ಬಾನು ಅವರ ಕತೆಗಳನ್ನು ಧ್ಯಾನಿಸಿ ಓದಲು ಒಂದು ಕೈಪಿಡಿಯ ಹಾಗೆ ಸಹಕಾರಿ

ಕನ್ನಡ ಲೇಖಕಿ, ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ ಬಾನು ಮುಷ್ತಾಕ್, ತಮ್ಮ ಸಣ್ಣ ಕತಾ ಸಂಕಲನ ‘ಹಾರ್ಟ್ ಲ್ಯಾಂಪ್’ಗೆ ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಆ ಮೂಲಕ ಕನ್ನಡ ಭಾಷೆಯ ಘನತೆಯನ್ನು ಹೆಚ್ಚಿಸಿದ್ದಾರೆ. ಈ ಸಂತೋಷದ ಸಂದರ್ಭದಲ್ಲಿ ಬಿ. ಶಿವಾನಂದರು ಬರೆದ ಪ್ರಸ್ತುತ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸುತ್ತಿದೆ. 29 ಅಧ್ಯಾಯಗಳಿರುವ ಈ ಪುಸ್ತಕದಲ್ಲಿ ಬಾನು ಅವರ ವೈಯಕ್ತಿಕ ಜೀವನದ ಕೆಲವು ಮಾರ್ಮಿಕ ವಿವರಗಳೊಂದಿಗೆ ಅವರ ಬರಹ ಮತ್ತು ಚಿಂತನೆಗಳ ಬಗೆಗೂ ಸಾಕಷ್ಟು ಮಾಹಿತಿಗಳನ್ನು ನೀಡಲಾಗಿದೆ. 2025ರ ಕರ್ನಾಟಕದ ನಾಡ ಹಬ್ಬವನ್ನು ಬಾನು ಮುಷ್ತಾಕ್ ಅವರು ಉದ್ಘಾಟಿಸುತ್ತಿರುವ ಸಂದರ್ಭದಲ್ಲಿ ಈ ಪುಸ್ತಕವು ಬಿಡುಗಡೆಯಾಗುತ್ತಿರುವುದು ಬಹಳ ಅರ್ಥಪೂರ್ಣ ಘಟನೆಯಾಗಿದೆ. ಇದನ್ನು ಸಾಧ್ಯ ಮಾಡಿರುವ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರಿಗೆ ಅಭಿನಂದನೆಗಳು.
ಲಂಡನ್ ನಗರದ ಟೇಟ್ ಮಾಡರ್ನ್ ನಲ್ಲಿ, ಬಾನು ಮುಷ್ತಾಕ್ ಅವರಿಗೆ ಮೇ 20, 2025ರಂದು ಅಂತರ್‌ರಾಷ್ಟ್ರೀಯ ಖ್ಯಾತಿಯ ಬೂಕರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ತಮ್ಮ ಅನುವಾದಕಿ ದೀಪಾ ಭಾಸ್ತಿ ಅವರೊಂದಿಗೆ ಪ್ರಶಸ್ತಿ ಸ್ವೀಕರಿಸಿದ ಆನಂತರ ಮಾತಾಡಿದ ಬಾನು ಮುಷ್ತಾಕ್ ಅವರು ತಮ್ಮ ಗೆಲುವು ಭಾರತದ ವೈವಿಧ್ಯಗಳಿಗೆ ಸಂದ ಗೆಲುವು ಎಂದು ಹೇಳಿದರು. ಪ್ರಶಸ್ತಿ ನೀಡಿದ ಬೂಕರ್ ಸಮಿತಿಯ ತೀರ್ಪುಗಾರರು ‘ಬಾನು ಮುಷ್ತಾಕ್ ಅವರು ಸಮಾಜದ ಹೊರವಲಯದಲ್ಲಿರುವವರ ಜೀವನವನ್ನು ತಮ್ಮ ಬರಹಗಳಲ್ಲಿ ಶೋಧಿಸುತ್ತಾರೆ. ಹಾಗಾಗಿ ಸಹಜವಾಗಿಯೇ ಅವರ ಕತೆಗಳು ಕೊನೆಯಿಲ್ಲದ ಭಾವನಾತ್ಮಕ ಮತ್ತು ನೈತಿಕ ತೂಕವನ್ನು ಹೊಂದಿವೆ’ ಎಂದು ಬಣ್ಣಿಸಿದರು. ಇನ್ನೊಬ್ಬ ತೀರ್ಪುಗಾರರು ಬಾನು ಕತೆಗಳ ಪಾತ್ರಗಳನ್ನು ‘ಬದುಕು ಮತ್ತು ಸ್ಥಿತಿಸ್ಥಾಪಕತ್ವದ ಅದ್ಭುತ ಭಾವಚಿತ್ರಗಳು’ ಎಂದು ಕೊಂಡಾಡಿದರು. ದೀಪಾ ಭಾಸ್ತಿಯವರ ಅನುವಾದದ ಬಗ್ಗೆ ಟಿಪ್ಪಣಿ ಮಂಡಿಸಿದ ಬೂಕರ್ ಜ್ಯೂರಿ ಅಧ್ಯಕ್ಷ ಮ್ಯಾಕ್ಸ್ ಪೋರ್ಟರ್ ಅವರು ತಮ್ಮ ಅನುವಾದಕರ ಟಿಪ್ಪಣಿಯಲ್ಲಿ ಇಂಗ್ಲಿಷ್‌ನ ಬಹುಳತೆಯ ಬಗ್ಗೆಯೂ ಬಹಳ ಒಳನೋಟಗಳುಳ್ಳ ಮಾತುಗಳನ್ನು ಆಡಿದರು.
ಮೇಲಿನ ನಾಲ್ಕು ಜನರ ಹೇಳಿಕೆಗಳು ವರ್ತಮಾನದ ಭಾರತದ ಸಾಂಸ್ಕೃತಿಕ ಸಂದರ್ಭಗಳನ್ನು ಅತ್ಯಂತ ನಿಖರವಾಗಿ ವ್ಯಾಖ್ಯಾನಿಸುತ್ತವೆ.
ಬಾನು ಅವರು ಅರ್ಪಿಸಿದ ‘ಭಾರತದ ವೈವಿಧ್ಯಗಳಿಗೆ’ ಎರಡು ಆಯಾಮಗಳಿವೆ. ಮೊದಲನೆಯದು, ಭಾರತದ ಬಹುತ್ವವನ್ನು ಆಗು ಮಾಡುತ್ತಿರುವ ಅಸಂಖ್ಯಾತ ಧರ್ಮಗಳು, ಭಾಷೆಗಳು, ಜಾತಿಗಳು, ಬುಡಕಟ್ಟುಗಳು, ಸಂಪ್ರದಾಯಗಳು, ಆಹಾರ ಪದ್ಧತಿಗಳು, ಭೌಗೋಳಿಕ ವಿನ್ಯಾಸಗಳು ಇತ್ಯಾದಿಗಳನ್ನು ಗುರುತಿಸಿ ಗೌರವಿಸುವ ಮನೋಭಾವವನ್ನು ಬೆಳೆಸಲು ಆಶಿಸುವುದು. ವೈವಿಧ್ಯಗಳನ್ನು ನಿರಾಕರಿಸುವ ಪ್ರವೃತ್ತಿ ಹೆಚ್ಚು ಹೆಚ್ಚು ಕಾಣುತ್ತಿರುವ ಇಂದಿನ ಸಂದರ್ಭದಲ್ಲಿ ಬಾನು ಕೊಟ್ಟಿರುವ ಸಂದೇಶಕ್ಕೆ ಬಹಳ ಮಹತ್ವವಿದೆ. ಎರಡನೆಯ ಅಂಶವೆಂದರೆ, ಭಾರತದ ವೈವಿಧ್ಯಮಯ ಲೋಕವು ನಿಧಾನವಾಗಿಯಾದರೂ ಅಕ್ಷರ ಲೋಕಕ್ಕೆ ಪ್ರವೇಶ ಪಡೆಯುತ್ತಿರುವ ರೀತಿ. ಸಾವಿರಾರು ವರ್ಷಗಳಿಂದ ಇದೇ ಮಣ್ಣಲ್ಲಿ ವಾಸಿಸುತ್ತಿರುವ ದಲಿತರು, ಮಹಿಳೆಯರು ಮತ್ತು ಕೆಲವು ಹಿಂದುಳಿದ ಸಮುದಾಯಗಳವರು ಈಗಷ್ಟೇ ಅಕ್ಷರ ಲೋಕಕ್ಕೆ ತಮ್ಮನ್ನು ತೆರೆದುಕೊಳ್ಳುತ್ತಿದ್ದಾರೆ. ಹಾಗೆ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮೊದಲ ಬಾರಿಗೆ ನಾವು ಇದುವರೆಗೆ ಕೇಳಿರದ ಕಥನಗಳಿಗೆ ಕಿವಿಯಾಗುತ್ತಿದ್ದೇವೆ. ಕವಿ ಸಿದ್ದಲಿಂಗಯ್ಯನವರು ‘ದಲಿತ ರಾಗ ಗುನುಗುತಿದೆ ಗೋರಿಯ ಕರಿ ಬಿರುಕಿನಲಿ’ ಎಂದು ಬರೆದಾಗ (1975) ನಾವೆಲ್ಲ ಬೆಚ್ಚಿ ಬಿದ್ದಿದ್ದೆವು. ದೇವನೂರು ಮಹಾದೇವ ಅವರ ‘ಒಡಲಾಳ’ ಪ್ರಕಟವಾದಾಗ (1978) ಕನ್ನಡದ ಓದುಗರ ಮುಂದೆ ಹೊಸ ಲೋಕವೊಂದು ಅನಾವರಣಗೊಂಡಿತು. ಈ ಪ್ರಕ್ರಿಯೆಗೆ ಭಾರತ ಸಾವಿರಾರು ವರ್ಷಗಳ ಕಾಲ ಕಾಯಬೇಕಾಯಿತು.
ಮೇಲಿನ ಮಾತುಗಳು ಭಾರತದ ಮುಸ್ಲಿಮ್ ಲೇಖಕರಿಗೂ ಅನ್ವಯವಾಗುತ್ತದೆ. ಸುಮಾರು 1,300 ವರ್ಷಗಳಿಂದ ಭಾರತದಲ್ಲಿಯೇ ವಾಸಿಸುತ್ತಿರುವ ಮುಸ್ಲಿಮರು ಭಾರತೀಯ ಬಹುಳತೆಯ ಭಾಗವೇ ಆಗಿದ್ದರೂ ಅದನ್ನು ಒಪ್ಪಿಕೊಳ್ಳಲು ಬಹಳ ಜನ ಇಂದಿಗೂ ಸಿದ್ಧರಿಲ್ಲ. ಭಾರತದ ಸಂವಿಧಾನವು ಇಲ್ಲಿಯ ಬಹುಳತೆಯನ್ನು ಒಪ್ಪಿಕೊಳ್ಳುತ್ತದೆ. ಇಷ್ಟಿದ್ದರೂ ಭಾರತೀಯ ಮುಸ್ಲಿಮರು ಇವತ್ತು ಅತ್ಯಂತ ಗಂಭೀರವಾದ ಸವಾಲುಗಳಿಗೆ ಮುಖಾಮುಖಿಯಾಗುತ್ತಿದ್ದಾರೆ. ಅವರನ್ನು ‘ಅನ್ಯ’ರೆಂದು ಕಾಣಲು ಜನರನ್ನು ಪ್ರಚೋದಿಸಲಾಗುತ್ತಿದೆ. ಹೀಗಾಗಿ ಸಂವಿಧಾನದ ರಕ್ಷಣೆಯಿದ್ದರೂ ಇವತ್ತು ಭಾರತದಲ್ಲಿ ಮುಸ್ಲಿಮನಾಗಿ ಬದುಕುವುದು ಸವಾಲಿನ ಸಂಗತಿಯಾಗಿದೆ. ಅವರು ಪ್ರತಿದಿನವೂ ಆರೋಪ, ಅನುಮಾನ ಮತ್ತು ಬೆದರಿಕೆಗಳ ನಡುವೆ ಬದುಕಬೇಕಾಗಿದೆ. ಹಲವಾರು ಸ್ಥಳಗಳಲ್ಲಿ, ಮುಸ್ಲಿಮರು ಬಹುಸಂಖ್ಯಾತ ಸಮುದಾಯಗಳ ಆದ್ಯತೆಗಳಿಗೆ ಬದ್ಧರಾಗಿ ಬದುಕಬೇಕೆಂಬ ಅಪ್ರಜಾಸತ್ತಾತ್ಮಕ ಉಪದೇಶಗಳನ್ನು ನೀಡಲಾಗುತ್ತಿದೆ. ಮುಸ್ಲಿಮರ ಉಡುಗೆ ತೊಡುಗೆ, ಭಾಷೆ ಮತ್ತು ಸಂಸ್ಕೃತಿಯ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳಿಂದ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಣೆ, ಮತದಾರರ ಪಟ್ಟಿಯಿಂದ ಅವರ ಹೆಸರುಗಳು ಕಾಣೆಯಾಗುವುದು, ಕ್ರಿಸ್ತಶಕ 1206 ರಿಂದ 1857ರವರೆಗಿನ ಅವಧಿಯ ಮಧ್ಯಕಾಲೀನ ಭಾರತದ ಇತಿಹಾಸವನ್ನು ಅಳಿಸಿಹಾಕುವುದು- ಇತ್ಯಾದಿ ಘಟನೆಗಳನ್ನು ನಾವು ನಿತ್ಯವೂ ಓದುತ್ತಿದ್ದೇವೆ. ನ್ಯಾಯಾಂಗದ ಮೌನ ದಿಗ್ಭ್ರಮೆ ಹುಟ್ಟಿಸುತ್ತದೆ. ಇಂಥ ಗಂಭೀರ ಸವಾಲುಗಳ ನಡುವೆ ಇವತ್ತು ಮುಸ್ಲಿಮ್ ಲೇಖಕರು ಬರೆಯಬೇಕಾಗಿದೆ.
ಈ ಸಮಸ್ಯೆ ಮುಸ್ಲಿಮ್ ಮಹಿಳೆಯರ ವಿಷಯಕ್ಕೆ ಬಂದಾಗ ದ್ವಿಗುಣಗೊಳ್ಳುತ್ತದೆ. ಅವರು ಮನೆಯೊಳಗೆ ಗಂಡಸರಿಂದಲೂ, ಮನೆಯ ಹೊರಗಡೆಗೆ ಸಮಾಜದಿಂದಲೂ ಬಗೆ ಬಗೆಯ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಹಿಜಾಬ್ ಹಾಕದೆ ಮುಸ್ಲಿಮ್ ಹುಡುಗಿ ಮನೆಯಿಂದ ಹೊರಬರುವಂತಿಲ್ಲ, ಹಿಜಾಬ್ ತೊಟ್ಟು ಆಕೆ ಶಾಲೆಗೆ ಬರುವಂತಿಲ್ಲ. ಇಂಥ ದಯನೀಯ ಸಂದರ್ಭದಲ್ಲಿ ಮುಸ್ಲಿಮ್ ಲೇಖಕಿಯರ ಕಣ್ಮುಂದೆ ನಾವ್ಯಾರೂ ಊಹಿಸಲಾಗದಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಭಾರತದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಸ್ತ್ರೀದ್ವೇಷವು ಮುಸ್ಲಿಮ್ ಸಮುದಾಯದೊಳಗೂ ಕಾಣಸಿಗುತ್ತದೆ. ಬಹುಸಂಖ್ಯಾತರು ಇಡೀ ಮುಸ್ಲಿಮ್ ಸಮುದಾಯವನ್ನು ‘ಶತ್ರು’ ಎಂದು ಪರಿಗಣಿಸಿದಾಗ ಮುಸ್ಲಿಮ್ ಮಹಿಳೆಯರು ಇನ್ನಷ್ಟು ಅಂಚಿಗೆ ಸರಿಯುತ್ತಾರೆ. ಇದರಿಂದ ಹೊರಬರುವ ಹಾದಿಗಳನ್ನು ಮುಸ್ಲಿಮ್ ಮಹಿಳೆಯರು ನಿಧಾನವಾಗಿಯಾದರೂ ಕಂಡುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಬಾನು ಮುಷ್ತಾಕ್ ಅವರ ಕತೆಗಳೇ ಸಾಕ್ಷಿ. ಹೊರಗಿನಿಂದ ಮತ್ತು ಒಳಗಿನಿಂದ ಬರುತ್ತಿರುವ ಅಸಾಮಾನ್ಯ ಒತ್ತಡಗಳನ್ನು ಅವರು ಹೋರಾಟ ಮತ್ತು ಬರವಣಿಗೆಗಳ ಮೂಲಕ ಎದುರಿಸುತ್ತಿದ್ದಾರೆ. ಅವರ ಕತೆಗಳು ಮುಸಲ್ಮಾನ ಮಹಿಳೆಯರು ಎದುರಿಸುವ ಅನೇಕ ಸವಾಲುಗಳನ್ನು ಭಾಷೆಯಲ್ಲಿ ಸರಳವಾಗಿ, ಆದರೆ ಮಾರ್ಮಿಕವಾಗಿ ಕಟ್ಟಿಕೊಡುತ್ತವೆ. ಧಾರ್ಮಿಕ ಸಂಪ್ರದಾಯವಾದ ಮತ್ತು ಆಳವಾದ ಪಿತೃಪ್ರಧಾನ ಚಿಂತನಾಕ್ರಮದ ಮಿತಿಗಳನ್ನೂ ಅವು ದಿಟ್ಟವಾಗಿ ಓದುಗರ ಮುಂದಿಡುತ್ತವೆ. ಅವರ ಕತೆಗಳಲ್ಲಿ ಸಹೋದರರನ್ನು ನೋಡಿಕೊಳ್ಳಲು ಮತ್ತು ತಾಯಿಗೆ ಸಹಾಯ ಮಾಡಲು ಓದಿಗೆ ವಿದಾಯ ಹೇಳುವ ಅಮಾಯಕ ಹೆಣ್ಣು ಮಕ್ಕಳಿದ್ದಾರೆ, ಮಕ್ಕಳನ್ನು ಮತ್ತು ತಮ್ಮನ್ನು ಉಳಿಸಿಕೊಳ್ಳಲು ಹೆಣಗಾಡುವ ಅಮ್ಮಂದಿರಿದ್ದಾರೆ, ಅತಿಯಾಗಿ ಕೆಲಸ ಮಾಡುವ ಹೆಂಗಸರಿದ್ದಾರೆ, ಅಭ್ಯಾಸಕ್ಕಿಂತ ಹೆಚ್ಚು ಬೋಧನೆಯನ್ನೇ ಬಯಸುವ ಮೌಲ್ವಿಗಳಿದ್ದಾರೆ. ಒಂದು ಕತೆಯಲ್ಲಂತೂ ಹೆರಿಗೆಯ ನಂತರ ಸುಸ್ತಾಗಿರುವ ನಿರೂಪಕಿ ದೇವರಲ್ಲಿ ‘ನೀನು ಒಮ್ಮೆಯಾದರೂ ಮಹಿಳೆಯಾಗಿರು’ ಎಂದು ಬೇಡಿಕೊಳ್ಳುತ್ತಾಳೆ. ನಿಷ್ಕ್ರಿಯವಾಗಿ ಬಲಿಪಶುಗಳಾಗುವ ಬದಲು ಶಾಂತಿಯುತ ನಾಗರಿಕ ಪ್ರತಿರೋಧಗಳನ್ನು ದಾಖಲಿಸುವುದು ಅವರ ಉದ್ದೇಶ. ಲಂಡನ್‌ನಲ್ಲಿ ಬಾನು ಹೇಳಿದ ಒಂದು ಮಾತು ವಿಶ್ವದಾದ್ಯಂತ ಪ್ರತಿಧ್ವನಿಸಿತು. ಅದೆಂದರೆ- ‘‘ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಈ ಲೋಕದಲ್ಲಿ ಸಾಹಿತ್ಯವು ನಾವು ಪರಸ್ಪರರ ಮನಸ್ಸಿನಲ್ಲಿ ಬದುಕಬಹುದಾದ ಕೊನೆಯ ಪವಿತ್ರ ಸ್ಥಳಗಳಲ್ಲಿ ಒಂದನ್ನು ನಿರ್ಮಿಸುತ್ತದೆ’’. ಇದನ್ನು ಬೂಕರ್ ಸಮಿತಿಯು ಸರಿಯಾಗಿಯೇ ಗುರುತಿಸಿ, ‘ಸಮಾಜದ ಹೊರವಲಯದಲ್ಲಿರುವವರ ಜೀವನವನ್ನು ಬಾನು ಮುಷ್ತಾಕ್ ತಮ್ಮ ಬರಹಗಳಲ್ಲಿ ಶೋಧಿಸುತ್ತಾರೆ’ ಎಂದು ಹೇಳಿದ್ದು. ಇದು ದಣಿದ ಜನರಲ್ಲಿ ಭರವಸೆಯ ಹಾದಿಯೊಂದನ್ನು ತೆರೆದಿದೆ.
ಕೇಳಲಾಗದ ಕತೆಗಳನ್ನು ಹೇಳಿದ್ದು ಮತ್ತು ಹೇಳಲಾಗದ ಕತೆಗಳನ್ನು ಬರೆದದ್ದು, ಇವೆರಡೂ ಬಾನು ಕನ್ನಡಕ್ಕೆ ಕೊಟ್ಟ ಅತಿ ದೊಡ್ಡ ಕೊಡುಗೆ. ಶಿವಾನಂದರು ಬರೆದ ಈ ಪುಸ್ತಕವು ಬಾನು ಅವರ ಕತೆಗಳನ್ನು ಧ್ಯಾನಿಸಿ ಓದಲು ಒಂದು ಕೈಪಿಡಿಯ ಹಾಗೆ ಸಹಕರಿಸುತ್ತದೆ.
(ಮುನ್ನುಡಿಯಿಂದ)







