಗಿಲ್ಲ, ಸುಷ್ಮಾ ಸ್ವರಾಜ್ ಅಥವಾ ಶಿವರಾಜ್ಸಿಂಗ್ ಚೌಹಾಣ್ ಯಾರನ್ನಾದರೂ ಹೆಸರಿಸುವಂತೆ ಪಟ್ಟು ಹಿಡಿದಿದ್ದರು. ಅದಾಗಲಿಲ್ಲ. ಕಾರ್ಯಕಾರಿಣಿಗೆ ಕೊನೆಗೆ ಒಲ್ಲದ ಮನಸ್ಸಿನಿಂದಲೇ ಅಡ್ವಾಣಿ ಬಂದಿದ್ದರು. ಬಳಿಕ ಪಕ್ಷದೊಳಗೆ ಅವರಿಗೆ ಸಿಕ್ಕ ಬೆಲೆ ಎಂತಹದ್ದು ಎಂದು ಇಡೀ ದೇಶಕ್ಕೆ ಗೊತ್ತು. ಅವರು ಕೇಳಿದ ಕ್ಷೇತ್ರ ಬಿಟ್ಟುಕೊಡಲಿಲ್ಲ. ಮಾರ್ಗದರ್ಶಕ ಮಂಡಳಿ ನೆಪದಲ್ಲಿ ಮೂಲೆಗೆ ತಳ್ಳಲಾಯಿತು. ಅವರ ಜತೆ ಮತ್ತೊಬ್ಬ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಅವರಿಗೂ ಅದೇ ಜಾಗ ತೋರಿಸಲಾಯಿತು.
ಮೋದಿ ಮತ್ತು ಅಮಿತ್ ಶಾ ಅವರ ಜೋಡಿ ಆಕ್ರಮಣಕಾರಿಯಾಗಿ ಚುನಾವಣಾ ಅಖಾಡಕ್ಕೆ ನುಗ್ಗಿದ್ದರಿಂದ ಯುಪಿಎಗೆ ಹಿನ್ನಡೆಯಾಯಿತು. ಬಿಜೆಪಿ 2014ರಲ್ಲಿ 288 ಸ್ಥಾನ ಗೆದ್ದಿತ್ತು. 2019ರಲ್ಲಿ 303 ಸ್ಥಾನಪಡೆದು ಸುಸ್ಥಿತಿಯಲ್ಲಿತ್ತು. 2024ರಲ್ಲಿ 240 ಸ್ಥಾನಕ್ಕೆ ಕುಸಿಯಿತು. ಈ ಚುನಾವಣೆ ಮೋದಿ ಜನಪ್ರಿಯತೆ ಕಡಿಮೆ ಆಗಿರುವುದನ್ನು ಸಾಬೀತುಪಡಿಸಿತು. ಬಿಜೆಪಿಗೆ ಮೋದಿ ಅವರ ನಾಯಕತ್ವ ಸಿಕ್ಕಿರಬಹುದು. ಆದರೆ, ಪಕ್ಷವನ್ನು ಶೂನ್ಯದಿಂದ ಕಟ್ಟಿದ್ದು ಅಡ್ವಾಣಿ ಮತ್ತು ಅವರ ಸಂಗಡಿಗರು. ಹಿರಿಯ ನಾಯಕ ರಥ ಯಾತ್ರೆ ನಡೆಸದಿದ್ದರೆ ಬಿಜೆಪಿ ಇಷ್ಟೊಂದು ಪ್ರಬಲವಾಗಿ ಬೆಳೆಯುತ್ತಿರಲಿಲ್ಲ. ಆ ಪಕ್ಷ ಅಧಿಕಾರಕ್ಕೆ ಬರುವ ಹೊತ್ತಿಗೆ ಅಡ್ವಾಣಿ ರಾಜಕೀಯವಾಗಿ ಜಾರಿದ್ದರು.
ಅಡ್ವಾಣಿ ಬೇಕಾದಷ್ಟು ಎಡವಟ್ಟುಗಳನ್ನು ಮಾಡಿಕೊಂಡರು. ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ಮುಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿ ಸಂಘ-ಪರಿವಾರದ ನಾಯಕರಿಗೆ ಅಪ್ರಿಯ ಆದರು. ಹಿರಿಯ ನಾಯಕ ಒಂದು ಶತಮಾನದ ರಾಜಕಾರಣದ ಕೊನೆಯ ಕೊಂಡಿ. ಅವರ ರಾಜಕೀಯ ಬದುಕಿನಲ್ಲಿ ಉಂಡಿದ್ದು ಸಿಹಿಗಿಂತ ಕಹಿಯೇ ಹೆಚ್ಚು.
(ಅಂಕಣಕಾರರು ಹಿರಿಯ ಪತ್ರಕರ್ತರು)






