ಇಸ್ರೇಲ್: ಸರಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ಉಗುಳಿದ ನೆತನ್ಯಾಹು ಬೆಂಬಲಿಗ
ವ್ಯಾಪಕ ಆಕ್ರೋಶದ ಬಳಿಕ ಪಕ್ಷದಿಂದ ಉಚ್ಛಾಟನೆ

ನೆತನ್ಯಾಹು | Photo: NDTV
ಟೆಲ್ ಅವೀವ್: ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಇಸ್ರೇಲ್ ಸರಕಾರದ ಉಪಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವವರನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಬೆಂಬಲಿಗ ಹಾಗೂ ಅವರ ಪಕ್ಷದ ಕಾರ್ಯಕರ್ತ ಅಪಹಾಸ್ಯ ಮಾಡಿ, ಪ್ರತಿಭಟನಾಕಾರರ ಮೇಲೆ ಉಗುಳಿದ ಘಟನೆ ಶನಿವಾರ ವರದಿಯಾಗಿದೆ.
ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕಾರ್ಯಕರ್ತನನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ನೆತನ್ಯಾಹು ಹೇಳಿಕೆ ನೀಡಿದ್ದಾರೆ. ಬೆಯ್ಟ್ಶಿಯಾನ್ ಎಂಬ ನಗರದ ಪ್ರಮುಖ ವೃತ್ತದ ಬಳಿ ಶನಿವಾರ ಪ್ರತಿಭಟನೆ ನಡೆಸುತ್ತಿದ್ದವರನ್ನು ನೆತನ್ಯಾಹು ಅವರ ಲಿಕುಡ್ ಪಕ್ಷದ ಕಾರ್ಯಕರ್ತ ಇಝಿಕ್ ಝರ್ಕಾ ಎಂಬ ಕಾರ್ಯಕರ್ತ ದೂಷಿಸಿ ಅಪಹಾಸ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ` ಆರು ದಶಲಕ್ಷ ಜನರನ್ನು ಸುಮ್ಮನೆ ಹತ್ಯೆ ಮಾಡಿಲ್ಲ. ನಿಮ್ಮಲ್ಲಿ 6 ದಶಲಕ್ಷ ಜನರು ಸುಟ್ಟುಹೋದರು ಎಂದು ನನಗೆ ಹೆಮ್ಮೆಯಿದೆ' ಎಂದು ಕಿರುಚುತ್ತಿದ್ದ ಝರ್ಕಾ, ಪ್ರತಿಭಟನಾಕಾರರ ಮೇಲೆ ಉಗುಳಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿರುವ ಪ್ರಧಾನಿ ನೆತನ್ಯಾಹು `ಲಿಕುಡ್ ಪಕ್ಷದವರಿಂದ ಇಂತಹ ಅವಮಾನಕರ ವರ್ತನೆಯನ್ನು ನಾವು ಸಹಿಸುವುದಿಲ್ಲ. ಆರೋಪಿ ಕಾರ್ಯಕರ್ತನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ' ಎಂದಿದ್ದಾರೆ.
ಎರಡನೇ ವಿಶ್ವಯುದ್ಧದಲ್ಲಿ ನಾಝಿಗಳು ಸುಮಾರು 6 ದಶಲಕ್ಷ ಯುರೋಪಿಯನ್ ಯೆಹೂದಿಗಳನ್ನು ಹತ್ಯೆ ಮಾಡಿದ್ದರು. ನೆತನ್ಯಾಹು ಅವರ ಸಂಪ್ರದಾಯವಾದಿ `ಲಿಕುಡ್' ಪಕ್ಷದ ಬೆಂಬಲಿಗರಾದ ಮಧ್ಯಪ್ರಾಚ್ಯ ಮೂಲದ ಮಿಜ್ರಾಹಿ ಯೆಹೂದಿಗಳು ಹಾಗೂ ಯುರೋಪಿಯನ್ ಯೆಹೂದಿ ಸಮುದಾಯವನ್ನು ಎದುರಾಳಿಗಳು ಎಂದು ಬಿಂಬಿಸಲು ಇರಿಕ್ ಝರ್ಕಾ ಪ್ರಯತ್ನಿಸುತ್ತಿರುವುದಾಗಿ ಇಸ್ರೇಲಿಯನ್ನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಸಂಸ್ಥಾಪಕ ಪೀಳಿಗೆಯಲ್ಲಿ ಪ್ರಾಬಲ್ಯ ಹೊಂದಿರುವ ಅಸ್ಕೆನಾಜಿ ಅಥವಾ ಯುರೋಪಿಯನ್ ವಂಶಸ್ಥ ಯೆಹೂದಿಗಳ ಪ್ರಾಬಲ್ಯವನ್ನು ನಿಯಂತ್ರಿಸಲು ನೆತನ್ಯಾಹು ನೇತೃತ್ವದ ಧಾರ್ಮಿಕ-ರಾಷ್ಟ್ರೀಯವಾದಿ ಪಕ್ಷಗಳ ಸಮ್ಮಿಶ್ರ ಸರಕಾರ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆಗೆ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್ನ ಯೆಹೂದಿ ಸಮುದಾಯದ ಸುಮಾರು 50%ದಷ್ಟಿರುವ ಮಿಜ್ರಾಹಿಗಳು ತಾರತಮ್ಯ ಮತ್ತು ಸಾಮಾಜಿಕ-ಆರ್ಥಿಕ ಅನನುಕೂಲತೆಯ ಬಗ್ಗೆ ದೂರುತ್ತಿದ್ದಾರೆ.
ಹತ್ಯಾಕಾಂಡವನ್ನು ಅಪಹಾಸ್ಯ ಮಾಡುವುದು, ಹತ್ಯಾಕಾಂಡಕ್ಕೆ ಸಂಭ್ರಮಾಚರಣೆಗೆ ಇಸ್ರೇಲ್ನಲ್ಲಿ 5 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ. ತನ್ನ ಹೇಳಿಕೆಗೆ ವ್ಯಾಪಕ ಆಕ್ರೋಶ, ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಝರ್ಕಾ `ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನೂ ಒಬ್ಬ ಹತ್ಯಾಕಾಂಡ ಸಂತ್ರಸ್ತನ ಮೊಮ್ಮಗ' ಎಂದು ಹೇಳಿಕೆ ನೀಡಿದ್ದಾರೆ.







