ಪರಿಮಳದಿಂದಲೇ ಮನಗೆಲ್ಲುವ ‘ಮೇದಿನಿ ಸಣ್ಣಕ್ಕಿ’

ಕಾರವಾರ: ದೂರದಿಂದಲೇ ಆಕರ್ಷಿಸುವ ಭತ್ತದ ಘಮ, ಇದು ಕೃಷಿಕರು ಸಂರಕ್ಷಿಸಿಕೊಂಡು ಬಂದ ವಿಶಿಷ್ಟ ತಳಿಯ ಭತ್ತ. ಹೌದು, ಇದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೇದಿನಿ ಸಣ್ಣಕ್ಕಿ. ಈ ತಳಿಯ ಹೆಸರು ಕೇಳದಿದ್ದರೂ, ಅದರ ಪರಿಮಳಕ್ಕೆ ಮನಸೋಲದವರಿಲ್ಲ. ಇಂತಹ ವಿಶೇಷ ಗುಣಗಳನ್ನು ಹೊಂದಿರುವ ಈ ಭತ್ತವನ್ನು ರಾಜ್ಯದ ಕೆಲವೇ ಕೆಲವು ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದ್ದು, ಮೇದಿನಿ ಗ್ರಾಮವು ಅದರಲ್ಲಿ ಪ್ರಮುಖವಾಗಿದೆ.
ಆಧುನಿಕತೆಯ ಸ್ಪರ್ಶವಿಲ್ಲದ ಮೇದಿನಿ ಗ್ರಾಮದಲ್ಲಿ, ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಇಲ್ಲಿನ ಮಣ್ಣಿನಲ್ಲಿ ಬೆಳೆಯುವ ಈ ಅಕ್ಕಿಗೆ ದೇಶದಾದ್ಯಂತ ಹೆಚ್ಚಿನ ಬೇಡಿಕೆಯಿದೆ. ಆದರೆ, ಇತ್ತೀಚೆಗೆ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಗ್ರಾಮಕ್ಕೆ ರಸ್ತೆ ಸಂಪರ್ಕದ ಕೊರತೆ: ರೈತರ ಸಂಕಷ್ಟ
ಮೇದಿನಿ ಗ್ರಾಮದಲ್ಲಿ ಹಿಂದೆ ಒಕ್ಕಲಿಗ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಸಣ್ಣಕ್ಕಿ ಬೆಳೆಯುತ್ತಿದ್ದರು. ಆದರೆ, ಈಗ ಈ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ, ಗ್ರಾಮಕ್ಕೆ ಸೂಕ್ತ ರಸ್ತೆ ಸಂಪರ್ಕವಿಲ್ಲದಿರುವುದು. ಬೆಳೆದ ಭತ್ತವನ್ನು ಮಾರುಕಟ್ಟೆಗೆ ಸಾಗಿಸುವುದು ಇಲ್ಲಿನ ರೈತರಿಗೆ ದೊಡ್ಡ ಸವಾಲು. ಭತ್ತದ ಮೂಟೆಗಳನ್ನು ಸುಮಾರು ಎಂಟು ಕಿಲೋ ಮೀಟರ್‌ಗಳಷ್ಟು ದುರ್ಗಮ ಕಾಡು ಮಾರ್ಗದಲ್ಲಿ ಹೊತ್ತು ಸಾಗಿಸಬೇಕು. ಭತ್ತವನ್ನು ಸಂಸ್ಕರಿಸಿ ಅಕ್ಕಿ ಮಾಡಲು ಹರಸಾಹಸ ಪಡಬೇಕಾಗುತ್ತದೆ ಎನ್ನುತ್ತಾರೆ ಗ್ರಾಮದವರು. ಇದರಿಂದಾಗಿ, ಹಲವು ರೈತರು ಸಣ್ಣಕ್ಕಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.
ಅಧಿಕ ಬೆಲೆ ಮತ್ತು ಬೇಡಿಕೆ
ಮೇದಿನಿ ಸಣ್ಣಕ್ಕಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ, ಒಂದು ಕೆ.ಜಿ.ಗೆ 200 ರಿಂದ 250 ರೂ. ವರೆಗೆ ಬೆಲೆ ಇರುತ್ತದೆ. ಈ ಅಕ್ಕಿಯನ್ನು ಸಾಮಾನ್ಯವಾಗಿ ಅನ್ನಕ್ಕಾಗಿ ಬಳಸುವುದಕ್ಕಿಂತ ಹೆಚ್ಚಾಗಿ ಕೇಸರಿಬಾತ್, ಬಿರಿಯಾನಿ ಮತ್ತು ಇತರ ವಿಶೇಷ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದರ ಪರಿಮಳವೇ ಬಾಯಲ್ಲಿ ನೀರೂರಿಸುತ್ತದೆ.
ಇಳುವರಿಯ ವಿಷಯಕ್ಕೆ ಬಂದರೆ, ಪ್ರತಿ ಎಕರೆಗೆ ಸುಮಾರು 10 ಕ್ವಿಂಟಾಲ್ ಭತ್ತ ಸಿಗುತ್ತದೆ. ರೈತರಿಗೆ ಒಂದು ಕೆ.ಜಿ.ಗೆ ಸುಮಾರು 125 ರೂ.ರಷ್ಟು ಬೆಲೆ ಸಿಗುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳಿಂದಾಗಿ ಇಳುವರಿ ಮತ್ತು ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಸಾವಯವ ಪದ್ಧತಿಯೇ ಇಲ್ಲಿನ ಶಕ್ತಿ
ಮೇದಿನಿಯ ಸಣ್ಣಕ್ಕಿಗೆ ಪರಿಮಳ ಬರುವುದು ಅದಕ್ಕೆ ಬಳಸುವ ಸಾವಯವ ಗೊಬ್ಬರದಿಂದ ಮತ್ತು ಇಲ್ಲಿನ ಮಣ್ಣಿನಿಂದ. ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಸುವುದರಿಂದ ಭತ್ತದ ಗುಣಮಟ್ಟ ಉತ್ತಮವಾಗಿರುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಹೊತ್ತು ತರುವುದು ಕಷ್ಟವಾದ್ದರಿಂದ ಹೆಚ್ಚಿನ ರೈತರು ಸಾವಯವ ಪದ್ಧತಿಯನ್ನೇ ಅನುಸರಿಸುತ್ತಾರೆ. ರಾಸಾಯನಿಕ ಬಳಸಿದಾಗ ಬೆಳೆಯ ಪರಿಮಳ ಕಡಿಮೆಯಾಗುತ್ತದೆ ಎನ್ನುತ್ತಾರೆ ಇಲ್ಲಿನ ರೈತರು.
ಕೀಟಗಳ ಕಾಟ ಮತ್ತು ಸರಕಾರದ ಬೆಂಬಲದ ಕೊರತೆ
ಚಿನ್ನದಂಥ ಬೆಲೆ ಇದ್ದರೂ, ಇಲ್ಲಿನ ರೈತರಿಗೆ ಕೀಟಗಳ ಕಾಟ ದೊಡ್ಡ ಸಮಸ್ಯೆಯಾಗಿದೆ. ಕಡಿಮೆ ಇಳುವರಿ, ಹುಳಗಳು, ಇಲಿ ಮತ್ತು ಕಾಡು ಪ್ರಾಣಿಗಳಿಂದ ಬೆಳೆ ನಾಶವಾಗುವುದು ಸಾಮಾನ್ಯ. ಭತ್ತದ ತೆನೆ ಬಂದಾಗ ಅದರ ಪರಿಮಳಕ್ಕೆ ಮುತ್ತಿಕೊಳ್ಳುವ ಹುಳಗಳಿಂದ ಬೆಳೆ ನಾಶವಾಗುತ್ತಿದ್ದು, ರೈತರು ಬೇಸತ್ತಿದ್ದಾರೆ. ಪರಿಣಾಮ, ವರ್ಷದಿಂದ ವರ್ಷಕ್ಕೆ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ರೈತರು ಇಷ್ಟೆಲ್ಲ ಕಷ್ಟಗಳನ್ನು ಎದುರಿಸುತ್ತಿದ್ದರೂ, ಸರಕಾರದಿಂದ ಯಾವುದೇ ಪ್ರೋತ್ಸಾಹ ದೊರೆಯುತ್ತಿಲ್ಲ. ರಸ್ತೆ ಸಂಪರ್ಕ ಇಲ್ಲದಿರುವುದು ಉತ್ಪಾದನೆ ಕುಂಠಿತಗೊಳ್ಳಲು ಮುಖ್ಯ ಕಾರಣ. ಕೃಷಿ ಇಲಾಖೆ ಗಮನ ಹರಿಸಿ ಸೂಕ್ತ ಸೌಲಭ್ಯ ಒದಗಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಮೇದಿನಿ ಸಣ್ಣಕ್ಕಿಯನ್ನು ಒಂದು ಬ್ರಾಂಡ್ ಆಗಿ ರೂಪಿಸಿ, ಅದನ್ನು ಕಾರವಾರ,ಮುರುಡೇಶ್ವರದಂತಹ ಸ್ಥಳಗಳಲ್ಲಿರುವ ಸಾವಯವ ಉತ್ಪನ್ನಗಳ ಮಳಿಗೆಗಳಲ್ಲಿ ಲಭ್ಯವಾಗುವಂತೆ ಮಾಡಿದರೆ ಹೊರಗಿನವರಿಗೂ ಈ ವಿಶೇಷ ತಳಿಯ ಬಗ್ಗೆ ತಿಳಿಯುತ್ತದೆ. ಇದರಿಂದ ಬೇಡಿಕೆ ಹೆಚ್ಚಿ ರೈತರಿಗೆ ನೆರವಾಗಬಹುದು ಎನ್ನುತ್ತಾರೆ ಸ್ಥಳೀಯರು.
ಮಣ್ಣಿನ ವಿಶೇಷ ಶಕ್ತಿಯೇ ಕಾರಣ
ಮೇದಿನಿ ಸಣ್ಣಕ್ಕಿ ತನ್ನ ಗಾತ್ರ ಮತ್ತು ಸುವಾಸನೆಯಿಂದಲೇ ಹೆಚ್ಚು ಪ್ರಸಿದ್ಧಿ. ಈ ಅಕ್ಕಿ ಜೀರಿಗೆ ಕಾಳಿನಷ್ಟು ಚಿಕ್ಕದಾಗಿದ್ದು, ಅದರ ಸ್ವಾದವೂ ಅಷ್ಟೇ ಅದ್ಭುತವಾಗಿದೆ. ಈ ಭತ್ತ ಬೆಳೆದಾಗ ಇಡೀ ಪ್ರದೇಶವೇ ಸುವಾಸನೆಯಿಂದ ತುಂಬಿರುತ್ತದೆ. ಭತ್ತದ ಜೊತೆಗೆ ಅದರ ಅಕ್ಕಿಯೂ ಘಮಘಮಿಸುತ್ತದೆ. ಇದಕ್ಕೆಲ್ಲ ಮೇದಿನಿಯ ಮಣ್ಣಿನಲ್ಲಿರುವ ವಿಶೇಷ ಶಕ್ತಿಯೇ ಕಾರಣ ಎಂದು ಇಲ್ಲಿನ ಜನ ನಂಬುತ್ತಾರೆ. ಬೇರೆ ಪ್ರದೇಶಗಳಲ್ಲಿ ಈ ತಳಿಯನ್ನು ಬೆಳೆಯಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಈ ಭತ್ತವನ್ನು ಬೇರೆ ಕಡೆ ಬೆಳೆದಾಗ, ಅದು ಮೇದಿನಿಯಲ್ಲಿ ಬೆಳೆದಷ್ಟು ಸ್ವಾದ ಮತ್ತು ಪರಿಮಳವನ್ನು ಹೊಂದಿರುವುದಿಲ್ಲ. ನಮ್ಮ ಮಣ್ಣಿನಲ್ಲಿ ವಿಶೇಷ ಶಕ್ತಿಯಿದೆ ಎಂದು ಹೇಳುತ್ತಾರೆ ಮೇದಿನಿ ಗ್ರಾಮದ ಹಿರಿಯರು.







