ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌ಗೆ ದಂಡ ವಿಧಿಸಿದ ನ್ಯಾಯಾಲಯ; ಕಾರಣವೇನು ಗೊತ್ತೇ?

ಸ್ಟಾಕ್‌ಹೋಮ್: ಪ್ರತಿಭಟನೆ ಸಂದರ್ಭ ಪೊಲೀಸರ ಆದೇಶ ಪಾಲನೆಗೆ ನಿರಾಕರಿಸಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸ್ವೀಡನ್‌ನ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌ಗೆ ಸ್ಟಾಕ್‌ಹೋಮ್‌ನ ನ್ಯಾಯಾಲಯ ದಂಡ ವಿಧಿಸಿದೆ ಎಂದು ಟಿಟಿ ಸುದ್ಧಿಸಂಸ್ಥೆ ಸೋಮವಾರ ವರದಿ ಮಾಡಿದೆ.
ಸ್ವೀಡನ್‌ನ ದಕ್ಷಿಣದಲ್ಲಿರುವ ಮಾಲ್ಮೋ ನಗರದಲ್ಲಿ ಜೂನ್ 19ರಂದು ಹವಾಮಾನ ಸಮಸ್ಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಗ್ರೆಟಾ ಪೊಲೀಸರ ಆದೇಶ ಪಾಲನೆಗೆ ನಿರಾಕರಿಸಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ವಿಚಾರಣೆ ಸಂದರ್ಭ ತಾನು ಪೊಲೀಸರ ಆದೇಶ ಪಾಲಿಸಲು ನಿರಾಕರಿಸಿರುವುದನ್ನು ಒಪ್ಪಿಕೊಂಡ ಗ್ರೆಟಾ, ಆದರೆ ಪ್ರತಿಭಟನೆಯ ಕಾರಣ ಹೀಗೆ ಮಾಡುವುದು ಅನಿವಾರ್ಯವಾಗಿತ್ತು ಎಂದು ವಾದಿಸಿದರು.
ಬದುಕು, ಆರೋಗ್ಯ ಮತ್ತು ಪರಿಸರಕ್ಕೆ ಅಪಾಯವಿರುವ ಪರಿಸ್ಥಿತಿ ಬಂದೊದಗಿದೆ. ಅಪಾರ ಜನರು ಹಾಗೂ ಜನಸಮುದಾಯದ ಮೇಲೆ ಇದು ಮಾರಕ ಪರಿಣಾಮಕ್ಕೆ ಕಾರಣವಾಗಿದೆ. ಆದ್ದರಿಂದ ಪ್ರತಿಭಟನೆ ನಡೆಸಿದ ತನ್ನ ನಡೆ ಸಮರ್ಥನೀಯವಾಗಿದೆ ಎಂದು ಗ್ರೆಟಾ ನ್ಯಾಯಾಲಯದಲ್ಲಿ ಹೇಳಿದರು. ಆದರೆ ಪೊಲೀಸರ ಆದೇಶವನ್ನು ಪಾಲಿಸದೆ ಇರುವುದು ತಪ್ಪು ಎಂದು ಹೇಳಿದ ನ್ಯಾಯಾಲಯ ದಂಡ ವಿಧಿಸುವಂತೆ ಆದೇಶಿಸಿದೆ ಎಂದು ವರದಿಯಾಗಿದೆ.





