ಏಶ್ಯನ್ ಗೇಮ್ಸ್ ಗೆ ನೇರ ಪ್ರವೇಶ ಪಡೆದ ವಿನೇಶ್, ಬಜರಂಗ್

ಹೊಸದಿಲ್ಲಿ: ಡಬ್ಲ್ಯುಎಫ್ಐನ ನಿರ್ದಿಷ್ಟ ಉದ್ದೇಶಕ್ಕಾಗಿ ಸ್ಥಾಪಿಸಿರುವ ಸಮಿತಿಯು ಒಲಿಂಪಿಕ್ಸ್ ಪದಕ ವಿಜೇತರಾದ ಬಜರಂಗ್ ಪುನಿಯಾ ಹಾಗೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ವಿಜೇತ ವಿನೇಶ್ ಫೋಗಟ್ಗೆ ಏಶ್ಯನ್ ಗೇಮ್ಸ್ನಲ್ಲಿ ನೇರ ಪ್ರವೇಶ ನೀಡಿದೆ. ರಾಷ್ಟ್ರೀಯ ಮುಖ್ಯ ಕೋಚ್ಗಳ ಸಮ್ಮತಿಯಿಲ್ಲದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇತರ ಕುಸ್ತಿಪಟುಗಳು ಹಾಗೂ ಅವರ ಕೋಚ್ಗಳು ಇದನ್ನು ಪ್ರಶ್ನಿಸಲು ಸಜ್ಜಾಗಿದ್ದಾರೆ.
ತಾನು ಈಗಾಗಲೇ ಪುರುಷರ ಫ್ರೀಸ್ಟೈಲ್ 65 ಕೆಜಿ ಹಾಗೂ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಕುಸ್ತಿಪಟುಗಳನ್ನು ಆಯ್ಕೆ ಮಾಡ ಲಾಗಿದ್ದು, ಮೂರು ಶೈಲಿಯ ಎಲ್ಲ ಆರು ತೂಕ ವಿಭಾಗ ಗಳಲ್ಲಿ ಟ್ರಯಲ್ಸ್ ನಡೆಯಲಿದೆ ಎಂದು ಐಒಎನ ನಿರ್ದಿಷ್ಟ ಉದ್ದೇಶಕ್ಕಾಗಿನ ಸಮಿತಿಯು ಸುತ್ತೋಲೆಯಲ್ಲಿ ತಿಳಿಸಿದೆ.
ನಿರ್ದಿಷ್ಟ ಉದ್ದೇಶಕ್ಕಾಗಿನ ಸಮಿತಿಯು ತನ್ನ ಸುತ್ತೋಲೆಯಲ್ಲಿ ಬಜರಂಗ್ ಹಾಗೂ ವಿನೇಶ್ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಇಬ್ಬರು ಕುಸ್ತಿಪಟುಗಳಾದ ಬಜರಂಗ್ ಹಾಗೂ ವಿನೇಶ್ಗೆ ಟ್ರಯಲ್ಸ್ನಿಂದ ವಿನಾಯಿತಿ ನೀಡಲಾಗಿದೆ ಎಂದು ಸಮಿತಿಯ ಸದಸ್ಯ ಅಶೋಕ್ ಗರ್ಗ್ ಪಿಟಿಐಗೆ ಖಚಿತಪಡಿಸಿದ್ದಾರೆ.
ಈ ಇಬ್ಬರು ಕುಸ್ತಿಪಟುಗಳು 65ಕೆಜಿ ಹಾಗೂ 53 ಕೆಜಿ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾರಣ ಈ ವರ್ಷ ಯಾವುದೇ ಅಂತರ್ರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿಲ್ಲ.







