ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಸ್ಥಾಪನೆ

ಗುಂಡ್ಲುಪೇಟೆ, ಡಿ.10: ಮಾನವ -ವನ್ಯಜೀವಿ ಸಂಘರ್ಷ ನಿಯಂತ್ರಣ ಮಾಡಲು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಅರಣ್ಯ ಇಲಾಖೆಯು ಈ ನಿಟ್ಟಿನಲ್ಲಿ ಕೆಲವು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಸ್ಥಾಪನೆ ಮಾಡಿದ್ದೂ, ಶೀಘ್ರದಲ್ಲೇ ಕಾರ್ಯಾಚರಣೆ ಮಾಡಲಿವೆ.
ಮೈಸೂರು-ಚಾಮರಾಜನಗರ ಜಿಲ್ಲೆಯ ಹುಲಿ ಯೋಜನೆಗಳ ಕಾಡಂಚಿನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹುಲಿ ದಾಳಿ, ಮಾನವ ವನ್ಯಜೀವಿ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆಯು ಆಧುನಿಕ ತಾಂತ್ರಿಕತೆ ಮೊರೆಹೋಗಿವೆೆ. ಇದಕ್ಕಾಗಿ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗಳನ್ನು ಆರಂಭಿಸಲಾಗುತ್ತಿದೆ.
ಕಾರ್ಯಾಚರಣೆ ಹೇಗೆ: ಈಗಾಗಲೇ ಅರಣ್ಯ ಇಲಾಖೆಯ ವತಿಯಿಂದ ಈ ಸಂರಕ್ಷಿತ ಅರಣ್ಯದ ಮಧ್ಯದಲ್ಲಿ ಹಾದು ಹೋಗಿರುವ ಹೆದ್ದಾರಿಗಳ ಬದಿಗಳಲ್ಲಿ ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ಅಳವಡಿಸಿರುವ ಎಲ್ಲಾ ಕ್ಯಾಮರಾಗಳಲ್ಲಿ ಕಂಡುಬರುವ ದೃಶ್ಯಗಳನ್ನು ನೇರವಾಗಿ ವೀಕ್ಷಣೆ ಮಾಡಲು ಸಾಧ್ಯವಾಗುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈಗ ಇವುಗಳಿಗೆ ಹೊಸದಾಗಿ ತಯಾರು ಮಾಡಿರುವ ಸಾಫ್ಟ್ ವೇರ್ ಅನ್ನು ಅಳವಡಿಸಿಕೊಂಡು ನೂತನ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಈ ಕೇಂದ್ರಗಳಿಗೆ ತಾಂತ್ರಿಕ ವಿಷಯಗಳನ್ನು ಅಗತ್ಯವಾದ ಮಟ್ಟದಲ್ಲಿ ತಿಳಿದುಕೊಂಡಿರುವ ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಇವರು ಯಾವುದೇ ಬೆಳವಣಿಗೆಗಳನ್ನು ಹುಲಿ ಯೋಜನೆಯ ಮುಖ್ಯಸ್ಥರ ಗಮನಕ್ಕೆ ತರಬೇಕಾಗಿದೆ.
ಕಮಾಂಡ್-ಕಂಟ್ರೋಲ್ ಸೆಂಟರ್‌ನಲ್ಲಿ ಬೃಹತ್ ಎಲ್‌ಇಡಿ ಪರದೆಯನ್ನು ಹೊಂದಿರುವ ಟಿವಿ ಹಾಗೂ ಕಂಪ್ಯೂಟರ್ ಅನ್ನು ಕಚೇರಿಯಲ್ಲಿ ಅಳವಡಿಸಲಾಗಿದೆ. ಇಂಟರ್ ನೆಟ್ ಸೌಲಭ್ಯದಿಂದ ಕಾರ್ಯ ನಿರ್ವಹಣೆ ಮಾಡುವ ಈ ವಿಶಾಲವಾದ ಟಿವಿ ಮತ್ತು ಕಂಪ್ಯೂಟರ್‌ಗಳಿಗೆ ಅರಣ್ಯದಲ್ಲಿ ಅಳವಡಿಸಲಾಗಿರುವ ಕ್ಯಾಮರಾಗಳನ್ನು ಸಂಪರ್ಕಿಸಲಾಗಿದೆ. ಹೀಗಾಗಿ ಬಂಡೀಪುರ ನಾಗರಹೊಳೆ ವ್ಯಾಪ್ತಿಯ ಚೆಕ್‌ಪೋಸ್ಟ್‌ಗಳು, ರಸ್ತೆಬದಿಗಳಲ್ಲಿ ಅಳವಡಿಸಿರುವ ಕ್ಯಾಮರಾಗಳಲ್ಲಿ ಕಂಡುಬರುವ ದೃಶ್ಯಾವಳಿಯನ್ನು ಈ ಕೇಂದ್ರ ಕಚೇರಿಯಲ್ಲಿ ಹಾಗೂ ಆರಣ್ಯ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕೂಡಾ ವೀಕ್ಷಿಸಲು ಸಾಧ್ಯವಾಗುವಂತೆ ಸಾಫ್ಟ್‌ವೇರ್ ಅಳವಡಿಸಲಾಗಿದೆ.
ಉಪಯೋಗವೇನು?: ವನ್ಯಪ್ರಾಣಿಗಳು ಕಾಡಿನಿಂದ ಹೊರ ಬಂದು ಜನರ ಕಣ್ಣಿಗೆ ಕಾಣಿಸಿದ ಸಮಯದಲ್ಲಿ ಸಾರ್ವಜನಿಕರು ತಕ್ಷಣ ಕಮಾಂಡಿಂಗ್ ಸೆಂಟರ್‌ನ ಸಹಾಯವಾಣಿ ಸಂಖ್ಯೆಗೆ ದೂರು ಅಥವಾ ಮಾಹಿತಿಯನ್ನು ಮುಟ್ಟಿಸಬಹುದು. ದೂರು ಬಂದ ತಕ್ಷಣ ಕೇಂದ್ರದಲ್ಲಿ ಮಾನಿಟರಿಂಗ್ ಮಾಡುವ ಸಿಬ್ಬಂದಿ, ಅದು ಎಲ್ಲಿಂದ ಕರೆ ಬಂದಿದೆ, ಯಾವ ಪ್ರಾಣಿ ಹಾವಳಿ ಮಾಡುತ್ತಿದೆ ಎನ್ನುವ ವಿಷಯವನ್ನು ಆ ವ್ಯಾಪ್ತಿಗೆ ಬರುವ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಮಾಹಿತಿಯನ್ನು ಮುಟ್ಟಿಸುತ್ತಾರೆ. ಹೀಗಾಗಿ ಅರಣ್ಯ ಇಲಾಖೆಯು ತ್ವರಿತವಾಗಿ ಕಾರ್ಯಾಚರಣೆ ಮಾಡಲು ಅನುಕೂಲವಾಗುತ್ತದೆ. ಇದರಿಂದ ಮಾನವ-ವನ್ಯಜೀವಿ ಸಂಘರ್ಷವನ್ನು ಆದಷ್ಟು ಪ್ರಮಾಣದಲ್ಲಿ ನಿಯಂತ್ರಣ ಮಾಡಬಹುದಾಗಿದೆ.
ಎಐ ಆಧಾರಿತ ಕ್ಯಾಮರಾಗಳು, ಡ್ರೋನ್ ಕ್ಯಾಮರಾ, ಥರ್ಮಲ್ ಡ್ರೋಮ್, ಜಿಎಸ್‌ಎನ್ ಅಳವಡಿಸಿದ ಕ್ಯಾಮರಾಗಳು ಕಾರ್ಯಾಚರಣೆ ಮಾಡುತ್ತಿರುವುದರಿಂದ ಹುಲಿ, ಆನೆ ಮುಂತಾದ ವನ್ಯಜೀವಿಗಳು ರಾತ್ರಿ ವೇಳೆ ಹೊರಬರುವುದನ್ನು ಪತ್ತೆಹಚ್ಚಬಹುದಾಗಿದೆ. ಇದನ್ನು ಬಳಸಿಕೊಂಡು ಯಾವುದೇ ಪ್ರದೇಶದಿಂದ ವನ್ಯಜೀವಿಗಳು ಹೊರಬಂದ ಕೂಡಲೇ ಸೆಂಟರ್‌ಗೆ ಸಂದೇಶ ಬರುವಂತೆ ಮಾಡಲಾಗಿದೆ. ಸಂದೇಶ ಬಂದ ಕೂಡಲೇ ಆಯಾ ವಲಯಗಳಿಗೆ ಮಾಹಿತಿ ನೀಡಿ ಎಚ್ಚರಿಕೆ ನೀಡಲಾಗುವುದು. ಅರಣ್ಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ಅವುಗಳನ್ನು ಕಾಡಿಗಟ್ಟಲು ನೆರವಾಗುತ್ತದೆ. ಅಲ್ಲದೆ ಆಯಾ ಭಾಗದ ಜನರಿಗೆ ಗುಂಪು ಸಂದೇಶಗಳನ್ನು ನೀಡುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ರಾಜ್ಯದ ಎಲ್ಲ ಹುಲಿಯೋಜನೆ ಅರಣ್ಯಗಳಲ್ಲಿ ಮಾನವ ಹಾಗೂ ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸುವ ದೃಷ್ಟಿಯಿಂದ ತಂತ್ರಜ್ಞಾನ ಆಧಾರಿತ ಕಮಾಂಡಿಂಗ್ ಸೆಂಟರ್ ಆರಂಭಿಸಲು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಹೀಗಾಗಿ ಬಂಡೀಪುರದಲ್ಲಿ ಕೇಂದ್ರವನ್ನು ಸಿದ್ಧಗೊಳಿಸಲಾಗಿದೆ. ಶೀಘ್ರದಲ್ಲಿ ಕಾರ್ಯಾಚರಣೆ ಆರಂಭಿಸಲಾಗುತ್ತದೆ.
-ಪ್ರಭಾಕರನ್, ಹುಲಿ ಯೋಜನೆ ನಿರ್ದೇಶಕ, ಬಂಡೀಪುರ
ನಾಗರಹೊಳೆ ವ್ಯಾಪ್ತಿಯ ಎಲ್ಲ ವಲಯಗಳಲ್ಲೂ ಕ್ಯಾಮರಾಗಳನ್ನು ಅಳವಡಿಸಲಾಗಿದೆ.ಅರಣ್ಯ ಇಲಾಖೆಯ ನಿಯಮಾನುಸಾರ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
-ಸೀಮಾ, ನಿರ್ದೇಶಕಿ, ನಾಗರಹೊಳೆ ಹುಲಿ ಯೋಜನೆ







