ಪಂಜಾಬ್ ರಾಜಕಾರಣದ ಮೇಲೆ ‘ಡ್ರಗ್ಸ್’ ಛಾಯೆ !

ಉಡ್ತಾ ಪಂಜಾಬ್! ಪಂಜಾಬ್ ತೇಲುತ್ತಿದೆ. ನೀರಿನ ಮೇಲಲ್ಲ; ಗಾಳಿಯಲ್ಲೂ ಅಲ್ಲ; ಮಾದಕ ವಸ್ತುಗಳ ‘ನಶೆ’ಯಲ್ಲಿ! ಬಹುತೇಕರು ನೆಲದ ಮೇಲೆ ಓಡಾಡುವುದಿಲ್ಲ. ಅಮಲಿನಲ್ಲಿ ತೇಲುತ್ತಾರೆ. ಪಂಜಾಬ್ ಹೋಗುತ್ತಿರುವ ದಿಕ್ಕು ಆತಂಕ ಹುಟ್ಟಿಸುತ್ತದೆ. 10 ವರ್ಷದ ಹಿಂದೆ ಇದೇ ಕಥಾವಸ್ತು ಆಧರಿಸಿದ ‘ಉಡ್ತಾ ಪಂಜಾಬ್’ ಹಿಂದಿ ಸಿನೆಮಾ ತೆರೆ ಕಂಡಿತು. ಈ ವಿಷಯ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ‘ಸಮರ’ಕ್ಕೆ ಮುನ್ನುಡಿ ಬರೆಯಲಿದೆ.
ಪಂಜಾಬ್‌ಗೆ ‘ಮಾದಕ ವಸ್ತುಗಳ ಚಟ’ ಹೊಸದಲ್ಲ. ಹಳೇ ನಂಟಿದೆ. ಅಫೀಮು, ಗಾಂಜಾ, ಭಾಂಗ್‌ನಂಥ ನೈಸರ್ಗಿಕ ಡ್ರಗ್ಸ್ ಒಡನಾಟವಿತ್ತು. ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಸಿಂಥೆಟಿಕ್ ಹೆರಾಯಿನ್, ಎಂಡಿಎಂಎ, ಸ್ಫಟಿಕದಂಥ ವಸ್ತುಗಳ ಪ್ರವೇಶದ ಬಳಿಕ ಪರಿಸ್ಥಿತಿ ಭಯಾನಕವಾಗಿದೆ. ಈ ವಸ್ತುಗಳ ಕಳ್ಳಸಾಗಣೆ ಹಿಂದೆ ಮಾಫಿಯಾವಿದೆ. ಅಂತರ್‌ರಾಷ್ಟ್ರ ಜಾಲವಿದೆ. ಗಡಿಯಿಂದ ಕಳ್ಳಸಾಗಣೆಯಾಗುತ್ತಿದೆ. ರಾಜ್ಯ ಮತ್ತು ಕೇಂದ್ರಕ್ಕೆ ಮಾಹಿತಿ ಇದ್ದರೂ ಪರಿಣಾಮಕಾರಿ ಕ್ರಮಗಳಿಲ್ಲ. ಇದಕ್ಕೆ ಒಂದು ಪಕ್ಷದ ಕಡೆ ಬೆರಳು ಮಾಡಲಾಗದು. ಕಾಂಗ್ರೆಸ್, ಶಿರೋಮಣಿ ಅಕಾಲಿದಳ (ಎಸ್‌ಎಡಿ)- ಬಿಜೆಪಿ, ಆಮ್ ಆದ್ಮಿ ಪಕ್ಷ (ಎಎಪಿ) ಸೇರಿ ಎಲ್ಲ ಸರಕಾರಗಳೂ ನೈತಿಕ ಹೊಣೆ ಹೊರಬೇಕು. ಇದು ಗೊತ್ತಿದ್ದರೂ ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚುತ್ತಿದ್ದಾರೆ.
ಮಾದಕ ವಸ್ತುಗಳ ಹಾವಳಿ ವಿರುದ್ಧ ದನಿ ಎತ್ತಲಾಗದ ಪರಿಸ್ಥಿತಿ ಪಂಜಾಬ್‌ನಲ್ಲಿದೆ. ದನಿ ಎತ್ತಿದವರ ಜೀವ ತೆಗೆಯಲಾಗುತ್ತಿದೆ. ಈಚೆಗೆ ‘ಡ್ರಗ್ಸ್ ವಿರೋಧಿ ಹೋರಾಟಗಾರ’ ಪರಮೀಂದರ್ ಸಿಂಗ್ ಜೋಟ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ವಾತಾವರಣ ಅದೆಷ್ಟು ಹದಗೆಟ್ಟಿದೆ ಎಂದರೆ, 10ವರ್ಷದ ಬಾಲಕನೊಬ್ಬ ಮಾದಕ ವಸ್ತು ಸೇವಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ದೇಶದ ‘ಆತ್ಮ ಸಾಕ್ಷಿ’ ಕದಡಿದೆ. ಹದಿಹರೆಯದ ವ್ಯಸನಿಗಳ ಲೆಕ್ಕವಿಲ್ಲ. ವ್ಯಸನಕ್ಕಾಗಿ ಕೈಗೆ ಸಿಕ್ಕಿದ್ದನ್ನು ಮಾರುವ ನಿದರ್ಶನಗಳು ಬೇಕಾದಷ್ಟಿವೆ. ಆಭರಣ, ಮನೆ ಹಾಗೂ ಜಮೀನು ಕಳೆದುಕೊಂಡ ಪ್ರಕರಣಗಳು ಕಡಿಮೆಯಿಲ್ಲ.
ಸರಕಾರ ಮತ್ತು ಪೊಲೀಸರು ಮನಸ್ಸು ಮಾಡಿದರೆ ಮಾಫಿಯಾ ಮಟ್ಟ ಹಾಕುವುದು ದೊಡ್ಡ ವಿಷಯವಲ್ಲ. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಕೈಜೋಡಿಸಬೇಕು. ಗಡಿಗಳನ್ನು ಭದ್ರಪಡಿಸಬೇಕಾದ ಕೇಂದ್ರ ಸರಕಾರ ಬಿಜೆಪಿಯೇತರ ಸರಕಾರಗಳ ಮೇಲೆ ಗೂಬೆ ಕೂರಿಸುವುದರಲ್ಲಿ ಮಗ್ನವಾಗಿದೆ. ಪಶ್ಚಿಮ ಬಂಗಾಳಕ್ಕೆ ಅಕ್ರಮ ವಲಸಿಗರು ನುಸುಳಿದರೂ ರಾಜ್ಯ ಸರಕಾರ ಹೊಣೆ. ಗಡಿಯಾಚೆಯಿಂದ ಮಾದಕ ವಸ್ತು ಕಳ್ಳಸಾಗಣೆಯಾದರೂ ರಾಜ್ಯ ಸರಕಾರವೇ ಹೊಣೆ. ಹಾಗಾದರೆ ಕೇಂದ್ರ ಸರಕಾರದ ಜವಾಬ್ದಾರಿ ಏನು? ಗಡಿಗಳು ಯಾರ ನಿಯಂತ್ರಣದಲ್ಲಿವೆ?
ಮಾದಕ ವಸ್ತು ಕಳ್ಳದಂಧೆಗೆ ಪೊಲೀಸರು ಮತ್ತು ರಾಜಕಾರಣಿಗಳ ರಕ್ಷಣೆ ಇರುತ್ತದೆ ಎಂಬುದಕ್ಕೆ ಅರ್ಜುನ ಪ್ರಶಸ್ತಿ ಪುರಸ್ಕೃತ
ಜಟ್ಟಿ ಜಗದೀಶ್ ಬೋಲಾ ಪ್ರಕರಣವೇ ಸಾಕ್ಷಿ. ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಬೋಲಾ ಅವರನ್ನು ಮುಂಬೈಯಲ್ಲಿ ಬಂಧನ ಮಾಡಲಾಯಿತು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ, ಏಶ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಬೋಲಾ 1991ರಲ್ಲಿ ಡಿಎಸ್‌ಪಿ ಆಗಿ ನೇಮಕವಾದರು. ಈ ಆರೋಪ ಸಂಬಂಧ 2002ರಲ್ಲಿ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ತನಿಖೆ ವೇಳೆ ಬೋಲಾ ಶಿರೋಮಣಿ ಅಕಾಲಿದಳದ ನಾಯಕ, ಆಗಿನ ಸಚಿವ ವಿಕ್ರಮ್‌ಸಿಂಗ್ ಮಜೀತಿಯಾ ಹೆಸರು ಹೇಳಿದ್ದರು. ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಇದು ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಎಂದು ಅಂದಾಜು ಮಾಡಲಾಗಿದೆ.
‘ಎನ್‌ಸಿಆರ್‌ಬಿ’ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಬಿಡುಗಡೆ ಮಾಡಿರುವ ವರದಿ 106 ಮಂದಿ ಅತಿಯಾದ ಡ್ರಗ್ಸ್ ಸೇವಿಸಿ ಮೃತಪಟ್ಟಿದ್ದಾರೆ ಎಂದಿದೆ. 2023ರಲ್ಲಿ 89 ಸಾವಿನ ಪ್ರಕರಣಗಳು ವರದಿಯಾಗಿತ್ತು. ಏಮ್ಸ್ 2015ರಲ್ಲಿ ಬಿಡುಗಡೆ ಮಾಡಿದ ವರದಿಯೂ ಬೆಚ್ಚಿ ಬೀಳಿಸಿದೆ. ಪಂಜಾಬ್ ನೈಸರ್ಗಿಕ ಮಾದಕ ವಸ್ತುಗಳಿಂದ ಸಿಂಥೆಟಿಕ್ ಡ್ರಗ್ಸ್ ಕಡೆ ಹೊರಳಿದ್ದು 80-90ರ ದಶಕದಲ್ಲಿ ಖಾಲಿಸ್ತಾನ್ ಉಗ್ರರ ಉಪಟಳದ ವೇಳೆ ಎಂದು ಹೇಳಲಾಗುತ್ತಿದೆ. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇತ್ತು. ಉಗ್ರರ ಉಪಟಳದ ಲಾಭ ಪಡೆದು ನೆರೆಯ ರಾಷ್ಟ್ರಗಳು ಡ್ರಗ್ಸ್ ಕಳ್ಳಸಾಗಣೆ ಮಾಡಿವೆ. ಈಗಲೂ ಗಡಿಗಳಲ್ಲಿ ಈ ಉದ್ದೇಶಕ್ಕೆ ಡ್ರೋನ್ ಬಳಸಲಾಗುತ್ತಿದೆ ಎಂಬ ದೂರುಗಳಿವೆ.
ಪಂಜಾಬ್‌ನಲ್ಲಿ 2007ರಿಂದ 2017ರವರೆಗೆ ಎಸ್‌ಎಡಿ- ಬಿಜೆಪಿ ಸರಕಾರವಿತ್ತು. ಆ ಅವಧಿಯಲ್ಲಿ ಸಮಸ್ಯೆ ಹೆಚ್ಚಾಯಿತು. ಕಾಂಗ್ರೆಸ್, ಎಎಪಿ ಇದನ್ನೇ ಚುನಾವಣಾ ವಿಷಯ ಮಾಡಿದವು. 2027ರ ಚುನಾವಣೆಗೂ ಇದೇ ಅಜೆಂಡಾ. 2017ರಲ್ಲಿ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಆಗಿದ್ದ ಕ್ಯಾ.ಅಮರೀಂದರ್ ಸಿಂಗ್ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದರು. ಆಂತರಿಕ ಜಗಳದಿಂದ ಈ ವಿಷಯ ನೇಪಥ್ಯಕ್ಕೆ ಸರಿಯಿತು.
ಈ ವರ್ಷ ಎಎಪಿ ಸರಕಾರ ಮಾದಕ ವ್ಯಸನಿಗಳ ಗಣತಿ ನಡೆಸಲು ಉದ್ದೇಶಿಸಿತ್ತು. ಎಪ್ರಿಲ್ 1ರಿಂದ ಆರಂಭವಾದ ಗಣತಿ ಮೂರು ತಿಂಗಳು ನಡೆಯಿತು. 28ಸಾವಿರ ನೌಕರರು,ಶಿಕ್ಷಕರು ಭಾಗಿಯಾಗಿದ್ದರು. 65 ಲಕ್ಷ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಿದ್ದರು. ಮಾದಕ ವ್ಯಸನಿಗಳು ಯಾರು? ಯಾವ ವಯಸ್ಸಿನವರು? ಮಾದಕವಸ್ತು ಯಾವುದು? ಶಾಲಾ- ಕಾಲೇಜುಗಳ ಮಕ್ಕಳೇ? ನಿರುದ್ಯೋಗಿಗಳೇ? ಇತ್ಯಾದಿ ವೈಜ್ಞಾನಿಕ ಮಾಹಿತಿ ಸಂಗ್ರಹಿಸುವ ಉದ್ದೇಶವಿತ್ತು. ಅದಕ್ಕೆ 150ರಿಂದ 200 ಕೋಟಿ ಖರ್ಚು ಮಾಡಲಾಯಿತು. ಜನರು ಸಹಕರಿಸಲಿಲ್ಲ. ನಿಖರ ಮಾಹಿತಿ ಕೊಡಲಿಲ್ಲ. ಸಮೀಕ್ಷೆ ವಿಫಲವಾಯಿತು. ಮಾದಕ ವಸ್ತುಗಳ ವ್ಯಸನ ಬರೀ ಕಾನೂನು- ಸುವ್ಯವಸ್ಥೆ ಸಮಸ್ಯೆ ಅಲ್ಲ, ಸಾಮಾಜಿಕ ಪಿಡುಗೂ ಹೌದು. ರಾಜಕೀಯ ಪಕ್ಷಗಳು ಅದನ್ನು ಅರ್ಥ ಮಾಡಿಕೊಂಡರೆ ನಿವಾರಣೆ ಸಾಧ್ಯ.
ಭತ್ತದ ಕಣಜ ಪಂಜಾಬ್‌ನಲ್ಲಿ ಶ್ರೀಮಂತಿಕೆ ಇದೆ. ಬಡತನವೂ ಇದೆ. ಕೃಷಿ ಸಂಬಂಧಿತ ಸಮಸ್ಯೆಗಳಿವೆ. ನಿರುದ್ಯೋಗವಿದೆ. ಬೆಲೆ ಏರಿಕೆ ಬಿಸಿ ಇದೆ. ಇವೆಲ್ಲಕ್ಕಿಂತಲೂ ಗಂಭೀರವಾಗಿರುವುದು ಮಾದಕ ವಸ್ತುಗಳ ವ್ಯಸನ. ಇದರಿಂದ ಕಿರುಕುಳ ಅನುಭವಿಸುತ್ತಿರುವವರು ಮಹಿಳೆಯರು. ಗಂಡ, ಮಗ, ಸೋದರ ಹೀಗೆ ಮಾದಕ ವಸ್ತು ವ್ಯಸನಿಗಳಿಂದ ಹೈರಾಣಾಗಿದ್ದಾರೆ.
ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಎಲ್ಲ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ. ಅಧಿಕಾರ ಹಿಡಿಯಲು ತಂತ್ರ ರೂಪಿಸುತ್ತಿವೆ. ಆರು ವರ್ಷದ ಹಿಂದೆ ಕೃಷಿ ಸಂಬಂಧಿತ ಕಾಯ್ದೆಗಳನ್ನು ವಿರೋಧಿಸಿ ಬಿಜೆಪಿ ಮೈತ್ರಿ ತೊರೆದು ಎಸ್‌ಎಡಿ ಹೊರಬಂದಿತ್ತು. ಈಗ ಉಭಯ ಪಕ್ಷಗಳು ಮೈತ್ರಿಯ ಸುಳಿವು ನೀಡಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಎಸ್‌ಎಡಿ ಮುಖಂಡ, ಮಾಜಿ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
‘ಪಂಜಾಬ್‌ನಲ್ಲಿ 2027ಕ್ಕೆ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರಲಿದೆ’ ಎಂದು ಅಮಿತ್ ಶಾ ಈ ತಿಂಗಳ 22ರಂದು ದಿಲ್ಲಿಯಲ್ಲಿ ಹೇಳಿದ್ದಾರೆ. ಮರುದಿನ ಸುಖಬೀರ್ ಸಿಂಗ್ ಬಾದಲ್, ‘ಸಮಾನ ಮನಸ್ಕ ಪಕ್ಷಗಳ ಜತೆ ಮೈತ್ರಿಗೆ ಮುಕ್ತವಾಗಿದ್ದೇವೆ’ಎಂದಿದ್ದಾರೆ. ‘ಕಾಂಗ್ರೆಸ್ ಮತ್ತು ಎಎಪಿ ಪಂಜಾಬಿನ ಶತ್ರುಗಳು’ ಎಂದೂ ಟೀಕಿಸಿದ್ದಾರೆ.
ಪರಸ್ಪರರ ಸಹಕಾರವಿಲ್ಲದೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಭಾವನೆ ಎಸ್‌ಎಡಿ- ಬಿಜೆಪಿ ನಾಯಕರಲ್ಲಿದೆ. ಬಿಜೆಪಿ ಆಂತರಿಕ ಸಮೀಕ್ಷೆಯೂ ಅದನ್ನೇ ಹೇಳಿದೆ. ಎರಡೂವರೆ ದಶಕ ಜತೆಯಲ್ಲಿದ್ದ ಮಿತ್ರ ಪಕ್ಷಗಳು 1997, 2007 ಮತ್ತು 2012ರಲ್ಲಿ ಸರಕಾರ ಮಾಡಿದ್ದವು. 2022ರಲ್ಲಿ ಪ್ರತ್ಯೇಕವಾಗಿ ಚುನಾವಣೆ ಎದುರಿಸಿದ್ದರಿಂದ ಹೀನಾಯ ಸೋಲು ಅನುಭವಿಸಿದ್ದವು.
ಹಲವು ವರ್ಷ ಪಂಜಾಬ್ ಕಾಂಗ್ರೆಸ್ ಪಕ್ಷದ ಕೈಯಲ್ಲಿತ್ತು. ಬಳಿಕ 1997ರಲ್ಲಿ ಎಸ್‌ಎಡಿ- ಬಿಜೆಪಿ ಮಿತ್ರರ ವಶವಾಯಿತು. 2002ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಿತು. ಕ್ಯಾ ಅಮರೀಂದರ್ ಸಿಂಗ್ ಮುಖ್ಯಮಂತ್ರಿ. 2007ರಲ್ಲಿ ಅಧಿಕಾರ ಹೋಯಿತು. ಅಲ್ಲಿಂದ 10 ವರ್ಷ ಎಸ್‌ಎಡಿ- ಬಿಜೆಪಿ ಸರಕಾರ. ಹತ್ತು ವರ್ಷ ಕಾಂಗ್ರೆಸ್‌ಗೆ ವನವಾಸ. 2017ರಲ್ಲಿ ಮತ್ತೆ ಕಾಂಗ್ರೆಸ್ ಗೆದ್ದು ಅಮರೀಂದರ್ ಮುಖ್ಯಮಂತ್ರಿಯಾದರು. ಆದರೆ, ಗುಂಪುಗಾರಿಕೆಯಿಂದ ಚುನಾವಣೆಗೆ ಕೆಲವು ತಿಂಗಳ ಮುನ್ನ ಅಮರೀಂದರ್ ಅಧಿಕಾರ ಬಿಡಬೇಕಾಯಿತು. ಚರಣ್‌ಜಿತ್ ಸಿಂಗ್ ಚನ್ನಿ ಉತ್ತರಾಧಿಕಾರಿಯಾದರು.
2022ರಿಂದ ಎಎಪಿ ಸರಕಾರವಿದೆ. ಭಗವಂತ್ ಸಿಂಗ್ ಮಾನ್ ನೇತೃತ್ವ ವಹಿಸಿದ್ದಾರೆ. ದಿಲ್ಲಿ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಪಂಜಾಬ್‌ನಲ್ಲೂ ಎಎಪಿ ಅಧಿಕಾರ ಹಿಡಿಯಲು ಕಾರಣವಾಗಿದೆ. ಪಂಜಾಬ್ ವಿಧಾನಸಭೆ ಒಟ್ಟು ಸ್ಥಾನಗಳು 117. ಎಎಪಿ ಗೆದ್ದಿದ್ದು 92, ಕಾಂಗ್ರೆಸ್ 18, ಎಸ್‌ಎಡಿ 3, ಬಿಜೆಪಿ 2, ಬಿಎಸ್‌ಪಿ 1 ಸ್ಥಾನ ಗೆದ್ದಿವೆ. ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ.
ಪಂಜಾಬ್ ರಾಜಕೀಯ ವಾತಾವರಣ ಗಮನಿಸಿದರೆ ‘ಗೆದ್ದು ಅಧಿಕಾರ ಹಿಡಿಯುತ್ತೇವೆ’ ಎಂಬ ವಿಶ್ವಾಸ ಸದ್ಯಕ್ಕೆ ಯಾವ ಪಕ್ಷದ ನಾಯಕರಿಗೂ ಇದ್ದಂತಿಲ್ಲ. ಒಳಜಗಳ, ಗುಂಪುಗಾರಿಕೆ ಎಲ್ಲೆಡೆ ಇದೆ. ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಸದಸ್ಯರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೂ ಭಿನ್ನಮತವಿದೆ. ಎಸ್‌ಎಡಿಯಲ್ಲೂ ಬಂಡಾಯವಿದೆ. ಬಿಜೆಪಿಯೊಳಗೂ ಒಗ್ಗಟ್ಟಿಲ್ಲ. ಗುಂಪುಗಾರಿಕೆ ಕೊನೆಗಾಣಿಸಿ ಚುನಾವಣೆಗೆ ಪಕ್ಷ ಸಜ್ಜುಗೊಳಿಸುವ ಕೆಲಸಕ್ಕೆ ಕಾಂಗ್ರೆಸ್, ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಎಎಪಿ ಯತ್ನಿಸುತ್ತಿದೆ. 2027ರ ಪಂಜಾಬ್ ವಿಧಾನಸಭೆ ಚುನಾವಣೆ ಎಲ್ಲ ಪಕ್ಷಗಳಿಗೂ ಮಹತ್ವದ್ದು. ಎಸ್‌ಎಡಿ- ಬಿಜೆಪಿ ಪಾಲಿಗಂತೂ ಅಳಿವು ಉಳಿವಿನ ಪ್ರಶ್ನೆ.
(ಅಂಕಣಕಾರರು ಹಿರಿಯ ಪತ್ರಕರ್ತರು)






