ಪೂಜಾ ಖೇಡ್ಕರ್ ಪ್ರಕರಣಕ್ಕೆ ಹೊಸ ತಿರುವು; ಪುಣೆ ಡಿಸಿ ವಿರುದ್ಧ ಕಿರುಕುಳ ಆರೋಪ ಹೊರಿಸಿದ ಐಎಎಸ್ ಅಧಿಕಾರಿ

ಪೂಜಾ ಖೇಡ್ಕರ್ | Credit: X/@DDNewslive
ಪುಣೆ: ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಗೆ ಮರಳಿರುವ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಮ್ಮ ಮಾಜಿ ಮೇಲಧಿಕಾರಿ ಹಾಗೂ ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ವಿರುದ್ಧ ಕಿರುಕುಳ ಆರೋಪ ಮಾಡುವ ಮೂಲಕ ನಕಲಿ ದಾಖಲೆ ಸೃಷ್ಟಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಖೇಡ್ಕರ್ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಅಜಯ್ ಮೋರೆಯವರ ಕ್ಯಾಬಿನ್ ಅತಿಕ್ರಮಿಸಿಕೊಂಡು ಅಧಿಕೃತ ಬಳಕೆಗಾಗಿ ಇರುವ ಆಡಿ ಕಾರನ್ನು ಬಳಸುತ್ತಿದ್ದಾರೆ ಮತ್ತು ಖಾಸಗಿ ಕಾರಿಗೆ ಬಿಕಾನ್ ಲೈಟ್ ಅಳವಡಿಸಿಕೊಂಡಿದ್ದಾರೆ ಎಂದು ಸರ್ಕಾರಕ್ಕೆ ದಿವಾಸೆ ವರದಿ ನೀಡಿದ ಹಿನ್ನೆಲೆಯಲ್ಲಿ ಖೇಡ್ಕರ್ ತೊಂದರೆಗೆ ಸಿಲುಕಿಕೊಂಡಿದ್ದರು.
ಇದಾದ ಬಳಿಕ ಖೇಡ್ಕರ್ ಅವರನ್ನು ಪುಣೆಯಿಂದ ವಾಶಿಂ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಸಾಮಾನ್ಯ ಆಡಳಿತ ಇಲಾಖೆ ಖೇಡ್ಕರ್ ವಿರುದ್ಧ ಮೃದು ಧೋರಣೆ ಅನುಸರಿಸಿದ ಬಳಿಕ ಈ ಮಹಿಳಾ ಅಧಿಕಾರಿಯ ಆಯ್ಕೆ ಬಗ್ಗೆಯೇ ವಿವಾದ ಹುಟ್ಟಿಕೊಂಡಿತು.
ಸೋಮವಾರ ಸಂಜೆ ಖೇಡ್ಕರ್ ಹೇಳಿಕೆಯೊಂದನ್ನು ದಾಖಲಿಸಲು ಬಯಸಿರುವುದಾಗಿ ಪ್ರಕಟಿಸಿದ್ದರು. ತಾವು ಮಹಿಳೆಯಾಗಿರುವುದರಿಂದ ಎಲ್ಲಿ ಬೇಕಾದರೂ ಎಫ್ಐಆರ್ ದಾಖಲಿಸಬಹುದು ಎಂದು ಹೇಳಿದ್ದರು. ಕೊನೆಗೆ ಮಹಿಳಾ ಉಪ ಅಧೀಕ್ಷಕಿಯವರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಿದ್ದು, ಈ ವೇಳೆ ದಿವಾಸೆ ವಿರುದ್ಧ ಕಿರುಕುಳ ಆರೋಪ ಹೊರಿಸಲಾಗಿದೆ. ಈ ಪ್ರಕರಣದ ಬಗ್ಗೆ ವಾಶಿಂ ಎಸ್ಪಿ ಅನೂಜ್ ತಾರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೂಕ್ತ ಅಧಿಕಾರಿಗಳಿಗೆ ಈ ಹೇಳಿಕೆಯ ಪ್ರತಿಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಖೇಡ್ಕರ್ ಮಾಡಿರುವ ದೂರಿನ ಬಗ್ಗೆ ಪ್ರಶ್ನಿಸಿದಾಗ, "ಪ್ರಾಥಮಿಕ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಸ್ಪಷ್ಟಪಡಿಸಿದ್ದಾರೆ.







