ನಿಗದಿತ ಸಮಯಕ್ಕೆ ಕಚೇರಿಗಳಿಗೆ ಹಾಜರಾಗದ ಅಧಿಕಾರಿಗಳು, ಸಿಬ್ಬಂದಿ
ಗುಡಿಬಂಡೆ, ನ.23: ತಾಲೂಕು ಕೇಂದ್ರ ಸ್ಥಾನದಲ್ಲಿರುವ ಸರಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ ಪ್ರತಿನಿತ್ಯ ನಿಗದಿತ ಸಮಯಕ್ಕೆ ಕಚೇರಿಗಳಿಗೆ ಹಾಜರಾಗುತ್ತಿಲ್ಲ. ಇದರಿಂದಾಗಿ ಕೆಲಸ ಕಾರ್ಯಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಗುಡಿಬಂಡೆ ತಾಲೂಕು ಕೇಂದ್ರ ಸ್ಥಾನದಲ್ಲಿರುವ ಸರಕಾರಿ ಕಚೇರಿಗಳಿಗೆ ಅಧಿಕಾರಿಗಳು ಸೇರಿದಂತೆ ಕೆಲ ಸಿಬ್ಬಂದಿ ಬೇರೆ ತಾಲೂಕುಗಳಿಂದ ಬರುತ್ತಿದ್ದಾರೆ. ಇವರು 11 ಗಂಟೆಗಳಾದರೂ ಕಚೇರಿಗೆ ಬರುತ್ತಿಲ್ಲ. ನಿಗದಿತ ಸಮಯಕ್ಕೆ ಕಚೆೇರಿಗಳಿಗೆ ಹಾಜರಾಗದೆ ಇರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ನಿಗದಿತ ಸಮಯಕ್ಕೆ ಆಗುತ್ತಿಲ್ಲ. ಒಂದು ದಿನದಲ್ಲಿ ಆಗುವಂತಹ ಕೆಲಸಕ್ಕೆ ನಿತ್ಯವು ಕಚೆೇರಿಗಳಿಗೆ ಅಲೆದಾಡುವಂತಹ ಪರಿಸ್ಥಿತಿಗಳು ನಿರ್ಮಾಣವಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ರೈತರು ತಮ್ಮ ಕೆಲಸ ಕಾರ್ಯಗಳಿಗಾಗಿ ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯತ್,ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ಇನ್ನೂ ಹಲವು ಇಲಾಖೆಗಳಿಗೆ ಭೇಟಿ ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ನಿಗದಿತ ಸಮಯಕ್ಕೆ ಸಿಗದಿರುವುದರಿಂದ ಇವರ ಸಮಯ ಹಾಗೂ ಹಣವೂ ಪೋಲಾಗುತ್ತಿದೆ ಎಂದು ರೈತರು ದೂರಿದ್ದಾರೆ,
ಸರಕಾರದ ಆದೇಶದ ಪ್ರಕಾರ ತಾಲೂಕು ಕೇಂದ್ರ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು. ಸಿಬ್ಬಂದಿ ತಾಲೂಕು ಕೇಂದ್ರ ಸ್ಥಾನಗಳಲ್ಲಿ ವಾಸ ಇದ್ದು ಜನರ ಕೆಲಸ ಕಾರ್ಯಗಳನ್ನು ಮಾಡಬೇಕು ಎಂಬ ಆದೇಶಗಳಿದ್ದರೂ ಕೆಲವರು ಈ ಆದೇಶವನ್ನು ಪಾಲಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ಮುಖ್ಯವಾಗಿ ತಾಲೂಕು ಕೇಂದ್ರ ಸ್ಥಾನದಲ್ಲಿ ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಯು ವಾಸವಿಲ್ಲದಿರುವುದನ್ನು ಕಾಣಬಹುದಾಗಿದೆ.
ಸರಕಾರದ ಆದೇಶ ಪಾಲಿಸದ ಇಂತಹ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಮೇಲಧಿಕಾರಿಗಳು ಮತ್ತು ಕ್ಷೇತ್ರ ಶಾಸಕರು ಯಾವುದೇ ಕ್ರಮವನ್ನು ಜರುಗಿಸದೇ ಮೂಕ ಪ್ರೇಕ್ಷಕರಂತೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿವೆ. ಈಗಲಾದರೂ ಇವರ ಮೇಲೆ ಕ್ರಮ ಜರುಗಿಸಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವಂತೆ ಅನುವು ಮಾಡಿಕೊಡುತ್ತಾರೆ ಇಲ್ಲವೊ ಕಾದು ನೋಡಬೇಕಾಗಿದೆ.
ಸರಕಾರಿ ಕಚೇರಿಗಳಿಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತೀಲ್ಲ. ಆದ್ದರಿಂದ ರೈತರು ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ತಾಲೂಕಿನಲ್ಲಿ ವಾಸ ಇಲ್ಲ. ಅಧಿಕಾರಿಗಳನ್ನು ಕೇಂದ್ರ ಸ್ಥಾನದಲ್ಲಿ ವಾಸ ಇರುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಗಳ ಮೂಲಕ ಮನವಿ ಮಾಡಲಾಗಿದೆ.ಆದರೂ ಯಾರೂ ಕ್ರಮ ಜರುಗಿಸುತ್ತಿಲ್ಲ.
-ಅರುಣ್, ರೈತ, ಭೊಗೇನಹಳ್ಳಿ ಗ್ರಾಮ
ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ತಾಲೂಕು ಕೇಂದ್ರ ಸ್ಥಾನದಲ್ಲಿ ವಾಸ ಇರಬೇಕು. ಒಂದು ವೇಳೆ ಅವರು ಎಲ್ಲಿಗಾದರೂ ಹೋಗಬೇಕಾದರೇ ಅವರು ಮೇಲಧಿಕಾರಿಗಳ ಅನುಮತಿಯನ್ನು ಪಡೆದುಕೊಂಡು ಹೋಗಬೇಕಾಗುತ್ತದೆ.
-ಸಿಗ್ಬ್ಬತ್ ವುಲ್ಲಾ,ತಹಶೀಲ್ದಾರ್, ಗುಡಿಬಂಡೆ







