ಹದಗೆಟ್ಟ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ: ಪ್ರಯಾಣಿಕರ ಪರದಾಟ

ಗದಗ, ನ.23: ಕೈಗಾ ಇಳಕಲ್ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಜಿಲ್ಲಾ ಕೇಂದ್ರ ಗದಗ ತಲುಪಲು ಜನರು ಹರಸಾಹಸ ಪಡುತ್ತಿದ್ದಾರೆ.
ಗದಗದಿಂದ ಲಕ್ಷ್ಮೇಶ್ವರ ಸಂಪರ್ಕಕ್ಕೆ ಒಟ್ಟು 40 ಕಿ.ಮೀ. ಇದೆ. ಅದರಲ್ಲಿ ಗದಗದಿಂದ ಮುಳಗುಂದವರೆಗೆ (ಸುಮಾರು 14 ಕಿ.ಮೀ.) ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಅದು ಆಮೆಗತಿಯಲ್ಲಿ ನಡೆಯುತ್ತಿದೆ. ಇನ್ನುಳಿದ ರಸ್ತೆ ಗುಂಡಿಗಳಿಂದ ಕೂಡಿದ್ದು, ಪ್ರತಿದಿನ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವ ಸ್ಥಿತಿಯಿದೆ. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಕಳೆದ ಏಳೆಂಟು ವರ್ಷಗಳಿಂದ ಹೇಳುತ್ತಾ ಬಂದಿದ್ದು ಆದರೆ ರಾಜ್ಯ ಹೆದ್ದಾರಿ ಸಂಪೂರ್ಣ ಗುಂಡಿಮಯವಾಗಿ ಕೆಸರು ಗದ್ದೆಯಾಗಿ ಜಮೀನಿಗೆ ಸಂಪರ್ಕಿಸುವ ರಸ್ತೆಯಾಗಿ ಮಾರ್ಪಡುತ್ತಿದೆ. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬರೀ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಮಾಡುತ್ತಾರೆ ಆದರೆ ವರ್ಷದಿಂದ ವರ್ಷಕ್ಕೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.
ರಸ್ತೆ ಹದಗೆಟ್ಟ ಕಾರಣ ಗದಗ ಲಕ್ಷ್ಮೇಶ್ವರ ಸಂಪರ್ಕಿಸುವ ಹೆಚ್ಚಿನ ಬಸ್‌ಗಳ ಸಂಚಾರ ನಿಂತುಹೋಗಿದೆ. ಈ ರಸ್ತೆಯಲ್ಲಿ ಪ್ರತಿದಿನ ವಾಹನಗಳು ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ.
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಲಾಗಿದೆ. ಮೇಲ್ದರ್ಜೆಗೇರಿಸಲು ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿದ್ದು, ಯೋಜನೆಯ ಡಿಪಿಆರ್ ಸಲ್ಲಿಕೆಯಾಗಿದೆ ಹಾಗೂ ಭೂ ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಲಾಗಿದೆ.
- ಬಸವರಾಜ ಬೊಮ್ಮಾಯಿ, ಸಂಸದ







