ಲೋಕನಾಯಕ ಜೆಪಿ ಪರಂಪರೆ: ಭಾರತೀಯ ಪ್ರಜಾಪ್ರಭುತ್ತದಲ್ಲಿ ಏಕತೆಯ ಶಕ್ತಿ

1902ರ ಅಕ್ಟೋಬರ್ 11 ರಂದು, ಬಿಹಾರದ ಧರ್ಮ, ಸಂಸ್ಕೃತಿ ಮತ್ತು ಜ್ಞಾನಭೂಮಿಯಲ್ಲಿ, ಗಂಗಾ ಮತ್ತು ಘಾಘ್ರ ನದಿಗಳ ಸಂಗಮದಲ್ಲಿರುವ ಸಿತಾಬ್ದಿಯಾರ ಎಂಬ ಗ್ರಾಮದಲ್ಲಿ ಪ್ರಜಾಪ್ರಭುತ್ವದ ಪ್ರತಿಪಾದಕರಾದ ಲೋಕನಾಯಕ ಶ್ರೀ ಜಯಪ್ರಕಾಶ್ ನಾರಾಯಣ್ ಅವರು ಜನಿಸಿದರು. ಈ ವರ್ಷ, ನಾವು ‘ಸಂಪೂರ್ಣ ಕ್ರಾಂತಿ’ಯ ಹರಿಕಾರರ 123ನೇ ಜನ್ಮ ಜಯಂತಿಯನ್ನು ಸ್ಮರಿಸುತ್ತಿದ್ದೇವೆ. ಜೆಪಿ ಎಂದೇ ಪ್ರೀತಿಯಿಂದ ನೆನಪಿಸಿಕೊಳ್ಳುವ ಅವರು, ತಮ್ಮ ಬಗ್ಗೆ ಎಂದಿಗೂ ಯೋಚಿಸದೆ, ದೇಶದ ಬಡವರನ್ನೇ ಸದಾ ತಮ್ಮ ಮೊದಲ ಆದ್ಯತೆಯಾಗಿರಿಸಿಕೊಂಡಿದ್ದ ಒಬ್ಬ ಶ್ರೇಷ್ಠ ರಾಜನೀತಿಜ್ಞರಾಗಿದ್ದರು. ಅವರಿಗೆ ’ಲೋಕನಾಯಕ’ ಎಂಬ ಬಿರುದನ್ನು ಯಾವುದೇ ಮಹಾನ್ ವ್ಯಕ್ತಿ ನೀಡಿಲ್ಲ ? ಇದನ್ನು 1974ರ ಜೂನ್ 5 ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ಒಟ್ಟುಗೂಡಿದ್ದ ಲಕ್ಷಾಂತರ ಭಾರತೀಯರು ಪ್ರೀತಿಯಿಂದ ಅವರಿಗೆ ನೀಡಿದರು.
ಈ ದಿನದಂದು, ಅವರ ಜೀವನ ಮತ್ತು ತತ್ವಗಳನ್ನು ಬಿಂಬಿಸುವ ಈ ಲೇಖನದ ಮೂಲಕ, ನಾನು ಆ ಮಹಾನ್ ನಾಯಕನಿಗೆ ನನ್ನ ‘ನಮನ’ಗಳನ್ನು ಸಲ್ಲಿಸುತ್ತೇನೆ.
ರಾಜಕೀಯ ಜಾಗೃತಿಯ ಆರಂಭ
ಸೀತಾಬ್ದಿಯಾರಾದಲ್ಲಿನ ಲೋಕನಾಯಕರ ಆರಂಭಿಕ ಸಾಧಾರಣ ಜೀವನವು, ಬಡವರ ದಿನನಿತ್ಯದ ಬವಣೆಗಳು ಮತ್ತು ಜೀವನಶೈಲಿಗೆ ಅವರು ಸದಾ ಬದ್ಧರಾಗಿರಲು ಸಹಾಯ ಮಾಡಿತು. ಸೀತಾಬ್ದಿಯಾರಾದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ನಂತರ, ಪಾಟ್ನಾದಲ್ಲಿನ ಅತಿ-ವಿದ್ವತ್ಪೂರ್ಣ ಮತ್ತು ತೀವ್ರ ರಾಷ್ಟ್ರೀಯತೆಯ ವಾತಾವರಣವು ಅವರಲ್ಲಿ ದೇಶಪ್ರೇಮದ ಬೀಜಗಳನ್ನು ಬಿತ್ತಿತು. ಅವರು ಇಂಟರ್‌ಮೀಡಿಯೆಟ್ ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿ, ಬ್ರಿಟಿಷರ ವಿರುದ್ಧ ಭಾರತದಾದ್ಯಂತ ವ್ಯಾಪಿಸುತ್ತಿದ್ದ ಅಹಿಂಸಾತ್ಮಕ ಅಸಹಕಾರ ಚಳವಳಿಯ ಘೋಷಣೆಗಳು ಅವರ ಮೇಲೆ ಅತಿದೊಡ್ಡ ಪ್ರಭಾವ ಬೀರಿದವು. ಇದರ ಪರಿಣಾಮವಾಗಿ, ಅವರು ಎಲ್ಲಾ ರೀತಿಯ ಭೋಗ-ಐಷಾರಾಮಿಗಳನ್ನು ತ್ಯಜಿಸಿ ಸಂಪೂರ್ಣ ಸ್ವದೇಶಿಯಾದರು.
ಅಮೆರಿಕದಲ್ಲಿ ಏಳು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ, ಅವರು ಮಾರ್ಕ್ಸ್‌ವಾದದತ್ತ ಆಕರ್ಷಿತರಾದರು. ಆ ಹೊತ್ತಿಗೆ, ಭಾರತದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಮಾರ್ಕ್ಸ್ ವಾದದಲ್ಲಿಯೇ ಇದೆ ಎಂದು ಅವರು ನಂಬಿದ್ದರು. ಆದರೆ, ಭಾರತಕ್ಕೆ ಮರಳಿ, ಮಾರ್ಕ್ಸ್ ವಾದದ ಸಿದ್ಧಾಂತವನ್ನು ಭಾರತೀಯ ಸನ್ನಿವೇಶಕ್ಕೆ ಅಳವಡಿಸುವ ಕಾರ್ಯಸಾಧ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಮೇಲೆ, ಪ್ರಜಾಸತ್ತಾತ್ಮಕ ಸಮಾಜವಾದ (Democratic Socialism) ಮತ್ತು ಸರ್ವೋದಯವೇ ನಮ್ಮ ದೇಶದ ಸಮಸ್ಯೆಗಳಿಗೆ ನಿಜವಾದ ಔಷಧ ಎಂಬ ಅರಿವು ಅವರಿಗಾಯಿತು. ಜೆಪಿಯವರ ಈ ಪ್ರಾಯೋಗಿಕ ಮತ್ತು ದೂರದೃಷ್ಟಿಯ ಚಿಂತನೆ, ಅವರ ವಿವೇಕ ಮತ್ತು ರಾಜನೀತಿಜ್ಞತೆಗೆ ಸಾಕ್ಷಿಯಾಗಿದೆ -ಅವರ ಜೀವನದ ಈ ನಿರ್ಣಾಯಕ ಘಟ್ಟವು, ಅವರು ಕೇವಲ ಸಿದ್ಧಾಂತಗಳ ಬೆಂಬಲಿಗರಾಗಿರಲಿಲ್ಲ, ಬದಲಿಗೆ ಸಮಾಜದಲ್ಲಿ ಪರಿವರ್ತನೆ ಮತ್ತು ನೈಜ ಬದಲಾವಣೆಯನ್ನು ತರಲು ಬಯಸಿದ ನಿಜವಾದ ನಾಯಕರಾಗಿದ್ದರು ಎಂಬುದನ್ನು ಸ್ಪಷ್ಟವಾಗಿ ಸಾರುತ್ತದೆ.
ಭೂದಾನ ಚಳವಳಿ
1952ರಲ್ಲಿ, ವಿನೋಬಾ ಭಾವೆಯವರ ಭೂದಾನ ಚಳವಳಿಯನ್ನು ಸರ್ವೋದಯ ತತ್ವದೊಂದಿಗೆ ಸಂಯೋಜಿಸಿದರೆ, ಭಾರತದ ಜ್ವಲಂತ ಭೂ ಸಮಸ್ಯೆಗೆ ವಾಸ್ತವಿಕ ಪರಿಹಾರ ಸಿಗಲಿದೆ ಎಂಬುದನ್ನು ಅವರು ಮನಗಂಡರು. 1954 ರಿಂದ 1973ರ ಅವಧಿಯಲ್ಲಿ ಅವರು ಕೈಗೊಂಡ ಚಂಬಲ್ ಕಣಿವೆಯ ದರೋಡೆಕೋರರ ಪುನರ್ವಸತಿ ಮತ್ತು ಅಹಿಂಸಾತ್ಮಕ ಸಂಪೂರ್ಣ ಕ್ರಾಂತಿ (Total Revolution) ಯಂತಹ ಉಪಕ್ರಮಗಳನ್ನು ಜಾಗತಿಕವಾಗಿ ಗುರುತಿಸಲಾಗಿದೆ ಮತ್ತು ಗೌರವಿಸಲಾಗಿದೆ. ನಿರ್ದಿಷ್ಟವಾಗಿ ಭಾರತಕ್ಕೆ ಮತ್ತು ಸಾಮಾನ್ಯವಾಗಿ ಸಮಸ್ತ ಮಾನವಕುಲಕ್ಕೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಶಾಂತಿಯನ್ನು ತಂದುಕೊಡಬೇಕೆಂದು ಅವರು ನಿರಂತರವಾಗಿ ತುಡಿಯುತ್ತಿದ್ದರು.
ಅನುಭವದಿಂದ ಮೂಡಿದ ಶ್ರಮದ ಮಹತ್ವ
ಲೋಕನಾಯಕ ಜಯಪ್ರಕಾಶ್ ಅವರ ‘ಶ್ರಮದ ಘನತೆ’ಯ ಪರಿಕಲ್ಪನೆಯು ಕೇವಲ ಪುಸ್ತಕಕ್ಕೆ ಸೀಮಿತವಾಗಿರಲಿಲ್ಲ. ಬದಲಾಗಿ ಅದು ಅವರ ಸ್ವಂತ ಅನುಭವದಿಂದ ಬಂದಿತ್ತು. ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳಲ್ಲಿ, ಅವರು ‘ಕಲಿಯುತ್ತಲೇ ಗಳಿಸಬೇಕಾದ’ ಅನಿವಾರ್ಯತೆಗೆ ಸಿಲುಕಿದ್ದರು ಮತ್ತು ತಮ್ಮ ವಿದ್ಯಾಭ್ಯಾಸದ ಖರ್ಚಿಗಾಗಿ ಹಲವು ಬಗೆಯ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರು. ಈ ಅನುಭವಗಳು ಕಾರ್ಮಿಕ ವರ್ಗದ ಸಮಸ್ಯೆಗಳ ಕುರಿತು ಅವರಿಗೆ ಆಳವಾದ ಒಳನೋಟವನ್ನು ನೀಡಿದವು. ಪ್ರಾಮಾಣಿಕ ದುಡಿಮೆಗೆ ಗೌರವ, ನ್ಯಾಯಯುತ ವೇತನ ಮತ್ತು ಮಾನವೀಯ ಕೆಲಸದ ವಾತಾವರಣ ಸಿಗಲೇಬೇಕು ಎಂಬ ಅವರ ನಂಬಿಕೆಯನ್ನು ಇದು ಮತ್ತಷ್ಟು ದೃಢಗೊಳಿಸಿತು. ಕೈಗಾರಿಕಾ ಸಮಾಜಗಳು ಸಮೃದ್ಧಿಯಿಂದ ಮೆರೆಯುತ್ತಿದ್ದರೂ, ದುಡಿಯುವ ವರ್ಗ ಮಾತ್ರ ಬಡತನದಲ್ಲಿಯೇ ಬದುಕು ಸವೆಸುತ್ತಿರುವುದನ್ನು ಅವರು ಕಣ್ಣಾರೆ ಕಂಡರು. ಭಾರತಕ್ಕೆ ಮರಳಿದಾಗ, ‘ನ್ಯಾಯಪರ ಸಮಾಜದ ಅಡಿಪಾಯವು ದುಡಿಯುವ ವರ್ಗದ ಕಲ್ಯಾಣದ ಮೇಲೆಯೇ ನಿಂತಿರಬೇಕು’ ಎಂಬ ದೃಢ ಸಂಕಲ್ಪವನ್ನು ಅವರು ತಮ್ಮೊಂದಿಗೆ ಹೊತ್ತು ತಂದರು. ಇದಕ್ಕೆ ಪೂರಕವಾಗಿ, 1947ರಲ್ಲಿ ಅವರು ಮೂರು ಪ್ರಮುಖ ಅಖಿಲ ಭಾರತ ಕಾರ್ಮಿಕ ಸಂಘಟನೆಗಳಾದ - ಅಖಿಲ ಭಾರತ ರೈಲ್ವೇಮೆನ್ಸ್ ಫೆಡರೇಶನ್, ಅಖಿಲ ಭಾರತ ಅಂಚೆ ಮತ್ತು ಟೆಲಿಗ್ರಾಫ್ ಕೆಳದರ್ಜೆ ನೌಕರರ ಸಂಘ ಹಾಗೂ ಅಖಿಲ ಭಾರತ ಆರ್ಡಿನೆನ್ಸ್ ಫ್ಯಾಕ್ಟರಿ ಕಾರ್ಮಿಕರ ಸಂಘ - ಇವುಗಳ ಅಧ್ಯಕ್ಷರಾಗಿ ಆಯ್ಕೆಯಾದರು.
ಬಿಹಾರದ ಬರಗಾಲ
ಲೋಕನಾಯಕ ಜಯಪ್ರಕಾಶ್ ಅವರ ಕಾರ್ಯಯಾತ್ರೆ ಕೇವಲ ಸ್ವಾತಂತ್ರ್ಯ ಚಳವಳಿಗೆ ಸೀಮಿತವಾಗಿರಲಿಲ್ಲ. ಅಧಿಕಾರದ ಆಸೆ ಅವರನ್ನು ಎಂದಿಗೂ ಸೆಳೆಯಲಿಲ್ಲ, ಬದಲಾಗಿ ಜನಸೇವೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಳ್ಳಲು ಅವರು ಸದಾ ತುಡಿಯುತ್ತಿದ್ದರು. 1960ರ ದಶಕದಲ್ಲಿ, ಮುಂಗಾರು ಕೈಕೊಟ್ಟಿದ್ದರಿಂದ ಬಿಹಾರ ರಾಜ್ಯವು ಭೀಕರ ಬರಗಾಲದ ದವಡೆಗೆ ಸಿಲುಕಿತ್ತು. ಆಗ ಶ್ರೀ ಜಯಪ್ರಕಾಶ್ ಅವರು, ಭೂದಾನ ಚಳವಳಿಯ ತಮ್ಮ ಸಹವರ್ತಿಗಳು ಮತ್ತು ಅನುಯಾಯಿಗಳೊಂದಿಗೆ ಸೇರಿ, ಜನರ ಸಂಕಷ್ಟವನ್ನು ನೀಗಿಸಲು ಪರಿಹಾರ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ‘ಬಿಹಾರ ರಾಹತ್ ಸಮಿತಿ’ಯ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾಗ, ಆರೆಸ್ಸೆಸ್ ಸ್ವಯಂಸೇವಕರ ‘ರಾಷ್ಟ್ರಸೇವಾ ಮನೋಭಾವ’ವನ್ನು ಅವರು ಹತ್ತಿರದಿಂದ ಕಂಡರು ಮತ್ತು ಅವರ ಕಾರ್ಯತತ್ಪರತೆಯಿಂದ ಬಹಳವಾಗಿ ಪ್ರಭಾವಿತರಾದರು.
ನನ್ನ ವೈಯಕ್ತಿಕ ಅನುಭವ
ಬದುಕಿನ ಸರ್ವ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವು ತಾಂಡವವಾಡುತ್ತಿರುವುದನ್ನು ಕಂಡ ಲೋಕನಾಯಕರಿಗೆ, ಭಾರತೀಯ ಸಮಾಜದ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣಕ್ಕೆ ಮುನ್ನುಡಿ ಬರೆಯಲು ದೇಶದ ಯುವಜನತೆಯನ್ನು ಪ್ರೇರೇಪಿಸಬೇಕಾದ ಅನಿವಾರ್ಯತೆ ಮನದಟ್ಟಾಯಿತು. ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆಯೇ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ, ಈ ಚಳವಳಿಯ ಮೂಲಕ ಅವರು ಪ್ರಜಾಪ್ರಭುತ್ವದ ಶಕ್ತಿಯಲ್ಲಿ ಜನರ ಭರವಸೆಯನ್ನು ಮರುಸ್ಥಾಪಿಸಿದರು. 1973ರಲ್ಲಿ ವಿನೋಬಾ ಭಾವೆಯವರ ಪವನಾರ್ ಆಶ್ರಮದಿಂದ ಅವರು ‘ಸಂಪೂರ್ಣ ಕ್ರಾಂತಿ’ಯ ಕಹಳೆ ಮೊಳಗಿಸಿದರು. ಈ ಚಳವಳಿಯ ಅಂತಿಮ ಧ್ಯೇಯವು, ಮಾನವೀಯ ಮೌಲ್ಯಗಳನ್ನೊಳಗೊಂಡ ಆದರ್ಶ ಸಮಾಜವನ್ನು ನಿರ್ಮಿಸುವುದಾಗಿತ್ತು. ಅಂದಿನ ರಾಜಕೀಯದಲ್ಲಿ ಆಳವಾಗಿ ಬೇರೂರಿದ್ದ ಭ್ರಷ್ಟಾಚಾರದ ವಿರುದ್ಧ ಅವರ ಅವಿರತ ಧ್ವನಿಯು, ಪ್ರಜಾಪ್ರಭುತ್ವದಲ್ಲಿ ‘ಜನಶಕ್ತಿ’ಯನ್ನು ಮರುಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಜನಸಮೂಹವನ್ನು ಒಗ್ಗೂಡಿಸಿ, ಅವರ ಆಕ್ರೋಶಕ್ಕೆ ಒಂದು ದಿಕ್ಕು ತೋರಿ, 1977ರಲ್ಲಿ ಭಾರತದಲ್ಲಿ ಒಂದು ಹೊಸ ರಾಜಕೀಯ ವ್ಯವಸ್ಥೆಯನ್ನು ಸ್ಥಾಪಿಸಿದ ಅವರ ಸಾಮರ್ಥ್ಯ ನಿಜಕ್ಕೂ ಅದ್ಭುತವಾದದ್ದು. ಪ್ರಜಾಪ್ರಭುತ್ವವೆಂದರೆ ಜನರ ಮೇಲೆ ಅಧಿಕಾರ ಚಲಾಯಿಸುವುದಲ್ಲ, ಅದು ಜನಸಾಮಾನ್ಯರ ಧ್ವನಿಯಾಗಬೇಕು ಎಂಬುದನ್ನು ಅವರು ಈ ಚಳವಳಿಯ ಮೂಲಕ ಇಡೀ ಜಗತ್ತಿಗೆ ಸಾರಿದರು.
ನಾನು 19 ವರ್ಷದ ಯುವಕನಾಗಿದ್ದಾಗ, ಕೊಯಮತ್ತೂರಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ‘ಸಂಪೂರ್ಣ ಕ್ರಾಂತಿ’ ಚಳವಳಿಯಲ್ಲಿ ನನ್ನ ಅಳಿಲು ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಮತ್ತು ಹೆಮ್ಮೆಯ ವಿಷಯ. ಭಾರತದ ಇತಿಹಾಸದ ಆ ನಿರ್ಣಾಯಕ ಘಟ್ಟದಲ್ಲಿ, ಈ ಚಳವಳಿಯಲ್ಲಿದ್ದಾಗ ನಾನು ಕಲಿತ ಪಾಠಗಳು, ನನ್ನನ್ನು ಒಬ್ಬ ಸಾಮಾನ್ಯ ಯುವಕನಿಂದ ಆತ್ಮವಿಶ್ವಾಸವುಳ್ಳ, ಸಾಮಾಜಿಕ ಪ್ರಜ್ಞೆಯುಳ್ಳ ನಾಯಕನಾಗಿ ಪರಿವರ್ತಿಸಿದವು. ಈ ಚಳವಳಿಯು ನನ್ನಲ್ಲಿ ಪ್ರಬುದ್ಧತೆ, ನೈತಿಕ ವಿವೇಚನೆ ಮತ್ತು ನಾಗರಿಕ ಪ್ರಜ್ಞೆಯಂತಹ ನಾಯಕತ್ವದ ಅತ್ಯಗತ್ಯ ಗುಣಗಳನ್ನು ಪೋಷಿಸಿತು.
ಇಂದು ನಮ್ಮ ಅಚ್ಚುಮೆಚ್ಚಿನ ನಾಯಕ ಶ್ರೀ ಜಯಪ್ರಕಾಶ್ ಅವರನ್ನು ನಾವು ಪ್ರೀತಿಯಿಂದ ಸ್ಮರಿಸುತ್ತಿರುವಾಗ, ಅವರ ಧರ್ಮಪತ್ನಿ ಶ್ರೀಮತಿ ಪ್ರಭಾವತಿ ದೇವಿಯವರ ಅಚಲ ಬೆಂಬಲವನ್ನು ನಾವು ಮರೆಯುವಂತಿಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವ ನಿಸ್ವಾರ್ಥ ತ್ಯಾಗವಾಗಿ ಅವರು ‘ಬ್ರಹ್ಮಚರ್ಯ’ ವ್ರತವನ್ನು ಸ್ವೀಕರಿಸಿದ್ದರು. ಅವರು ತಮ್ಮ ಸಂಪೂರ್ಣ ಶಕ್ತಿಯನ್ನು ಗಾಂಧೀಜಿಯವರ ಆದರ್ಶಗಳನ್ನು ನಿಸ್ವಾರ್ಥವಾಗಿ ಪಾಲಿಸುವುದಕ್ಕಾಗಿಯೇ ಮುಡಿಪಾಗಿಟ್ಟಿದ್ದರು.
ಜಯಪ್ರಕಾಶ್ ಅವರ ಪರಂಪರೆ
1942ರ ‘ಚಲೇ ಜಾವ್ ಚಳವಳಿ’ಯಿಂದ ಹಿಡಿದು 1970ರ ದಶಕದಲ್ಲಿ ಅವರು ಮುನ್ನಡೆಸಿದ ‘ಸಂಪೂರ್ಣ ಕ್ರಾಂತಿ’ಯವರೆಗೆ, ಅವರನ್ನು ಸದಾ ಮುನ್ನಡೆಸಿದ ಏಕೈಕ ಚಾಲಕ ಶಕ್ತಿ ಎಂದರೆ ಅದು ಅವರ ಅಚಲವಾದ ದೇಶಪ್ರೇಮ. ಸರಕಾರದಲ್ಲಿ ತಮಗೆ ಬೇಕಾದ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶವಿದ್ದರೂ, ಅವರು ಎಂದಿಗೂ ಅಧಿಕಾರದ ಆಸೆಗೆ ಬಲಿಯಾಗದೆ, ರಾಷ್ಟ್ರದ ನಿಸ್ವಾರ್ಥ ಸೇವೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಬಡವರು ಮತ್ತು ದೀನದಲಿತರ ಉನ್ನತಿಗಾಗಿ ಅವರು ಹೊಂದಿದ್ದ ತ್ಯಾಗ ಮನೋಭಾವ ಅನನ್ಯವಾದುದು.
ಎದುರಾಗುವ ಸವಾಲುಗಳು ಎಷ್ಟೇ ದುಸ್ತರವಾಗಿ ಕಂಡರೂ, ಜನಶಕ್ತಿಯು ಎಂತಹ ಬದಲಾವಣೆಯನ್ನು ಬೇಕಾದರೂ ತರಬಲ್ಲದು ಎಂಬುದಕ್ಕೆ ಲೋಕನಾಯಕ ಜಯಪ್ರಕಾಶ್ ಅವರ ಜೀವನ ಮತ್ತು ಬೋಧನೆಗಳೇ ಜ್ವಲಂತ ಸಾಕ್ಷಿ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವುದು ಮತ್ತು ಸಮಾನತೆ, ನ್ಯಾಯ ಹಾಗೂ ಶಾಂತಿ ನೆಲೆಸಿರುವ ಸಮಾಜವನ್ನು ನಿರ್ಮಿಸುವತ್ತ ಶ್ರಮಿಸುವುದಕ್ಕೆ ಅವರ ಬೋಧನೆಗಳು ಒತ್ತು ನೀಡುತ್ತವೆ. ಸಾಮಾಜಿಕ ಮತ್ತು ಆರ್ಥಿಕ ನ್ಯಾಯದಿಂದ ರಾಜಕೀಯ ಸ್ವಾತಂತ್ರ್ಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಘೋಷಿಸಿದ ಅವರು ಒಬ್ಬ ಮಹಾನ್ ದಾರ್ಶನಿಕ ನಾಯಕರಾಗಿದ್ದರು. ಅವರ ಬೋಧನೆಗಳು ಕೇವಲ ರಾಜಕಾರಣಿಗಳಿಗಷ್ಟೇ ಅಲ್ಲ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಸಮಾನತೆಯ ಆದರ್ಶಗಳಲ್ಲಿ ನಂಬಿಕೆಯಿಟ್ಟ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸದಾ ಸ್ಫೂರ್ತಿಯ ಸೆಲೆಯಾಗಿವೆ.
ಸಾಮಾನ್ಯವಾಗಿ ‘ಕ್ರಾಂತಿ’ಯನ್ನು ಹಿಂಸೆಯ ಪ್ರತಿರೂಪ ಎಂದೇ ಭಾವಿಸಲಾಗುತ್ತದೆ. ಆದರೆ, ಶ್ರೀ ಜಯಪ್ರಕಾಶ್ ಅವರು ಮುನ್ನಡೆಸಿದ ‘ಸಂಪೂರ್ಣ ಕ್ರಾಂತಿ’ಯು ಸಂಪೂರ್ಣವಾಗಿ ಅಹಿಂಸಾ ಮಾರ್ಗವನ್ನು ಆಧರಿಸಿತ್ತು. ಅಹಿಂಸಾತ್ಮಕ ಜನಾಂದೋಲನದ ಮೂಲಕವೇ, ವ್ಯವಸ್ಥೆ ಮತ್ತು ಸಮಾಜದೊಳಗೆ ಮಾನವೀಯತೆ ಹಾಗೂ ನೈತಿಕ ಮೌಲ್ಯಗಳ ಮೇಲೆ ಪ್ರಗತಿ ಹೊಂದುವಂತಹ ಭಾರತದ ನಿರ್ಮಾಣಕ್ಕೆ ಅವರು ಅಡಿಪಾಯ ಹಾಕಿದರು.
ಅಕ್ಟೋಬರ್ 11 ರಂದು ಈ ಮಹಾನ್ ಚೇತನವನ್ನು ಪ್ರೀತಿಯಿಂದ ಸ್ಮರಿಸುತ್ತಾ, ನಮ್ಮ ಗೌರವ ನಮನಗಳನ್ನು ಸಲ್ಲಿಸುವ ಈ ಸಂದರ್ಭದಲ್ಲಿ, ಅವರು ರಕ್ಷಿಸಿದ ಪ್ರಜಾಪ್ರಭುತ್ವದ ಜಾಗೃತ ಕಾವಲುಗಾರರಾಗಿರಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ. ನಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿ, ನಿಸ್ವಾರ್ಥ, ಸೇವೆ ಮತ್ತು ಸತ್ಯದ ಮಾರ್ಗದಲ್ಲಿ ಭಾರತದ ಉನ್ನತಿಗಾಗಿ ಶ್ರಮಿಸುವುದೇ ನಾವು ಈ ದಿನದಂದು ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.
ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಅಪಾರ ಕೊಡುಗೆಗಳಿಗಾಗಿ, ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆದರೆ ಈ ಮಹಾನ್ ಚೇತನಕ್ಕೆ ಆ ಗೌರವವೂ ತೀರಾ ಕಡಿಮೆಯೆಂದೇ ನನ್ನ ಭಾವನೆ. ಏಕೆಂದರೆ, ಅವರು ನಿಜಕ್ಕೂ ‘ಭಾರತ ರತ್ನ’ವಾಗಿದ್ದರು.
ಸದಾ ತಾಯ್ನಾಡಿನ ಸೇವೆಯಲ್ಲಿ !







