ಕಲಬುರಗಿ: ಕೆಬಿಎನ್ ದರ್ಗಾದ ಆಸ್ತಿ ಕಬಳಿಕೆಗೆ ಯತ್ನ ಆರೋಪ
ವಿವಾದದಲ್ಲಿ ಅಂಜುಮನ್ ತರಕ್ಕಿ; ನಿಯಮ ಉಲ್ಲಂಘನೆ, ಹಣಕಾಸು ವ್ಯವಹಾರದಲ್ಲೂ ಅಕ್ರಮ!

ಕಲಬುರಗಿ : 2011ರಲ್ಲಿ ನೋಂದಣಿಯಾಗಿರುವ ಅಂಜುಮನ್ ತರಕ್ಕಿ ಉರ್ದು ಸಂಘದ ಕಾರ್ಯದರ್ಶಿ ಹೆಸರಲ್ಲಿ ಕೆಬಿಎನ್ ದರ್ಗಾದ ಆಸ್ತಿಯನ್ನು ಮಹಾನಗರ ಪಾಲಿಕೆಯಿಂದ ಅಕ್ರಮವಾಗಿ ಪಿಐಡಿಗಳು, ಖಾತಾಗಳನ್ನು ಪಡೆಯುವ ಮೂಲಕ ದರ್ಗಾದ ಆಸ್ತಿಯನ್ನು ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಸದಸ್ಯರಾದ ಡಾ.ಅನೀಸ್ ಸಿದ್ದಿಕಿ, ವಲಿ ಅಹ್ಮದ್, ಖಾಜಾ ಪಾಶಾ ಇನಾಮದಾರ್, ಅಕ್ರಮ್ ನಕಾಶ್, ರಫೀಕ್ ರಹೆಬರ್ ಹಾಗೂ ಮುಜೀಬ್ ಅಹ್ಮದ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
1966ರ ಶಾಖೆಗೆ ಬಾಡಿಗೆ: 1959ರಲ್ಲಿ ಸ್ಥಾಪನೆಯಾದ ಅಂಜುಮನ್ ತರಕ್ಕಿ ಎ ಉರ್ದು ಹಿಂದ್ ಬ್ರಾಂಚ್ ಗುಲಬರ್ಗಾಗೆ 1966ರಲ್ಲಿ ಖಾಜಾ ಬಂದೇ ನವಾಜ್ ದರ್ಗಾದ ಅಂದಿನ ಪೀಠಾಧಿಪತಿ ಸೈಯದ್ ಶಾ ಮೊಹಮ್ಮದ್ ಹುಸೈನಿ ಅವರು ಸರ್ವೆ ನಂ.36ರಲ್ಲಿನ ಸುಮಾರು 3,300 ಚದರ ಅಡಿ ಇನಾಮಿ ಆಸ್ತಿಯನ್ನು ಕರಾರು ಮೂಲಕ ನೀಡಿದ್ದರು.
ಸಂಸ್ಥೆಯ ಕೆಲ ಸದಸ್ಯರು ಶಾಖೆಗೆ ಹೋಲುವ ರೀತಿಯಲ್ಲಿ 2011ರಲ್ಲಿ ಸಹಕಾರ ಸಂಘಗಳ ನೋಂದಣಿ ಕಾಯ್ದೆಯಡಿ ‘ಅಂಜುಮನ್ ತರಕ್ಕಿ ಎ ಉರ್ದು’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಂಘವನ್ನು ನೋಂದಾಯಿಸಿಕೊಂಡಿರುವುದು ಇದೀಗ ಬಹಿರಂಗಗೊಂಡಿದೆ.
2015ರಲ್ಲಿ ಸಂಸ್ಥೆಯ ಕಾರ್ಯದರ್ಶಿಯ ಹೆಸರಲ್ಲಿ ಇನಾಮಿ ಜಮೀನಿನ ಮೇಲೆ ಮಹಾನಗರ ಪಾಲಿಕೆಯಿಂದ ಒಂಬತ್ತು ಪಿಐಡಿಗಳು, ಖಾತಾ ನೀಡಿರುವುದು ಮತ್ತು ಕಟ್ಟಡ ನಿರ್ಮಾಣ ಹಾಗೂ ನ್ಯಾಯಾಲಯದ ತೀರ್ಪುಗಳು ಒಂದೊಂದಾಗಿ ಮುನ್ನೆಲೆಗೆ ಬರುತ್ತಿವೆ.ಪಿಐಡಿಗಳ ಸೃಷ್ಟಿಯಾಗಿರುವುದು, ಮುಂದೆ ಆಸ್ತಿ ಹಕ್ಕಿನ ವಿವಾದಕ್ಕೆ ಕಾರಣವಾಗಬಹುದೆಂಬ ಆತಂಕವೂ ವ್ಯಕ್ತವಾಗುತ್ತಿದ್ದು, ಅಲ್ಲದೇ ಈ ಪಿಐಡಿಗಳನ್ನು ಯಾವ ಆಸ್ತಿಗಳಿಗೆ, ಯಾವ ದಾಖಲೆಗಳ ಆಧಾರದ ಮೇಲೆ ಹಾಗೂ ಯಾವ ಉದ್ದೇಶಕ್ಕಾಗಿ ಪಡೆಯಲಾಗಿದೆ ಎಂಬುದು ಸಮಗ್ರ ತನಿಖೆಯಿಂದ ಬಹಿರಂಗಗೊಳ್ಳಬೇಕಾಗಿದೆ.
ಅಧಿಕಾರ ದುರ್ಬಳಕೆ, ಅಕ್ರಮ ಸಾಬೀತು: ಅಂಜುಮನ್
ತರಕ್ಕಿ ಎ ಉರ್ದು ಹಿಂದ್ ಗುಲಬರ್ಗಾ ಶಾಖೆಯ ಹೆಸರಿನ ಬ್ಯಾಂಕ್ ಖಾತೆಯಲ್ಲಿ ಸುಮಾರು 40 ಲಕ್ಷದವರೆಗೆ ಸ್ಥಿರ ಠೇವಣಿ (ಎಫ್‌ಡಿ) ಮತ್ತು ಸಂಸ್ಥೆಯ ವಾಣಿಜ್ಯ ಸಂಕೀರ್ಣದ ಬಾಡಿಗೆ ಆದಾಯ ಪ್ರಮುಖ ಮೂಲವಾಗಿದೆ ಎಂದು ತಿಳಿದುಬಂದಿದೆ. ಈ ಹಣಕಾಸು ಸಂಪನ್ಮೂಲಗಳ ನಿರ್ವಹಣೆಯಲ್ಲಿ ಹೊಸದಾಗಿ ನೊಂದಾಯಿತ ಸಂಸ್ಥೆಯು ಹಣಕಾಸಿನಲ್ಲಿ ಅಕ್ರಮ ನಡೆಸಿರುವುದು ಮತ್ತು ಸಂಘದ ನಿಯಮಗಳು ಉಲ್ಲಂಘನೆ ಮಾಡಿರುವುದು ಸಹ 2022ರಲ್ಲಿ ಸಹಕಾರ ಸಂಘಗಳ ಇಲಾಖೆಯ ಉಪ ನೊಂದಣಿ ಅಧಿಕಾರಗಳ ವಿಚಾರಣಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
10 ಸಾವಿರ ರೂ.ಗಳಿಗಿಂತ ಹೆಚ್ಚಿನ ಮೊತ್ತದ ವಹಿವಾಟಿಗೂ ಚೆಕ್ ಅಥವಾ ಬ್ಯಾಂಕ್ ವರ್ಗಾವಣೆ ಬಳಸದೆ ನಗದು ರೂಪದಲ್ಲಿ ಹಣ ಪಡೆದಿರುವುದು, ಕೆಲ ಸಂದರ್ಭಗಳಲ್ಲಿ ಒಂದೇ ದಿನದಲ್ಲಿ ಹಲವು ಚೆಕ್‌ಗಳನ್ನು ನಗದೀಕರಿಸಿರುವುದು, ಖಜಾಂಚಿಯ ಸಹಿ ಅಥವಾ ಅನುಮತಿ ಪಡೆಯದೆ ಹಣ ಪಡೆಯಲಾಗಿದೆ ಹಾಗೂ ಆಡಳಿತ ಮಂಡಳಿಯ ಪೂರ್ವಾನುಮತಿ ಅಥವಾ ನಂತರದ ಅನುಮೋದನೆಯನ್ನೂ ಪಡೆಯಲಾಗಿಲ್ಲ. ಅಲ್ಲದೇ ಸಭೆಗೂ ಮುನ್ನವೇ ಹಣ ವಿತ್‌ಡ್ರಾ ಮಾಡಲಾಗಿದೆ ಎಂದು ಅಂಜುಮನ್ ತರಕ್ಕಿ ಎ ಉರ್ದು ಹಿಂದ್ ಗುಲಬರ್ಗಾ ಶಾಖೆಯ ಸದಸ್ಯರು ಆರೋಪಿಸಿದ್ದಾರೆ.
ಆಡಳಿತ ಮಂಡಳಿಯನ್ನು ರದ್ದುಪಡಿಸಲು ಮತ್ತು ಹಣಕಾಸು ವ್ಯವಹಾರಗಳಲ್ಲಿನ ಅಕ್ರಮ ಹಾಗೂ ನಿಯಮ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಜಿಲ್ಲಾ ನೋಂದಣಾಧಿಕಾರಿಗಳು ಸಂಘದ ಆಡಳಿತ ಮಂಡಳಿಯು ಸಂಘದ ಉಪನಿಯಮಗಳಿಗೆ ವಿರುದ್ಧವಾಗಿ ಹಾಗೂ ಸದಸ್ಯರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಿರುವುದು ಸಾಬೀತಾಗಿದೆ ಎಂದು ಉಲ್ಲೇಖಿಸಿದ್ದಾರೆ. ಮಂಡಳಿಗೆ ಮುಂದುವರಿಯಲು ಅವಕಾಶ ನೀಡಿದರೆ ಮತ್ತಷ್ಟು ಉಪನಿಯಮಗಳ ಉಲ್ಲಂಘನೆ ಸಂಭವಿಸುವ ಸಾಧ್ಯತೆ ಇದೆ ಎಂದು 2022ರ ಸೆಪ್ಟೆಂಬರ್‌ನಲ್ಲಿ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಮೂರು ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಲಾಗಿತ್ತು.
ಇಷ್ಟಾದರೂ ಸೂಕ್ತ ಕಾನೂನು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತ್ಯೇಕ ಎರಡು ಸಂಸ್ಥೆಗಳಿಗೆ ಒಂದೇ ಆಡಳಿತ ಮಂಡಳಿಯಂತೆ ಬಿಂಬಿಸಿ ಆಡಳಿತ ಮಂಡಳಿಯ ಸದಸ್ಯರಾಗಿ ಮುಂದುವರಿದಿದ್ದಾರೆ. ಅಲ್ಲದೇ ಶಾಖೆಯ ಆಸ್ತಿಯಲ್ಲಿ ಆಕ್ರಮ ಕಟ್ಟಡ ನಿರ್ಮಾಣ, ದುರಸ್ಥಿ ಇತರ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ಮುಂದುವರಿಸಿದ್ದಾರೆ ಎಂದು ಸದಸ್ಯರೊಬ್ಬರು ವಾರ್ತಾಭಾರತಿಗೆ ತಿಳಿಸಿದ್ದಾರೆ.
ಅಂಜುಮನ್ ತರಕ್ಕಿ ಉರ್ದು ಮತ್ತು ಅಂಜುಮನ್ ತರಕ್ಕಿ ಉರ್ದು ಹಿಂದ್ ಗುಲಬರ್ಗಾ ಶಾಖೆಯ ಎರಡು ಪ್ರತ್ಯೇಕ ಸಂಸ್ಥೆ ಬ್ಯಾಂಕ್ ಖಾತೆ, ಆಡಳಿತ ಮಂಡಳಿಗಳ ಆಸ್ತಿ, ಬ್ಯಾಂಕ್ ಠೇವಣಿ, ವಾಣಿಜ್ಯ ಸಂಕೀರ್ಣದ ಬಾಡಿಗೆ ಆದಾಯ ಹಾಗೂ ಪಾಲಿಕೆಯಿಂದ ಪಡೆದಿರುವ ಪಿಐಡಿಗಳ ಆಕ್ರಮದಲ್ಲಿ ಭಾಗಿಯಾಗಿರುರುವ ತಪ್ಪುತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಸರ್ವೇ ನಂಬರ್ 36ರಲ್ಲಿರುವ ಖಾಜಾ ಬಂದೇ ನವಾಜ್ ದರ್ಗಾದ ಆಸ್ತಿಯ ಖಾಲಿ ಜಮೀನನ್ನು ಅಂದಿನ ಪೀಠಾಧಿಪತಿಗಳು ಉರ್ದು ತರಕ್ಕಿ ಸಂಸ್ಥೆಯ ಚಟುವಟಿಕೆಗಳಿಗಾಗಿ ಅಂಜುಮನ್‌ಗೆ ಬಾಡಿಗೆಗೆ ನೀಡಿದ್ದರು. ಬಳಿಕ ಅಲ್ಲಿ ಕಟ್ಟಡ ನಿರ್ಮಿಸಿ ಅಭಿವೃದ್ಧಿಪಡಿಸಲಾಗಿದೆ. ಸದರಿ ಆಸ್ತಿಯ ಮಾಲಕತ್ವಕ್ಕೆ ಸಂಬಂಧಿಸಿದಂತೆ ವಕ್ಫ್ ಕಾಯ್ದೆಯ ಸೆಕ್ಷನ್ 54ರ ಅಡಿಯಲ್ಲಿ ವಿಚಾರಣೆ ನಡೆದು ಆಸ್ತಿ ದರ್ಗಾಕ್ಕೆ ಸೇರಿದ್ದಾಗಿದೆ ಎಂದು ನ್ಯಾಯಾಲಯ ಆದೇಶಿಸಿತ್ತು. ಆ ತೀರ್ಪಿನಂತೆ ದರ್ಗಾದ ಆಡಳಿತ ಮಂಡಳಿಯು ಸಂಬಂಧಿಸಿದ ಪಿಐಡಿ ರದ್ದುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ.
-ಪರ್ವೇಜ್ ಆಲಂ, ಜಿಲ್ಲಾ ವಕ್ಫ್ ಅಧಿಕಾರಿ ಕಲಬುರಗಿ






