ಉತ್ತರ ಜಿಲ್ಲೆಗಳಲ್ಲಿ ಉಕ್ಕಿ ಹರಿದ ನದಿಗಳು; ಸಂಕಷ್ಟದಲ್ಲಿ ರೈತರು

ಯಾದಗಿರಿ : ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದ ಭೀಮಾ ನದಿ ಉಕ್ಕಿ ಹರಿದು ನಗರದ ವಾರ್ಡ್ ನಂ.31 ರ ಕುಷ್ಠರೋಗಿಗಳ ಕಾಲೋನಿಗೆ ನೀರು ನುಗ್ಗಿದೆ. ಅನೇಕ ಮನೆಗಳು ಜಲಾವೃತಗೊಂಡಿದ್ದು, ವಾಸಿಸಲು ಅಸಾಧ್ಯವಾದ ಕಾರಣ ಹಲವಾರು ಕುಟುಂಬಗಳು ತಮ್ಮ ಮನೆ ಬಿಟ್ಟು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ದಿನಗೂಲಿ ಮಾಡಿ ಜೀವನ ಸಾಗಿಸುತ್ತಿರುವ ಈ ಬಡ ಕುಟುಂಬಗಳು ಈಗ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿವೆ. ರಾತ್ರಿ ವೇಳೆ ನೀರಿನಲ್ಲಿ ಹಾವು,ಚೇಳುಗಳು ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದೆ. ಮಕ್ಕಳು, ವೃದ್ಧರು ಹಾಗೂ ನಾವು ರೋಗಿಗಳು ಜೀವದ ಭಯದಲ್ಲಿ ಬದುಕುತ್ತಿದ್ದೇವೆ. ಸಹಾಯವಿಲ್ಲದೆ ಸಂಕಷ್ಟ ಹೆಚ್ಚಾಗಿದೆ . ಮನೆಗಳಿಗೆ ನುಗ್ಗಿದ ಕೊಳಕು ನೀರಿನಲ್ಲಿ ಆಹಾರ ಸಾಮಗ್ರಿ ಹಾಗೂ ಬಟ್ಟೆಗಳು ಹಾಳಾಗಿವೆ. ಪ್ರವಾಹದ ನೀರಿನಲ್ಲಿ ಸೋಂಕು ಹರಡುವ ಆತಂಕ ಹೆಚ್ಚಿದ್ದು, ಜ್ವರ, ಚರ್ಮರೋಗ,ಬಾವು, ಹಾವು ಕಡಿತ ಸಂಭವಿಸಬಹುದು ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ
ಈ ಸ್ಥಿತಿಯನ್ನು ಪರಿಶೀಲಿಸಲು ಯಾವುದೇ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ನಮ್ಮ ಮನೆ-ಆಸ್ತಿ, ಬದುಕೇ ನಾಶವಾಗಿದೆ. ಆದರೆ ನಮ್ಮ ಕಷ್ಟ ಯಾರಿಗೂ ಕಾಣುತ್ತಿಲ್ಲ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
ರಾತ್ರೋರಾತ್ರಿ ನೀರು ನಮ್ಮ ಮನೆಗೆ ತುಂಬಿ ನಿಂತಿತು. ಓಡಾಡಲು ಸ್ಥಳವೂ ಸಿಗುತ್ತಿಲ್ಲ. ಮಕ್ಕಳನ್ನು ಮತ್ತು ವೃದ್ಧರನ್ನು ಸುರಕ್ಷಿತ ಸ್ಥಳಕ್ಕೆ ತರುವುದೂ ಕಷ್ಟವಾಗಿದೆ. ಯಾವುದೇ ನೆರವು ಇಲ್ಲದೆ ನಾವು ಭಯದಿಂದ ಇದ್ದೇವೆ. ಸುತ್ತಲೂ ನೀರು ನಿಂತಿರುವ ಕಾರಣ, ನಾವು ನಮ್ಮ ಸಂಬಂಧಿಕರ ಮನೆಯಲ್ಲಿ ಬಂದು ಉಳಿಯಬೇಕಾಯಿತು.
-ನಾಗಪ್ಪ,ನಗರ ನಿವಾಸಿ
ಇಲ್ಲಿರುವ ಕುಷ್ಠರೋಗಿಗಳ ಮನೆಗಳಲ್ಲಿ ನೀರಿ ನಿಂತು, ಹಾವು-ಚೇಳುಗಳ ಹಾವಳಿಯಿಂದ ಅವರು ಭಯಪಡುತ್ತಿದ್ದಾರೆ. ಭೀಮಾ ನದಿಯಿಂದ ಹರಿಯುತ್ತಿರುವ ನೀರು ಇನ್ನಷ್ಟು ಹೆಚ್ಚಾದರೆ ಮನೆಗಳು ಮುಳುಗುವ ಸಾಧ್ಯತೆ ಇದೆ. ಸರಕಾರಿ ಅಧಿಕಾರಿಗಳು, ತುರ್ತು ನಿರ್ವಹಣಾ ಇಲಾಖೆ ಕೂಡಲೇ ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ತಾತ್ಕಾಲಿಕ ಆಶ್ರಯ ಮತ್ತು ವೈದ್ಯಕೀಯ ನೆರವು ಒದಗಿಸಬೇಕು.
-ಎಂ.ಡಿ ತಾಜ್, ಬಿ.ಎಸ್.ಪಿ ಪಕ್ಷದ ಯಾದಗಿರಿ ಜಿಲ್ಲಾಧ್ಯಕ್ಷ







