ಹಂಗೇರಿಯಲ್ಲಿ ಗೆದ್ದ ಪದಕ ಮಹಿಳೆಯರ ಮೇಲಾಗುತ್ತಿರುವ ಅಪರಾಧ ವಿರುದ್ಧ ಹೋರಾಡುತ್ತಿರುವವರಿಗೆ ಸಮರ್ಪಣೆ: ಸಂಗೀತಾ ಫೋಗಟ್

Photo: twitter/sangeeta_phogat
ಹೊಸದಿಲ್ಲಿ : ಡಬ್ಲ್ಯುಎಫ್ಐನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಆರು ಕುಸ್ತಿಪಟುಗಳ ಪೈಕಿ ಒಬ್ಬರಾಗಿರುವ ಭಾರತದ ಕುಸ್ತಿಪಟು ಸಂಗೀತಾ ಫೋಗಟ್ ಹಂಗೇರಿಯಲ್ಲಿ ನಡೆದ ರ್ಯಾಂಕಿಂಗ್ ಸೀರಿಸ್ ಸ್ಪರ್ಧೆಯಲ್ಲಿ ಗೆದ್ದಿರುವ ಕಂಚಿನ ಪದಕವನ್ನು ಮಹಿಳೆಯರಿಗೆ ಆಗುತ್ತಿರುವ ಕ್ರೈಮ್ ವಿರುದ್ಧ ಹೋರಾಡುತ್ತಿರುವವರಿಗೆ ಸಮರ್ಪಿಸುವೆ ಎಂದು ಹೇಳಿದ್ದಾರೆ.
ಸಿಂಗ್ ವಿರುದ್ಧ ಹಲವು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದು, ಸಿಂಗ್ ವಿರುದ್ಧ ದಿಲ್ಲಿಯ ಜಂತರ್ಮಂತರ್ನಲ್ಲಿ ಸಂಗೀತಾ ಹಾಗೂ ಆಕೆಯ ಪತಿ, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಜೊತೆ ತಿಂಗಳ ಕಾಲ ಪ್ರತಿಭಟನೆ ನಡೆಸಿದ್ದರು.
ಫೋಗಟ್ ಸಹೋದರಿಯರ ಪೈಕಿ ಮೂರನೇಯವರಾದ ಸಂಗೀತಾಗೆ ಈ ಸ್ಪರ್ಧೆಗೆ ತಯಾರಿ ನಡೆಸಲು ಸಮಯ ಲಭಿಸಿರಲಿಲ್ಲ. ಆದಾಗ್ಯೂ ಮೂರನೇ ಸ್ಥಾನ ಪಡೆದು ತನ್ನ ಆತ್ಮವಿಶ್ವಾಸವನ್ನು
ಹೆಚ್ಚಿಸಿಕೊಂಡಿದ್ದಾರೆ.
ಎಲ್ಲರು ಕಳುಹಿಸಿರುವ ಅಭಿನಂದನೆಗಳ ಸಂದೇಶ ನನಗೆ ತಲುಪಿದೆ. ಈಕ್ಷಣದಲ್ಲಿ ನಾನು ತುಂಬಾ ಭಾವುಕಳಾಗಿರುವೆ. ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು. ಈ ಪದಕ ನನಗೆ ಮಾತ್ರವಲ್ಲ, ನಿಮಗೆಲ್ಲರಿಗೂ ಸೇರಿದೆ.
ಮಹಿಳೆಯರ ಮೇಲಾಗುತ್ತಿರುವ ಅಪರಾಧಗಳ ವಿರುದ್ಧ ಹೋರಾಡುತ್ತಿರುವ ವಿಶ್ವದ ಎಲ್ಲ ಮಹಿಳೆಯರಿಗೆ ಈ ಪದಕವನ್ನು ಸಮರ್ಪಿಸುವೆ ಎಂದು ಸಂಗೀತಾ ಟ್ವೀಟಿಸಿದ್ದಾರೆ.
ಶನಿವಾರ ಬುಡಾಪೆಸ್ಟ್ನಲ್ಲಿ ನಡೆದ ಹಂಗೇರಿ ರ್ಯಾಂಕಿಂಗ್ ಸೀರಿಸ್ ಟೂರ್ನಮೆಂಟ್ನಲ್ಲಿ 59 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್ ಸ್ಪರ್ಧೆಯಲ್ಲಿ ಸಂಗೀತಾ ಅವರು ಹಂಗೇರಿಯದ ಯುವ ಕುಸ್ತಿಪಟು ವಿಕ್ಟೋರಿಯ ಬೊರ್ಸೊಸ್ರನ್ನು 6-2 ಅಂತರದಿಂದ ಮಣಿಸಿದರು.







