ಯಾತ್ರಿಕರಿಗೆ ‘ನರಕ ದರ್ಶನ’ ಮಾಡಿಸುವ ಕೊಲ್ಲೂರು ರಸ್ತೆ

ಕೊಲ್ಲೂರು: ದೇಶದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನವೂ ಒಂದು. ಪ್ರಮುಖವಾಗಿ ಕೇರಳ, ತಮಿಳುನಾಡು ಸೇರಿದಂತೆ ದೇಶಾದ್ಯಂತದಿಂದ ಸಾವಿರಾರು ಭಕ್ತರು ಪ್ರತಿದಿನ ಕೊಲ್ಲೂರಿಗೆ ಆಗಮಿಸುತ್ತಾರೆ. ಕೊಲ್ಲೂರು ಶ್ರೀಮೂ ಕಾಂಬಿಕಾ ದೇವಸ್ಥಾನ ರಾಜ್ಯದ 2ನೇ ಶ್ರೀಮಂತ ದೇವಸ್ಥಾನ. ವರ್ಷದಿಂದ ವರ್ಷಕ್ಕೆ ಇಲ್ಲಿನ ಆದಾಯ ಹೆಚ್ಚುತ್ತಾ ಹೋಗುತ್ತಿದೆ. ಆದರೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಯಾವುದೇ ಸೌಲಭ್ಯವಿಲ್ಲ.
ಹೌದು.... ಕೊಲ್ಲೂರಿಗೆ ಆಗಮಿಸುವ ಸಾವಿರಾರು ಪ್ರವಾಸಿಗರು, ಭಕ್ತರಿಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಕ್ಕೆ ಭಾರೀ ಕೊರತೆ ಇದೆ. ಕೊಲ್ಲೂರು ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ ಎನ್ನುವಂತಿದೆ. ಪಾರ್ಕಿಂಗ್ ವ್ಯವಸ್ಥೆ, ಸ್ವಚ್ಛತೆ, ಶುದ್ಧ ಕುಡಿಯುವ ನೀರು ಹೀಗೆ ಕೊರತೆಗಳ ಪಟ್ಟಿ ದೊಡ್ಡದಿದೆ.
ಇದರೊಂದಿಗೆ ಈ ಬಾರಿ ಸುರಿದ ಭಾರೀ ಮಳೆ ಕೊಲ್ಲೂರಿಗೆ ಆಗಮಿಸುವ ಸಂಪರ್ಕ ರಸ್ತೆಯನ್ನು ಸಂಪೂ ರ್ಣವಾಗಿ ಹೊಂಡ-ಗುಂಡಿನ್ನಾಗಿ ಪರಿವರ್ತಿ ಸಿದೆ. ಹೀಗಾಗಿ ದೇವಿ ದರ್ಶನಕ್ಕೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರು ಹಾಗೂ ಭಕ್ತರಿಗೆ ದೇವಿಯ ದರ್ಶನಕ್ಕೆ ಮೊದಲು ನರಕ ದರ್ಶನವನ್ನು ಈ ರಸ್ತೆಗಳು ಮಾಡಿ ಸುವಂತಿದೆ ಎಂದು ಜನರಾಡಿಕೊಳ್ಳುವಂತಾಗಿದೆ.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯಕ್ಕೆ ಕುಂದಾಪುರ-ಹೆಮ್ಮಾಡಿ ಮೂಲಕ ಸಾಗುವಾಗ ವಂಡ್ಸೆಯಿಂದ ಹಾಲ್ಕಲ್ ತನಕದ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಹೊಂಡಗುಂಡಿ ರಸ್ತೆ: ಮೊದಲ ಮಳೆಗೆಯೇ ರಸ್ತೆಯಲ್ಲಿ ಹೊಂಡ ಸಮಸ್ಯೆ ಹೆಚ್ಚಿದೆ. ವಂಡ್ಸೆಯಿಂದ (ನೆಂಪು ಕ್ರಾಸ್) ಹೊಂಡಗುಂಡಿ ರಸ್ತೆಗಳು ಯಾತ್ರಾರ್ಥಿಗಳನ್ನು ಸ್ವಾಗತಿಸುತ್ತದೆ. ಮುಂದೆ ಕೊಲ್ಲೂರಿಗೆ ಸಾಗುವ ದಾರಿ ಜರ್ಝರಿತವಾಗಿದ್ದು, ದ್ವಿಚಕ್ರ ಹಾಗೂ ಲಘು ವಾಹನಗಳು ಸಂಚಾರ ಕಷ್ಟಸಾಧ್ಯವಾಗಿದೆ. ಈ ಭಾಗದಲ್ಲಿ ರಾತ್ರಿ ಹೊತ್ತಿನಲ್ಲಿ ವಾಹನ ಸಂಚಾರ ಅಪಾಯಕ್ಕೆ ಆಹ್ವಾನಿಸುವಂತಿದೆ. ಸುಮಾರು 20 ಕಿ.ಮೀ ದೂರದ ರಸ್ತೆ ಭಾರೀ ಹೊಂಡಗಳಿಂದ ಕೂಡಿದೆ.
ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ಪ್ರಮುಖ ರಸ್ತೆ ಇದಾಗಿದ್ದು, ಸಹಸ್ರಾರು ಭಕ್ತರು ದಿನಂಪ್ರತಿ ಕೊಲ್ಲೂರು ದೇಗುಲ, ಸಿಗಂಧೂರು ಕ್ಷೇತ್ರ ದರ್ಶನ ಹಾಗೂ ತೀರ್ಥಹಳ್ಳಿ-ಶಿವಮೊಗ್ಗ ಸಂಪರ್ಕಕ್ಕೆ ಹೆಚ್ಚಾಗಿ ನಾಗೋಡಿ ಘಾಟಿ ಮೂಲಕ ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಹೆಮ್ಮಾಡಿಯಿಂದ ಸುಮಾರು 45 ಕಿ.ಮೀ. ದೂರ ವ್ಯಾಪ್ತಿಯ ಕೊಲ್ಲೂರಿಗೆ ಸಾಗಲು ಯಾತ್ರಾರ್ಥಿಗಳು ಸಹಿತ ನಿತ್ಯ ಪ್ರಯಾಣಿಕರು ಹರಸಾಹಸ ಪಡಬೇಕಾಗಿದೆ.
ಅನೇಕ ಕಡೆ ತಿರುವುಗಳಲ್ಲಿ ಭಾರೀ ಗಾತ್ರದ ಹೊಂಡಗಳಿದ್ದು, ಹೊಂಡ ತಪ್ಪಿಸುವ ಪ್ರಯತ್ನದಲ್ಲಿ ಅನೇಕ ವಾಹನಗಳು ಮುಖಾಮುಖಿಯಾಗಿ ಅಪಘಾತ ಸಂಭವಿಸುತ್ತಿದೆ. ಜಡ್ಕಲ್ ಬಳಿಯ ರಸ್ತೆಯು ಸಂಪೂರ್ಣ ದುಸ್ಥಿತಿಯಲ್ಲಿದ್ದು, ಗ್ರಾಮಸ್ಥರ ಸಹಿತ ಪ್ರಯಾಣಿಕರು ಇಲ್ಲಿಂದ ಸಾಗುವಾಗ ಸಂಬಂಧಿತ ಎಲ್ಲರಿಗೂ ಹಿಡಿಶಾಪ ಹಾಕುತ್ತಿದ್ದಾರೆ.
ಕೊಲ್ಲೂರಿನಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ನವರಾತ್ರಿ ಉತ್ಸವ ಆರಂಭಗೊಳ್ಳಲಿದ್ದು, ಸಾವಿರಾರು ವಾಹನಗಳು ಪ್ರತಿನಿತ್ಯ ಈ ಮಾರ್ಗದಲ್ಲಿ ಸಂಚರಿಸಲಿವೆ. ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ಭಕ್ತರ ಸುಗಮ ವಾಹನ ಸಂಚಾರಕ್ಕೆ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ. ಕೊಲ್ಲೂರು ದೇವಸ್ಥಾನದ ಎದುರು ಕೂಡ ರಾಷ್ಟ್ರೀಯ ಹೆದ್ದಾರಿ (ಬೈಂದೂರು-ರಾಣಿಬೆನ್ನೂರು ರಾ.ಹೆದ್ದಾರಿ) ಅರೆಬರೆ ರಸ್ತೆ ಕಾಮಗಾರಿಯಿಂದ ಸಮಸ್ಯೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನವರಾತ್ರಿಯೊಳಗೆ ಈ ಸಮಸ್ಯೆ ಬಗೆಹರಿದಿದ್ದರೆ ಅನುಕೂಲಕರವಾಗಿತ್ತು.
| ಬಾಬು ಹೆಗ್ಡೆ ತೆಗ್ಗರ್ಸೆ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ
ಹತ್ತಾರು ಕಿ.ಮೀ. ವ್ಯಾಪ್ತಿಯಲ್ಲಿರುವ ರಸ್ತೆ ಹೊಂಡಗಳನ್ನು ಮುಚ್ಚುವ ಕಾರ್ಯಕ್ಕೆ ಇಲಾಖೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದಿಷ್ಟು ದಿನಗಳ ನಂತರ ರಸ್ತೆ ಮತ್ತಷ್ಟು ಹದಗೆಟ್ಟು ವಿರೂಪಗೊಳ್ಳಲಿದೆ. ಹೀಗಾಗಿ ಹಾಲ್ಕಲ್‌ನಿಂದ ವಂಡ್ಸೆ ತನಕ ಸಂಪೂರ್ಣ ಡಾಮರೀಕರಣಕ್ಕೆ ಸರಕಾರ ಅನುದಾನ ಬಿಡುಗಡೆಗೊಳಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.
| ಅಕ್ಷಯ್, ನಿತ್ಯಪ್ರಯಾಣಿಕ







