ಹುಲಿವೇಷ ತಂಡಗಳಿಗೆ ಜಂಡೆ ಮಾಡಿಕೊಡುವ ನಾಸಿರ್ ಶೇಕ್!

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಬಂದರೆ ಉಡುಪಿಯ ಎಲ್ಲ ಕಡೆಗಳಲ್ಲಿ ಚೆಂಡೆ ಶಬ್ದಗಳು ಕೇಳಿಬರುತ್ತವೆ. ಅವುಗಳ ಮಧ್ಯೆ ನಾನಾ ರೀತಿಯ ಹುಲಿಗಳ ನರ್ತನದ ಅಬ್ಬರ ಜೋರಾಗಿರುತ್ತದೆ. ಈ ಸಾಂಪ್ರಾಯಿಕ ಹುಲಿವೇಷ ತಂಡಗಳಲ್ಲಿ ‘ಜಂಡೆ’ಗಳಿಗೆ ಮಹತ್ವದ ಸ್ಥಾನಮಾನ ಇದೆ. ಅವುಗಳನ್ನು ಹಿಡಿದುಕೊಂಡು ಹುಲಿ ವೇಷಧಾರಿಗಳು ಕುಣಿಯುವುದನ್ನು ನೋಡುವುದೇ ಒಂದು ರೀತಿ ಕಣ್ಣಿಗೆ ಹಬ್ಬ.
ಮಂಗಳೂರಿನ ಹುಲಿವೇಷ ತಂಡಗಳಲ್ಲಿ ಬಹಳಷ್ಟು ಪ್ರಮುಖ ಸ್ಥಾನ ಪಡೆದಿದ್ದ ಜಂಡೆ ಇದೀಗ ಉಡುಪಿಯ ತಂಡಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಇಲ್ಲಿ ಕೂಡ ಜಂಡೆಗೆ ಮಹತ್ವ ಬರುತ್ತಿದೆ. ಈ ಜಂಡೆ ತಯಾರಿಸುವುದು ಬಹಳಷ್ಟು ನಾಜೂಕಿನ ಕೆಲಸ. ಅದನ್ನು ಉಡುಪಿಯ ನಾಸಿರ್ ಶೇಕ್ ಅತ್ಯಾಕರ್ಷಕ ರೀತಿಯಲ್ಲಿ ತಯಾರಿಸುತ್ತಿದ್ದಾರೆ. ಬಿದಿರಿನ ಈ ಸಂಪ್ರಾದಾಯಿಕ ಪರಿಕರವನ್ನು ಇವರು ಬಹಳಷ್ಟು ಶ್ರದ್ಧೆಯಿಂದ ಸುಂದರ ವಾಗಿ ತಯಾರಿಸಿ ಸಾಕಷ್ಟು ಖ್ಯಾತರಾಗಿದ್ದಾರೆ.
ವೃತ್ತಿಯಲ್ಲಿ ಪೈಂಟರ್ ಹಾಗೂ ಆಟೋ ಚಾಲಕರಾಗಿರುವ ನಾಸಿರ್ ಶೇಕ್, ಅಷ್ಟಮಿ ಹಾಗೂ ಚೌತಿ ಹಬ್ಬದ ಸಂದರ್ಭದಲ್ಲಿ ಸಾಕಷ್ಟು ಬ್ಯುಸಿ ಆಗಿರುತ್ತಾರೆ. ಯಾಕೆಂದರೆ ಆ ಸಮಯದಲ್ಲಿ ಎಲ್ಲ ಕಡೆ ಹುಲಿಗಳ ಅಬ್ಬರ ಜಾಸ್ತಿಯಾಗಿರುತ್ತದೆ. ಈ ಹುಲಿವೇಷ ತಂಡಗಳಿಗೆ ಜಂಡೆ ತಯಾರಿಸುವುದರಲ್ಲೇ ನಾಸಿಕ್ ಶೇಕ್ ತಲ್ಲೀನರಾಗಿರುತ್ತಾರೆ. ವರ್ಷದಿಂದ ವರ್ಷಕ್ಕೆ ಹುಲಿ ವೇಷ ತಂಡಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಾಸಿರ್ ಶೇಕ್ ಬಿಡುವು ಇಲ್ಲದಂತೆ ಜಂಡೆ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಸಾಕಷ್ಟು ಕೌಶಲ್ಯದಿಂದ ಕೂಡಿದ ಈ ಜಂಡೆ ತಯಾರಿಸುವ ಕಲೆಯನ್ನು ನಾಸಿರ್ ಶೇಕ್ ಸ್ವತಃ ತಾವೇ ಕಲಿತುಕೊಂಡಿದ್ದಾರೆ. ಕಳೆದ ೧೨ ವರ್ಷಗಳಿಂದ ಇವರು ಈ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಉಡುಪಿಯ ಬಹುತೇಕ ಪ್ರಮುಖ ಹುಲಿವೇಷ ತಂಡ ಗಳಿಗೆ ಇವರೇ ಜಂಡೆಯನ್ನು ತಯಾರಿಸಿ ಕೊಡುತ್ತಿರುವುದು ಇವರ ಕೌಶಲ್ಯಕ್ಕೆ ಸಾಕ್ಷಿ ಯಾಗಿದೆ. ಮಣಿಪಾಲ ಟೈಗರ್, ಕಪ್ಪೆಟ್ಟು, ಇಷ್ಟ ಮಹಾಲಿಂಗೇಶ್ವರ, ಗುರು ಕೇಸರಿ, ಯುವ ಬ್ರಹ್ಮಾವರ ಸೇರಿದಂತೆ ಹಲವು ತಂಡಗಳಲ್ಲಿ ನಾಸಿರ್ ಶೇಕ್ ತಯಾರಿಸಿದ ಜಂಡೆಗಳೇ ರಾರಾಜಿಸುತ್ತವೆ.
‘ಹುಲಿವೇಷ ತಂಡದಲ್ಲಿ ಜಂಡೆ ಇರಲೇಬೇಕು. ಪೂಜೆಯಲ್ಲೂ ಜಂಡೆ ಇಡಲೇಬೇಕು. ಅದನ್ನು ಹಿಡಿದು ಹುಲಿಗಳು ಕುಣಿಯುವುದು ನೋಡುವುದೇ ಚೆಂದ. ಇದನ್ನು ಬಿದಿರಿನಿಂದ ತಯಾರಿಸಲಾಗುತ್ತದೆ. ಇದನ್ನು ಬಗ್ಗಿಸಿ ರೂಪ ನೀಡುವಾಗ ತುಂಬಾ ಜಾಗೃತೆಯಿಂದ ಮಾಡಬೇಕಾಗುತ್ತದೆ. ಇದು ಅಷ್ಟು ಸುಲಭದ ಕೆಲಸ ಅಲ್ಲ. ಆದರೂ ನಾನು ಆಸಕ್ತಿಯಿಂದ ಈ ಕಾರ್ಯ ಮಾಡುತ್ತೇನೆ’ ಎನ್ನುತ್ತಾರೆ ನಾಸಿರ್ ಶೇಕ್.
‘ಒಂದು ಜಂಡೆ ತಯಾರಿಸಲು ಒಂದು ದಿನ ಬೇಕು. ನಾವು ಜಂಡೆಗೆ ರೆಕ್ಸಿನ್ ಹಾಕಿ ತುಂಬಾ ಚಂದ ಮಾಡಿಕೊಡುತ್ತೇವೆ. ಇದಕ್ಕೆ ಬೇರೆ ಕಡೆ ೫-೬ ಸಾವಿರ ರೂ. ಇದ್ದರೆ, ನಾವು ೪,೫೦೦ ರೂ.ಗೆ ಮಾಡಿಕೊಡುತ್ತೇವೆ. ನಮಗೆ ಇದರಲ್ಲಿ ಲಾಭ ಬೇಡ. ಆರನೇ ತಗರತಿಯಲ್ಲಿ ಇರುವಾಗಲೇ ನನಗೆ ಹುಲಿವೇಷ ಅಂದರೆ ಆಸಕ್ತಿ. ಹಲವು ಬಾರಿ ವೇಷ ಕೂಡ ಹಾಕಿದ್ದೇನೆ’ ಎಂದು ಅವರು ಹೇಳುತ್ತಾರೆ
‘ನಮ್ಮ ಜಂಡೆ ತುಂಬಾ ಫೇಮಸ್ ಆಗುತ್ತಿದೆ. ಹಲವು ತಂಡಗಳು ನಮ್ಮಲ್ಲಿಗೆ ಕೇಳಿಕೊಂಡು ಬರುತ್ತಿದ್ದಾರೆ. ನಾವು ತಯಾರಿಸಿದ ಜಂಡೆ ಅಬ್ಬರವಾಗಿ ಕಾಣುತ್ತದೆ. ನನ್ನ ದೊಡ್ಡಪ್ಪ ತಾಲೀಮು ಮಾಸ್ಟರ್. ಎಲ್ಲ ಕಡೆ ತಾಲೀಮು ಮಾಡುತ್ತಿದ್ದರು. ನಾನು ಕೂಡ ತಾಲೀಮು ಮಾಡುತ್ತೇನೆ’ ಎಂದು ನಾಸಿರ್ ಶೇಕ್ ಮಾಹಿತಿ ಹಂಚಿಕೊಂಡರು.







