ಶಾಟ್ಪುಟ್ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಬೆಳ್ಳಿ ಗೆದ್ದ ಆಭಾ ಖಟುವಾ
ಪಾರುಲ್ ಚೌಧರಿ, ಜ್ಯೋತಿಗೆ ಎರಡನೇ ಪದಕ

Photo: Twitter
ಬ್ಯಾಂಕಾಕ್: ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ರವಿವಾರ ಅಚ್ಚರಿಯ ಪ್ರದರ್ಶನ ನೀಡಿದ ಆಭಾ ಖಟುವಾ ಮಹಿಳೆಯರ ಶಾಟ್ಪುಟ್ ಸ್ಪರ್ಧೆಯಲ್ಲಿ 18.06 ಮೀ.ದೂರಕ್ಕೆ ಶಾಟ್ಪುಟ್ ಎಸೆದು ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದರು. ಇದರೊಂದಿಗೆ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಇದೇ ವೇಳೆ ಜ್ಯೋತಿ ಯರ್ರಾಜಿ ಹಾಗೂ ಪಾರುಲ್ ಚೌಧರಿ ಚಾಂಪಿಯನ್ಶಿಪ್ನಲ್ಲಿ ತಮ್ಮ ಎರಡನೇ ಪದಕವನ್ನು ಗೆದ್ದುಕೊಂಡರು.
ಭಾರತವು ಸ್ಪರ್ಧೆಯ ಕೊನೆಯ ದಿನವಾದ ರವಿವಾರ 8 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಜಯಿಸಿದೆ. 6 ಚಿನ್ನ, 12 ಬೆಳ್ಳಿ ಹಾಗೂ 9 ಕಂಚಿನ ಪದಕಗಳ ಸಹಿತ ಒಟ್ಟು 27 ಪದಕಗಳೊಂದಿಗೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ತನ್ನ ಅಭಿಯಾನ ಅಂತ್ಯಗೊಳಿಸಿದೆ.
28ರ ಹರೆಯದ ಆಭಾ ತನ್ನ ಹಿಂದಿನ ಜೀವನಶ್ರೇಷ್ಠ ಪ್ರದರ್ಶನ(17.13 ಮೀ.)ವನ್ನು ಉತ್ತಮಪಡಿಸಿಕೊಂಡಿದ್ದಾರೆ. ಆಭಾ 4 ಕೆಜಿ ತೂಕದ ಕಬ್ಬಿಣದ ಚೆಂಡನ್ನು ತನ್ನ 4ನೇ ಸುತ್ತಿನ ಥ್ರೋನಲ್ಲಿ 18.06 ಮೀ.ದೂರಕ್ಕೆ ಎಸೆದು ಚೀನಾದ ಸಾಂಗ್ ಜಿಯಾಯುಯಾನ್(18.88 ಮೀ.)ನಂತರ ಎರಡನೇ ಸ್ಥಾನ ಪಡೆದರು.
ಹಿರಿಯ ಶಾಟ್ಪುಟ್ ತಾರೆ ಮನ್ಪ್ರೀತ್ ಕೌರ್ ಅವರ ರಾಷ್ಟ್ರೀಯ ದಾಖಲೆಯನ್ನು ಆಭಾ ಸರಿಗಟ್ಟಿದರು. ಸಿಂಗ್ ಮೊದಲ ಸುತ್ತಿನ ಎಸೆತದಲ್ಲಿ 17 ಮೀ.ದೂರಕ್ಕೆ ಗುಂಡೆಸೆದು ಕಂಚು ಜಯಿಸಿದ್ದರು.
ಜ್ಯೋತಿ ಯರ್ರಾಜಿ ಗುರುವಾರ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ 100 ಮೀ. ಹರ್ಡಲ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಅತ್ಲೀಟ್ ಎನಿಸಿಕೊಂಡಿದ್ದರು. ಇಂದು 200 ಮೀ.ನಲ್ಲಿ 23.13 ಸೆಕೆಂಡ್ನಲ್ಲಿ ಗುರಿ ತಲುಪಿ ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಭಾರತದ ದೀರ್ಘ ಅಂತರದ ಓಟಗಾರ್ತಿ
ಪಾರುಲ್ ಚೌಧರಿ 5,000 ಮೀ. ಓಟದಲ್ಲಿ ಬೆಳ್ಳಿ ಜಯಿಸಿ ಚಾಂಪಿಯನ್ಶಿಪ್ನಲ್ಲಿ 2ನೇ ಪದಕ ತನ್ನದಾಗಿಸಿಕೊಂಡರು. ಶುಕ್ರವಾರ 3,000 ಮೀ. ಸ್ಟೀಪಲ್ಚೇಸ್ನಲ್ಲಿ ಚಿನ್ನ ಜಯಿಸಿದ್ದ ಪಾರುಲ್ 5,000 ಮೀ. ಓಟದ ಫೈನಲ್ನಲ್ಲಿ 15 ನಿಮಿಷ 52.35 ಸೆಕೆಂಡ್ನಲ್ಲಿ ಗುರಿ ತಲುಪಿ ಜಪಾನ್ನ ಯುಮಾ ಯಮಮೊಟೊ(15:15.16) ನಂತರ ಎರಡನೇ ಸ್ಥಾನ ಪಡೆದರು.
28ರ ಹರೆಯದ ಪಾರುಲ್ 5,000 ಮೀ. ಓಟದಲ್ಲಿ 15:10.35 ಸೆಕೆಂಡ್ನಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಅಂಕಿತಾ ಕಂಚು ಜಯಿಸಿದ್ದು, ಸ್ಪರ್ಧೆಯಲ್ಲಿ ಭಾರತಕ್ಕೆ 2ನೇ ಪದಕ ಗೆದ್ದುಕೊಟ್ಟರು.
ಪುರುಷರ ಜಾವೆಲಿನ್ ಎಸೆತದಲ್ಲಿ ಡಿ.ಪಿ. ಮನು 81.01 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಜಯಿಸಿದರೆ, ಗುಲ್ವೀರ್ ಸಿಂಗ್ 5,000 ಮೀ. ರೇಸ್ನಲ್ಲಿ 13 ನಿಮಿಷ 48.33
ಸೆಕೆಂಡ್ನಲ್ಲಿ ಗುರಿ ತಲುಪಿ ಕಂಚು ಜಯಿಸಿದರು.
ಇದಕ್ಕೂ ಮೊದಲು ಕಿಶನ್ ಕುಮಾರ್ ಹಾಗೂ ಕೆಎಂ ಚಂದಾ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ 800 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.







