ನಿತೀಶ್ ಕುಮಾರ್ ಎಲ್ಲಿದ್ದಾರೆ?

ನಿತೀಶ್ ಕುಮಾರ್ ಎಲ್ಲಿದ್ದಾರೆಂದು ಮಾಹಿತಿ ಇಲ್ಲ. ರಾಜಕಾರಣದಲ್ಲಿ ಸಕ್ರಿಯವಾಗಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ರಾಜ್ಯಸಭೆ ಸದಸ್ಯರಾಗಿ ಸಭಾಪತಿಯವರ ಕೋಣೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕಲಾಪದಲ್ಲಿ ಹೆಚ್ಚು ಕಂಡಿಲ್ಲ. ಚರ್ಚೆಗಳಲ್ಲೂ ಭಾಗಿಯಾಗಿಲ್ಲ. ಕಳೆದ ಎರಡು ವರ್ಷಗಳಿಂದ ಅವರ ಆರೋಗ್ಯ ಸರಿ ಇಲ್ಲ. ವಯೋಸಹಜ ಕಾಯಿಲೆಯಿಂದ ಸೊರಗಿದ್ದಾರೆ. ಜೆಡಿಯು ಕಾರ್ಯಕರ್ತರ ಆತಂಕವಿರುವುದು ನಿತೀಶ್ ಕುರಿತಲ್ಲ. ಅವರು ಕಟ್ಟಿ ಬೆಳೆಸಿದ ಜೆಡಿಯು ಬಗೆಗಷ್ಟೇ.
ಬಿಹಾರ ಮಾಜಿ ಮುಖ್ಯಮಂತ್ರಿ, ರಾಜ್ಯಸಭೆ ಸದಸ್ಯ ನಿತೀಶ್ ಕುಮಾರ್ ಎಲ್ಲಿದ್ದಾರೆ; ಪಾಟ್ನಾದಲ್ಲೋ, ದಿಲ್ಲಿಯಲ್ಲೋ; ಸಕ್ರಿಯ ರಾಜಕಾರಣದಲ್ಲಿ ಇದ್ದಾರೆಯೇ; ಅನಾರೋಗ್ಯ ಬಾಧಿಸುತ್ತಿದೆಯೇ; ಅವರೇ ಕಟ್ಟಿದ ಜೆಡಿಯು (ಜನತಾದಳ-ಸಂಯುಕ್ತ) ಪಕ್ಷ ಸದೃಢವೇ ಅಥವಾ ಮುಳುಗುತ್ತಿರುವ ಹಡಗೇ- ಈಚಿನ ವಿಧಾನಪರಿಷತ್ತಿನ ಚುನಾವಣೆ ಬಳಿಕ ಈ ಪ್ರಶ್ನೆಗಳು ಎದ್ದಿವೆ.
ನಿತೀಶ್ ಕುಮಾರ್ ಎಲ್ಲಿದ್ದಾರೆಂದು ಮಾಹಿತಿ ಇಲ್ಲ. ರಾಜಕಾರಣದಲ್ಲಿ ಸಕ್ರಿಯವಾಗಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ರಾಜ್ಯಸಭೆ ಸದಸ್ಯರಾಗಿ ಸಭಾಪತಿಯವರ ಕೋಣೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕಲಾಪದಲ್ಲಿ ಹೆಚ್ಚು ಕಂಡಿಲ್ಲ. ಚರ್ಚೆಗಳಲ್ಲೂ ಭಾಗಿಯಾಗಿಲ್ಲ. ಕಳೆದ ಎರಡು ವರ್ಷಗಳಿಂದ ಅವರ ಆರೋಗ್ಯ ಸರಿ ಇಲ್ಲ. ವಯೋಸಹಜ ಕಾಯಿಲೆಯಿಂದ ಸೊರಗಿದ್ದಾರೆ. ಜೆಡಿಯು ಕಾರ್ಯಕರ್ತರ ಆತಂಕವಿರುವುದು ನಿತೀಶ್ ಕುರಿತಲ್ಲ. ಅವರು ಕಟ್ಟಿ ಬೆಳೆಸಿದ ಜೆಡಿಯು ಬಗೆಗಷ್ಟೇ.
ವಿಧಾನ ಪರಿಷತ್ತಿನ ಎಂಟು ಸ್ಥಾನಗಳಲ್ಲಿ ಮೂರು ಎನ್ಡಿಎ ಮಿತ್ರ ಪಕ್ಷಗಳಾದ ಬಿಜೆಪಿ, ಜೆಡಿಯು (ಕ್ರಮವಾಗಿ 2,1) ಪಾಲಾಗಿವೆ. ಎರಡು ಸ್ಥಾನಗಳು ‘ರಾಷ್ಟ್ರೀಯ ಜನತಾದಳ’ದ (ಆರ್ಜೆಡಿ) ವಶವಾಗಿವೆ. ಇಬ್ಬರು ಪಕ್ಷೇತರರು ಗೆದ್ದಿದ್ದಾರೆ. ಒಂದು ಸ್ಥಾನ ಪ್ರಶಾಂತ್ ಕಿಶೋರ್ ಅವರ ‘ಜನ ಸುರಾಜ್ ಪಕ್ಷ’ಕ್ಕೆ (ಜೆಎಸ್ಪಿ) ಹೋಗಿದೆ. ತಮಾಷೆ ಎಂದರೆ, ಜೆಡಿಯು ಅಭ್ಯರ್ಥಿಗಳನ್ನು ಸೋಲಿಸಿದ ಇಬ್ಬರೂ ಪಕ್ಷೇತರರು ಬಿಜೆಪಿ ಸೇರಿದ್ದು. ಮಿತ್ರ ಪಕ್ಷಗಳೇ ಪರಸ್ಪರರ ಕಾಲೆಳೆದಿವೆ. ಜೆಡಿಯು ಹಣಿಯಲು ಬಿಜೆಪಿ ತೆರೆಮರೆಯಲ್ಲಿ ಆಟವಾಡಿದೆ. ಕೆಲವು ಜೆಡಿಯು ನಾಯಕರೂ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪಿತೂರಿ ಮಾಡಿದ್ದಾರೆ. ಈ ಬೆಳವಣಿಗೆ ‘ರಾಜಕೀಯ ದೊಂಬರಾಟ’ಕ್ಕೆ ಸಾಕ್ಷಿಯಾಗಿದೆ. ಜುಲೈ 30ರಂದು ನಡೆದ ಬಂಕೀಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಗೆದ್ದಿದ್ದು ಜನ ಸುರಾಜ್ ಪಕ್ಷದ ಮುಖಂಡ ಪ್ರಶಾಂತ್ ಕಿಶೋರ್. ಐದು ಸಲ ಈ ಕ್ಷೇತ್ರ ಪ್ರತಿನಿಧಿಸಿದ್ದ ನಿತಿನ್ ನಬಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ರಾಜ್ಯಸಭೆಗೆ ಹೋದರು. ಅವರ ರಾಜೀನಾಮೆಯಿಂದಾಗಿ ಬಂಕೀಪುರ ತೆರವಾಗಿತ್ತು. ಬಿಜೆಪಿಯ ಸುರಕ್ಷಿತ ಕ್ಷೇತ್ರವೆಂದೇ ಭಾವಿಸಿದ್ದ ಈ ಕ್ಷೇತ್ರ ‘ಪಿಕೆ’ಗೆ ಒಲಿಯಿತು.
ವಿಧಾನಸಭೆ ಉಪ ಚುನಾವಣೆ ಅಥವಾ ಪರಿಷತ್ ಚುನಾವಣೆಗಳು ರಾಜ್ಯದ ರಾಜಕೀಯ ಭವಿಷ್ಯ ನಿರ್ಧರಿಸುವುದಿಲ್ಲ. ಆ ನಿಟ್ಟಿನಲ್ಲಿ ಸಣ್ಣದೊಂದು ಸುಳಿವು ಕೊಡಬಲ್ಲವು. ಈ ಚುನಾವಣೆಗಳ ನಂತರ ಬಿಜೆಪಿ ದುರ್ಬಲವಾದಂತೆ ಕಾಣುತ್ತಿದೆ. ಜೆಡಿಯು ಮುಳುಗುತ್ತಿದೆ. ಅದು ಮುಂದೆ ಬಿಜೆಪಿಯಲ್ಲಿ ವಿಲೀನ ಆಗಬಹುದು, ಇಲ್ಲವೇ ಹೋಳಾಗಿ ಒಂದು ಗುಂಪು ಬಿಜೆಪಿ ಸೇರಬಹುದು. ಮತ್ತೊಂದು ಗುಂಪು ಆರ್ಜೆಡಿ ಹಾಗೂ ಕಾಂಗ್ರೆಸ್ ಸೇರಬಹುದು. ಒಟ್ಟಾರೆ ಇದು ಜೆಡಿಯುನ ಅಂತ್ಯ ಕಾಲ. ಅದೀಗ ‘ಐಸಿಯು’ನಲ್ಲಿದೆ.
ಜೆಡಿಯು ಈ ಸ್ಥಿತಿಗೆ ಬರಲು ನಿತೀಶ್ ಅವರೇ ಕಾರಣ. ಅವರು ಸ್ವಾರ್ಥ ರಾಜಕೀಯ ಮಾಡಿದರೆ ವಿನಾ ರಾಜ್ಯದ ಹಿತ ನೋಡಲಿಲ್ಲ. ಪಕ್ಷದ ಭವಿಷ್ಯ ಕುರಿತು ಚಿಂತಿಸಲಿಲ್ಲ. ‘ವ್ಯಕ್ತಿಗಿಂತ ಪಕ್ಷ ದೊಡ್ಡದು’ ಎಂದು ಭಾವಿಸಿದ್ದರೆ, ಸೈದ್ಧಾಂತಿಕ ನೆಲೆಯಲ್ಲಿ ಪಕ್ಷ ಕಟ್ಟುತ್ತಿದ್ದರು. ಕಾರ್ಯಕರ್ತರನ್ನು ಸಂಘಟಿಸುತ್ತಿದ್ದರು. ನಾಯಕರನ್ನು ಬೆಳೆಸುತ್ತಿದ್ದರು. ಅದ್ಯಾವುದರ ಕಡೆ ಗಮನ ಕೊಡಲಿಲ್ಲ. ಅಧಿಕಾರಕ್ಕಾಗಿ ಮಾಡಬಾರದ್ದು ಮಾಡಿದರು. ಬಟ್ಟೆ ಬದಲಿಸುವಂತೆ ಮಿತ್ರರನ್ನು ಬದಲಿಸಿದರು. ಲಾಲು ಪ್ರಸಾದ್ ಅವರ ಆರ್ಜೆಡಿ ಸಾಮ್ರಾಜ್ಯ ಉರುಳಿಸಲು ಬಿಜೆಪಿ ಸ್ನೇಹ ಬೆಳೆಸಿದರು. ಒಂದಲ್ಲ, ಎರಡಲ್ಲ, ಅನೇಕ ಸಲ. ಬಿಜೆಪಿ ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಆರ್ಜೆಡಿ ಸಖ್ಯ ಬೆಳೆಸಿದರು. ಮೂರ್ನಾಲ್ಕು ಬಾರಿ. ಲಾಲು ಪ್ರಸಾದ್ ತಮ್ಮ ‘ಗೋಪಾಲ್ಗಂಜ್ ಟು ರೈಸಿನಾ- ಮೈ ಪೊಲಿಟಿಕಲ್ ಜರ್ನಿ’ ಕೃತಿಯಲ್ಲಿ ನಿತೀಶ್ ಕುಮಾರ್ ಅವರನ್ನು ‘ಬಂದರ್’ ಗೆ(ಮಂಗ)ಹೋಲಿಸಿದ್ದಾರೆ. ‘ಅಧಿಕಾರಕ್ಕಾಗಿ ಕೊಂಬೆಯಿಂದ ಕೊಂಬೆಗೆ ಜಿಗಿದವರು’ ಎಂದು ವಿಶ್ಲೇಷಿಸಿದ್ದಾರೆ.
ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ ಬಿಹಾರದ ಪ್ರಮುಖ ನಾಯಕರು. ರಾಮಮನೋಹರ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ಸಮಾಜವಾದಿ ಚಿಂತನೆ-ಹೋರಾಟದ ಗರಡಿಯಲ್ಲಿ ಪಳಗಿದವರು. ನಿತೀಶ್ ಅವರಿಗಿಂತ ಲಾಲು ಹಿರಿಯರು. ಮುಂಚೆಯೇ ರಾಜಕೀಯಕ್ಕೆ ಬಂದವರು. ಆರಂಭದಲ್ಲಿ ಇಬ್ಬರೂ ಜತೆಯಲ್ಲಿದ್ದವರು. ಹಿಂದುಳಿದ ವರ್ಗಗಳ ನಾಯಕ ಕರ್ಪೂರಿ ಠಾಕೂರ್ ನಿಧನದ ಬಳಿಕ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಲಾಲು ಅವರನ್ನು ನಿತೀಶ್ ಬೆಂಬಲಿಸಿದ್ದರು. ಆನಂತರ ಅವರನ್ನು ಬಿಟ್ಟು ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫೆರ್ನಾಂಡಿಸ್ ಕ್ಯಾಂಪ್ ಸೇರಿದರು.
ನಿತೀಶ್ 2005ರಿಂದ 2025ರವರೆಗೆ ಎರಡು ದಶಕಗಳ ಕಾಲ ಮುಖ್ಯಮಂತ್ರಿ. ಇದಕ್ಕೂ ಮೊದಲು ಕೇಂದ್ರ ಸಚಿವ. 1990ರಿಂದ 15 ವರ್ಷ ಲಾಲು ಮತ್ತು ಅವರ ಪತ್ನಿ ರಾಬ್ಡಿ ದೇವಿ ಮುಖ್ಯಮಂತ್ರಿ. 20 ವರ್ಷದಲ್ಲಿ ಜನಪರ ಕಾರ್ಯಕ್ರಮ-ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದರು ನಿತೀಶ್. ಕಾನೂನು- ವ್ಯವಸ್ಥೆ ಸುಧಾರಿಸಿದರು. ಲಾಲು ಇದ್ಯಾವುದೂ ಮಾಡಲಿಲ್ಲ. ಅವರ ಆಳ್ವಿಕೆಯಲ್ಲಿ ‘ಜಂಗಲ್ ರಾಜ್’ ತಲೆ ಎತ್ತಿತ್ತು ಎಂದು ಪ್ರಚಾರ ನಡೆಯಿತು. ಲಾಲು-ರಾಬ್ಡಿ ಸರಕಾರವಿದ್ದಾಗ ಯಾದವರು ಮೆರೆದಿದ್ದು ಸುಳ್ಳಲ್ಲ. ಇತರ ಹಿಂದುಳಿದ ಜಾತಿಗಳು, ಅತಿ ಹಿಂದುಳಿದ ಜಾತಿಗಳನ್ನು ಒಟ್ಟಿಗೆ ಕರೆದೊಯ್ದಿದ್ದರೆ ಆರ್ಜೆಡಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಮುಸ್ಲಿಮರು-ಯಾದವರನ್ನು (ಎಂ-ವೈ) ಧ್ರುವೀಕರಿಸಿ ರಾಜಕೀಯ ಮಾಡಿದರು. ಆದರೆ, ಅದು ಹೆಚ್ಚು ದಿನ ನಡೆಯಲಿಲ್ಲ. ಒಂದು ಮಾತು ಹೇಳದಿದ್ದರೆ ಅಪಚಾರ ಆಗಬಹುದು. ಆರ್ಜೆಡಿ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಸ್ವಾಭಿಮಾನ ತುಂಬಿದ್ದು ಕಟು ಸತ್ಯ. ಜತೆಗೆ ಜನಪರ-ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೆ ಲಾಲು ಅವರನ್ನು ಯಾರೂ ಮುಟ್ಟಲಾಗುತ್ತಿರಲಿಲ್ಲ.
ಎರಡು ದಶಕದಲ್ಲಿ ನಿತೀಶ್ 10 ಸಲ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ನೋಡಿದರೆ ಮಿತ್ರಪಕ್ಷಗಳನ್ನು ಎಷ್ಟು ಸಲ ಬದಲಾಯಿಸಿದರು ಎಂದು ಅರ್ಥವಾಗುತ್ತದೆ. ಈಗ ಲಾಲು ಮತ್ತು ನಿತೀಶ್ ಇಬ್ಬರಿಗೂ ಅನಾರೋಗ್ಯ ಕಾಡುತ್ತಿದೆ. ಲಾಲು ಮತ್ತು ನಿತೀಶ್ ಅವರ ನಡುವೆ ಸಣ್ಣ ವ್ಯತ್ಯಾಸವಿದೆ. ಲಾಲು ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ತೇಜಸ್ವಿ ಯಾದವ್ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಲಾಲು ಕುಟುಂಬದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಇದೆ. ಸೋದರ-ಸೋದರಿಯರ ಮಧ್ಯೆ ಜಗಳವಿದೆ. ಆದರೆ, ಆರ್ಜೆಡಿಗೆ ನಾಯಕತ್ವ ಕೊಡುವ ತಾಕತ್ತಿರುವುದು ತೇಜಸ್ವಿಗೆ. ನಿತೀಶ್ ಅವರಿಗೆ ಒಬ್ಬನೇ ಮಗ ನಿಶಾಂತ್. ಅಪ್ಪ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಬಳಿಕ ಸಾಮ್ರಾಟ್ ಚಕ್ರವರ್ತಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಮಗ ಆರೋಗ್ಯ ಸಚಿವ. ‘ಮಾಜಿ ಮುಖ್ಯಮಂತ್ರಿ ಮಗ’ ಎಂಬುದನ್ನು ಬಿಟ್ಟರೆ ಬೇರಾವ ಅರ್ಹತೆ ಇಲ್ಲ. ಈಚೆಗಷ್ಟೇ ನಿಶಾಂತ್ಗೆ ಜೆಡಿಯು ಸದಸ್ಯತ್ವ ಕೊಟ್ಟು ಮಂತ್ರಿ ಮಾಡಿದ್ದು. ಅವರಿಗೆ ಪಕ್ಷವನ್ನು ಮುನ್ನಡೆಸುವಷ್ಟು ಛಾತಿ ಇಲ್ಲ ಎಂಬುದು ಜನರ ಅಭಿಪ್ರಾಯ.
ಜೆಡಿಯು ನಾಯಕರು ನಿತೀಶ್ ಉತ್ತರಾಧಿಕಾರಿ ನಿಶಾಂತ್ ಎಂದು ಬಹಿರಂಗವಾಗಿ ಹೇಳುತ್ತಾರೆ. 45 ವರ್ಷದ ನಿಶಾಂತ್ ಮೂರು ದಶಕ ನಾಯಕತ್ವ ಕೊಡಬಲ್ಲರು ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಆಫ್ ದಿ ರೆಕಾರ್ಡ್ ಅಭಿಪ್ರಾಯವೇ ಬೇರೆ. ‘ನಿಶಾಂತ್ ನೇತೃತ್ವ ವಹಿಸಿದರೆ ಪಕ್ಷದ ಕಥೆ ಮುಗಿದಂತೆ. ನಿತೀಶ್ ಇಲ್ಲದೆ ಪಕ್ಷವೂ ಇಲ್ಲ’ ಎಂಬುದು ಈ ನಾಯಕರ ವಾದ.
ಜೆಡಿಯು ಈಗ ಮೂರ್ನಾಲ್ಕು ನಾಯಕರ ಸುತ್ತ ಗಿರಕಿ ಹೊಡೆಯುತ್ತಿದೆ. ನಿತೀಶ್ ಅವರ ಆಪ್ತ ಪಕ್ಷದ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಸಂಜಯ್ ಝಾ ಹಾಗೂ ಕೇಂದ್ರ ಸಚಿವ ಲಲನ್ ಸಿಂಗ್ ಪಕ್ಷ ನಿಯಂತ್ರಿಸಲು ಪೈಪೋಟಿ ನಡೆಸುತ್ತಿದ್ದಾರೆ. ಇಬ್ಬರಲ್ಲಿ ಯಾರ ಪರ ನಿಲ್ಲಬೇಕು ಎಂಬ ಗೊಂದಲದಲ್ಲಿ ಉಳಿದ ನಾಯಕರಿದ್ದಾರೆ. ಜೆಡಿಯು ಒಳಗಿರುವ ಒಡಕಿನ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸು ತ್ತಿದೆ. ಅದು ಪರಿಷತ್ ಚುನಾವಣೆಯಲ್ಲಿ ಪ್ರತಿಫಲಿಸಿದೆ.
ನಿತೀಶ್ ಸರಳ-ಸಜ್ಜನ ರಾಜಕಾರಣಿ. ಸೌಮ್ಯ ಸ್ವಭಾವ. ಲಾಲು ಅವರಂತೆ ಎಂದೂ ಗುಡುಗಿದವರಲ್ಲ. ಐಷಾರಾಮಿ ಜೀವನಕ್ಕೆ ಜೋತು ಬಿದ್ದವರಲ್ಲ. ಕೈ, ಬಾಯಿ ಕೊಳೆ ಮಾಡಿಕೊಂಡವರಲ್ಲ. ಭ್ರಷ್ಟಾಚಾರ ಕಳಂಕ ಹಚ್ಚಿಕೊಳ್ಳಲಿಲ್ಲ. ರಾಜಕಾರಣದ ಕೊನೆ ಗಳಿಗೆಯಲ್ಲಿ ಬಿಜೆಪಿಗೆ ಅದರಲ್ಲೂ ನರೇಂದ್ರ ಮೋದಿ ಅವರಿಗೆ ಶರಣಾದರು, ಈ ಅವಕಾಶ ಸಮರ್ಪಕವಾಗಿ ಬಳಸಿಕೊಂಡ ಬಿಜೆಪಿ ನಿತೀಶ್ ಅವರನ್ನು ಬದಿಗೊತ್ತಿ, ಸಾಮ್ರಾಟ್ ಚೌಧರಿ ಸರಕಾರ ಬರುವಂತೆ ನೋಡಿಕೊಂಡಿತು. ಲಾಲು ಕೂಡಾ ಸರಳ ರಾಜಕಾರಣಿ. ಆದರೆ, ಅವರಿಗೆ ಭ್ರಷ್ಟಾಚಾರ ಕಳಂಕ ಅಂಟಿಕೊಂಡಿತು. ಅದನ್ನು ಎದುರಿಸುವಲ್ಲೇ ಹೈರಾಣಾದರು.
ಈಗ ಜೆಡಿಯುಗೆ ಬಂದೊದಗಿರುವ ಸ್ಥಿತಿ ಮಿಕ್ಕ ಪ್ರಾದೇಶಿಕ ಪಕ್ಷಗಳಿಗೂ ಎಚ್ಚರಿಕೆ ಗಂಟೆ. ಹೆಚ್ಚುಕಡಿಮೆ ಎನ್ಸಿಪಿ, ಟಿಎಂಸಿ ಸೇರಿ ಅನೇಕ ಪಕ್ಷಗಳು ಇದೇ ಪರಿಸ್ಥಿತಿಯಲ್ಲಿವೆ. ಈಗಲೇ ಎಚ್ಚೆತ್ತುಕೊಂಡು ವಿಶಾಲ ತಳಹದಿ ಮೇಲೆ ಕಾರ್ಯಕರ್ತರ ಪಡೆ ಕಟ್ಟಿ, ಪರ್ಯಾಯ ನಾಯಕತ್ವ ಬೆಳೆಸದಿದ್ದರೆ ಮುಂದೆ ಭಾರೀ ಬೆಲೆ ತೆರಬೇಕಾಗಬಹುದು.
(ಅಂಕಣಕಾರರು ಹಿರಿಯ ಪತ್ರಕರ್ತರು)






